ಬೆಂಗಳೂರು- ಸುಪ್ರೀಂ ಕೋರ್ಟ್ ಒಪ್ಪಿಗೆ: ಕೆಪಿಎಸ್‌ಸಿ ಹಗರಣದ ಎಸ್‌ಐಟಿ ಮುಖ್ಯಸ್ಥರ ಬದಲಾವಣೆ ಕರ್ನಾಟಕ ಲೋಕಸೇವಾ ಆಯೋಗದ (KPSC) ನೇಮಕಾತಿ ಹಗರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ (SIT) ಮುಖ್ಯಸ್ಥರಾದ ಡಿಜಿಪಿ ಅಲೋಕ್ ಕುಮಾರ್ ಹಾಗೂ ಡಿಐಜಿ ದಿವ್ಯಾ ಗೋಪಿನಾಥ್ ಅವರ ಬದಲಾವಣೆಗೆ ಸುಪ್ರೀಂ ಕೋರ್ಟ್ ಹಸಿರು ನಿಶಾನೆ ತೋರಿದೆ. ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಈ ನಿರ್ಧಾರ ಪ್ರಕಟಿಸಿದೆ.
ಡಿಜಿಪಿ ಅಲೋಕ್ ಕುಮಾರ್ ಮತ್ತು ಡಿಐಜಿ ದಿವ್ಯಾ ಗೋಪಿನಾಥ್ ಅವರ ಬದಲು ಹೊಸ ಹಿರಿಯ ಅಧಿಕಾರಿಗಳ ಹೆಸರನ್ನು ಎರಡು ವಾರಗಳ ಒಳಗೆ ಹೈಕೋರ್ಟ್‌ಗೆ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ.
ಸರ್ಕಾರದ ಪರ ವಕೀಲರಾದ ಕಪಿಲ್ ಸಿಬಲ್ ಅವರು ವಾದ ಮಂಡಿಸಿ, ಎಸ್‌ಐಟಿ ಮುಖ್ಯಸ್ಥರಾಗಿದ್ದ ಅಲೋಕ್ ಕುಮಾರ್ ಅವರ ವಿರುದ್ಧ ಹಿಂದೆ ಫೋನ್ ಟ್ಯಾಪಿಂಗ್ ಆರೋಪಗಳಿದ್ದ ಹಿನ್ನೆಲೆಯಲ್ಲಿ ಬದಲಿ ಅಧಿಕಾರಿಗಳ ಪಟ್ಟಿಯನ್ನು ಪರಿಗಣಿಸುವಂತೆ ಕೋರಿದರು.
ಫೋನ್ ಟ್ಯಾಪಿಂಗ್ ಪ್ರಕರಣದ ಆಕ್ಷೇಪಣೆ
ಅಲೋಕ್ ಕುಮಾರ್ ಅವರು ಈಗಾಗಲೇ ಫೋನ್ ಟ್ಯಾಪಿಂಗ್ ಪ್ರಕರಣದಿಂದ ಮುಕ್ತರಾಗಿದ್ದಾರೆ ಎಂದು ಅಭ್ಯರ್ಥಿಗಳ ಪರ ವಕೀಲರು ಆಕ್ಷೇಪ ವ್ಯಕ್ತಪಡಿಸಿ, ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಪಟ್ಟುಹಿಡಿದರು. ಆದರೆ, ಸಿಬಿಐ ತನಿಖೆ ಬೇಕಿದ್ದರೆ ಪ್ರತ್ಯೇಕ ಅರ್ಜಿ ಸಲ್ಲಿಸುವಂತೆ ಅಥವಾ ಹೈಕೋರ್ಟ್‌ಗೆ ತೆರಳುವಂತೆ ನ್ಯಾಯಪೀಠ ಸ್ಪಷ್ಟಪಡಿಸಿತು.
ಕೊರ್ಟ್ ನಿರ್ದೇಶನಗಳು
ಸುಪ್ರೀಂ ಕೋರ್ಟ್ ನಿರ್ದೇಶನಗಳು:
ಹೊಸ ಅಧಿಕಾರಿಗಳ ಹೆಸರನ್ನು ಎರಡು ವಾರಗಳಲ್ಲಿ ಹೈಕೋರ್ಟ್‌ಗೆ ಸಲ್ಲಿಸಬೇಕು.
ಹೈಕೋರ್ಟೇ ಈ ತನಿಖೆಯನ್ನು ನೇರವಾಗಿ ಮೇಲ್ವಿಚಾರಣೆ (Monitor) ಮಾಡಲಿದೆ.
ಪ್ರಕರಣದಲ್ಲಿ ಮರು ತನಿಖೆ ಅಥವಾ ಮೊದಲಿನಿಂದ ಹೊಸ ತನಿಖೆ ನಡೆಸುವಂತಿಲ್ಲ.
ಎಸ್‌ಐಟಿ ತಂಡ ಅಂತಿಮಗೊಳ್ಳುವವರೆಗೆ ಸಿಐಡಿ (CID) ಯಾವುದೇ ದೋಷಾರೋಪ ಪಟ್ಟಿ (Charge Sheet) ಸಲ್ಲಿಸುವಂತಿಲ್ಲ.

