ಪಶ್ಚಿಮ ಬಂಗಾಳದ ರೇಜಿನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಫಲಿತಾಂಶ ಪ್ರಕಟವಾಗಿದೆ. ಇಲ್ಲಿ ಎಜೆೆಯುಪಿ (AJUP) ಮುಖ್ಯಸ್ಥ ಹುಮಾಯೂನ್ ಕಬೀರ್ ಅವರ ಪುತ್ರ ಗುಲಾಮ್ ನಬಿ ಆಜಾದ್ ಭಾರೀ ಸೋಲು ಅನುಭವಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಶಂಕರವಾಹ ಸರ್ಕಾರ ಅವರು 75 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ ಎಂದು ವರದಿ ತಿಳಿಸಿದೆ.
ಸುಮಾರು ಶೇ. 65ರಷ್ಟು ಮುಸ್ಲಿಂ ಮತದಾರರನ್ನು ಹೊಂದಿರುವ ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿರುವುದು ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿಸಿದೆ. ಮಗನ ಸೋಲಿನಿಂದ ಬೇಸರಗೊಂಡಿರುವ ಮಾಜಿ ಶಾಸಕ ಹಾಗೂ ಎಜೆೆಯುಪಿ ಮುಖ್ಯಸ್ಥ ಹುಮಾಯೂನ್ ಕಬೀರ್, ಭಾರತ ತೊರೆದು ದುಬೈನಲ್ಲಿ ನೆಲೆಸುವುದಾಗಿ ಘೋಷಿಸಿದ್ದಾರೆ.
ಮುರ್ಷಿದಾಬಾದ್‌ನಲ್ಲಿ ಬಾಬರಿ ಮಸೀದಿ ನಿರ್ಮಾಣ ಮಾಡಿಸುತ್ತಿರುವ ಹುಮಾಯೂನ್ ಕಬೀರ್, ಸದ್ಯ ತಮ್ಮ ಆದ್ಯತೆ ಮಸೀದಿ ನಿರ್ಮಾಣ ಪೂರ್ಣಗೊಳಿಸುವುದಾಗಿದೆ ಎಂದು ಹೇಳಿದ್ದಾರೆ. 2029ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಅವರನ್ನು ಸೋಲಿಸಿದ ಬಳಿಕ ಭಾರತ ತೊರೆದು ದುಬೈಗೆ ತೆರಳುವುದಾಗಿ ತಿಳಿಸಿದ್ದಾರೆ.
ಭಾರತ ತೊರೆಯುವ ನಿರ್ಧಾರದಲ್ಲಿ ಬದಲಾವಣೆ!
ಈ ಹಿಂದೆ ಬಾಬರಿ ಮಸೀದಿ ನಿರ್ಮಾಣ ಪೂರ್ಣಗೊಂಡ ಕೂಡಲೇ ಭಾರತ ತೊರೆಯುವುದಾಗಿ ಹುಮಾಯೂನ್ ಕಬೀರ್ ಘೋಷಿಸಿದ್ದರು. 2028ರ ಡಿಸೆಂಬರ್ 6ರೊಳಗೆ ಮಸೀದಿ ನಿರ್ಮಾಣ ಕಾರ್ಯ ಪೂರ್ಣಗೊಳ್ಳಲಿದೆ ಎಂದು ಹೇಳಿದ್ದ ಅವರು, ಅದೇ ದಿನ ಮಸೀದಿಯಲ್ಲಿ ಏಕಕಾಲಕ್ಕೆ ಒಂದು ಲಕ್ಷ ಮುಸ್ಲಿಮರು ನಮಾಜ್ ಮಾಡಲಿದ್ದಾರೆ ಎಂದು ಪ್ರತಿಪಾದಿಸಿದ್ದರು.
ನಂತರ 10 ವರ್ಷಗಳ ಗೋಲ್ಡನ್ ವೀಸಾ ಪಡೆದು ದುಬೈಗೆ ತೆರಳುವುದಾಗಿ ಹೇಳಿದ್ದರು. ಆದರೆ, ಕೆಲವೇ ಗಂಟೆಗಳಲ್ಲಿ ತಮ್ಮ ನಿರ್ಧಾರದಲ್ಲಿ ಬದಲಾವಣೆ ಮಾಡಿಕೊಂಡಿದ್ದು, ಇದೀಗ 2029ರ ಲೋಕಸಭಾ ಚುನಾವಣೆಯಲ್ಲಿ ಅಧೀರ್ ರಂಜನ್ ಅವರನ್ನು ಸೋಲಿಸಿದ ಬಳಿಕ ದುಬೈಗೆ ತೆರಳುವುದಾಗಿ ಘೋಷಿಸಿದ್ದಾರೆ.
ಅಧೀರ್ ರಂಜನ್ ವಿರುದ್ಧ ಗಂಭೀರ ಆರೋಪ
ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಅವರು ಬಿಜೆಪಿಯೊಂದಿಗೆ ಸೇರಿ ಕೆಲಸ ಮಾಡುತ್ತಿದ್ದಾರೆ ಎಂದು ಹುಮಾಯೂನ್ ಕಬೀರ್ ಆರೋಪಿಸಿದ್ದಾರೆ.
ರೇಜಿನಗರ ಉಪಚುನಾವಣೆಯಲ್ಲಿ ತಮ್ಮ ಪುತ್ರ ಸೋಲು ಅನುಭವಿಸಲು ಆಡಳಿತ ಮತ್ತು ಅಧಿಕಾರಿಗಳ ಒಳಸಂಚು ಕಾರಣ ಎಂದು ಅವರು ದೂರಿದ್ದಾರೆ. ಮುಸ್ಲಿಂ ಸಮುದಾಯದ ಜನರಿಗೆ ಮತ ಚಲಾಯಿಸಲು ಪೊಲೀಸರು ಅವಕಾಶ ನೀಡಲಿಲ್ಲ ಹಾಗೂ ಚುನಾವಣೆಯ ಸಂದರ್ಭದಲ್ಲಿ ತಮ್ಮನ್ನು ವಶಕ್ಕೆ ಪಡೆಯುವ ಮೂಲಕ ಚುನಾವಣೆಯ ಮೇಲೆ ಪ್ರಭಾವ ಬೀರಲಾಗಿದೆ ಎಂದು ಆರೋಪಿಸಿದ್ದಾರೆ.
ರೇಜಿನಗರ ಗೆಲುವಿನ ಬಗ್ಗೆ ಸಿಎಂ ಶುಭೇಂದು ಅಧಿಕಾರಿ ಹೇಳಿದ್ದೇನು?
ಇನ್ನೊಂದೆಡೆ, ರೇಜಿನಗರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ ಬಳಿಕ ಮುಖ್ಯಮಂತ್ರಿ ಶುಭೇಂದು ಅಧಿಕಾರಿ ಪ್ರತಿಕ್ರಿಯಿಸಿದ್ದಾರೆ. ತಮ್ಮ ಪಕ್ಷದ ಅಭ್ಯರ್ಥಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂ ಮತದಾರರು ಮತ ಚಲಾಯಿಸಿದ್ದಾರೆ ಎಂದು ಅವರು ಪ್ರತಿಪಾದಿಸಿದ್ದಾರೆ.
ವಿರೋಧ ಪಕ್ಷಗಳು ಬಿಜೆಪಿಯ ಹೆಸರಿನಲ್ಲಿ ಮುಸ್ಲಿಮರನ್ನು ಹೆದರಿಸಿ ಮತ ಪಡೆಯುತ್ತಿವೆ ಎಂದು ಆರೋಪಿಸಿದ ಅವರು, ಬಿಜೆಪಿ ಅಧಿಕಾರಕ್ಕೆ ಬಂದರೆ ಮುಸ್ಲಿಮರನ್ನು ಬಾಂಗ್ಲಾದೇಶಕ್ಕೆ ಕಳುಹಿಸಲಾಗುತ್ತದೆ ಎಂಬ ಪ್ರಚಾರ ಮಾಡಲಾಗಿತ್ತು ಎಂದು ಹೇಳಿದ್ದಾರೆ.
ಆದರೆ, ಕಳೆದ ಐದು ತಿಂಗಳ ಆಡಳಿತದಲ್ಲಿ ಅಂತಹ ಯಾವುದೇ ಘಟನೆ ನಡೆದಿಲ್ಲ ಎಂದು ಅವರು ಪ್ರತಿಪಾದಿಸಿದ್ದಾರೆ. ಸರ್ಕಾರದ ಕಾರ್ಯವೈಖರಿಯನ್ನು ಗಮನಿಸಿದ ಜನರು ಉಪಚುನಾವಣೆಯಲ್ಲಿ ಬಿಜೆಪಿಯ ಮೇಲೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಎಂದು ಶುಭೇಂದು ಅಧಿಕಾರಿ ಹೇಳಿದ್ದಾರೆ.

