ಕಿರುತೆರೆಯ ಜನಪ್ರಿಯ ನಟಿ ಐಶ್ವರ್ಯ ಸಖುಜಾ ಅವರು ತಮ್ಮ ವೈಯಕ್ತಿಕ ಜೀವನದ ಮಹತ್ವದ ಅನುಭವವೊಂದನ್ನು ಹಂಚಿಕೊಂಡಿದ್ದಾರೆ. ತಮಗೆ ಬಾಲ್ಯದಿಂದ ಅಥವಾ ದೀರ್ಘಕಾಲದಿಂದ ಕಾಡುತ್ತಿರುವ ‘ಟೈಪ್ 1 ಡಯಾಬಿಟಿಸ್’ ಅಥವಾ ಟೈಪ್ 1 ಮಧುಮೇಹದೊಂದಿಗೆ ಬದುಕುವುದು ಎಷ್ಟು ಕಷ್ಟ ಎಂಬ ಬಗ್ಗೆ ಇನ್ಸ್ಟಾಗ್ರಾಮ್ನಲ್ಲಿ ಭಾವನಾತ್ಮಕ ಪೋಸ್ಟ್ ಬರೆದುಕೊಂಡಿದ್ದಾರೆ. ಇದರೊಂದಿಗೆ, ಆರೋಗ್ಯದ ಇಂತಹ ಕಷ್ಟದ ಸಂದರ್ಭದಲ್ಲಿ ಅರ್ಥಪೂರ್ಣ ಮತ್ತು ಪ್ರೀತಿಯುಳ್ಳ ಸಂಗಾತಿ ಜತೆಯಿದ್ದರೆ ಜೀವನ ಎಷ್ಟು ಸುಲಭವಾಗುತ್ತದೆ ಎಂಬುದನ್ನು ಅವರು ಮುಕ್ತವಾಗಿ ಹಂಚಿಕೊಂಡಿದ್ದಾರೆ.
ನಟಿ ಐಶ್ವರ್ಯ ಸಖುಜಾ ಅವರು ರೋಹಿತ್ ನಾಗ್ ಅವರನ್ನು ವಿವಾಹವಾಗಿದ್ದಾರೆ. ತಮ್ಮ ಪತಿಗೆ ಧನ್ಯವಾದ ಅರ್ಪಿಸುತ್ತಾ ಅವರು, “ನನ್ನ ರಕ್ತದಲ್ಲಿನ ಸಕ್ಕರೆ ಮಟ್ಟದ ಸಂಖ್ಯೆಗಳು, ಅಲಾರ್ಮ್ಗಳು ಮತ್ತು ಇನ್ಸುಲಿನ್ ಮೀರಿ ನನ್ನ ಜೀವನದ ಭಾಗವಾಗಿರುವುದಕ್ಕೆ ಧನ್ಯವಾದಗಳು” ಎಂದು ಬರೆದಿದ್ದಾರೆ. ಟೈಪ್ 1 ಮಧುಮೇಹ ಎಂಬುದು ಕೇವಲ ಒಂದು ಕಾಯಿಲೆಯಲ್ಲ, ಅದೊಂದು ಪ್ರತಿದಿನದ ಹೋರಾಟ ಎಂದಿರುವ ಅವರು, “ಇದು ನಿಮ್ಮ ಗಮನ, ಶಕ್ತಿ, ತಾಳ್ಮೆ ಮತ್ತು ಮಾನಸಿಕ ಸ್ಥೈರ್ಯವನ್ನು ಅಪೇಕ್ಷಿಸುತ್ತದೆ. ಪ್ರತಿದಿನ ರಕ್ತದ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳುವುದು ಸುಲಭವಲ್ಲ. ಕೆಲವೊಮ್ಮೆ ಸಕ್ಕರೆ ಮಟ್ಟ ತೀರಾ ಕಡಿಮೆಯಾಗುವುದು ಅತ್ಯಂತ ಭಯಾನಕ ಅನುಭವ” ಎಂದು ವಿವರಿಸಿದ್ದಾರೆ.
ಆದರೆ ಸರಿಯಾದ ಜೀವನ ಸಂಗಾತಿ ಸಿಕ್ಕಾಗ ಈ ಕಷ್ಟದ ಹಾದಿಯು ಸ್ವಲ್ಪ ಮಟ್ಟಿಗೆ ಸುಲಭವಾಗುತ್ತದೆ ಎಂದಿರುವ ಐಶ್ವರ್ಯ, “ನಿಮ್ಮ ರಕ್ತದ ಸಕ್ಕರೆ ಮಟ್ಟ ಏರಿಳಿತಗೊಂಡಾಗ ನಿಮ್ಮನ್ನು ಹರಿಯುವ ಅಥವಾ ದೂಷಿಸದ, ಬದಲಿಗೆ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುವ ಪತಿ ಸಿಕ್ಕಿರುವುದು ನನ್ನ ಅದೃಷ್ಟ. ಎಲ್ಲದರಲ್ಲೂ ನಾನೊಬ್ಬ ‘ಮಧುಮೇಹ ರೋಗಿ’ ಎಂದು ಭಾವಿಸದೆ, ಒಬ್ಬ ಹೆಂಡತಿಯಾಗಿ, ಸಂಗಾತಿಯಾಗಿ ಪ್ರೀತಿ ನೀಡುವ ವ್ಯಕ್ತಿ ಜತೆಯಿದ್ದಾಗ ಜೀವನ ಸುಂದರ ಎನಿಸುತ್ತದೆ” ಎಂದು ಹೇಳಿದ್ದಾರೆ. ಪ್ರೀತಿಯಿಂದ ಮಧುಮೇಹವನ್ನು ವಾಸಿ ಮಾಡಲು ಸಾಧ್ಯವಿಲ್ಲ ನಿಜ, ಆದರೆ ಅಂತಹ ಪರಿಸ್ಥಿತಿಯಲ್ಲಿ ಪ್ರೀತಿ ಮತ್ತು ಕಾಳಜಿಯು ಒಂಟಿತನವನ್ನು ದೂರ ಮಾಡುತ್ತದೆ ಎಂದು ಅವರು ಭಾವುಕರಾಗಿದ್ದಾರೆ. ನಟಿ ಐಶ್ವರ್ಯ ಸಖುಜಾ ಅವರು ನಟನೆಯ ಜೊತೆಗೆ ‘ಇನ್ನರ್ ಚೈಲ್ಡ್ ರಿಗ್ರೆಷನ್ ಥೆರಪಿಸ್ಟ್’ ಆಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

