ಬೆಂಗಳೂರು-ಸ್ಟಿಂಗ್ ಆಪರೇಷನ್ ಮಾಡಿಸುವುದಕ್ಕೆ ಮುಖ್ಯಮಂತ್ರಿಗಳಿಗೆ ತಲೆ ಕೆಟ್ಟಿದೆಯೇ? ಪದೇಪದೇ ಈ ವಿಚಾರದಲ್ಲಿ ಮುಖ್ಯಮಂತ್ರಿಗಳನ್ನು ಎಳೆದು ತರುವ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಟೆಸ್ಟಿಂಗ್ ಮಿಷನ್ ಹಾಕಬೇಕು ಎಂದು ಜಲ ಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ಕಿಡಿಕಾರಿದರು.
ಡಿ.ಕೆ. ಶಿವಕುಮಾರ್ ಅವರೇ ಸಿದ್ದರಾಮಯ್ಯ ಅವರ ಸ್ಟಿಂಗ್ ಆಪರೇಷನ್ ಮಾಡಿಸಿದ್ದಾರೆ ಎಂಬ ಎಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, “ತಮ್ಮ ಪಕ್ಷದ ಹಿರಿಯ ನಾಯಕರಿಗೆ ಸ್ಟಿಂಗ್ ಆಪರೇಷನ್ ಮಾಡಿಸಲು ಡಿಕೆಶಿಗೆ ತಲೆ ಕೆಟ್ಟಿದೆಯಾ? ಡಿಕೆಶಿ ಸಿಎಂ ಆದ ದಿನದಿಂದ ಕುಮಾರಸ್ವಾಮಿ ಅವರು ನಿದ್ದೆ ಮಾಡಿದ್ದಾರೋ ಇಲ್ಲವೋ ಎಂದು ತಿಳಿಯಲು ಅವರಿಗೆ ಟೆಸ್ಟಿಂಗ್ ಮೆಷಿನ್ ಹಾಕಬೇಕು. ಕುಮಾರಸ್ವಾಮಿ ಅವರು ಮಾಡುತ್ತಿರುವುದನ್ನು ನೋಡಿ ಜನರಿಗೆ ಅಸಹ್ಯ ಹುಟ್ಟುತ್ತಿದೆ” ಎಂದು ವ್ಯಂಗ್ಯವಾಡಿದರು.
“ಕುಮಾರಸ್ವಾಮಿಯವರೊಬ್ಬರು ಕೇಂದ್ರ ಕ್ಯಾಬಿನೆಟ್ ಸಚಿವರು. ಆದರೆ, ಅವರು ತಮ್ಮ ಕೆಲಸ ಮಾಡುತ್ತಿಲ್ಲ ಎಂಬುದು ಅವರ ಹೇಳಿಕೆಗಳಿಂದಲೇ ಜನರಿಗೆ ಸಾಬೀತಾಗಿದೆ. ಈ ಸ್ಟಿಂಗ್ ಬಗ್ಗೆ ಜನರಿಗೆ ಏನಾಗಬೇಕಿದೆ? ಇಂತಹವುಗಳೆಲ್ಲ ಜನರಿಗೆ ಬೇಕಿಲ್ಲ. ಅಂತಹ ಸ್ಟಿಂಗ್ ನಡೆದು ಬಹಿರಂಗಗೊಂಡರೆ ತಪ್ಪಿತಸ್ಥರ ಮೇಲೆ ಕ್ರಮವಾಗಲಿದೆ, ತನಿಖೆಯೂ ನಡೆಯಲಿದೆ. ಯಾರ ಮೇಲೆ ಬೇಕಿದ್ದರೂ ಸ್ಟಿಂಗ್ ನಡೆಯಲಿ. ಕೇಂದ್ರ ಸರ್ಕಾರದ ಬಳಿಯೇ ಸಿಬಿಐ ಇದೆ, ಆ ಮೂಲಕ ತನಿಖೆ ನಡೆಸಲಿ. ಇಂತಹವುಗಳನ್ನೆಲ್ಲ ಸರ್ಕಾರ ಕಣ್ಣುಮುಚ್ಚಿ ನೋಡಿಕೊಂಡು ಕೂರುವುದಿಲ್ಲ” ಎಂದು ಸಚಿವರು ಎಚ್ಚರಿಕೆ ನೀಡಿದರು.
ಪ್ರಜ್ವಲ್ ರೇವಣ್ಣ ಮತ್ತು ಪೆನ್ಡ್ರೈವ್ ಬಹಿರಂಗ
ಪ್ರಜ್ವಲ್ ರೇವಣ್ಣ ಪಾಪವಂತೆ!
“ಕುಮಾರಸ್ವಾಮಿಯವರು ಅನಾವಶ್ಯಕವಾಗಿ ಸ್ಟಿಂಗ್ ವಿಷಯ ಎಳೆದು ತಂದಿದ್ದಾರೆ. ಇವರ ಪ್ರಕಾರ ಪ್ರಜ್ವಲ್ ರೇವಣ್ಣ ಪಾಪವಂತೆ! ಹಾಸನದ ಪೆನ್ಡ್ರೈವ್ ಮಾಡಿಸಿದ್ದು ಯಾರು ಎಂದು ಇವರು ಕೇಳುತ್ತಾರೆ. ಪೆನ್ಡ್ರೈವ್ ಹಂಚಿದವರ ಬಗ್ಗೆ ಇವರು ದೂರು ನೀಡಲಿ, ಕ್ರಮ ಕೈಗೊಳ್ಳೋಣ. ಅವರು ದೂರು ನೀಡಿದರೆ ಈ ಬಗ್ಗೆ ತನಿಖೆ ನಡೆಸುವಂತೆ ನಾನೇ ಮುಖ್ಯಮಂತ್ರಿಯವರಿಗೆ ಮನವಿ ಮಾಡುತ್ತೇನೆ. ಆದರೆ, ಇವರು ಹೇಳುವ ಪ್ರಕಾರ ಪ್ರಜ್ವಲ್ ರೇವಣ್ಣ ಪಾಪದ ಹುಡುಗನಂತೆ! ಅವನ ಬಗ್ಗೆ ಇವರಿಗೆ ಸಹಾನುಭೂತಿ ಇದೆ. ಆದರೆ ಅವನಿಂದ ಅನ್ಯಾಯಕ್ಕೊಳಗಾದ ನೂರಾರು ಹೆಣ್ಣುಮಕ್ಕಳ ಬಗ್ಗೆ ಎಚ್ಡಿಕೆಗೆ ಸಹಾನುಭೂತಿ ಇಲ್ಲ. ಹಾಸನದ ವಿಚಾರ ಎತ್ತುವುದು ಅಸಭ್ಯ ಎಂದು ನಾವೇ ಸುಮ್ಮನಿದ್ದರೆ, ಇವರೇ ಮತ್ತೆ ಮತ್ತೆ ಅದನ್ನೇ ಪ್ರಸ್ತಾಪಿಸುತ್ತಾರೆ” ಎಂದು ವಾಗ್ದಾಳಿ ನಡೆಸಿದರು.
“ಪ್ರಜ್ವಲ್ ರೇವಣ್ಣ ಪಾಪದ ಹುಡುಗನಂತೆ, ಅವನಿಗೆ ಪೆನ್ಡ್ರೈವ್ ಹಂಚಿ ಅನ್ಯಾಯ ಮಾಡಿಬಿಟ್ಟರಂತೆ. ಹಾಗಾದರೆ ಆ ಸಂತ್ರಸ್ತ ಹೆಣ್ಣುಮಕ್ಕಳ ಬದುಕೇನು? ಅವರೆಲ್ಲ ಎಲ್ಲಿದ್ದಾರೆ? ಇಂದು ಅವರ ಕುಟುಂಬದ ಪರಿಸ್ಥಿತಿ ಏನಾಗಿದೆ? ಅವರ ವೈಯಕ್ತಿಕ ಬದುಕೇನು? ಅವರು ಅನುಭವಿಸುತ್ತಿರುವ ನರಕ ಇವರಿಗೆ ಗೊತ್ತಿದೆಯೇ?” ಎಂದು ಪ್ರಶ್ನಿಸಿದರು.
ಎಚ್.ಡಿ. ಕುಮಾರಸ್ವಾಮಿ ಬಗ್ಗೆ ವಾಗ್ದಾಳಿ
ದಿನ ಬೆಳಗಾದರೆ ಎಚ್ಡಿಕೆಯದ್ದು ಅಸಭ್ಯ ಮಾತು!”ಕುಮಾರಸ್ವಾಮಿ ಈ ಮಟ್ಟಕ್ಕೆ ಇಳಿಯುತ್ತಾರೆ ಎಂದು ನಾನು ನಿರೀಕ್ಷಿಸಿರಲಿಲ್ಲ. ನಾವೆಲ್ಲ ಒಟ್ಟಿಗೆ ರಾಜಕಾರಣ ಮಾಡಿದವರು. ರಾಜಕೀಯ ದ್ವೇಷ ಅಥವಾ ಭಿನ್ನಾಭಿಪ್ರಾಯಗಳು ಸಾವಿರ ಇರುತ್ತವೆ. ಆದರೆ, ಅವರು ಇಷ್ಟರ ಮಟ್ಟಿಗೆ ಕೆಳಮಟ್ಟಕ್ಕೆ ಇಳಿಯುತ್ತಾರೆ ಎಂದು ಭಾವಿಸಿರಲಿಲ್ಲ. ಪ್ರತಿದಿನ ಬೆಳಗ್ಗೆ ಎದ್ದ ತಕ್ಷಣ ಬರೀ ಇಂತಹ ಅಸಭ್ಯ ವಿಚಾರಗಳನ್ನೇ ಮಾತನಾಡುತ್ತಾರೆ. ಇವರು ಆಡುತ್ತಿರುವ ಮಾತುಗಳನ್ನು ನೋಡಿದರೆ ಇದು ಯಾವುದೋ ಒಂದು ದಿನ ಅಂತ್ಯವಾಗಲೇಬೇಕು. ಅದು ಯಾವ ರೀತಿ ಅಂತ್ಯವಾಗುತ್ತದೆ ಎಂಬುದು ನಮ್ಮ-ನಿಮ್ಮ ಕೈಯಲ್ಲಿಲ್ಲ” ಎಂದು ಮಾರ್ಮಿಕವಾಗಿ ನುಡಿದರು.
ಸಿದ್ದರಾಮಯ್ಯನವರದ್ದು ಕುಮಾರಸ್ವಾಮಿ ತರಹದ ಚರಿತ್ರೆಯಲ್ಲ
ಸಿದ್ದರಾಮಯ್ಯ ಮತ್ತು ಸ್ಟಿಂಗ್ ವಿಷಯ
“ಸಿದ್ದರಾಮಯ್ಯನವರ ನಾಯಕತ್ವ, ಅವರು ನಡೆದು ಬಂದ ದಾರಿ ಎಲ್ಲರಿಗೂ ಗೊತ್ತಿದೆ. ಸುಮ್ಮನೆ ಯಾರೋ ಒಬ್ಬರು ಮೈಕ್ ಹಿಡಿದು ಅವರ ಹೆಸರನ್ನು ಹೇಳಿಸಿಬಿಟ್ಟರೆ ಆಗುತ್ತದೆಯೇ? ಸಿದ್ದರಾಮಯ್ಯನವರ ವ್ಯಕ್ತಿತ್ವ ಹಾಳುಮಾಡಲು ಇವರ ಬಳಿ ಏನು ಸಾಕ್ಷ್ಯವಿದೆ? ಸಿದ್ದರಾಮಯ್ಯನವರದ್ದು ಕುಮಾರಸ್ವಾಮಿ ತರಹದ ಚರಿತ್ರೆಯಲ್ಲ. ಎಚ್ಡಿಕೆ ತರಹದ ಚರಿತ್ರೆ ಸಿದ್ದರಾಮಯ್ಯನವರದ್ದೂ ಆಗಿದ್ದರೆ ನಾವು ಅದನ್ನು ಒಪ್ಪಿಕೊಳ್ಳುತ್ತಿದ್ದೆವು. ನಮ್ಮ ತಪ್ಪಿದ್ದರೂ ಒಪ್ಪುತ್ತೇವೆ, ಸಿದ್ದರಾಮಯ್ಯನವರ ತಪ್ಪಿದ್ದರೂ ಒಪ್ಪುತ್ತೇವೆ. ಯಾರನ್ನೋ ಕರೆದುಕೊಂಡು ಬಂದು ಕೂರಿಸಿ ಪ್ರಚೋದಿಸಿ ಹೇಳಿಸಿದರೆ ಹೇಳಿಬಿಡುತ್ತಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ವೇಳೆ ಬಾರದ ಆರೋಪ ಈಗೇಕೆ ಬರುತ್ತದೆ? ಇದು ನಮ್ಮ ಪಕ್ಷದಲ್ಲಿ ಗೊಂದಲ ಸೃಷ್ಟಿಸಲು ಕುಮಾರಸ್ವಾಮಿ ಮಾಡುತ್ತಿರುವ ಹುನ್ನಾರ” ಎಂದು ಆರೋಪಿಸಿದರು.
“ಸಿದ್ದರಾಮಯ್ಯನವರ ವರ್ಚಸ್ಸಿಗೆ ಧಕ್ಕೆ ತರುವ ಪ್ರಯತ್ನವೇ ಈ ಸ್ಟಿಂಗ್ ನಾಟಕ. ಜೆಡಿಎಸ್ನವರನ್ನು ಬಿಟ್ಟು ಇದನ್ನು ಮಾಡಲು ಇನ್ಯಾರಿಗೆ ಸಾಧ್ಯ? ಹಿಂದೆ ಸಿದ್ದರಾಮಯ್ಯನವರನ್ನು ಪಕ್ಷದಿಂದ ಹೊರಹಾಕಿದಾಗ, ಅನೇಕ ಬಾರಿ ಹೀಯಾಳಿಸಿದಾಗ ಇಲ್ಲದ ಅನುಕಂಪ ಇಂದು ಕುಮಾರಸ್ವಾಮಿಯವರಿಗೆ ಇದ್ದಕ್ಕಿದ್ದಂತೆ ಹುಟ್ಟಿಕೊಂಡಿದೆ! ನಾಳೆ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾದರೆ ಮುಖ್ಯಮಂತ್ರಿಗಳು ಸೇರಿದಂತೆ ಎಲ್ಲ ಸಚಿವರು ಸೇರಿ ತೀರ್ಮಾನ ಕೈಗೊಳ್ಳುತ್ತಾರೆ. ನಮಗೆ ಅದರ ಅವಶ್ಯಕತೆ ಇಲ್ಲ ಅನ್ನಿಸುತ್ತದೆ. ಈ ಬಗ್ಗೆ ತನಿಖೆ ಅವಶ್ಯಕತೆ ಇದ್ದರೆ ಮುಖ್ಯಮಂತ್ರಿಗಳು ನಿರ್ಧಾರ ಕೈಗೊಳ್ಳುತ್ತಾರೆ.
ನಮಗಿಂತ ದೊಡ್ಡ ಸರ್ಕಾರ ಅವರದ್ದೇ ಇರುವುದಲ್ಲವೇ? ಧೈರ್ಯವಿದ್ದರೆ ಕೇಂದ್ರ ಸರ್ಕಾರದಿಂದಲೇ ಈ ಸ್ಟಿಂಗ್ ಕುರಿತು ತನಿಖೆ ಮಾಡಿಸಲಿ” ಎಂದು ಸವಾಲೆಸೆದರು.

