ಬೆಂಗಳೂರು: ರಾಜ್ಯದಲ್ಲಿ ನೈರುತ್ಯ ಮುಂಗಾರು ನಿರ್ಗಮನವಾಗಿದ್ದು ದಕ್ಷಿಣ ಒಳನಾಡಿನ ವಿವಿಧೆಡೆ ಮಳೆಯೊಂದಿಗೆ ಹಿಂಗಾರು ಪ್ರವೇಶವಾಗಿದೆ. ಚಿಕ್ಕಮಗಳೂರು, ಕೊಡಗು, ಬೆಂಗಳೂರು ಸೇರಿ ದಕ್ಷಿಣ ಒಳನಾಡಿನ ಹಲವೆಡೆ ಮಳೆಯಾಗುವ ಮುನ್ಸೂಚನೆ ಇದೆ.
ಬೆಂಗಳೂರು, ಮೈಸೂರು ಸೇರಿ ಹಲವೆಡೆ ಗುರುವಾರ ಮಳೆಯಾಗಿದೆ. ಅಕ್ಟೋಬರ್ 16ರಿಂದ 21ರವರೆಗೆ ಹಾಸನ, ಚಿಕ್ಕಮಗಳೂರು, ಕೊಡಗು ಸೇರಿ ದಕ್ಷಿಣ ಒಳನಾಡಿನ ವಿವಿಧ ಜಿಲ್ಲೆಗಳಲ್ಲಿ ಭಾರಿ ಮಳೆ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮನ್ಸೂಚನೆ ನೀಡಿದೆ. 30 ರಿಂದ 40 ಕಿ.ಮೀ.ವೇಗದಲ್ಲಿ ಗಾಳಿ ಗುಡುಗು ಸಹಿತ ಹಾಸನ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲಿ ಭಾರಿ ಮಳೆ ಆಗುವ ಮುನ್ಸೂಚನೆ ಇದ್ದು, ಅಕ್ಟೋಬರ್ 16ರಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಮೈಸೂರು, ಶಿವಮೊಗ್ಗ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ತುಮಕೂರು, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ, ಚಾಮರಾಜನಗರ ಜಿಲ್ಲೆಗಳ ವಿವಿಧೆಡೆ ಸಾಧಾರಣ ಮತ್ತು ಕೆಲವೆಡೆ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಅಕ್ಟೋಬರ್ 17ರಿಂದ 21ರವರೆಗೆ ದಾವಣಗೆರೆ, ವಿಜಯನಗರ, ಬಳ್ಳಾರಿ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ವಿಮಾ ಪಾಲಿಸಿ ಪುನರಾರಂಭಿಸದ ಕಂಪನಿಗೆ ದಂಡ: ಗ್ರಾಹಕ ಆಯೋಗ ಆದೇಶ
ಶಿವಮೊಗ್ಗ: ನಿಯಮಾನುಸಾರ ಕಂತು ಪಾವತಿಸಿದರೂ ಜೀವ ವಿಮಾ ಪಾಲಿಸಿಯನ್ನು ಪುನರಾರಂಭಿಸದೆ ಸೇವಾ ನ್ಯೂನತೆ ಎಸಗಿದ ಮುಂಬೈನ ಐಸಿಐಸಿಐ ಪ್ರುಡೆನ್ಷಿಯಲ್ ಇನ್ಶೂರೆನ್ಸ್ ಕಂಪನಿಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ದಂಡ ಹಾಗೂ ಪರಿಹಾರ ಪಾವತಿಸುವಂತೆ ಆದೇಶಿಸಿದೆ.
ಶಿವಮೊಗ್ಗದ ಹಳೇಬಾರ್ ರಸ್ತೆಯ ನಿವಾಸಿ ನಾಗರಾಜ ಎಂಬುವರು ಐಸಿಐಸಿಐ ಬ್ಯಾಂಕ್ ಮೂಲಕ ಐಸಿಐಸಿಐ ಪ್ರುಡೆನ್ಷಿಯಲ್ ಇನ್ಶೂರೆನ್ಸ್ ಕಂಪನಿಯ ಜೀವ ವಿಮಾ ಪಾಲಿಸಿಯನ್ನು (ಅವಧಿ: 30/06/2019 ರಿಂದ 30/06/2046, ವಾರ್ಷಿಕ ಕಂತು: ರೂ.65,460) ಪಡೆದುಕೊಂಡಿದ್ದರು. 2024 ರ ಕಂತು ಪಾವತಿಯಾಗದಿರುವುದನ್ನು ಗಮನಿಸಿ, ದಂಡ ಸಹಿತ ರೂ.82,467 ಗಳನ್ನ 2025 ರ ಮೇ 7 ರಂದು ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದರು. ತದನಂತರ 2025 ರ ಜುಲೈ 9 ರಂದು ಕಂತು ರೂ. 78,688 ಗಳನ್ನು ಪಾವತಿಸಿ, ಪಾಲಿಸಿಯನ್ನು ಪುನರಾರಂಭಿಸಲು (ರಿವೈವಲ್) ಕೋರಿದ್ದರು.
ಕಂಪನಿಯ ಸೂಚನೆಯಂತೆ ಅಧಿಕೃತ ವೈದ್ಯರಿಂದ ಆರೋಗ್ಯ ತಪಾಸಣೆ ಮಾಡಿಸಿ ವರದಿ ನೀಡಿದರೂ, ವಿಮಾ ಕಂಪನಿಯು ಯಾವುದೇ ಪ್ರತಿಕ್ರಿಯೆ ನೀಡದೆ ಪಾಲಿಸಿಯನ್ನು ಪುನರಾರಂಭಿಸಿರಲಿಲ್ಲ. ನೋಟೀಸ್ ನೀಡಿದರೂ ಸ್ಪಂದಿಸದ ಕಾರಣ ದೂರುದಾರರು ವಕೀಲರ ಮೂಲಕ ಜಿಲ್ಲಾ ಗ್ರಾಹಕ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಆಯೋಗದ ಆದೇಶ:
ಉಭಯ ಪಕ್ಷಕಾರರ ವಾದ-ವಿವಾದಗಳನ್ನು ಆಲಿಸಿದ ಆಯೋಗವು, ವಿಮಾ ಕಂಪನಿಯು ಸೇವಾ ನ್ಯೂನತೆ ಎಸಗಿರುವುದು ಸಾಬೀತಾಗಿದೆ ಎಂದು ತೀರ್ಮಾನಿಸಿ ಈ ಕೆಳಗಿನಂತೆ ಆದೇಶಿಸಿದೆ:
2ನೇ ಎದುರುದಾರರಾದ ಐಸಿಐಸಿಐ ಪ್ರುಡೆನ್ಷಿಯಲ್ ಇನ್ಶೂರೆನ್ಸ್ ಕಂಪನಿಯು ದೂರುದಾರರಿಂದ ಬರಬೇಕಾದ ವಿಮಾ ಕಂತಿನ ಮೊತ್ತವನ್ನು ಪಡೆದು 45 ದಿನಗಳ ಒಳಗಾಗಿ ಪಾಲಿಸಿಯನ್ನು ಪುನರಾರಂಭಿಸಬೇಕು.
ತಪ್ಪಿದಲ್ಲಿ, ಪಾಲಿಸಿ ಪುನರಾರಂಭಿಸುವವರೆಗೆ ಪ್ರತಿದಿನ ರೂ.100 ರಂತೆ ದೂರುದಾರರಿಗೆ ಪಾವತಿಸಬೇಕು. ಹಾಗೂ ಮಾನಸಿಕ ಹಿಂಸೆಗೆ ರೂ.30,000 ಹಾಗೂ ದೂರಿನ ಖರ್ಚುವೆಚ್ಚಕ್ಕಾಗಿ ರೂ.10,000 ಗಳನ್ನು 45 ದಿನಗಳ ಒಳಗಾಗಿ ದೂರುದಾರರಿಗೆ ಪಾವತಿಸಬೇಕು.
ನಿಗದಿತ 45 ದಿನಗಳೊಳಗೆ ಮೊತ್ತ ಪಾವತಿಸದಿದ್ದರೆ ಶೇ. 10 ರಷ್ಟು ಬಡ್ಡಿ ಸೇರಿಸಿ ಪೂರ್ತಿ ಹಣ ಪಾವತಿಸಬೇಕಾಗುತ್ತದೆ.
1ನೇ ಎದುರುದಾರರಾದ ಐಸಿಐಸಿಐ ಬ್ಯಾಂಕ್ ವಿರುದ್ಧದ ದೂರನ್ನು ವಜಾಗೊಳಿಸಲಾಗಿದೆ. ಈ ಆದೇಶವನ್ನು ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷರಾದ ಟಿ.ಶಿವಣ್ಣ ಹಾಗೂ ಸದಸ್ಯರಾದ ಬಿ.ಡಿ.ಯೋಗಾನಂದ ಭಾಂಡ್ಯ ಅವರನ್ನೊಳಗೊಂಡ ಪೀಠವು ಹೊರಡಿಸಿದೆ.

