ಕಲಬುರಗಿ: ಕರ್ತವ್ಯದಲ್ಲಿದ್ದಾಗಲೇ ಮಸೀದಿಯ ಛಾವಣಿ ಮೇಲೆ ನಿಂತು ಬಿಯರ್ ಕುಡಿದ ಪೊಲೀಸ್ ಪೇದೆಯೊಬ್ಬರನ್ನು ಅಮಾನತುಗೊಳಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬೆನ್ನಲ್ಲೇ ಪೊಲೀಸ್ ಇಲಾಖೆ ಕ್ರಮ ಕೈಗೊಂಡಿದೆ.
ಏನಿದು ಘಟನೆ?
ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಮಹಾಗಾಂವ್ ಪೊಲೀಸ್ ಠಾಣೆಯ ಪೇದೆ ಹಣಮಂತ ಅಮಾನತುಗೊಂಡವರು. ಇವರು ಹರಸೂರು ಗ್ರಾಮದ ಮಸೀದಿಯ ಛಾವಣಿ ಮೇಲೆ ನಿಂತು ಬಿಯರ್ ಕುಡಿಯುತ್ತಿರುವುದನ್ನು ಗ್ರಾಮಸ್ಥರು ವಿಡಿಯೋ ಮಾಡಿದ್ದರು. ಬಳಿಕ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಬಂದೋಬಸ್ತ್ ಕರ್ತವ್ಯದಲ್ಲಿದ್ದಾಗಲೇ ಮದ್ಯ ಸೇವನೆ!
ಹರಸೂರು ಗ್ರಾಮದಲ್ಲಿ ಗಲಾಟೆ ನಡೆದ ಹಿನ್ನೆಲೆಯಲ್ಲಿ ಪರಿಸ್ಥಿತಿ ನಿಯಂತ್ರಿಸಲು ಬಂದೋಬಸ್ತ್ ಕರ್ತವ್ಯಕ್ಕಾಗಿ ಹಣಮಂತ ಅವರನ್ನು ಮಸೀದಿ ಬಳಿ ನಿಯೋಜಿಸಲಾಗಿತ್ತು. ಆದರೆ, ಕರ್ತವ್ಯದಲ್ಲಿದ್ದಾಗಲೇ ಅವರು ಬಿಯರ್ ಕುಡಿದಿರುವುದು ವಿವಾದಕ್ಕೆ ಕಾರಣವಾಗಿದೆ.
ಎಸ್‌ಪಿಯಿಂದ ಅಮಾನತು ಆದೇಶ
ವಿಡಿಯೋ ವೈರಲ್ ಆದ ಬಳಿಕ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಕಲಬುರಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಅವರು ಪೇದೆ ಹಣಮಂತ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.ಕರ್ತವ್ಯದ ವೇಳೆ ಪೊಲೀಸ್ ಸಿಬ್ಬಂದಿ ನಡೆದುಕೊಂಡ ರೀತಿಯ ಕುರಿತು ಈ ಘಟನೆ ಚರ್ಚೆಗೆ ಕಾರಣವಾಗಿದೆ.
ಜಂತರ್ ಮಂತರ್ ಕಡೆ ಮೆರವಣಿಗೆಗೆ ಯತ್ನ: ದೆಹಲಿಯ ಕನಾಟ್ ಪ್ಲೇಸ್‌ನಲ್ಲಿ ಮತ್ತೆ 200 ಪ್ರತಿಭಟನಾಕಾರರು ವಶಕ್ಕೆ!
ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲು ಮೆರವಣಿಗೆ ಮೂಲಕ ತೆರಳಲು ಯತ್ನಿಸಿದ ಸುಮಾರು 200 ಪ್ರತಿಭಟನಾಕಾರರನ್ನು ರಾಜಧಾನಿಯ ಕನಾಟ್ ಪ್ಲೇಸ್ ಪ್ರದೇಶದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಪೊಲೀಸ್ ಮೂಲಗಳು ಶನಿವಾರ ತಿಳಿಸಿವೆ. ಪ್ರತಿಭಟನೆಗೆ ಅನುಮತಿ ನೀಡಲಾಗಿಲ್ಲ ಎಂದು ತಿಳಿಸಿದ ಬಳಿಕವೂ ದೆಹಲಿ ಪೊಲೀಸರು ಕಾರ್ಯಕರ್ತರನ್ನು ವಶಕ್ಕೆ ಪಡೆಯುವುದನ್ನು ಮುಂದುವರಿಸಿದ್ದಾರೆ.
ಮುಂಬೈನಿಂದ ದೆಹಲಿಗೆ ಪ್ರತಿಭಟನೆಯಲ್ಲಿ ಭಾಗವಹಿಸಲು ಬಂದಿದ್ದ CJP ಕಾರ್ಯಕರ್ತ ಅಭಿಜೀತ್ ದೀಪ್ಕೆ, ದೆಹಲಿ ವಿಮಾನ ನಿಲ್ದಾಣದಲ್ಲಿ ವಿಮಾನದಿಂದ ಇಳಿಯುತ್ತಿದ್ದಾಗಲೇ ಪೊಲೀಸರು ತಮ್ಮನ್ನು ಮತ್ತು ತಮ್ಮ ಸಹಚರರನ್ನು ವಶಕ್ಕೆ ಪಡೆಯಲು ಯತ್ನಿಸಿದ್ದಾರೆ ಎಂದು ಆರೋಪಿಸಿ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.
ವಿಡಿಯೋದಲ್ಲಿ ಮಾತನಾಡಿರುವ ದೀಪ್ಕೆ, “ನೋಡಿ, ದೆಹಲಿ ಪೊಲೀಸರು ನಮ್ಮನ್ನು ಬಂಧಿಸಲು ವಿಮಾನದೊಳಗೆ ಬರುತ್ತಿದ್ದಾರೆ. ನಾವು ಈಗಷ್ಟೇ ಬಂದಿಳಿದಿದ್ದೇವೆ. ಪೊಲೀಸ್ ಅಧಿಕಾರಿಗಳು ವಿಮಾನದ ಹಾದಿಯಲ್ಲಿ ನಿಂತಿದ್ದಾರೆ. ವಿಮಾನದೊಳಗೇ ನಮ್ಮನ್ನು ಬಂಧಿಸಲು ಪ್ರಯತ್ನಿಸುತ್ತಿದ್ದಾರೆ. ಇಡೀ ದೆಹಲಿ ಪೊಲೀಸ್ ಪಡೆ ವಿಮಾನದೊಳಗೆ ಬರುತ್ತಿದೆ. ಇದು ನರೇಂದ್ರ ಮೋದಿಯವರ ಭಯವನ್ನು ತೋರಿಸುತ್ತದೆ” ಎಂದು ಆರೋಪಿಸಿದ್ದಾರೆ.
“ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿಯೂ ಇಂದಿರಾ ಗಾಂಧಿ ಹೀಗೆ ಮಾಡಿರಲಿಲ್ಲ. ನಾವು ಬಯಸಿದ್ದು ಶಾಂತಿಯುತ ಪ್ರತಿಭಟನೆ ಮಾತ್ರ. ಆದರೆ, ಅಪರಾಧಿಗಳಂತೆ ವಿಮಾನದಿಂದಲೇ ನಮ್ಮನ್ನು ವಶಕ್ಕೆ ಪಡೆಯುತ್ತಿದ್ದಾರೆ” ಎಂದು ಅವರು ದೂರಿದ್ದಾರೆ.
ಮುಂದುವರಿದು, “ದೇಶ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದನ್ನು ನೀವೇ ನೋಡಬಹುದು. ನಮ್ಮನ್ನು ಬಂಧಿಸಲು ಪೊಲೀಸರು ನೇರವಾಗಿ ವಿಮಾನದೊಳಗೆ ಬಂದಿದ್ದಾರೆ. ಇದು ಸರ್ವಾಧಿಕಾರ. ಬನ್ನಿ, ನಮ್ಮನ್ನು ಬಂಧಿಸಿ. ನಾವು ಬಂಧನಕ್ಕೆ ಸಿದ್ಧರಿದ್ದೇವೆ. ನಿಮಗೆ ನಾವು ಹೆದರುವುದಿಲ್ಲ” ಎಂದು ದೀಪ್ಕೆ ಹೇಳಿದ್ದಾರೆ.
ಮನೆ ಬಿಟ್ಟು ಹೊರಬರಲು ಯತ್ನಿಸಿದಾಗಲೇ ವಶಕ್ಕೆ ಪಡೆಯಲು ಪ್ರಯತ್ನ: ರತ್ನಾ ಸಿಂಗ್ ಆರೋಪ
CJP ತನ್ನ ಕಾನೂನು ವಿಭಾಗದ ಮುಖ್ಯಸ್ಥೆ ರತ್ನಾ ಸಿಂಗ್ ಅವರ ವಿಡಿಯೋವನ್ನೂ ಹಂಚಿಕೊಂಡಿದೆ. ಕಾರಿನಲ್ಲಿ ಮನೆಯಿಂದ ಹೊರಗೆ ತೆರಳಲು ಯತ್ನಿಸುತ್ತಿದ್ದಾಗ ಪೊಲೀಸರು ತಮ್ಮನ್ನು ವಶಕ್ಕೆ ಪಡೆಯಲು ಪ್ರಯತ್ನಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಬೆಳಿಗ್ಗೆಯೇ ಪೊಲೀಸರು ತಮ್ಮ ನಿವಾಸಕ್ಕೆ ಬಂದಿದ್ದರು. ಯಾವುದೇ ಅಧಿಕೃತ ದಾಖಲೆಗಳನ್ನು ನೀಡದೆ ತಮ್ಮನ್ನು ವಶಕ್ಕೆ ಪಡೆಯಲು ಮುಂದಾಗಿದ್ದಾರೆ ಎಂದು ರತ್ನಾ ಸಿಂಗ್ ವಿಡಿಯೋದಲ್ಲಿ ದೂರಿದ್ದಾರೆ.

