ರಜನಿಕಾಂತ್ ಅಭಿನಯದ ಬಹುನಿರೀಕ್ಷಿತ ‘ಜೈಲರ್ 2’ ಸಿನಿಮಾ ಅಕ್ಟೋಬರ್ 15, 2026 ರಂದು ಬಿಡುಗಡೆಯಾಗಲು ಸಜ್ಜಾಗಿದೆ. 2023ರಲ್ಲಿ ತೆರೆಕಂಡು ಭರ್ಜರಿ ಯಶಸ್ಸು ಗಳಿಸಿದ್ದ ‘ಜೈಲರ್’ ಚಿತ್ರದಲ್ಲಿ ನಟಿ ತಮನ್ನಾ ಭಾಟಿಯಾ ವಿಶೇಷ ಪಾತ್ರದಲ್ಲಿ ನಟಿಸಿದ್ದರು. ಅಲ್ಲದೆ, ಅವರ ‘ಕಾವಾಲಾ’ ಹಾಡು ದೇಶಾದ್ಯಂತ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಇದರ ಬೆನ್ನಲ್ಲೇ ಇದೀಗ ಸಿನಿಮಾದ ಪ್ರಚಾರದ ವೇಳೆ ಸೂಪರ್‌ಸ್ಟಾರ್ ರಜನಿಕಾಂತ್ ಅವರು ‘ಜೈಲರ್ 2’ ಚಿತ್ರದಲ್ಲಿ ತಮನ್ನಾ ಅವರ ಹಾಡು ಒಂದಿದ್ದರೆ ಚೆನ್ನಾಗಿತ್ತು ಎಂಬ ತಮ್ಮಾಸೆಯನ್ನು ಬಹಿರಂಗಪಡಿಸಿದ್ದಾರೆ.
ಸಿನಿಮಾದ ಪ್ರಚಾರದ ಸಂದರ್ಭದಲ್ಲಿ ಮಾತನಾಡಿದ ರಜನಿಕಾಂತ್, “ಜೈಲರ್ 2 ಸಿನಿಮಾದಲ್ಲಿರುವ ಏಕೈಕ ಕೊರತೆ ಎಂದರೆ ಅದು ತಮನ್ನಾ. ಚಿತ್ರದಲ್ಲಿ ತಮನ್ನಾ ಅವರ ಒಂದು ಹಾಡನ್ನು ಇರಿಸುವಂತೆ ನಾನು ನಿರ್ದೇಶಕ ನೆಲ್ಸನ್ ಅವರಿಗೆ ಹೇಳಿದ್ದೆ” ಎಂದು ತಿಳಿಸಿದರು. ಇದಕ್ಕೆ ಉತ್ತರಿಸಿದ ನೆಲ್ಸನ್, “ನೀವು ಇಷ್ಟಪಟ್ಟ ಮಾತ್ರಕ್ಕೆ ನನಗೆ ಅದನ್ನು ಹಾಗೆಯೇ ಇರಿಸಲು ಆಗುವುದಿಲ್ಲ ಸರ್” ಎಂದು ಹಾಸ್ಯಮಯವಾಗಿ ಪ್ರತಿಕ್ರಿಯಿಸಿದರು. ತಕ್ಷಣವೇ ಸ್ಪಷ್ಟನೆ ನೀಡಿದ ರಜನಿ, “ನನಗೆ ಇಷ್ಟವಾಯಿತೆಂದು ನಾನು ಮಾಡಿದ್ದರೆ ನಾನು ಎಂದೋ ಅಪ್ರಸ್ತುತನಾಗಿ ಬೆಂಗಳೂರಿಗೆ ಹೋಗುತ್ತಿದ್ದೆ. ಪ್ರೇಕ್ಷಕರು ಏನು ಮೆಚ್ಚಿಕೊಳ್ಳುತ್ತಾರೋ ಅದನ್ನು ಮಾಡುತ್ತಿರುವ ಕಾರಣದಿಂದಲೇ ನಾನು ಇಂದಿಗೂ ಈ ಕ್ಷೇತ್ರದಲ್ಲಿ ಉಳಿದುಕೊಂಡಿದ್ದೇನೆ” ಎಂದರು. ಅಂದರೆ ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ತಮನ್ನಾ ಹಾಡು ಇರಬೇಕೆಂದು ತಾವು ಬಯಸಿದ್ದಾಗಿ ಅವರು ಸೂಚ್ಯವಾಗಿ ತಿಳಿಸಿದ್ದಾರೆ.
ಜೈಲರ್ 2 ಚಿತ್ರದ ತಾರಾಗಣದಲ್ಲಿ ರಜನಿಕಾಂತ್ ಜೊತೆಗೆ ಯೋಗಿ ಬಾಬು, ಮಿರ್ನಾ ಹಾಗೂ ರಿತ್ವಿಕ್ ತಮ್ಮ ಹಿಂದಿನ ಪಾತ್ರಗಳನ್ನೇ ಮುಂದುವರಿಸಲಿದ್ದಾರೆ. ಇದರೊಂದಿಗೆ ಎಸ್.ಜೆ. ಸೂರ್ಯ, ಮಿಥುನ್ ಚಕ್ರವರ್ತಿ, ಸೂರಜ್ ವೆಂಜರಮೂಡು, ವಿದ್ಯಾ ಬಾಲನ್, ಅಣ್ಣಾ ರಾಜನ್ ಮತ್ತು ಜತಿನ್ ಶರ್ಮಾ ಹೊಸದಾಗಿ ಈ ಚಿತ್ರದ ತಾರಾಗಣಕ್ಕೆ ಸೇರ್ಪಡೆಗೊಂಡಿದ್ದಾರೆ. ಮೊದಲ ಭಾಗದಲ್ಲಿ ವಿಶೇಷ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ಮೋಹನ್ ಲಾಲ್, ಶಿವ ರಾಜ್ ಕುಮಾರ್ ಮತ್ತು ಜಾಕಿ ಶ್ರಾಫ್ ಈಸಾರಿಯೂ ಮುಂದುವರಿಯಲಿದ್ದು, ಜೊತೆಗೆ ಹೃತಿಕ್ ರೋಷನ್ ಹಾಗೂ ವಿಜಯ್ ಸೇತುಪತಿ ಅವರ ವಿಶೇಷ ಪಾತ್ರಗಳು ಸಿನಿಮಾದಲ್ಲಿರಲಿವೆ. ಹಿಂದಿನ ‘ಜೈಲರ್’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ವಿಶ್ವಾದ್ಯಂತ ಬೃಹತ್ ಕಲೆಕ್ಷನ್ ಮಾಡುವ ಮೂಲಕ ಹೊಸ ದಾಖಲೆ ಬರೆದಿತ್ತು.

