HomeKarnatakaಶಕ್ತಿ, ಅರಿವು, ಸಂಸ್ಕೃತಿ, ಸಮಾನತೆಯ ಸಂಗಮ‌ ಮೈಸೂರು ದಸರಾ: ಸಿಎಂ ಡಿ.ಕೆ.ಶಿವಕುಮಾರ್

ಶಕ್ತಿ, ಅರಿವು, ಸಂಸ್ಕೃತಿ, ಸಮಾನತೆಯ ಸಂಗಮ‌ ಮೈಸೂರು ದಸರಾ: ಸಿಎಂ ಡಿ.ಕೆ.ಶಿವಕುಮಾರ್

ಮೈಸೂರು: ಮೈಸೂರು ದಸರಾ ಶಕ್ತಿ, ಅರಿವು, ಸಂಸ್ಕೃತಿ ಮತ್ತು ಸಮಾನತೆಯ ನಾಲ್ಕು ಜ್ಯೋತಿಗಳ ಸಂಗಮ. ಶಕ್ತಿಯಿಂದ ಸಾಧನೆ, ಅರಿವಿನಿಂದ ಅಭಿವೃದ್ಧಿ, ಸಂಸ್ಕೃತಿಯಿಂದ ಸಮಾನತೆ, ಸಮಾನತೆಯಿಂದ ಶಾಂತಿ ಸಾಧ್ಯ ಎಂದು ಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.

ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಭಾನುವಾರ ನಡೆದ ನಾಡಹಬ್ಬ ಮೈಸೂರು ದಸರಾ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು ಅಜ್ಞಾನದ ಮುಳ್ಳನ್ನು ಜ್ಞಾನದ ಮುಳ್ಳಿನಿಂದ ತೆಗೆಯುವುದು ಅಕ್ಷರ. ಅಧರ್ಮದ ಮುಳ್ಳನ್ನು ಧರ್ಮದ ಮುಳ್ಳಿನಿಂದ ತೆಗೆಯುವುದು ದಸರಾ. ದೇವರನ್ನು ದೇವಸ್ಥಾನದಲ್ಲಿ ಕಾಣುವುದು ಭಕ್ತಿಯಾದರೆ, ದೇವರನ್ನು ಮನುಷ್ಯನಲ್ಲಿ ಕಾಣುವುದು ಮಾನವೀಯತೆ ಎಂದು ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಾಜಪ್ರಭುತ್ವದಿಂದ ಪ್ರಜಾಪ್ರಭುತ್ವಕ್ಕೆ ದಸರಾ ಪರಿವರ್ತನೆಯಾಗಿದೆ. ಈಗ ನಡೆಯುತ್ತಿರುವುದು ಪ್ರಜಾ ದರ್ಬಾರಿನ ದಸರಾ. ಪ್ರಜಾಪ್ರಭುತ್ವದಲ್ಲಿ ನಾವೆಲ್ಲರೂ ಒಗ್ಗಟ್ಟಿನಿಂದ ಮುನ್ನಡೆಯುತ್ತಿದ್ದೇವೆ. ದಸರಾ ಹಬ್ಬದ ಸಂಭ್ರಮ ಮೈಸೂರಿಗೆ ಮಾತ್ರ ಸೀಮಿತವಾಗದೆ ಇಡೀ ರಾಜ್ಯಕ್ಕೆ ಹರಡಿಕೊಂಡಿದೆ. ಮುಂದಿನ 11 ದಿನಗಳ ಕಾಲ ಮೈಸೂರಿನ ಮೂಲಕ ಭಾರತವನ್ನು ನೋಡಲಾಗುತ್ತದೆ. ಭಾರತೀಯ ಪರಂಪರೆಗೆ ಕನ್ನಡಿ ಹಿಡಿಯುವ ಈ ಮಹೋತ್ಸವ ನಾಡಿನ ಹೆಮ್ಮೆಯ ಸಂಕೇತವಾಗಿದೆ ಎಂದರು.

ವಿಜಯನಗರದ ಅರಸರು ಆರಂಭಿಸಿದ ದಸರಾ ಪರಂಪರೆಯನ್ನು ಮೈಸೂರು ಒಡೆಯರು ಮುಂದುವರಿಸಿ, ಅದರ ಸಾಂಸ್ಕೃತಿಕ ದೀಪ ಆರದಂತೆ ಕಾಪಾಡಿದರು. ಅರಸರು ದಸರಾವನ್ನು ಕೇವಲ ಪೂಜೆ ಮತ್ತು ಧಾರ್ಮಿಕ ಆಚರಣೆಗಳಿಗೆ ಸೀಮಿತಗೊಳಿಸದೆ, ಕಲೆ ಮತ್ತು ಸಂಸ್ಕೃತಿಗೆ ಪ್ರೋತ್ಸಾಹ ನೀಡುವ ವೇದಿಕೆಯನ್ನಾಗಿ ರೂಪಿಸಿದರು ಎಂದು ಸ್ಮರಿಸಿದರು.

ವಿಜಯನಗರದ ಅರಸರ ಕಾಲದಲ್ಲಿ ಕೋಣಗಳನ್ನು ದಸರೆಗೆ ಕರೆತರುವ ಪರಂಪರೆಯಿತ್ತು. ಆ ಪರಂಪರೆಯ ಸಾಂಸ್ಕೃತಿಕ ನೆನಪನ್ನು ಈ ವರ್ಷ ಕಂಬಳದ ಮೂಲಕ ಮುಂದುವರಿಸಲಾಗಿದೆ. ಟೀಕೆಗಳನ್ನು ಎದುರಿಸಿ ಇದನ್ನು ನಡೆಸಲಾಗುತ್ತಿದೆ ಎಂದರು.

ಮುಖ್ಯಮಂತ್ರಿಯಾಗಿ ನಾಡಹಬ್ಬದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಅವಕಾಶ ದೊರೆತಿರುವುದು ತಮ್ಮ ಬದುಕಿನ ಸ್ಮರಣೀಯ ದಿನ ಹಾಗೂ ಹೊಸ ಅಧ್ಯಾಯ ಎಂದು ಬಣ್ಣಿಸಿದ ಅವರು, ತಾಯಿ ಚಾಮುಂಡೇಶ್ವರಿ ಮತ್ತು ನಾಡಿನ ಜನತೆಗೆ ಕೃತಜ್ಞತೆ ಸಲ್ಲಿಸಿದರು. ನಾಲ್ಕು ಶತಮಾನಗಳಿಗೂ ಹಿಂದಿನ ಪರಂಪರೆಯನ್ನು ಹೊತ್ತ ದಸರಾ ಕಾಲಕ್ಕೆ ತಕ್ಕಂತೆ ರೂಪಾಂತರಗೊಂಡು, ನಾಡಿನ ಜನರೆಲ್ಲರೂ ಒಗ್ಗೂಡುವ ಉತ್ಸವವಾಗಿ ಬೆಳೆದಿದೆ ಎಂದರು.

ಡೊಳ್ಳು, ತಮಟೆ, ನಗಾರಿ, ವೀರಗಾಸೆ, ಕೋಲಾಟ ಮತ್ತು ಯಕ್ಷಗಾನದಂತಹ ಕಲಾಪ್ರಕಾರಗಳು ಕರ್ನಾಟಕದ ಸಂಸ್ಕೃತಿಯನ್ನು ಜೀವಂತವಾಗಿಟ್ಟಿವೆ. ಸಾವಿರಾರು ರಂಗಭೂಮಿ ಕಲಾವಿದರು, ಹಾಡುಗಾರರು ಮತ್ತು ಸಂಗೀತಗಾರರು ತಮ್ಮ ಪರಿಶ್ರಮದಿಂದ ಕಲೆಯನ್ನು ಉಳಿಸಿ ಬೆಳೆಸುತ್ತಿದ್ದಾರೆ. ಇಂತಹ ಕಲಾವಿದರಿಗೆ ದಸರಾ ದೊಡ್ಡ ವೇದಿಕೆಯಾಗಿದ್ದು, ಅವರ ಪ್ರತಿಭೆ ಅನಾವರಣಗೊಳ್ಳಲು ಅವಕಾಶ ಕಲ್ಪಿಸುತ್ತದೆ ಎಂದು ಹೇಳಿದರು.

ದಸರಾ ಮಗುವಿಗೆ ಬಣ್ಣಗಳ ಹಬ್ಬ, ಕಲಾವಿದನಿಗೆ ಅದ್ಭುತ ವೇದಿಕೆ, ವ್ಯಾಪಾರಿಗೆ ಉತ್ತಮ ಅವಕಾಶ ಮತ್ತು ಪ್ರವಾಸಿಗನಿಗೆ ಮರೆಯಲಾಗದ ಅನುಭವ. ಮೈಸೂರು ತನ್ನ ಸಾಂಸ್ಕೃತಿಕ ಅಸ್ಮಿತೆಯನ್ನು ಮತ್ತೊಮ್ಮೆ ಕಂಡುಕೊಳ್ಳುವ ಸಂದರ್ಭವೂ ಹೌದು. ಮೈಸೂರಿನ ಸಂಸ್ಕೃತಿ ಒಬ್ಬರಿಂದ ರೂಪುಗೊಂಡದ್ದಲ್ಲ; ರಾಜರು, ಕಲಾವಿದರು, ಕುಶಲಕರ್ಮಿಗಳು, ಸಂಗೀತಗಾರರು, ಶಿಕ್ಷಕರು ಮತ್ತು ವ್ಯಾಪಾರಿಗಳು ಸೇರಿದಂತೆ ಅನೇಕ ತಲೆಮಾರುಗಳ ಜನರ ಬೆವರಿನ ಫಲವಾಗಿದೆ ಎಂದು ವಿವರಿಸಿದರು.

ಮೈಸೂರಿನ ದೊಡ್ಡ ಸಂಪತ್ತು ಅರಮನೆಗಳಷ್ಟೇ ಅಲ್ಲ. ನಗರದ ಹೆಸರಿನ ಮೇಲಿರುವ ಜನರ ನಂಬಿಕೆಯೂ ಅದರ ಪ್ರಮುಖ ಆಸ್ತಿಯಾಗಿದೆ. ಕೆಲವು ನಗರಗಳು ಯುದ್ಧ ಮತ್ತು ಹೋರಾಟಗಳಿಂದ ಬೆಳೆದರೆ, ಮೈಸೂರು ತನ್ನ ಸಂಸ್ಕೃತಿಯಿಂದ ಬೆಳೆದ ನಗರ ಎಂದು ಹೇಳಿದರು.

‘ಬ್ರ್ಯಾಂಡ್ ಮೈಸೂರು’ಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಕೊಡುಗೆ ಅಪಾರ

ಮೈಸೂರು ರೇಷ್ಮೆ, ಶ್ರೀಗಂಧ, ಚಿತ್ರಕಲೆ, ಸಂಗೀತ ಸೇರಿದಂತೆ ಇಲ್ಲಿನ ವೈಶಿಷ್ಟ್ಯಗಳು ನಾಡಿನ ಸಾಂಸ್ಕೃತಿಕ ಗುರುತನ್ನು ರೂಪಿಸಿವೆ. ರೇಷ್ಮೆ ಉಡುಗೆಯಾಗುತ್ತದೆ, ಶ್ರೀಗಂಧ ಪರಿಮಳವಾಗುತ್ತದೆ, ಚಿತ್ರಕಲೆ ಅಲಂಕಾರವಾಗುತ್ತದೆ, ಸಂಗೀತ ಮನಸ್ಸಿಗೆ ನೆಮ್ಮದಿ ನೀಡುತ್ತದೆ ಎಂದು ಹೇಳಿದರು.

ಬ್ರ್ಯಾಂಡ್ ಮೈಸೂರು ಪರಿಕಲ್ಪನೆಗೆ ಬುನಾದಿ ಹಾಕಿದವರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೊಡುಗೆ ಮಹತ್ವದ್ದಾಗಿದೆ. ಮೈಸೂರು ರೇಷ್ಮೆ, ಮೈಸೂರು ಸ್ಯಾಂಡಲ್ ಸೋಪು, ಮೈಸೂರು ಚಿತ್ರಕಲೆ, ಮೈಸೂರು ಪಾಕ್ ಮತ್ತು ಕನ್ನಂಬಾಡಿ ಅಣೆಕಟ್ಟಿನಂತಹ ಸಾಧನೆಗಳು ಮೈಸೂರಿನ ಹೆಸರನ್ನು ರಾಜ್ಯದ ಗಡಿಗಳಾಚೆಗೂ ಪರಿಚಯಿಸಿವೆ ಎಂದು ಸ್ಮರಿಸಿದರು. ಈ ಸಾಂಸ್ಕೃತಿಕ ಮತ್ತು ಅಭಿವೃದ್ಧಿಯ ಪರಂಪರೆಯನ್ನು ಮುಂದುವರಿಸಿಕೊಂಡು ಕರ್ನಾಟಕ ಇಂದು ವಿಶ್ವದ ಗಮನ ಸೆಳೆಯುತ್ತಿದೆ ಎಂದರು.

ತಾಯಿ ಚಾಮುಂಡೇಶ್ವರಿಯ ಪಾದಕ್ಕೆ ಗೃಹಲಕ್ಷ್ಮಿ ಯೋಜನೆಯ ₹2,000 ಅರ್ಪಿಸಿದ ದಿನದಿಂದ ಇಂದಿಗೆ 1,139 ದಿನಗಳು ಪೂರ್ಣಗೊಂಡಿವೆ. ಅಂದಿನಿಂದ ಇಂದಿನವರೆಗೂ ಜನರ ಕಲ್ಯಾಣಕ್ಕಾಗಿ ಗ್ಯಾರಂಟಿ ಯೋಜನೆಗಳನ್ನು ಯಾವುದೇ ಲೋಪವಿಲ್ಲದೆ ಮುಂದುವರಿಸಿಕೊಂಡು ಬರಲು ಸರ್ಕಾರ ಪ್ರಯತ್ನಿಸಿದೆ ಎಂದು ತಿಳಿಸಿದರು.

ಗ್ಯಾರಂಟಿ ಯೋಜನೆಗಳು ಜನರ ಬದುಕಿನಲ್ಲಿ ಬದಲಾವಣೆ ತರುವ ಉದ್ದೇಶ ಹೊಂದಿವೆ. ಕೆಲವು ರಾಜ್ಯಗಳನ್ನು ಹೊರತುಪಡಿಸಿದರೆ, ಇತರ ರಾಜ್ಯಗಳು ಇಂತಹ ಯೋಜನೆಗಳನ್ನು ಜಾರಿಗೊಳಿಸಲು ಪರದಾಡುತ್ತಿವೆ ಎಂದು ಅವರು ಹೇಳಿದರು.

ಮನುಷ್ಯನನ್ನು ಮನುಷ್ಯನಿಂದ ಬೇರ್ಪಡಿಸುವ ಅನೇಕ ಮತಗಳಿದ್ದರೂ, ಮನುಷ್ಯನನ್ನು ಮನುಷ್ಯನನ್ನಾಗಿ ನೋಡುವ ಮನುಜಮತವೇ ವಿಶ್ವಶಾಂತಿಗೆ ಬುನಾದಿ ಎಂಬ ಕುವೆಂಪು ಅವರ ಆಶಯವನ್ನು ಎಲ್ಲರೂ ಪಾಲಿಸಬೇಕು. ಮಾನವ ಧರ್ಮಕ್ಕೆ ಜಯವಾಗಲಿ, ಮಾನವ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ” ಎಂಬ ಸಂದೇಶವನ್ನು ಉಲ್ಲೇಖಿಸಿದ ಅವರು, ‘ನಾನು’, ‘ನಾನೇ’ ಎಂಬುದು ಅಧರ್ಮವಾದರೆ, ‘ನಾವು’, ‘ನಮ್ಮದು’ ಎನ್ನುವುದು ಸುಧರ್ಮ ಎಂದು ಹೇಳಿದರು.

ನಾಡಿನ ಸಂಸ್ಕೃತಿ, ಪರಂಪರೆ ಮತ್ತು ಸಮಾಜದ ಏಳಿಗೆಯಲ್ಲಿ ಮಠಮಾನ್ಯಗಳ ಪಾತ್ರ ಅನನ್ಯ. ಸರ್ಕಾರ ಮಾಡಬೇಕಾದ ಅನೇಕ ಸಾಮಾಜಿಕ ಕಾರ್ಯಗಳನ್ನು ಮಠಗಳು ನಿರಂತರವಾಗಿ ಮಾಡಿಕೊಂಡು ಬರುತ್ತಿವೆ. ಹೀಗಾಗಿ, ಮಠಾಧೀಶರ ಬಗ್ಗೆ ನನಗೆ ಅಪಾರ ಗೌರವವಿದೆ. ಅವರೊಂದಿಗಿನ ನನ್ನ ಸಂಬಂಧವನ್ನು ಬಿಡಿಸಿ ಹೇಳುವ ಅಗತ್ಯವಿಲ್ಲ ಎಂದು ಹೇಳಿದರು.

ಮಠಾಧೀಶರನ್ನು ಸಮಾಜದ ದೊಡ್ಡ ಶಕ್ತಿಯಾಗಿ, ದೇವರಿಗೆ ಸಮಾನವಾಗಿ ಗೌರವಿಸುತ್ತೇನೆ. ಅವರ ಆಶಯಗಳಿಗೆ ಗೌರವ ನೀಡುತ್ತಾ ಬಂದಿದ್ದೇನೆ.‌ ಕೆಲವು ಸಂದರ್ಭಗಳಲ್ಲಿ ಮಾತುಗಳನ್ನು ಕತ್ತರಿಸಿ, ತಿರುಚಿ ಮಾಧ್ಯಮಗಳು ಪ್ರಸಾರ ಮಾಡುವ ಮೂಲಕ ತಪ್ಪು ಸಂದೇಶ ನೀಡಲಾಗುತ್ತಿದೆ. ಗುರುಗಳನ್ನು ಸಮಾಜದ ದೊಡ್ಡ ಶಕ್ತಿಯಾಗಿ ನೋಡುತ್ತೇನೆ. ಅವರಿಗೆ ಗೌರವ ನೀಡುವುದರ ಜತೆಗೆ, ಅವರ ಪ್ರತಿನಿಧಿಯಾಗಿಯೂ ನನ್ನನ್ನು ನಾನು ಭಾವಿಸುತ್ತೇನೆ ಎಂದು ತಿಳಿಸಿದರು.

ಭಾರತದ ಸಂಸ್ಕೃತಿ ಮತ್ತು ಕರ್ನಾಟಕದ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ಮಠಮಾನ್ಯಗಳು ಮಹತ್ವದ ಕೊಡುಗೆ ನೀಡಿವೆ. ಸಮಾಜದ ಜನರಿಗೆ ಮಾರ್ಗದರ್ಶನ ನೀಡುವುದರ ಜತೆಗೆ, ಶಿಕ್ಷಣ, ಸಾಮಾಜಿಕ ಸೇವೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಮಠಗಳು ಮಾಡುತ್ತಿರುವ ಕೆಲಸ ಶ್ಲಾಘನೀಯ. ಸರ್ಕಾರದ ಜವಾಬ್ದಾರಿಯ ಭಾಗವಾಗಿರುವ ಅನೇಕ ಸಾಮಾಜಿಕ ಕಾರ್ಯಗಳನ್ನು ಮಠಗಳು ತಮ್ಮದೇ ರೀತಿಯಲ್ಲಿ ನಿರ್ವಹಿಸುತ್ತಿವೆ ಎಂಬುದನ್ನು ಮರೆಯುವಂತಿಲ್ಲ ಎಂದು ಹೇಳಿದರು.

ರಾಜ್ಯದ ಜನರ ಪ್ರತಿನಿಧಿಯಾಗಿ ಹಾಗೂ ಮಠಗಳ ಮಾನ್ಯಗಳ, ಸರ್ವಧರ್ಮಗಳ ಪ್ರತಿನಿಧಿಯಾಗಿ ಪೂಜ್ಯ ಗವಿಮಠ ಶ್ರೀಗಳನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಅರಮನೆಯ ಅಂಗಳದಲ್ಲಿ ಅರಳಿದ ದಸರಾ ಇಂದು ಜನರ ಹೃದಯದಲ್ಲಿ ನೆಲೆಗೊಂಡ ನಾಡಹಬ್ಬ. ರಾಜಪ್ರಭುತ್ವದ ವೈಭವದಿಂದ ಪ್ರಜಾಪ್ರಭುತ್ವದ ಸಂಭ್ರಮದವರೆಗೆ ಬೆಳೆದು ಬಂದಿರುವ ಮೈಸೂರು ದಸರಾ ಕೇವಲ ಧಾರ್ಮಿಕ ಆಚರಣೆಯಲ್ಲ; ಅದು ಕನ್ನಡಿಗರ ಸಾಂಸ್ಕೃತಿಕ ಅಸ್ಮಿತೆ, ಸಾಮರಸ್ಯ ಮತ್ತು ಸ್ವಾಭಿಮಾನದ ಸಂಕೇತ ಎಂದು ಬಣ್ಣಿಸಿದರು.

ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಗಳು ದಸರಾ ಉದ್ಘಾಟಿಸುವ ಮೂಲಕ ನಾಡಹಬ್ಬಕ್ಕೆ ಹೊಸ ಶಕ್ತಿ, ಹುರುಪು ಹಾಗೂ ಯುವ ಚೈತನ್ಯ ತುಂಬಿದ್ದಾರೆ. ಅವರಿಂದ ದಸರಾಕ್ಕೆ ಹೊಸ ಮೆರುಗು ಬಂದಿದೆ. ಶ್ರೀಗಳ ಸಮಾಜಸೇವೆ ದೇಶಕ್ಕೆ ಮಾದರಿ. ಕೊಪ್ಪಳದ ಗವಿಮಠ ಸರ್ವಜನಾಂಗದ ಶಾಂತಿಯ ಮಠ. ಅವರು ಕೇವಲ ಮಠದ ಸ್ವಾಮೀಜಿಯಲ್ಲ, ಜನರ ಸ್ವಾಮೀಜಿ ಎಂದು ಬಣ್ಣಿಸಿದರು.

“ಬರವನ್ನು ಎದುರಿಸಲು ಜಲದೀಕ್ಷೆಯ ಸಂದೇಶ ನೀಡಿರುವ ಶ್ರೀಗಳು ಭಗೀರಥರಿದ್ದಂತೆ. ನೀರನ್ನು ವ್ಯರ್ಥ ಮಾಡುವುದು ಮುಂದಿನ ಪೀಳಿಗೆಯ ರಕ್ತ ಹೀರಿದಂತೆ ಎಂಬ ಅವರ ಮಾತು ಪ್ರತಿಯೊಬ್ಬರಿಗೂ ಎಚ್ಚರಿಕೆಯಾಗಿದೆ. ಇಡೀ ರಾಜ್ಯಕ್ಕೆ ಈಗ ಜಲದೀಕ್ಷೆಯ ಅಗತ್ಯವಿದೆ. ನೀರಿನ ಸಂರಕ್ಷಣೆ ನಮ್ಮೆಲ್ಲರ ಹೊಣೆಗಾರಿಕೆಯಾಗಬೇಕು” ಎಂದು ಕರೆ ನೀಡಿದರು.

ನಾನು ಕೇಂದ್ರ ರಕ್ಷಣಾ ಸಚಿವರನ್ನು ಭೇಟಿ ಮಾಡಿ ಮೂರು ಸೈನ್ಯದ ತುಕಡಿಗಳು ದಸರಾದಲ್ಲಿ ಭಾಗವಹಿಸಲು ಮನವಿ ಮಾಡಿದ್ದೆ. ಅವರು ನನ್ನ ಮನವಿಯನ್ನು ಪುರಸ್ಕರಿಸಿದ್ದಾರೆ. ಅದಕ್ಕಾಗಿ ಕೇಂದ್ರ ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಅವರಿಗೆ ನನ್ನ ಧನ್ಯವಾದಗಳು ಎಂದು ಹೇಳಿದರು.

ನವದುರ್ಗೆಯರ ಆಶೀರ್ವಾದ ಸರ್ಕಾರದ ಮೇಲಿರಲಿ. ದುರ್ಗೆಯರ ಜೊತೆಗೆ ರಾಜ್ಯದ ಕೋಟ್ಯಂತರ ತಾಯಂದಿರ ಆಶೀರ್ವಾದವೂ ನಮ್ಮ ಮೇಲಿದೆ. ದೇವರ ಕೃಪೆ ಜನರ ಮೇಲಿರಲಿ, ಜನರ ಕೃಪೆ ನಮ್ಮ ಮೇಲಿರಲಿ. ದಸರಾ ಕೇವಲ ಧಾರ್ಮಿಕ ಆಚರಣೆಯಲ್ಲ; ಅದು ಪರಂಪರೆ, ಕಲೆ, ಸಂಸ್ಕೃತಿ, ಸಾಮಾಜಿಕ ಸಾಮರಸ್ಯ ಮತ್ತು ಪ್ರಜಾಪ್ರಭುತ್ವದ ಆಶಯಗಳನ್ನು ಒಂದೆಡೆ ಸೇರಿಸುವ ಮಹೋತ್ಸವ. ಈ ಪರಂಪರೆಯನ್ನು ಮುಂದಿನ ಪೀಳಿಗೆಗೂ ಕೊಂಡೊಯ್ಯುವ ಮೂಲಕ ಕನ್ನಡಿಗರ ಸ್ವಾಭಿಮಾನ ಮತ್ತು ಮೈಸೂರಿನ ಸಾಂಸ್ಕೃತಿಕ ವೈಭವವನ್ನು ಜಗತ್ತಿಗೆ ಪರಿಚಯಿಸಬೇಕು ಎಂಬ ಆಶಯವನ್ನು ವ್ಯಕ್ತಪಡಿಸಿದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular