ವಿಶ್ವ ಮಾನಸಿಕ ಆರೋಗ್ಯ ದಿನದ ಸಂದರ್ಭದಲ್ಲಿ ನಟಿ ತಾಪ್ಸಿ ಪನ್ನು ತಮ್ಮ ವೈಯಕ್ತಿಕ ಜೀವನದ ಕಷ್ಟಗಳು ಹಾಗೂ ಮಾನಸಿಕ ಆರೋಗ್ಯದ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ. ಸಿನಿರಂಗದ ಒತ್ತಡ, ಸಾಮಾಜಿಕ ಜಾಲತಾಣಗಳ ಟ್ರೋಲಿಂಗ್ ಹಾಗೂ ವೃತ್ತಿಜೀವನದಲ್ಲಿ ಎದುರಾದ ಸವಾಲುಗಳು ತಮ್ಮ ಮನಸ್ಸಿನ ಮೇಲೆ ಬೀರಿದ ಪರಿಣಾಮದ ಬಗ್ಗೆ ಅವರು ಅನುಭವ ಹಂಚಿಕೊಂಡಿದ್ದಾರೆ. ಆರಂಭದಲ್ಲಿ ಮಾನಸಿಕ ಅಸ್ವಸ್ಥತೆ ಅಥವಾ ತೀವ್ರ ಖಿನ್ನತೆಗೆ ಒಳಗಾದಾಗ ಮಾತ್ರ ಚಿಕಿತ್ಸೆ ಅಥವಾ ಕೌನ್ಸಿಲಿಂಗ್ ಅಗತ್ಯವಿರುತ್ತದೆ ಎಂದು ತಾವು ಭಾವಿಸಿದ್ದೆವು ಎಂದು ಅವರು ತಿಳಿಸಿದ್ದಾರೆ.
ಆದರೆ ಕಾಲಾನಂತರದಲ್ಲಿ ಮಾನಸಿಕ ಸ್ವಾಸ್ಥ್ಯವೆಂದರೆ ಕೇವಲ ಅದಷ್ಟೇ ಅಲ್ಲ, ಬದಲಿಗೆ ಪ್ರಸ್ತುತ ಕ್ಷಣದಲ್ಲಿ ನೆಮ್ಮದಿಯಿಂದ ಇರುವುದು ಮತ್ತು ಆಂತರಿಕ ಶಾಂತಿ ಕಂಡುಕೊಳ್ಳುವುದು ಎಂದರ್ಥ ಎಂಬುದನ್ನು ಅರಿತುಕೊಂಡಿರುವುದಾಗಿ ತಾಪ್ಸಿ ಹೇಳಿದ್ದಾರೆ. ಸಿನಿರಂಗದಲ್ಲಿ ಒಬ್ಬ ನಟಿಯ ಸ್ಥಾನಮಾನವು ಜನರ ಅಭಿಪ್ರಾಯಗಳು ಮತ್ತು ಟೀಕೆಗಳ ಮೇಲೆ ಅವಲಂಬಿತವಾಗಿರುವಾಗ ಎಷ್ಟು ಬಲಶಾಲಿಗಳಾಗಿದ್ದರೂ ಅದನ್ನು ಎದುರಿಸುವುದು ಸುಲಭವಲ್ಲ. ವೃತ್ತಿಜೀವನದ ಆರಂಭದ ದಿನಗಳಲ್ಲಿ ಎಲ್ಲರನ್ನೂ ಖುಷಿಪಡಿಸಲು ಹೋಗಿ ತಾವೇ ಮಾನಸಿಕವಾಗಿ ಸುಸ್ತಾಗಿಹೋಗಿದ್ದೆವು ಎಂದು ಅವರು ನೆನಪಿಸಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಎದುರಾದ ಟ್ರೋಲ್ಗಳು ಹಾಗೂ ನಟಿಯ ಬಗ್ಗೆ ಹರಿದಾಡಿದ ನುಡಿಗಳು ತಲೆಗೆ ಹುಳ ಬಿಟ್ಟಂತೆ ಕಾಡಿದ್ದವು. ಟ್ರೋಲ್ಗಳಿಗೆ ಪ್ರತಿಕ್ರಿಯೆ ನೀಡುತ್ತಾ ತಮ್ಮ ಅಮೂಲ್ಯವಾದ ಸಮಯ ಮತ್ತು ಶಕ್ತಿಯನ್ನು ವ್ಯರ್ಥ ಮಾಡಿಕೊಂಡಿದ್ದಾಗಿ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಕೊನೆಗೆ ತನ್ನ ಮಾನಸಿಕ ನೆಮ್ಮದಿಯನ್ನು ಕಾಪಾಡಿಕೊಳ್ಳಲು ಸಾಮಾಜಿಕ ಜಾಲತಾಣಗಳಿಂದ ದೂರ ಉಳಿಯುವ ನಿರ್ಧಾರ ಕೈಗೊಂಡಿದ್ದಾಗಿ ತಿಳಿಸಿದ್ದಾರೆ.
ಕೋವಿಡ್ ಮಹಾಮಾರಿಯ ಲಾಕ್ಡೌನ್ ಸಮಯದಲ್ಲಿ ತಮಗೆ ಎದುರಾದ ಮಾನಸಿಕ ಒತ್ತಡಗಳನ್ನು ಎದುರಿಸಲು ಥೆರಪಿ ಅಂದರೆ ಚಿಕಿತ್ಸೆಯ ಮೊರೆ ಹೋಗಿದ್ದಾಗಿ ತಾಪ್ಸಿ ಬಹಿರಂಗಪಡಿಸಿದ್ದಾರೆ. ಕಷ್ಟದ ಸಂದರ್ಭಗಳಿಂದ ಓಡಿಹೋಗದೆ, ತನ್ನ ಭಾವನೆಗಳನ್ನು ನಿಭಾಯಿಸುವ ಕಲೆಯನ್ನು ಕರಗತ ಮಾಡಿಕೊಳ್ಳಲು ಥೆರಪಿ ತುಂಬಾ ಸಹಾಯ ಮಾಡಿತು ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಇತ್ತೀಚೆಗೆ ಇವರ ನಟನೆಯ ‘ಗಾಂಧಾರಿ’ ಸಿನಿಮಾ ಸೆಪ್ಟೆಂಬರ್ 3 ರಂದು ನೆಟ್ಫ್ಲಿಕ್ಸ್ ಒಟಿಟಿಯಲ್ಲಿ ಬಿಡುಗಡೆಯಾಗಿ ಪ್ರೇಕ್ಷಕರ ಮೆಚ್ಚುಗೆ ಪಡೆದಿದೆ.

