HomeKarnatakaಇಂದು 9 ತಾಲೂಕುಗಳು ಬರಪೀಡಿತ ಪಟ್ಟಿಗೆ ಸೇರ್ಪಡೆ ; ಬರಪೀಡಿತ ತಾಲೂಕುಗಳ ಸಂಖ್ಯೆ 226ಕ್ಕೆ ಏರಿಕೆ:...

ಇಂದು 9 ತಾಲೂಕುಗಳು ಬರಪೀಡಿತ ಪಟ್ಟಿಗೆ ಸೇರ್ಪಡೆ ; ಬರಪೀಡಿತ ತಾಲೂಕುಗಳ ಸಂಖ್ಯೆ 226ಕ್ಕೆ ಏರಿಕೆ: ಶೀಘ್ರದಲ್ಲೇ ಕೇಂದ್ರಕ್ಕೆ ನಿಯೋಗ: ಡಾ. ಜಿ. ಪರಮೇಶ್ವರ

ಬೆಂಗಳೂರು- ರಾಜ್ಯದಲ್ಲಿ ಬರದಿಂದ ಉಂಟಾಗಿರುವ ನಷ್ಟದ ಕುರಿತು ಅಂತಿಮ ಮೆಮೊರಾಂಡಮ್ ಸಿದ್ಧಪಡಿಸಲಾಗುತ್ತಿದ್ದು, ಬಹುಶಃ ಇನ್ನೊಂದು ವಾರದಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಉಪಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರಾದ ಡಾ. ಜಿ. ಪರಮೇಶ್ವರ ತಿಳಿಸಿದರು.

ಹೊಸ ತಾಲೂಕುಗಳ ಸೇರ್ಪಡೆ

ಸದಾಶಿವನಗರದ ತಮ್ಮ ನಿವಾಸದ ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇಂದು ಮತ್ತೆ 9 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಲಾಗುತ್ತಿದ್ದು, ಈ ಮೂಲಕ ಬರಪೀಡಿತ ತಾಲೂಕುಗಳ ಸಂಖ್ಯೆ 226ಕ್ಕೆ ಏರಿಕೆಯಾಗಲಿದೆ. ಈ ತಾಲೂಕುಗಳಲ್ಲಿ ಗ್ರೌಂಡ್ ಟ್ರೂಥಿಂಗ್ ಪ್ರಕ್ರಿಯೆ ಪೂರ್ಣಗೊಂಡಿದೆ. ಇನ್ನುಳಿದ ಕೆಲವು ತಾಲೂಕುಗಳಲ್ಲಿ ಟ್ರಿಗರ್-1 ಮಾನದಂಡಗಳ ಪರಿಶೀಲನೆ ನಡೆಯುತ್ತಿದೆ. ಅವುಗಳು ಅರ್ಹತೆ ಪಡೆದರೆ ಗ್ರೌಂಡ್ ಟ್ರೂಥಿಂಗ್‌ಗೆ ಕಳುಹಿಸಲಾಗುವುದು ಎಂದು ಹೇಳಿದರು.

ರಾಜ್ಯದಲ್ಲಿ ಬರದಿಂದ ಉಂಟಾಗಿರುವ ಒಟ್ಟು ನಷ್ಟದ ಅಂದಾಜು ಅಂತಿಮ ಮೆಮೊರಾಂಡಮ್ ಸಿದ್ಧಪಡಿಸುವ ಸಂದರ್ಭದಲ್ಲಿ ಸ್ಪಷ್ಟವಾಗಲಿದೆ. ಅದರ ಪ್ರಮಾಣಕ್ಕೆ ಅನುಗುಣವಾಗಿ ಎನ್‌ಡಿಆರ್‌ಎಫ್ (NDRF) ಮಾರ್ಗಸೂಚಿಗಳ ಪ್ರಕಾರ ಪರಿಹಾರದ ಮೊತ್ತವನ್ನು ಲೆಕ್ಕಹಾಕಲಾಗುವುದು. ಕಳೆದ ವರ್ಷ ಸುಮಾರು ₹18,000 ಕೋಟಿ ಪರಿಹಾರ ಕೋರಲಾಗಿತ್ತು. ಈ ಬಾರಿ ಇಡೀ ರಾಜ್ಯದಲ್ಲಿ ನಷ್ಟ ಸಂಭವಿಸಿದ್ದು, ಈಗಾಗಲೇ 226 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸುವ ಹಂತ ತಲುಪಿದ್ದೇವೆ. ಇನ್ನಷ್ಟು ತಾಲೂಕುಗಳು ಅರ್ಹತೆ ಪಡೆದರೆ ನಷ್ಟದ ಪ್ರಮಾಣ ಮತ್ತಷ್ಟು ಹೆಚ್ಚಾಗಲಿದೆ. ಹೀಗಾಗಿ, ಈ ಬಾರಿ ಕೇಂದ್ರದಿಂದ ಕೋರಲಾಗುವ ಪರಿಹಾರದ ಮೊತ್ತವೂ ಹೆಚ್ಚಾಗುವ ಸಾಧ್ಯತೆಯಿದೆ ಎಂದು ತಿಳಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬರ ಪರಿಹಾರಕ್ಕೆ ಸಂಬಂಧಿಸಿದಂತೆ ಎನ್‌ಡಿಆರ್‌ಎಫ್ ಮಾರ್ಗಸೂಚಿಗಳನ್ನು ಸಡಿಲಗೊಳಿಸುವಂತೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವಿ ಸಲ್ಲಿಸಿದೆ. ಈ ಕುರಿತು ನಾನು ಮತ್ತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪತ್ರ ಬರೆದಿದ್ದೇವೆ. ಇದಕ್ಕೆ ಸಂಬಂಧಿಸಿದಂತೆ ನನಗೆ ಕೇಂದ್ರ ಕೃಷಿ ಸಚಿವರಿಂದ ಪತ್ರ ಬಂದಿದ್ದು, ವಿಷಯವನ್ನು ಪರಿಶೀಲಿಸುವುದಾಗಿ ತಿಳಿಸಿದ್ದಾರೆ. ಇದನ್ನು ಹೊರತುಪಡಿಸಿ ಕೇಂದ್ರದಿಂದ ಬೇರೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಹೇಳಿದರು.

ಅಂತಿಮ ಮೆಮೊರಾಂಡಮ್ ಸಿದ್ಧವಾದ ಬಳಿಕ ಮುಖ್ಯಮಂತ್ರಿ, ನಾನು ಹಾಗೂ ಇತರರನ್ನು ಒಳಗೊಂಡ ನಿಯೋಗ ದೆಹಲಿ ಭೇಟಿಯ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ನಿಯೋಗವು ಖುದ್ದಾಗಿ ದೆಹಲಿಗೆ ತೆರಳಿ ಕೇಂದ್ರ ಸರ್ಕಾರಕ್ಕೆ ಮೆಮೊರಾಂಡಮ್ ಸಲ್ಲಿಸಲಿದೆ. ನಷ್ಟದ ವಿವರವನ್ನು ಪ್ರಸ್ತಾಪಿಸಿ ಪರಿಹಾರಕ್ಕೆ ಕೋರಲಾಗುವುದು ಎಂದು ತಿಳಿಸಿದರು.

ಮೀಸಲಾತಿ ಕುರಿತ ಚರ್ಚೆ

ಎಸ್‌ಸಿ-ಎಸ್‌ಟಿ ಮೀಸಲಾತಿ ಕುರಿತ ಹೈಕೋರ್ಟ್ ತೀರ್ಪಿನ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚಿಸಿ ಮುಂದಿನ ತೀರ್ಮಾನ

ಎಸ್‌ಸಿ-ಎಸ್‌ಟಿ ಮೀಸಲಾತಿಗೆ ಸಂಬಂಧಿಸಿದಂತೆ ಹೈಕೋರ್ಟ್ ತೀರ್ಪು ವಿಚಾರವಾಗಿ ನಾಳೆ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಪ್ರಸ್ತಾಪಿಸಿ ಚರ್ಚಿಸಲಾಗುವುದು ಎಂದು ತಿಳಿಸಿದರು.

ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಬೇಕೇ ಅಥವಾ ಒಂಬತ್ತನೇ ಶೆಡ್ಯೂಲ್‌ಗೆ ಸೇರಿಸುವಂತೆ ಭಾರತ ಸರ್ಕಾರಕ್ಕೆ ಮನವಿ ಸಲ್ಲಿಸಬೇಕೇ ಎಂಬುದರ ಕುರಿತು ಸಂಪುಟದಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಬೇಕಿದೆ. ಸಚಿವ ಸಂಪುಟದ ನಿರ್ಧಾರದ ಬಳಿಕ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular