HomeKarnatakaರಾಜ್ಯದಲ್ಲಿ ಭೀಕರ ಬರಗಾಲದಿಂದ 70 ಸಾವಿರ ಕೋಟಿ ರೂ.ವರೆಗೆ ನಷ್ಟ

ರಾಜ್ಯದಲ್ಲಿ ಭೀಕರ ಬರಗಾಲದಿಂದ 70 ಸಾವಿರ ಕೋಟಿ ರೂ.ವರೆಗೆ ನಷ್ಟ

ಬೆಂಗಳೂರು: ರಾಜ್ಯದಲ್ಲಿ ಬರದಿಂದ ಉಂಟಾಗಿರುವ ನಷ್ಟದ ಕುರಿತು ಈಗಾಗಲೇ ಸುಮಾರು ₹46,000 ಕೋಟಿಯಷ್ಟು ಅಂದಾಜು ಮಾಡಲಾಗಿದೆ. ಅಂತಿಮ ಲೆಕ್ಕಾಚಾರದಲ್ಲಿ ನಷ್ಟದ ಪ್ರಮಾಣ ₹60,000 ಕೋಟಿಯಿಂದ ₹70,000 ಕೋಟಿಯವರೆಗೆ ತಲುಪಬಹುದು ಎಂಬ ಪ್ರಾಥಮಿಕ ಅಂದಾಜುಗಳಿವೆ ಎಂದು ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.

ಸಚಿವ ಸಂಪುಟ ಸಭೆಯ ಬಳಿಕ ವಿಧಾನಸೌಧದ ಮುಂಭಾಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಹೊಸದಾಗಿ 9 ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಘೋಷಿಸಲಾಗಿದ್ದು, ಇದರೊಂದಿಗೆ ಒಟ್ಟು 226 ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಗುರುತಿಸಲಾಗಿದೆ. ಬರದಿಂದ ಉಂಟಾಗಿರುವ ನಷ್ಟದ ಕುರಿತು ಅಂತಿಮ ಮನವಿಪತ್ರ (ಮೆಮೊರಾಂಡಮ್) ಸಿದ್ಧಪಡಿಸಲಾಗುತ್ತಿದ್ದು, ಮುಂದಿನ ಒಂದೆರಡು ದಿನಗಳಲ್ಲಿ ಪೂರ್ಣಗೊಳ್ಳಲಿದೆ ಎಂದರು.

ಈ ಹಿಂದೆ 217 ತಾಲ್ಲೂಕುಗಳನ್ನು ಬರಪೀಡಿತವೆಂದು ಘೋಷಿಸಲಾಗಿತ್ತು. ಇದೀಗ ಮತ್ತೆ ಒಂಬತ್ತು ತಾಲ್ಲೂಕುಗಳನ್ನು ಸೇರ್ಪಡೆಗೊಳಿಸಿರುವುದರಿಂದ ಒಟ್ಟು ಸಂಖ್ಯೆ 226ಕ್ಕೆ ಏರಿಕೆಯಾಗಿದೆ. ಉಳಿದ ತಾಲ್ಲೂಕುಗಳಲ್ಲಿ ಬರ ಪರಿಸ್ಥಿತಿಯನ್ನು ಪರಿಶೀಲಿಸಲಾಗುತ್ತಿದ್ದು, ಟ್ರಿಗರ್-1 ಮಾನದಂಡಗಳಡಿ ಅರ್ಹತೆ ಪಡೆದ ತಾಲ್ಲೂಕುಗಳನ್ನು ಗ್ರೌಂಡ್ ಟ್ರೂಥಿಂಗ್ ಪ್ರಕ್ರಿಯೆಗೆ ಒಳಪಡಿಸಲಾಗುವುದು. ಈ ಪ್ರಕ್ರಿಯೆಯಲ್ಲಿ ಅರ್ಹತೆ ಕಂಡುಬಂದರೆ ಮತ್ತಷ್ಟು ತಾಲ್ಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಇಲ್ಲವಾದಲ್ಲಿ ಪ್ರಸ್ತುತ ಘೋಷಿಸಿರುವ 226 ತಾಲ್ಲೂಕುಗಳ ಪಟ್ಟಿಯೇ ಅಂತಿಮವಾಗಲಿದೆ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬರದಿಂದ ಉಂಟಾಗಿರುವ ನಷ್ಟದ ಕುರಿತು ಅಂತಿಮ ಮನವಿಪತ್ರವನ್ನು ಸಿದ್ಧಪಡಿಸಲಾಗುತ್ತಿದ್ದು, ಮುಂದಿನ ಒಂದೆರಡು ದಿನಗಳಲ್ಲಿ ಪೂರ್ಣಗೊಳ್ಳಲಿದೆ. ಮನವಿಪತ್ರ ಸಲ್ಲಿಸುವ ಸಂದರ್ಭದಲ್ಲಿ ಸರ್ವಪಕ್ಷ ನಿಯೋಗವನ್ನು ಕೇಂದ್ರಕ್ಕೆ ಕರೆದೊಯ್ಯಬೇಕೆಂದು ಮುಖ್ಯಮಂತ್ರಿಗಳು ಸೂಚಿಸಿದ್ದಾರೆ ಎಂದರು.

ಸರ್ವಪಕ್ಷ ನಿಯೋಗದಲ್ಲಿ ಭಾಗವಹಿಸುವುದಿಲ್ಲ ಎಂದು ವಿರೋಧ ಪಕ್ಷದವರು ಈಗಾಗಲೇ ತಮ್ಮ ನಿಲುವನ್ನು ವ್ಯಕ್ತಪಡಿಸಿದ್ದಾರೆ. ಆದಾಗ್ಯೂ, ಮತ್ತೊಮ್ಮೆ ಅವರನ್ನು ಸಂಪರ್ಕಿಸಿ ನಿಯೋಗದಲ್ಲಿ ಭಾಗವಹಿಸುವಂತೆ ಮನವಿ ಮಾಡಲಾಗುವುದು. ಅವರು ಭಾಗವಹಿಸಿದರೆ ಉತ್ತಮ. ಇಲ್ಲವಾದಲ್ಲಿ ಮುಖ್ಯಮಂತ್ರಿಗಳು, ನಾನು ಮತ್ತು ಕೆಲವು ಸಚಿವರೊಂದಿಗೆ ಕೇಂದ್ರಕ್ಕೆ ತೆರಳಿ, ಸಂಬಂಧಪಟ್ಟ ಕೇಂದ್ರ ಸಚಿವರು ಮತ್ತು ಪ್ರಧಾನಮಂತ್ರಿಯವರ ಭೇಟಿಗೆ ಸಮಯ ಕೋರಲಿದ್ದೇವೆ. ಅವರನ್ನು ಭೇಟಿ ಮಾಡಿ ರಾಜ್ಯದ ಬರ ಪರಿಸ್ಥಿತಿ ಹಾಗೂ ಪರಿಹಾರದ ಅಗತ್ಯವನ್ನು ವಿವರಿಸಿ ಅಂತಿಮ ಮನವಿಪತ್ರ ಸಲ್ಲಿಸಲಾಗುವುದು ಎಂದು ಡಿಸಿಎಂ ಪರಮೇಶ್ವರ್ ಹೇಳಿದ್ದಾರೆ.

ರಾಜ್ಯದಲ್ಲಿ ಬರದಿಂದ ಉಂಟಾಗಿರುವ ನಷ್ಟದ ಕುರಿತು ಈಗಾಗಲೇ ಸುಮಾರು ₹46,000 ಕೋಟಿಯಷ್ಟು ಅಂದಾಜು ಮಾಡಲಾಗಿದೆ. ಅಂತಿಮ ಲೆಕ್ಕಾಚಾರದಲ್ಲಿ ನಷ್ಟದ ಪ್ರಮಾಣ ₹60,000 ಕೋಟಿಯಿಂದ ₹70,000 ಕೋಟಿಯವರೆಗೆ ತಲುಪಬಹುದು ಎಂಬ ಪ್ರಾಥಮಿಕ ಅಂದಾಜುಗಳಿವೆ. ಆದರೆ, ಒಟ್ಟು ನಷ್ಟದ ಮೊತ್ತವನ್ನೇ ಕೇಂದ್ರ ಸರ್ಕಾರದಿಂದ ಪರಿಹಾರವಾಗಿ ಕೇಳಲು ಸಾಧ್ಯವಿಲ್ಲ. ಎನ್‌ಡಿಆರ್‌ಎಫ್ ಮಾರ್ಗಸೂಚಿಗಳ ಪ್ರಕಾರ ಪರಿಹಾರಕ್ಕೆ ಅರ್ಹವಾಗುವ ನಷ್ಟವನ್ನು ಪ್ರತ್ಯೇಕವಾಗಿ ಲೆಕ್ಕಾಚಾರ ಮಾಡಬೇಕಾಗುತ್ತದೆ ಎಂದರು.

ಕಳೆದ ವರ್ಷ ಸುಮಾರು ₹49,000 ಕೋಟಿಯಷ್ಟು ನಷ್ಟ ಸಂಭವಿಸಿದ್ದರೂ, ಎನ್‌ಡಿಆರ್‌ಎಫ್ ಮಾರ್ಗಸೂಚಿಗಳ ಪ್ರಕಾರ ಸುಮಾರು ₹18,000 ಕೋಟಿ ಪರಿಹಾರವನ್ನು ಕೇಂದ್ರ ಸರ್ಕಾರದಿಂದ ಕೋರಲಾಗಿತ್ತು. ಅದೇ ರೀತಿ ಈ ಬಾರಿಯೂ ₹60,000 ಕೋಟಿಯಷ್ಟು ನಷ್ಟ ಸಂಭವಿಸಿದರೆ, ಮಾರ್ಗಸೂಚಿಗಳ ಪ್ರಕಾರ ಅಂದಾಜು ₹18,000 ಕೋಟಿಯಿಂದ ₹20,000 ಕೋಟಿಯವರೆಗೆ ಪರಿಹಾರ ಕೋರಬೇಕಾಗಬಹುದು ಎಂದರು.

ಇವು ಪ್ರಾಥಮಿಕ ಅಂದಾಜುಗಳಾಗಿದ್ದು, ಅಂತಿಮ ಅಂಕಿಅಂಶಗಳಲ್ಲ. ನಷ್ಟದ ಸಂಪೂರ್ಣ ವಿವರಗಳು ಹಾಗೂ ಎನ್‌ಡಿಆರ್‌ಎಫ್ ಮಾರ್ಗಸೂಚಿಗಳ ಪ್ರಕಾರ ಲೆಕ್ಕಾಚಾರ ಪೂರ್ಣಗೊಂಡ ಬಳಿಕವೇ ಕೇಂದ್ರದಿಂದ ಕೋರಬೇಕಾದ ಪರಿಹಾರದ ಮೊತ್ತವನ್ನು ಅಂತಿಮಗೊಳಿಸಲಾಗುವುದು ಎಂದರು.

ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳ ರದ್ದು ಪಡಿಸಿರುವ ಹೈಕೋರ್ಟ್‌ ತೀರ್ಪಿನ ವಿರುದ್ಧ ಸುಪ್ರೀಂನಲ್ಲಿ ಮೇಲ್ಮನವಿ:

ಎಸ್‌ಸಿ, ಎಸ್‌ಟಿ ಮೀಸಲಾತಿ ಬಗ್ಗೆ ಹೈಕೋರ್ಟ್ ತೀರ್ಪಿಗೆ ಸಂಬಂಧಪಟ್ಟ ಪ್ರಕರಣದಲ್ಲಿ ಮೇಲ್ಮನವಿ ಸಲ್ಲಿಸಲು ನಿರ್ಧರಿಸಲಾಗಿದ್ದು, ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ಅನುಮತಿ ಅರ್ಜಿ (ಎಸ್‌ಎಲ್‌ಪಿ) ಸಲ್ಲಿಸುವ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ.

ಮುಂದಿನ ಕಾನೂನಾತ್ಮಕ ಹಾಗೂ ಆಡಳಿತಾತ್ಮಕ ಕ್ರಮಗಳ ಬಗ್ಗೆ ರಾಜಕೀಯ ವ್ಯವಹಾರಗಳ ಸಮಿತಿಯಲ್ಲಿ ಚರ್ಚಿಸಲಾಗುವುದು. ವಿಶೇಷವಾಗಿ 9ನೇ ಅನುಸೂಚಿಗೆ ಸೇರಿಸುವ ಸಾಧ್ಯತೆ ಸೇರಿದಂತೆ ಮುಂದಿನ ಕ್ರಮಗಳ ಕುರಿತು ಸಮಿತಿಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

 

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular