ಬೆಂಗಳೂರು: ಸಿದ್ಧರಾಮಯ್ಯನವರ ಇನ್ನೂ ಹಲವು ವಿಡಿಯೋಗಳಿವೆ. ಅವುಗಳನ್ನು ತೋರಿಸಿ ಸಿದ್ಧರಾಮಯ್ಯರನ್ನು ಹೆದರಿಸಿದ್ದಾರೆ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.
ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಲು ಸ್ಟಿಂಗ್ ಆಪರೇಷನ್ ಪಿತೂರಿ ನಡೆದಿದೆ. ಇದೆಲ್ಲವನ್ನು ಮುಚ್ಚಿಡಬೇಕಲ್ಲ, ಹಾಗಾಗಿ ಆರೋಪಿಗಳಿಗೆ ರಕ್ಷಣೆ ನೀಡಲಾಗಿದೆ ಎಂದು ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಈ ಮೂಲಕ ಕುಮಾರಸ್ವಾಮಿ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.
ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಲು ಸ್ಟಿಂಗ್ ವಿಡಿಯೋ ಪಿತೂರಿ ನಡೆಸಲಾಗಿದೆ. ದೆಹಲಿಯಲ್ಲಿ ವಿಡಿಯೋ ತೋರಿಸಿ ಸಿದ್ದರಾಮಯ್ಯ ಅವರನ್ನು ಇಳಿಸಿದ್ದಾರೆ. ಇದಿಷ್ಟೇ ಅಲ್ಲ, ಸಿದ್ದರಾಮಯ್ಯನವರ ಇನ್ನೂ ಹಲವು ವಿಡಿಯೋಗಳು ಇವೆ. ಆ ವಿಡಿಯೋಗಳಿಂದ ಸಿದ್ದರಾಮಯ್ಯ ಅವರನ್ನು ಹೆದರಿಸಿದ್ದಾರೆ. ಆ ವಿಡಿಯೋಗಳಿಂದಾಗಿ ಪಾಪ ಸಿದ್ಧರಾಮಯ್ಯ ಬಾಯಿ ಬಿಡುತ್ತಿಲ್ಲ. ಅವರನ್ನು ಇಳಿಸಲು ಏನೇನು ಮಾಡಿದ್ದಾರೆ. ಇದೆಲ್ಲ ಮುಚ್ಚಿಡಬೇಕಲ್ಲ, ಹಾಗಾಗಿ ಆರೋಪಿಗಳಿಗೆ ರಕ್ಷಣೆ ನೀಡುತ್ತಿದ್ದಾರೆ ಎಂದು ಹೆಚ್.ಡಿ.ಕೆ. ಗುಡುಗಿದ್ದಾರೆ.
ಹಾಲಿ ಮುಖ್ಯಮಂತ್ರಿ ನೇತೃತ್ವದ ‘ಸ್ಟಿಂಗ್ ಸಿಂಡಿಕೇಟ್’ ಮಹಾಸಂಚು ರೂಪಿಸಿ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಕ್ಕೆ ಇಳಿಸಿತು ಎಂಬುದು ಈಗ ಜಗಜ್ಜಾಹೀರು. ಆ ಕುತಂತ್ರದ ಭಾಗಿದಾರರು ಯಾರು? ಅವರ ಮಹಾನ್ ನಾಯಕ ಯಾರು? ಎಂಬುದು ಎಲ್ಲರಿಗೂ ಗೊತ್ತಿದೆ. ಕಾಂಗ್ರೆಸ್ ಪಕ್ಷದಲ್ಲಿಯೇ ಕಾಂಗ್ರೆಸ್ ಹಿರಿಯ ನಾಯಕನ ವಿರುದ್ಧ ನಡೆದ ವ್ಯವಸ್ಥಿತ, ಸಂಘಟಿತ ‘ಬ್ರೂಟಸ್ ಸಂಚು’ ಬಯಲಾಗಿದೆ ಎಂದು ಅವರು ಹೇಳಿದ್ದಾರೆ.
ಈ ಬಗ್ಗೆ ಬೆಂಗಳೂರು ನಗರದ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್ ಅವರೊಂದಿಗೆ ಚರ್ಚಿಸಿದ್ದೇನೆ. ಸ್ಟಿಂಗ್ ಸಂಚಿನಲ್ಲಿ ಭಾಗಿಯಾದ ಎಲ್ಲರನ್ನು ತಕ್ಷಣವೇ ಬಂಧಿಸಬೇಕು ಹಾಗೂ ಸ್ಟಿಂಗ್ ವಿರುದ್ಧ ಹೋರಾಡುತ್ತಿರುವ ಜನತಾದಳ ಕಾರ್ಯಕರ್ತರು ಮತ್ತು ಸಾಮಾಜಿಕ ಜಾಲತಾಣದ ಯುವಕರಿಗೆ ಕಿರುಕುಳ ನೀಡುವುದನ್ನು ನಿಲ್ಲಿಸಬೇಕು ಎಂದು ಪೊಲೀಸ್ ಆಯುಕ್ತರ ಕಚೇರಿಯ ಮುಂದೆ ಧರಣಿ ನಡೆಸಿ ಒತ್ತಾಯ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಸಿದ್ದರಾಮಯ್ಯನವರೇ, ನಾನು ನಿಮಗೆ ಮಾಡುವ ಮನವಿ ಇಷ್ಟೇ. ಕಾಂಗ್ರೆಸ್ ಪಕ್ಷದಲ್ಲಿ ನೀವು ಹರಕೆ ಕುರಿ ಅಗಬೇಡಿ, ಧೈರ್ಯವಾಗಿ ಸ್ಟಿಂಗ್ ಸಂಚನ್ನು ಎದುರಿಸಿ. ನಿಮ್ಮದೇ ಪಕ್ಷದಲ್ಲಿ ನಿಮ್ಮ ವಿರುದ್ಧ ನಡೆದಿರುವ ಮಹಾಷಡ್ಯಂತ್ರಕ್ಕೆ ನೀವು ಬಲಿಯಾಗಿದ್ದೀರಿ. ನಿಮ್ಮ ಪಕ್ಷದ ‘ಬ್ರೂಟಸ್’ ನಿಮ್ಮ ಬೆನ್ನಿಗೇ ಇರಿದ ನೀಚ ರಾಜಕಾರಣವನ್ನು ನೀವು ಸಹಿಸುವ ಅಗತ್ಯವಿಲ್ಲ ಎಂದಿದ್ದಾರೆ.
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು, ಮಾಜಿ ಮುಖ್ಯಮಂತ್ರಿ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿದ ಕಿಡಿಗೇಡಿಯನ್ನು ಬಂಧಿಸಲು ಭಯ ಏಕೆ ನಿಮಗೆ? ಯಾವನು ಅವನು? ಇದುವರೆಗೂ ಅವನನ್ನು ಟಚ್ ಮಾಡಿದ್ದೀರಾ? ಮಿಸ್ಟರ್ ಪ್ರಿಯಾಂಕ್ ಖರ್ಗೆ, ಆ ರಾಕೇಶ್ ಶೆಟ್ಟಿ ಎನ್ನುವವನು ಯಾರು? ಎಲ್ಲಿದ್ದ ಅವನು? ಇವತ್ತು ಅವನು ಎಷ್ಟು ಕೋಟಿಗೆ ಇದ್ದಾನೆ. ಅವನನ್ನು ಹೊರಗೆ ಬಿಟ್ಟುಕೊಂಡು ಯಾಕೆ ಕೂತಿದ್ದೀರಿ? ಅವನು ಏನೆಲ್ಲಾ ಮಾಡಿದ್ದಾನೆ, ಹೇಗೆ ಸುಲಿಗೆ ಮಾಡಿದ್ದಾನೆ ಎನ್ನುವುದು ನಿಮಗೆ ಗೊತ್ತಿಲ್ಲವೇ? ಕುಮಾರಸ್ವಾಮಿಯನ್ನು ಕರೆದು ವಿಚಾರಣೆ ಮಾಡ್ತಾರಂತೆ! ಯಾವ ಆಧಾರದ ಮೇಲೆ ನಮ್ಮ ಹುಡುಗನ ಮೇಲೆ 308 ಹಾಕಿದಿರಿ? ಅವನು ಎಲ್ಲಿ ವಸೂಲಿ ಮಾಡಿದ್ದಾನೆ ಅಂತ ತೋರಿಸಿ ಎಂದು ಪ್ರಶ್ನಿಸಿದ್ದಾರೆ.

