ನವದೆಹಲಿ: ಕರ್ನಾಟಕ ಲೋಕಸೇವಾ ಆಯೋಗದ (KPSC) ಪಶುವೈದ್ಯಾಧಿಕಾರಿಗಳ ನೇಮಕಾತಿ ಹಗರಣದ ತನಿಖೆಗೆ ಹೈಕೋರ್ಟ್ ರಚಿಸಿದ್ದ ವಿಶೇಷ ತನಿಖಾ ತಂಡದ (SIT)ದಿಂದ ಇಬ್ಬರು ಪೊಲೀಸ್ ಅಧಿಕಾರಿಗಳನ್ನು ಕೈಬಿಟ್ಟು ಬೇರೆ ಇಬ್ಬರನ್ನು ಸೇರಿಸಿಕೊಳ್ಳಲು ಸುಪ್ರೀಂಕೋರ್ಟ್ ಅನುಮತಿ ನೀಡಿದೆ.
ಎಸ್ ಐಟಿ ಮುಖ್ಯಸ್ಥರಾಗಿದ್ದ ಡಿಜಿಪಿ ಅಲೋಕ್ ಕುಮಾರ್ ಹಾಗೂ ಡಿಐಜಿ ದಿವ್ಯಾ ಗೋಪಿನಾಥ್ ಅವರ ಬದಲಾವಣೆಗೆ ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿದೆ. ಈ ಇಬ್ಬರ ಬದಲು ಬೇರೆ ಇಬ್ಬರನ್ನು ನೇಮಕ ಮಾಡಲು ಸೂಚಿಸಿದೆ.
ಎಸ್ ಐಟಿ ರಚಿಸಿ ಅಧಿಕಾರಿಗಳನ್ನು ನೇಮಕ ಮಾಡಿದ್ದ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಪೀಠದಲ್ಲಿ ಸುದೀರ್ಘ ವಾದ-ಪ್ರತಿವಾದಗಳು ನಡೆದವು. ಅಂತಿಮವಾಗಿ ಇಬ್ಬರ ಅಧಿಕಾರಿಗಳ ಬದಲು ಹೊಸ ಅಧಿಕಾರಿಗಳ ಹೆಸರನ್ನು ಹೈಕೋರ್ಟ್ಗೆ ಸಲ್ಲಿಸಿ ಅಂತಿಮಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
ಸರ್ಕಾರದ ಪರ ಹಿರಿಯ ವಕೀಲ ಕಪಿಲ್ ಸಿಬಲ್ ವಾದ ಮಂಡಿಸಿ, ಎಸ್ಐಟಿ ಮುಖ್ಯಸ್ಥರಾಗಿ ನೇಮಕಗೊಂಡಿರುವ ಅಲೋಕ್ ಕುಮಾರ್ ಅವರ ವಿರುದ್ಧ ಹಿಂದೆ ಫೋನ್ ಟ್ಯಾಪಿಂಗ್ ಆರೋಪಗಳಿದ್ದವು. ಅವರ ಕೇಸ್ ಹಿಸ್ಟರಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಆದ್ದರಿಂದ ಎಸ್ಐಟಿ ನೇತೃತ್ವಕ್ಕೆ ಐಜಿಪಿ ಶ್ರೇಣಿಯ ಅಧಿಕಾರಿಗಳಾದ ಲಾಭೂರಾಮ್, ಚೇತನ್ ಸಿಂಗ್ ರಾಥೋಡ್ ಸೇರಿದಂತೆ ಐದು ಹೊಸ ಅಧಿಕಾರಿಗಳ ಪಟ್ಟಿಯನ್ನು ನೀಡುತ್ತಿದ್ದೇವೆ ಎಂದು ತಿಳಿಸಿದರು.
ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಅಭ್ಯರ್ಥಿಗಳ ಪರ ವಕೀಲರು, “ಅಲೋಕ್ ಕುಮಾರ್ ಅವರು ಫೋನ್ ಟ್ಯಾಪಿಂಗ್ ಪ್ರಕರಣದಿಂದ ಈಗಾಗಲೇ ಮುಕ್ತರಾಗಿದ್ದಾರೆ. ಇದೇ ಸರ್ಕಾರ ಅವರಿಗೆ ಡಿಜಿಪಿ ಹುದ್ದೆಗೆ ಬಡ್ತಿ ನೀಡಿ, ರಾಷ್ಟ್ರಪತಿ ಪದಕಕ್ಕೂ ಶಿಫಾರಸು ಮಾಡಿತ್ತು. ಈಗ ಸರ್ಕಾರಕ್ಕೆ ಬೇಕಾದ ಅಧಿಕಾರಿಗಳನ್ನು ತರಲು ಪ್ರಯತ್ನಿಸಲಾಗುತ್ತಿದೆ. ನಮಗೆ ಸರ್ಕಾರದ ಮೇಲೆ ನಂಬಿಕೆಯಿಲ್ಲ, ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಪಟ್ಟುಹಿಡಿದರು.
ವಾದ-ಪ್ರತಿವಾದ ಆಲಿಸಿದ ಪೀಠ, ಆಯೋಗದ ಉನ್ನತ ಅಧಿಕಾರಿಗಳ ಮೇಲೆಯೇ ತನಿಖೆ ನಡೆಯಬೇಕಿರುವುದರಿಂದ, ಡಿಜಿಪಿ ಬದಲಿಗೆ ಎಡಿಜಿಪಿ ಅಥವಾ ಕೆಳಹಂತದ ಅಧಿಕಾರಿಗಳನ್ನು ನೇಮಿಸುವುದು ಸರಿಯಲ್ಲ. ಹಿರಿಯ ರ್ಯಾಂಕ್ ಅಧಿಕಾರಿಯೇ ಇರಬೇಕು. ಪ್ರತ್ಯೇಕವಾಗಿ ನಮಗೆ ರಾಜ್ಯದ ಅಧಿಕಾರಿಗಳ ಬಗ್ಗೆ ಮಾಹಿತಿ ಇಲ್ಲ. ಅಧಿಕಾರಿಗಳ ಸಾಮರ್ಥ್ಯ ಮತ್ತು ದೌರ್ಬಲ್ಯ ರಾಜ್ಯ ಸರ್ಕಾರ ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ (DGP) ಚೆನ್ನಾಗಿ ತಿಳಿದಿರುತ್ತದೆ. ಆದ್ದರಿಂದ ಡಿಜಿಪಿ ಅವರೇ ಸೂಕ್ತ ಅಧಿಕಾರಿಗಳ ಹೆಸರನ್ನು ಸೂಚಿಸಲಿ ಎಂದು ಅಭಿಪ್ರಾಯಪಟ್ಟಿತು.
ಸಿಬಿಐ ತನಿಖೆಯ ಬೇಡಿಕೆಗೆ ಪ್ರತಿಕ್ರಿಯಿಸಿದ ಕೋರ್ಟ್, “ಸಿಬಿಐ ತನಿಖೆ ಕೋರುವುದಾದರೆ ಅದಕ್ಕಾಗಿ ಪ್ರತ್ಯೇಕ ಅರ್ಜಿ ಸಲ್ಲಿಸಿ. ಇಲ್ಲವಾದರೆ ಹೈಕೋರ್ಟ್ಗೆ ವಾಪಸ್ ಹೋಗಿ” ಎಂದು ಅರ್ಜಿದಾರರಿಗೆ ಸ್ಪಷ್ಟಪಡಿಸಿತು.
ಡಿಜಿಪಿ ಅಲೋಕ್ ಕುಮಾರ್ ಮತ್ತು ಡಿಐಜಿ ದಿವ್ಯಾ ಗೋಪಿನಾಥ್ ಬದಲಿಗೆ ಹೊಸ ಹಿರಿಯ ಅಧಿಕಾರಿಗಳ ಹೆಸರುಗಳನ್ನು ಎರಡು ವಾರಗಳ ಒಳಗೆ ಹೈಕೋರ್ಟ್ಗೆ ಸಲ್ಲಿಸಬೇಕು. ಹೈಕೋರ್ಟ್ ಎರಡೂ ಕಡೆಯ ವಾದಗಳನ್ನು ಆಲಿಸಿ ಅಂತಿಮವಾಗಿ ಎಸ್ಐಟಿ ಅಧಿಕಾರಿಗಳನ್ನು ನಿರ್ಧರಿಸಬೇಕು ಮತ್ತು ಹೈಕೋರ್ಟೇ ಈ ತನಿಖೆಯನ್ನು ಮೇಲ್ವಿಚಾರಣೆ ಮಾಡಬೇಕು. ಪ್ರಕರಣದಲ್ಲಿ ಮರು ತನಿಖೆ ಅಥವಾ ಮೊದಲಿನಿಂದ ಹೊಸ ತನಿಖೆ ನಡೆಸುವಂತಿಲ್ಲ ಎಂದು ತಿಳಿಸಿದೆ.

