ಕೊಪ್ಪಳ: ಸಕಾಲಕ್ಕೆ ಮಾಹಿತಿ ನೀಡಲು ಹಾಗೂ ವಿಚಾರಣೆಗೆ ಹಾಜರಾಗದೆ ನಿರ್ಲಕ್ಷ್ಯ ವಹಿಸಿದ ವಿವಿಧ ಸಾರ್ವಜನಿಕ ಪ್ರಾಧಿಕಾರದ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ. ಕರ್ನಾಟಕ ಮಾಹಿತಿ ಆಯೋಗ ಕಲಬುರಗಿ ಪೀಠ ದಂಡ ವಿಧಿಸಿ ಆದೇಶ ಮಾಡಿದೆ.
ಮೇಲ್ಮನವಿದಾರರು ಮಾಹಿತಿ ಕೋರಿ ಅರ್ಜಿ ಸಲ್ಲಿಸಿದ್ದು, ಅವರಿಗೆ ಪ್ರತಿವಾದಿಗಳು ಸಕಾಲಕ್ಕೆ ಮಾಹಿತಿ ನೀಡದ ಕಾರಣ ಮೇಲ್ಮನವಿದಾರ ಕರ್ನಾಟಕ ಮಾಹಿತಿ ಆಯೋಗ ಕಲಬುರಗಿ ಪೀಠದ ಮುಂದೆ ಸಲ್ಲಿಸಿದ ದ್ವಿತೀಯ ಮೇಲ್ಮನವಿಯ ವಿಚಾರಣೆ ನಡೆಸಿದ ಕರ್ನಾಟಕ ಮಾಹಿತಿ ಆಯೋಗದ ಕಲಬುರಗಿ ಪೀಠದ ರಾಜ್ಯ ಮಾಹಿತಿ ಆಯುಕ್ತ ಬಿ.ವೆಂಕಟಸಿಂಗ್ ಐವರು ಅಧಿಕಾರಿಗಳಿಗೆ ತಲಾ 10 ಸಾವಿರದಂತೆ ಒಟ್ಟು 50 ಸಾವಿರ ರೂ. ದಂಡ ವಿಧಿಸಿ ಆದೇಶ ಮಾಡಿದ್ದಾರೆ.
ರಾಯಚೂರು ತಾಲೂಕಿನ ಮೇಲ್ಮನವಿದಾರರಿಗೆ ಮಾಹಿತಿ ನೀಡಿ, ಅವರಿಗೆ ನೀಡಿದ ಮಾಹಿತಿ ಮತ್ತು ಸ್ವೀಕೃತಿ ಪತ್ರಿಯನ್ನು ಆಯೋಗಕ್ಕೆ ಸಲ್ಲಿಸುವಂತೆ ಆಯೋಗ ಮಾಡಿದ ಆದೇಶ ಪಾಲನೆ ಮಾಡದೆ ನಿರ್ಲಕ್ಷ್ಯ ಮಾಡಿದ ಕಾರಣ ಈ ಹಿಂದೆ ಬಸವಕಲ್ಯಾಣ ನಗರಸಭೆ ಪ್ರಥಮ ದರ್ಜೆ ಸಹಾಯಕರಾಗಿದ್ದ ಸೂರ್ಯಕಾಂತಗೆ ಬೋಳಮಾನದೊಡ್ಡಿ ಗ್ರಾಮಪಂಚಾಯತ ಕಾರ್ಯದರ್ಶಿ ಮಲ್ಲಿಕಾರ್ಜುನಗೆ 10 ಸಾವಿರ, ಕಲಬುರಗಿ ಪಾಲಿಕೆ ಪರಿಸರ ಅಭಿಯಂತ ಅಭಯಕುಮಾರಗೆ 10 ಸಾವಿರ, ಕುಷ್ಟಗಿ ತಾಲೂಕಿನ ಜುಮ್ಮಾಪೂರ ಗ್ರಾಮ ಪಂಚಾಯತ್ ಕಾರ್ಯದರ್ಶಿ ಗುರಪ್ಪ ನಾಯಕಗೆ 10 ಸಾವಿರ ಹಾಗೂ ಹೊಸಪೇಟೆ ತಾಲೂಕಿನ ನಾಗಲಾಪುರ ಗ್ರಾಮ ಪಂಚಾಯತ್ ಕಾರ್ಯದರ್ಶಿ ರವಿಕುಮಾರಗೆ 10 ಸಾವಿರ ದಂಡ ವಿಧಿಸಿ ಆದೇಶ ಮಾಡಲಾಗಿದೆ.
ಪ್ರತಿವಾದಿ ಅಧಿಕಾರಿಗಳಿಗೆ ವಿಧಿಸಿದ ದಂಡ ಅವರ ಬರುವ ತಿಂಗಳ ವೇತನದಲ್ಲಿ ಕಡಿತಗೊಳಿಸಿ ಆಯೋಗ ಸೂಚಿಸಿದ ಲೆಕ್ಕ ಶೀರ್ಷಿಕೆಗೆ ಜಮಾ ಮಾಡಿ ರಶೀದಿ ಆಯೋಗಕ್ಕೆ ಸಲ್ಲಿಸಲು ಅನುಕ್ರಮವಾಗಿ ದಂಡನೆಗೊಳಪಟ್ಟ ಮೇಲಾಧಿಕಾರಿಗಳಿಗೆ ಆಯೋಗ ಆದೇಶ ಮಾಡಿದೆ.
ಆಯೋಗದ ಆದೇಶದಂತೆ ದಂಡ ಪಾವತಿ ಮಾಡಬೇಕು ಹಾಗೂ ಆಯೋಗದ ಆದೇಶ ತಲುಪಿದ ತಕ್ಷಣವೇ ಮೇಲ್ಮನವಿದಾರರಿಗೆ ಮಾಹಿತಿ ನೀಡಿ ಅದರ ಪ್ರತಿ ಮತ್ತು ಸ್ವೀಕೃತಿ ಪತ್ರ ಆಯೋಗಕ್ಕೆ ಸಲ್ಲಿಸಿ ಮುಂದಿನ ವಿಚಾರಣೆಗೆ ಹಾಜರಾಗುವಂತೆ ಪ್ರತಿವಾದಿ ಅಧಿಕಾರಿಗಳಿಗೆ ಮಾಹಿತಿ ಹಕ್ಕು ಅಧಿನಿಯಮ 2005 ರ 18 (3) ರಡಿ ಆದೇಶಿಸಿ, ತಪ್ಪಿದಲ್ಲಿ ಮಾಹಿತಿ ಹಕ್ಕು ಅಧಿನಿಯಮ 2005 ರ 20 (2) ರಡಿ ಎಚ್ಚರಿಕೆ ನೀಡಿದೆ. ಹಾಗೂ ಪ್ರತಿವಾದಿಗಳ ಪ್ರಥಮ ಮೇಲ್ಮನವಿ ಪ್ರಾಧಿಕಾರದ ಅಧಿಕಾರಿಗಳು ಈ ಕುರಿತು ಕ್ರಮ ವಹಿಸಲು ಸೂಚನೆ ನೀಡಿ ತಪ್ಪಿದಲ್ಲಿ ಶಿಸ್ತು ಕ್ರಮಕ್ಕೆ ಶಿಫಾರಸ್ಸು ಮಾಡುವುದಾಗಿ ಎಚ್ಚರಿಕೆ ನೀಡಿದೆ.
ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ: ಓರ್ವ ಅಭ್ಯರ್ಥಿಯಿಂದ ನಾಮಪತ್ರ ವಾಪಸ್: ಕಣದಲ್ಲಿ 13 ಅಭ್ಯರ್ಥಿಗಳು
ಕೊಪ್ಪಳ: ಕರ್ನಾಟಕ ವಿಧಾನ ಪರಿಷತ್ತಿಗೆ ಈಶಾನ್ಯ ಶಿಕ್ಷಕರ ಕ್ಷೇತ್ರದಿಂದ ಒಂದು ಸ್ಥಾನ ಆಯ್ಕೆಯ ಚುನಾವಣೆ ಇದೇ ಅಕ್ಟೋಬರ್ 23 ರಂದು ಬೆಳಿಗ್ಗೆ 8 ಗಂಟೆಯಿಂದ ಸಂಜೆ 4 ಗಂಟೆ ವರೆಗೆ ಮತದಾನ ನಡೆಯಲಿದ್ದು, ಅಂತಿಮವಾಗಿ ಚುನಾವಣಾ ಕಣದಲ್ಲಿ 13 ಅಭ್ಯರ್ಥಿಗಳು ಉಳಿದಿದ್ದಾರೆ ಎಂದು ಕ್ಷೇತ್ರದ ಚುನಾವಣಾಧಿಕಾರಿಯಾಗಿರುವ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರಾದ ಜಹೀರಾ ನಸೀಮ್ ಅವರು ತಿಳಿಸಿದ್ದಾರೆ.
ನಾಮಪತ್ರ ಹಿಂಪಡೆಯಲು ಶುಕ್ರವಾರ ಕೊನೆ ದಿನವಾಗಿದ್ದರಿಂದ ಪಕ್ಷೇತರ ಅಭ್ಯರ್ಥಿ ನಬಿರಸೂಲ್ ತಂದೆ ದಸ್ತಗೀರಸಾಬ್ ಜಕಾತಿ ಎಂಬುವರು ನಾಮಪತ್ರ ವಾಪಸ್ ಪಡೆದಿದ್ದಾರೆ. ಬುಧವಾರ ನಡೆದ ನಾಮಪತ್ರ ಪರಿಶೀಲನೆಯಲ್ಲಿ 14 ಅಭ್ಯರ್ಥಿಗಳ ನಾಮೊತ್ರ ಕ್ರಮಬದ್ಧವಾಗಿದ್ದವು. ಇದೀಗ ಓರ್ವ ಅಭ್ಯರ್ಥಿ ನಾಮಪತ್ರ ವಾಪಸ್ ಪಡೆದಿದ್ದರಿಂದ ಅಂತಿಮ ಚುನಾವಣಾ ಕಣದಲ್ಲಿ 13 ಅಭ್ಯರ್ಥಿಗಳು ಮಾತ್ರ ಉಳಿದುಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಶರಣಪ್ಪ ಮಟ್ಟೂರ ತಂದೆ ಹಣಮಂತಪ್ಪ, ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಶಶೀಲ್ ಜಿ. ನಮೋಶಿ ತಂದೆ ಗಂಗಾಧರ ನಮೋಶಿ, ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ಸಾಯಬಣ್ಣಾ ತಂದೆ ನಾಗೀಂದ್ರ, ಜನತಾ ದಳ(ಸಂಯುಕ್ತ) ಪಕ್ಷದ ಅಭ್ಯರ್ಥಿ ಶಂಕರೆಡ್ಡಿ ಪಾಟೀಲ ತಂದೆ ಲಿಂಗನಗೌಡ ಪಾಟೀಲ, ಪಕ್ಷೇತರ ಅಭ್ಯರ್ಥಿಗಳಾದ ಕವಿರಾಜ ತಂದೆ ನಾಗಣ್ಣ, ತುಳಸಪ್ಪ ದಾಸರ ತಂದೆ ಕರಿಯಪ್ಪ ದಾಸರ, ಮಹಬೂಬ್ ತಂದೆ ಮೊಹಮ್ಮದ ಖಾಜಾ ಹುಸೇನ್ ವಂಟೇಲಿ, ರಾಜಕುಮಾರ ತಂದೆ ಮಾಣಿಕಪ್ಪ, ರಾಜು ತಂದೆ ದೇವಪ್ಪ, ಶರಣಬಸಪ್ಪ ತಂದೆ ಪೀರಪ್ಪ, ಶಶಿಧರ ತಂದೆ ಬಸವರಾಜ, ಶಿವಶಂಕರ ತಂದೆ ಅಣ್ಣಪ್ಪ ಹಾಗೂ ಡಾ.ಸುರೇಶ ತಂದೆ ದಾವೀದಪ್ಪ ಅಂತಿಮ ಕಣದಲ್ಲಿ ಉಳಿದ ಅಭ್ಯರ್ಥಿಗಳಾಗಿದ್ದಾರೆ.

