ಚಾಮರಾಜನಗರ: ಪ್ರಿಯಕರನೊಂದಿಗೆ ವಧು ಪರಾರಿಯಾಗಿದ್ದಕ್ಕೆ ಮನನೊಂದು ವರ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಯಳಂದೂರು ತಾಲೂಕಿನ ಚಾಮಲಾಪುರ ಗ್ರಾಮದ ಮಹದೇವ ಪ್ರಸಾದ್(29) ಆತ್ಮಹತ್ಯೆ ಮಾಡಿಕೊಂಡವರು. ಅಕ್ಟೋಬರ್ 11, 12ರಂದು ಮರಿಯಾಲ ಗ್ರಾಮದ ಕಲ್ಯಾಣ ಮಂಟಪದಲ್ಲಿ ಮಹದೇವ ಪ್ರಸಾದ್ ಮದುವೆ ನಿಗದಿಯಾಗಿತ್ತು.
ಪ್ರಿಯಕರನೊಂದಿಗೆ ವಧು ಮದುವೆಯಾಗಿದ್ದರಿಂದ ಈ ಕುರಿತಾಗಿ ವಿಚಾರಿಸಲು ಹೋದಾಗ ವಧುವಿನ ತಾಯಿ ಅವಮಾನಿಸಿದ್ದರು ಎಂದು ಹೇಳಲಾಗಿದೆ. ಮನನೊಂದ ಮಹದೇವ ಪ್ರಸಾದ್ ಕ್ರಿಮಿನಾಶಕ ಸೇವಿಸಿದ್ದಾರೆ. ಅವರ ಪೋಷಕರು ಯಳಂದೂರು ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಮೈಸೂರಿನ ಕೆಆರ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಹದೇವ ಪ್ರಸಾದ್ ಮೃತಪಟ್ಟಿದ್ದಾರೆ. ಅವರ ತಾಯಿ ಯಳಂದೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಆತ್ಮಹತ್ಯೆ ತಡೆ ಸಹಾಯವಾಣಿ: ಎಲ್ಲಾ ಸಮಸ್ಯೆಗಳಿಗೂ ಸಾವು ಪರಿಹಾರವಲ್ಲ. ಆತ್ಮಹತ್ಯೆ ತಡೆ ಸಹಾಯವಾಣಿ ಸಂಖ್ಯೆ (022)27546669
(ಹಕ್ಕುತ್ಯಾಗ: ಈ ಲೇಖನವು ಯಾವುದೇ ರೂಪದಲ್ಲಿ ಸ್ವಯಂ-ಹಾನಿ ಅಥವಾ ಆತ್ಮಹತ್ಯೆಯನ್ನು ಉತ್ತೇಜಿಸಲು, ಪ್ರೋತ್ಸಾಹಿಸಲು ಅಥವಾ ಸಂವೇದನಾಶೀಲಗೊಳಿಸಲು ಉದ್ದೇಶಿಸಿಲ್ಲ. ನೀವು ಅಥವಾ ನಿಮಗೆ ತಿಳಿದಿರುವ ಯಾರಾದರೂ ಭಾವನಾತ್ಮಕ ಯಾತನೆ, ಆತ್ಮಹತ್ಯಾ ಆಲೋಚನೆಗಳು ಅಥವಾ ಮಾನಸಿಕ ಆರೋಗ್ಯ ಬಿಕ್ಕಟ್ಟನ್ನು ಅನುಭವಿಸುತ್ತಿದ್ದರೆ, ದಯವಿಟ್ಟು ತಕ್ಷಣದ ವೃತ್ತಿಪರ ಸಹಾಯವನ್ನು ಪಡೆಯಿರಿ. ಭಾರತದಲ್ಲಿ, ನೀವು AASRA (24/7) ಅನ್ನು ಸಂಪರ್ಕಿಸಬಹುದು: 91-9820466726 ಅಥವಾ ವಿಶ್ವಾಸಾರ್ಹ ಮಾನಸಿಕ ಆರೋಗ್ಯ ವೃತ್ತಿಪರರು, ವೈದ್ಯರು ಅಥವಾ ಸ್ಥಳೀಯ ತುರ್ತು ಸೇವೆಗಳನ್ನು ಸಂಪರ್ಕಿಸಬಹುದು. ಯಾರಿಗಾದರೂ ಖಿನ್ನತೆ ಇದ್ದರೆ ಇಲ್ಲವೇ ಆತ್ಮಹತ್ಯೆ ಮನೋಭಾವ ಕಾಡುತ್ತಿದ್ದರೆ ಟೆಲಿಮನಸ್ 14416, ಸಹಾಯ್ 080 25497777 ಸಹಾಯವಾಣಿಗೆ ಸಂಪರ್ಕಿಸಿ)
ಮದುವೆಗೆ ಮೊದಲೇ ಗರ್ಭಿಣಿಯಾದ ಭಾವಿ ಪತ್ನಿ: ವರನ ವಿರುದ್ಧ ಪೋಕ್ಸೋ ಕೇಸ್ ದಾಖಲು
ದಾವಣಗೆರೆ: ಭಾವಿ ಪತ್ನಿಯ ಮೇಲೆಯೇ ಲೈಂಗಿಕ ದೌರ್ಜನ್ಯ ಆರೋಪ ಹಿನ್ನೆಲೆ ವರನ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿದೆ.
ಮದುವೆ ನಿಶ್ಚಯವಾಗಿದ್ದ ಅಪ್ರಾಪ್ತ ಬಾಲಕಿಯನ್ನು ಲೈಂಗಿಕವಾಗಿ ಬಳಸಿಕೊಂಡ ಆರೋಪದ ಹಿನ್ನೆಲೆಯಲ್ಲಿ ಯುವಕನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿರುವ ಘಟನೆ ವರದಿಯಾಗಿದೆ.
ತಾಲೂಕಿನ ಹಳ್ಳಿಯೊಂದರಲ್ಲಿ ಎರಡು ಕುಟುಂಬಗಳ ಹಿರಿಯರು ಪರಸ್ಪರ ಒಪ್ಪಿಗೆಯೊಂದಿಗೆ ತಮ್ಮ ಮಕ್ಕಳ ಮದುವೆ ಮಾಡಲು ನಿರ್ಧರಿಸಿದ್ದರು. ಈ ಹಿನ್ನೆಲೆಯಲ್ಲಿ ಹುಡುಗ ಮತ್ತು ಹುಡುಗಿಯ ನಡುವೆ ಪರಿಚಯ ಬೆಳೆದಿತ್ತು. ಮದುವೆ ನಿಶ್ಚಯವಾಗಿದ್ದ ಕಾರಣ ಇಬ್ಬರೂ ಪರಸ್ಪರ ಆತ್ಮೀಯವಾಗಿದ್ದರು ಎನ್ನಲಾಗಿದೆ.
ಆದರೆ, ಹುಡುಗಿ ಅಪ್ರಾಪ್ತೆಯಾಗಿದ್ದ ಹಿನ್ನೆಲೆಯಲ್ಲಿ ಮದುವೆ ವಿಚಾರದಲ್ಲಿ ಕಾನೂನು ಸಂಬಂಧಿತ ಸಮಸ್ಯೆ ಎದುರಾಗಿದೆ. ಬಾಲಕಿ ಪ್ರಾಪ್ತವಯಸ್ಕಳಾಗಲು ಇನ್ನೂ ಸುಮಾರು 15 ತಿಂಗಳು ಬಾಕಿ ಇತ್ತು. ಈ ನಡುವೆ ಯುವಕ ಬಾಲಕಿಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಬಳಿಕ ಬಾಲಕಿಗೆ ಹೊಟ್ಟೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಕೆಯ ತಾಯಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ವೈದ್ಯಕೀಯ ತಪಾಸಣೆ ನಡೆಸಿದ ವೈದ್ಯರು ಬಾಲಕಿ ಗರ್ಭಿಣಿಯಾಗಿರುವುದನ್ನು ತಿಳಿಸಿದಾಗ ಕುಟುಂಬದವರಿಗೆ ವಿಷಯ ಗೊತ್ತಾಗಿದೆ ಎನ್ನಲಾಗಿದೆ. ಮಗಳ ಸ್ಥಿತಿಯ ಬಗ್ಗೆ ತಿಳಿದ ಕುಟುಂಬದವರು ಆಕೆಯೊಂದಿಗೆ ಮಾತನಾಡಿದಾಗ, ಯುವಕನ ವಿರುದ್ಧ ಆರೋಪ ಕೇಳಿಬಂದಿದೆ. ಇದರಿಂದ ಆಕ್ರೋಶಗೊಂಡ ಬಾಲಕಿಯ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ.
ಅಪ್ರಾಪ್ತ ಬಾಲಕಿಯ ಮೇಲಿನ ಲೈಂಗಿಕ ದೌರ್ಜನ್ಯದ ಆರೋಪದ ಹಿನ್ನೆಲೆಯಲ್ಲಿ ಪೊಲೀಸರು ಯುವಕನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.

