HomeKarnatakaಶಿವಂ ಅಸೊಸಿಯೇಟ್ಸ್ ವಂಚನೆ ಹಗರಣ: ಕಿಂಗ್ ಪಿನ್ ಶಿವಾನಂದ ನೀಲಣ್ಣವರ್ ಸೇರಿದಂತೆ 6 ಜನರ...

ಶಿವಂ ಅಸೊಸಿಯೇಟ್ಸ್ ವಂಚನೆ ಹಗರಣ: ಕಿಂಗ್ ಪಿನ್ ಶಿವಾನಂದ ನೀಲಣ್ಣವರ್ ಸೇರಿದಂತೆ 6 ಜನರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ ಇಡಿ

ಬೆಳಗಾವಿ: ರಾಜ್ಯದಲ್ಲಿ ತೀವ್ರ ಸಂಚಲನ ಸೃಷ್ಟಿಸಿದ್ದ ಶಿವಂ ಅಸೋಸಿಯೇಟ್ಸ್ ವಂಚನೆ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ್ದ ಜಾರಿ ನಿರ್ದೇಶನಾಲಯ (ಇಡಿ) ಅಧಿಕಾರಿಗಳು ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ.  

ಸುಮಾರು 35,000ಕ್ಕೂ ಹೆಚ್ಚು ಹೂಡಿಕೆದಾರರಿಗೆ ವಂಚನೆ ಎಸಗಿದ ₹2,459 ಕೋಟಿ ಮೌಲ್ಯದ ಪಾಂಜಿ (Ponzi) ಹಗರಣಕ್ಕೆ ಸಂಬಂಧಿಸಿದಂತೆ, ಜಾರಿ ನಿರ್ದೇಶನಾಲಯವು ಪ್ರಮುಖ ಆರೋಪಿ ಶಿವಾನಂದ ಸಿದ್ದಪ್ಪ ನೀಲಣ್ಣವರ್ ಮತ್ತು ಅವರ ಸಂಸ್ಥೆಯಾದ ‘ಶಿವಂ ಅಸೋಸಿಯೇಟ್ಸ್’ ಸೇರಿದಂತೆ ಐವರು ವ್ಯಕ್ತಿಗಳು ಹಾಗೂ ಸಂಸ್ಥೆಗಳ ವಿರುದ್ಧ ದೋಷಾರೋಪ ಪಟ್ಟಿಯನ್ನು ಸಲ್ಲಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಆರೋಪಿಗಳಿಗೆ ಶಿಕ್ಷೆ ವಿಧಿಸುವಂತೆ ಕೋರಿ, ಮಂಗಳೂರಿನ IIIನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಮುಂದೆ ಅಕ್ಟೋಬರ್ 9 ರಂದು ಈ ದೂರು ಸಲ್ಲಿಸಲಾಗಿದೆ.

ನೀಲಣ್ಣವರ್ ಅವರನ್ನು ಆಗಸ್ಟ್ 13, 2026 ರಂದು ಬಂಧಿಸಲಾಗಿದ್ದು, ಅವರು ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇಡಿ ತನಿಖೆಯ ಪ್ರಕಾರ, ನೀಲಣ್ಣವರ್ ಮತ್ತು ಅವರ ಸಹಚರರು ಹೂಡಿಕೆದಾರರಿಗೆ ತಿಂಗಳಿಗೆ ಶೇ. 3 ರಷ್ಟು ಖಚಿತ ಆದಾಯ ಮತ್ತು ಹೊಸ ಹೂಡಿಕೆದಾರರನ್ನು ಕರೆತಂದಿದ್ದಕ್ಕಾಗಿ ಶೇ. 0.5 ರಷ್ಟು ರೆಫರಲ್ ಕಮಿಷನ್ ನೀಡುವುದಾಗಿ ಭರವಸೆ ನೀಡಿ ₹2,459.49 ಕೋಟಿ ಸಂಗ್ರಹಿಸಿದ್ದರು. ನೀಲಣ್ಣವರ್ ಈ ಜಾಲದ ಏಜೆಂಟ್‌ಗಳನ್ನು “ಲೀಡರ್ಸ್” (ನಾಯಕರು) ಎಂದು ಕರೆಯುತ್ತಿದ್ದರು ಎಂದು ವರದಿಯಾಗಿದೆ.

ವಂಚಿಸಿ ಸಂಗ್ರಹಿಸಿದ್ದ ಹಣವನ್ನು ಆರೋಪಿಗಳು ಹೇಗೆ ಬಳಸಿಕೊಂಡಿದ್ದರು ಎಂಬ ಅಂಶಗಳು ಇಡಿ ತನಿಖೆಯಲ್ಲಿ ಬೆಳಕಿಗೆ ಬಂದಿವೆ.

ತನಿಖೆಯ ಪ್ರಕಾರ, ವಂಚನೆಯಿಂದ ಸಂಗ್ರಹಿಸಿದ್ದ ಹಣದ ಒಂದು ಭಾಗವನ್ನು ಷೇರು ಮಾರುಕಟ್ಟೆಯ ವಿವಿಧ ವಹಿವಾಟುಗಳಲ್ಲಿ ಹೂಡಿಕೆ ಮಾಡಲಾಗಿದೆ. ಅಲ್ಲದೆ, ಹಲವು ಸಹಕಾರ ಸಂಘಗಳಲ್ಲಿ ಎಫ್‌ಡಿ ರೂಪದಲ್ಲಿ ಹಣ ಇರಿಸಿರುವುದು ಹಾಗೂ ರಿಯಲ್ ಎಸ್ಟೇಟ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಹೂಡಿಕೆ ಮಾಡಿರುವುದಾಗಿ ಇಡಿ ದೂರಿನಲ್ಲಿ ಉಲ್ಲೇಖಿಸಿದೆ.

ಸಂಗ್ರಹಿಸಿದ ಹಣದ ಬಹುಭಾಗವನ್ನು ಹಳೆಯ ಹೂಡಿಕೆದಾರರಿಗೆ ಹಣ ಮರುಪಾವತಿಸಲು ಮತ್ತು ಯೋಜನೆಯ ಮೇಲಿನ ನಂಬಿಕೆಯನ್ನು ಉಳಿಸಿಕೊಳ್ಳಲು ಬಳಸಿಕೊಳ್ಳಲಾಯಿತು, ಆದರೆ ಉಳಿದ ಹಣವನ್ನು ವೈಯಕ್ತಿಕ ಲಾಭಕ್ಕಾಗಿ ದುರ್ಬಳಕೆ ಮಾಡಿಕೊಳ್ಳಲಾಯಿತು ಎಂದು ಸಂಸ್ಥೆ ಆರೋಪಿಸಿದೆ. ಹೂಡಿಕೆದಾರರಿಗೆ ಪಾವತಿಸಬೇಕಾದ ಮೂಲ ಮೊತ್ತ ₹2,125.60 ಕೋಟಿ ಬಾಕಿ ಉಳಿದಿದೆ ಎಂದು ಹೇಳಲಾಗಿದೆ.

ಹಣವನ್ನು ಷೇರು ವಹಿವಾಟು, ಆಸ್ತಿ ಮತ್ತು ಚಲನಚಿತ್ರ ನಿರ್ಮಾಣಕ್ಕೆ ತಿರುಗಿಸಲಾಗಿತ್ತು. ಹೂಡಿಕೆದಾರರ ಹಣದ ದೊಡ್ಡ ಮೊತ್ತವನ್ನು ಹೆಚ್ಚಿನ ಅಪಾಯವಿರುವ ಷೇರು ವಹಿವಾಟಿನಲ್ಲಿ ತೊಡಗಿಸಲಾಗಿತ್ತು ಮತ್ತು ಇದರಿಂದ ₹185.95 ಕೋಟಿ ನಿವ್ವಳ ನಷ್ಟ ಉಂಟಾಗಿತ್ತು ಎಂಬುದು ತನಿಖೆಯಿಂದ ತಿಳಿದುಬಂದಿದೆ.

ಸುಮಾರು ₹25 ಕೋಟಿಯನ್ನು ‘ಶ್ರೀಮತಾ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್’ ಮತ್ತು ‘ಧನಶ್ರೀ ಮಲ್ಟಿಪರ್ಪಸ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್’ ಸೇರಿದಂತೆ ಸಹಕಾರಿ ಸಾಲ ಸಂಘಗಳ ಮೂಲಕ ವರ್ಗಾಯಿಸಲಾಗಿತ್ತು. ಈ ಹಣವನ್ನು ಸ್ಥಿರ ಠೇವಣಿಗಳನ್ನು (FD) ಮಾಡಲು ಬಳಸಲಾಗುತ್ತಿತ್ತು ಮತ್ತು ನಂತರ ಭೂಮಿ ಖರೀದಿಸಲು ಸಹಚರರ ಹೆಸರಿನಲ್ಲಿ ಸಾಲ ಪಡೆಯಲು ಈ ಠೇವಣಿಗಳನ್ನು ಅಡಮಾನ ಇಡಲಾಗುತ್ತಿತ್ತು ಎಂದು ವರದಿಯಾಗಿದೆ.

ನೀಲಣ್ಣವರ್ ಅವರ ಪತ್ನಿ ಸಂಗೀತಾ ಮತ್ತು ಅಪ್ರಾಪ್ತ ಮಗ ಸಿದ್ಧಾಂತ್ ಅವರ ಬ್ಯಾಂಕ್ ಖಾತೆಗಳಿಗೆ ಹಾಗೂ ಸಂಬಂಧಿತ ವ್ಯಾಪಾರ ಸಂಸ್ಥೆಗಳಿಗೆ ಹಣವನ್ನು ವರ್ಗಾಯಿಸಲಾಗಿದೆ ಎಂದೂ ಇಡಿ ಆರೋಪಿಸಿದೆ. ‘ಶಿವಂ ಸೇವಾ (OPC) ಪ್ರೈವೇಟ್ ಲಿಮಿಟೆಡ್’ ಸಂಸ್ಥೆಯು 19 ಕೋಟಿ ರೂ.ಗಳನ್ನು ಪಡೆದುಕೊಂಡಿದೆ ಎಂದು ಆರೋಪಿಸಲಾಗಿದೆ; ಜೊತೆಗೆ ‘ಶಿವಂ ಲೈಫ್‌ಲೈನ್ ಪ್ರೈವೇಟ್ ಲಿಮಿಟೆಡ್’ ಮತ್ತು ‘ಶಿವಂ ಫುಡ್ಸ್’ ಕೂಡ ಇದರೊಂದಿಗೆ ಸಂಬಂಧ ಹೊಂದಿರುವ ಉದ್ಯಮಗಳೆಂದು ಗುರುತಿಸಲಾಗಿದೆ.

ಹಣದ ದುರ್ಬಳಕೆಯ ಮತ್ತೊಂದು ಪ್ರಕರಣದಲ್ಲಿ, ಸಾರ್ವಜನಿಕರಿಂದ ಸಂಗ್ರಹಿಸಲಾದ ಠೇವಣಿ ಹಣದ ಪೈಕಿ 5 ಕೋಟಿ ರೂ.ಗಳನ್ನು ‘ಚಾಂಪಿಯನ್’ ಎಂಬ ಕನ್ನಡ ಚಲನಚಿತ್ರದ ವಾಣಿಜ್ಯಿಕ ನಿರ್ಮಾಣಕ್ಕಾಗಿ ಬಳಸಲಾಗಿದೆ ಎಂದು ಆರೋಪಿಸಲಾಗಿದೆ.

2.02 ಕೋಟಿ ರೂ. ಮೌಲ್ಯದ ಆಸ್ತಿ/ಹಣ ಜಪ್ತಿ:

ಆರೋಪಿಗಳು ಮತ್ತು ಅವರ ಸಹಚರರಿಗೆ ಸಂಬಂಧಿಸಿದ ಬೆಳಗಾವಿ, ಚಿಕ್ಕೋಡಿ ಮತ್ತು ನಿಪ್ಪಾಣಿಯಲ್ಲಿನ ಎಂಟು ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯವು (ED) ಆಗಸ್ಟ್ 2026ರಲ್ಲಿ ಶೋಧ ಕಾರ್ಯಾಚರಣೆ ನಡೆಸಿತು. ಈ ಶೋಧದ ವೇಳೆ ದಾಖಲೆಗಳು, ಕೈಬರಹದ ಲೆಕ್ಕಪರಿಶೋಧನಾ (ಆಡಿಟ್) ಟಿಪ್ಪಣಿಗಳು, ಮೊಬೈಲ್ ಸಾಧನಗಳು ಮತ್ತು ಸಾಫ್ಟ್‌ವೇರ್ ವಹಿವಾಟಿನ ದಾಖಲೆಗಳನ್ನು ವಶಪಡಿಸಿಕೊಳ್ಳಲಾಯಿತು. ಅಪರಾಧದ ಮೂಲಕ ಗಳಿಸಿದ ಹಣದ ಚಲನವಲನವನ್ನು ಸಾಬೀತುಪಡಿಸಲು ಈ ದಾಖಲೆಗಳು ನೆರವಾಗಿವೆ ಎಂದು ಸಂಸ್ಥೆಯು ತಿಳಿಸಿದೆ.

ಆರೋಪಿಗಳು, ಅವರ ಕುಟುಂಬ ಸದಸ್ಯರು ಮತ್ತು ವಹಿವಾಟುಗಳಲ್ಲಿ ಬಳಸಲಾದ ವಿವಿಧ ಸಂಸ್ಥೆಗಳ ನಡುವೆ ಆರ್ಥಿಕ ಸಂಬಂಧವಿರುವುದು ತನಿಖೆಯಿಂದ ಬಹಿರಂಗಗೊಂಡಿದೆ. ಪ್ರಮುಖ ಸಹಚರರಿಗೆ ಸೇರಿದ 2.02 ಕೋಟಿ ರೂ. ಮೊತ್ತವನ್ನು ಹೊಂದಿದ್ದ ಬ್ಯಾಂಕ್ ಖಾತೆಗಳು ಮತ್ತು ಸ್ಥಿರ ಠೇವಣಿಗಳನ್ನು (fixed deposits) ಜಪ್ತಿ ಮಾಡಲಾಗಿದೆ.

ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ದಾಖಲಾದ ಎಫ್‌ಐಆರ್ (FIR) ಆಧಾರದ ಮೇಲೆ ಈ ಪ್ರಕರಣವು ಆರಂಭಗೊಂಡಿದೆ. ಭಾರತೀಯ ನ್ಯಾಯ ಸಂಹಿತೆ-2023, ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ಕಾಯ್ದೆ-2019 ಮತ್ತು ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರರ ಹಿತಾಸಕ್ತಿ ರಕ್ಷಣೆ ಕಾಯ್ದೆ-2004ರ ಅಡಿಯಲ್ಲಿ ಈ ಪ್ರಕರಣವನ್ನು ದಾಖಲಿಸಲಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular