ಬೆಂಗಳೂರು: ಕರ್ನಾಟಕದ ಉದ್ಯಮಿಗಳು ಮತ್ತು ಡೀಪ್ ಟೆಕ್ ಕ್ಷೇತ್ರದ ಸ್ಟಾರ್ಟಪ್’ಗಳಿಗೆ ELEVATE Minorities 2026′ ಮತ್ತು ‘ELEVATE NxT 2026–27’ ಯೋಜನೆಗಳಡಿ ಅನುದಾನ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.
‘ELEVATE Minorities’ ಯೋಜನೆಯಡಿ ಅಲ್ಪಸಂಖ್ಯಾತ ಸಮುದಾಯದ ಉದ್ಯಮಿಗಳು ಮುನ್ನಡೆಸುವ ಅರ್ಹ ಸ್ಟಾರ್ಟಪ್’ಗಳಿಗೆ ₹50 ಲಕ್ಷದವರೆಗೆ ಅನುದಾನದ ಜೊತೆಗೆ ಉದ್ಯಮ ಬೆಳೆಸಲು ಮಾರ್ಗದರ್ಶನ ಮತ್ತು ಅಗತ್ಯ ಬೆಂಬಲ ದೊರೆಯಲಿದೆ.
‘ಎಲಿವೇಟ್ ನೆಕ್ಸ್ಟ್’ ಯೋಜನೆಯಡಿ ತಂತ್ರಜ್ಞಾನ ಕ್ಷೇತ್ರದ ಸ್ಟಾರ್ಟಪ್’ಗಳಿಗೆ ₹1 ಕೋಟಿಯವರೆಗೆ ಅನುದಾನ ನೀಡಲಾಗುತ್ತದೆ. ಸಂಶೋಧನೆ ಮತ್ತು ತಂತ್ರಜ್ಞಾನ ಅಭಿವೃದ್ಧಿಯಿಂದ ಉತ್ಪನ್ನಗಳ ವಾಣಿಜ್ಯೀಕರಣ ಹಾಗೂ ಉದ್ಯಮದ ವಿಸ್ತರಣೆಯವರೆಗೆ ನೆರವು ಒದಗಿಸಲಾಗುತ್ತದೆ.
ಕಳೆದ ಒಂದು ದಶಕದಲ್ಲಿ ಎಲಿವೇಟ್ ಕಾರ್ಯಕ್ರಮದ ವಿವಿಧ ಹಂತಗಳ ಮೂಲಕ 1,300ಕ್ಕೂ ಹೆಚ್ಚು ಸ್ಟಾರ್ಟಪ್’ಗಳಿಗೆ ಅನುದಾನ ಮತ್ತು ಆರಂಭಿಕ ಬಂಡವಾಳದ ನೆರವು ನೀಡಲಾಗಿದೆ. ಇದರಿಂದ ವಿವಿಧ ಕ್ಷೇತ್ರಗಳ ಉದ್ಯಮಿಗಳು ತಮ್ಮ ಆಲೋಚನೆಗಳನ್ನು ಉತ್ಪನ್ನಗಳಾಗಿ ರೂಪಿಸಲು ಸಹಾಯವಾಗಿದೆ.
ಎರಡೂ ಯೋಜನೆಗಳಿಗೆ ಅರ್ಜಿ ಸಲ್ಲಿಕೆ 13 ಅಕ್ಟೋಬರ್ 2026ರಂದು ಆರಂಭವಾಗಿದ್ದು, 13 ನವೆಂಬರ್ 2026 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.
ಕರ್ನಾಟಕದಲ್ಲಿಯೇ ಮಹತ್ವಾಕಾಂಕ್ಷೆಯ ಉದ್ಯಮಗಳನ್ನು ಕಟ್ಟಲು ಹೆಚ್ಚಿನ ಉದ್ಯಮಿಗಳಿಗೆ ಅವಕಾಶ, ಬಂಡವಾಳ ಮತ್ತು ಅಗತ್ಯ ಬೆಂಬಲ ಒದಗಿಸುವ ಮೂಲಕ ರಾಜ್ಯದ ನವೋದ್ಯಮ ವಲಯವನ್ನು ಮತ್ತಷ್ಟು ಬಲಪಡಿಸುವುದು ಈ ಯೋಜನೆಗಳ ಉದ್ದೇಶವಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದ್ದಾರೆ.
ಅರ್ಜಿ ಸಲ್ಲಿಸಲು ಈ ಲಿಂಕ್ ಕ್ಲಿಕ್ ಮಾಡಿ : https://eitbt.karnataka.gov.in/en
ಯಾವುದೇ ಶಾಂತಿಯುತ ಪ್ರತಿಭಟನೆಗೆ ಅಡ್ಡಿಪಡಿಸದಂತೆ ಪೊಲೀಸರಿಗೆ ಸೂಚನೆ
ಯಾವುದೇ ಶಾಂತಿಯುತ ಪ್ರತಿಭಟನೆಗೆ ಅಡ್ಡಿಪಡಿಸದಂತೆ ಪೊಲೀಸರಿಗೆ ಸೂಚನೆ ನೀಡಿರುವುದಾಗಿ ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ನಿನ್ನೆ ಬೆಂಗಳೂರಿನಲ್ಲಿ ಪ್ರತಿಭಟನಾಕಾರರನ್ನು ಪೊಲೀಸರು ನಿರ್ವಹಿಸಿದ ರೀತಿಯನ್ನು ಪರಿಶೀಲಿಸಲಾಗುವುದು. ಶಾಂತಿಯುತ ಪ್ರತಿಭಟನೆ ನಡೆಸುವುದು ನಮ್ಮ ಪ್ರಜಾಪ್ರಭುತ್ವದ ಮೂಲಭೂತ ಹಕ್ಕು. ಈ ಹಕ್ಕನ್ನು ಗೌರವಿಸಬೇಕು, ರಕ್ಷಿಸಬೇಕು ಮತ್ತು ಯಾವುದೇ ಕಾರಣಕ್ಕೂ ಹತ್ತಿಕ್ಕಬಾರದು. ಯಾವುದೇ ಶಾಂತಿಯುತ ಪ್ರತಿಭಟನೆಗೆ ಅಡ್ಡಿಪಡಿಸದಂತೆ ಪೊಲೀಸರಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದ್ದಾರೆ.
ಪ್ರತಿಭಟನಾಕಾರರು ಪೊಲೀಸರೊಂದಿಗೆ ಸಹಕರಿಸಬೇಕು ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಮುಂಚಿತವಾಗಿ ಮಾಹಿತಿ ನೀಡಬೇಕು ಎಂದು ಮನವಿ ಮಾಡುತ್ತೇನೆ. ಇದರಿಂದ ಪ್ರತಿಭಟನಾಕಾರರ ಸುರಕ್ಷತೆ ಹಾಗೂ ಇತರರ ಹಕ್ಕುಗಳ ರಕ್ಷಣೆಯೂ ಸಾಧ್ಯವಾಗುತ್ತದೆ. ಪೊಲೀಸರು ನಿಮ್ಮ ಹಕ್ಕುಗಳನ್ನು ರಕ್ಷಿಸಲು ಇದ್ದಾರೆಯೇ ಹೊರತು, ನಿಮ್ಮ ಧ್ವನಿಗೆ ಅಡ್ಡಿಯಾಗಲು ಅಲ್ಲ ಎಂದಿದ್ದಾರೆ.
ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದು ಮಾತ್ರವಲ್ಲದೆ, ಪ್ರತಿಯೊಬ್ಬ ನಾಗರಿಕರೂ ಯಾವುದೇ ಭಯವಿಲ್ಲದೆ ಮುಕ್ತವಾಗಿ ಮತ್ತು ಶಾಂತಿಯುತವಾಗಿ ತಮ್ಮ ಭಿನ್ನಾಭಿಪ್ರಾಯಗಳನ್ನು ವ್ಯಕ್ತಪಡಿಸಲು ಪೂರಕ ವಾತಾವರಣ ನಿರ್ಮಿಸುವುದು ನಮ್ಮ ಜವಾಬ್ದಾರಿಯಾಗಿದೆ. ಪ್ರಜಾಪ್ರಭುತ್ವದಲ್ಲಿ ಶಾಂತಿಯುತ ಭಿನ್ನಾಭಿಪ್ರಾಯವು ಕಾನೂನು ಮತ್ತು ಸುವ್ಯವಸ್ಥೆಗೆ ಬೆದರಿಕೆಯಲ್ಲ. ಬದಲಾಗಿ, ಕಾನೂನು ಮತ್ತು ಸುವ್ಯವಸ್ಥೆಯೇ ಆ ಹಕ್ಕನ್ನು ರಕ್ಷಿಸಬೇಕು ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

