ಬೆಂಗಳೂರು: ಅಕ್ಟೊಬರ್ 2ರಂದು ನಡೆಸಲಾಗಿದ್ದ ಉಳಿಕೆ ಮೂಲ ವೃಂದದ ಭೂಮಾಪಕರ ಹುದ್ದೆಗಳ ಲಿಖಿತ ಪರೀಕ್ಷೆಯ ತಾತ್ಕಾಲಿಕ ಫಲಿತಾಂಶವನ್ನು ಇಂದು ಪ್ರಕಟಿಸಲಾಗಿದೆ.
ಒಟ್ಟು 560 ಹುದ್ದೆಗಳ ನೇಮಕಕ್ಕೆ ಪರೀಕ್ಷೆ ನಡೆಸಲಾಗಿತ್ತು. ಪರೀಕ್ಷೆ ಬರೆದ ಎಲ್ಲ ಅಭ್ಯರ್ಥಿಗಳು ತಾವು ಗಳಿಸಿದ ಅಂಕಗಳನ್ನು ನಿಗದಿತ ಲಿಂಕ್ ಮೂಲಕ ಲಾಗಿನ್ ಆಗಿ ಪಡೆಯಬಹುದು.
ತಾತ್ಕಾಲಿಕ ಫಲಿತಾಂಶಕ್ಕೆ ಏನಾದರು ಆಕ್ಷೇಪಣೆಗಳು ಇದ್ದಲ್ಲಿ ಅ.11ರಂದು ಬೆಳಿಗ್ಗೆ 10ಗಂಟೆಯೊಳಗೆ ನಿಗದಿತ (cetonline.Karnataka.gov.in/kea/) ಲಿಂಕ್ ಮೂಲಕ ಸಲ್ಲಿಸಬಹುದು.
ಪ್ರಕಟಿತ ಕೀ ಉತ್ತರಗಳಿಗೆ ಬಂದ ಆಕ್ಷೇಪಣೆಗಳನ್ನು ವಿಜಯ ತಜ್ಞರ ಸಮಿತಿ ಪರಿಶೀಲಿಸಿದ ನಂತರ ಈ ಫಲಿತಾಂಶ ಪ್ರಕಟಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ತಿಳಿಸಿದ್ದಾರೆ.
PG Dental- 2026:
ಸ್ನಾತಕೋತ್ತರ ದಂತ ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ಮೂರನೇ ಸುತ್ತಿನ ಸೀಟು ಹಂಚಿಕೆಯ ವೇಳಾಪಟ್ಟಿಯನ್ನು ಪ್ರಕಟಿಸಿದ್ದು, ಕಾಷನ್ ಡೆಪಾಸಿಟ್ ಕಟ್ಟಲು ಅ.13ರವರೆಗೆ ಅವಕಾಶ ನೀಡಲಾಗಿದೆ.
ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭ್ಯರ್ಥಿಗಳು ಹೊರತುಪಡಿಸಿ ಎಲ್ಲ ವರ್ಗದವರು ನಾಲ್ಕು ಲಕ್ಷ ರೂಪಾಯಿ ಕಾಷನ್ ಡೆಪಾಸಿಟ್ ಪಾವತಿಸಬೇಕು. ಎಸ್ ಸಿ/ಎಸ್ ಟಿ ಅಭ್ಯರ್ಥಿಗಳು 1 ಲಕ್ಷ ರೂಪಾಯಿ ಕಟ್ಟಬೇಕು.
ಬಳಿಕ ಅ.13ರವರೆಗೆ ಆಪ್ಷನ್ಸ್ ದಾಖಲಿಸಬಹುದು. ಅ.14ರಂದು ಬೆಳಿಗ್ಗೆ 11ಗಂಟೆಗೆ ತಾತ್ಕಾಲಿಕ ಹಾಗೂ ಸಂಜೆ 6ಕ್ಕೆ ಅಂತಿಮ ಫಲಿತಾಂಶ ಪ್ರಕಟಿಸಲಾಗುತ್ತದೆ.
ಕಾಷನ್ ಡೆಪಾಸಿಟ್ ಹೊಂದಾಣಿಕೆ ನಂತರ ಕಟ್ಟ ಬೇಕಾದ ಬಾಕಿ ಶುಲ್ಕವನ್ನು ಅ.15ರಿಂದ 16ರವರೆಗೆ ಪಾವತಿಸಬೇಕು. ಬಳಿಕ ಮೂಲ ದಾಖಲೆಗಳನ್ನು ಕೆಇಎ ಕಚೇರಿಯಲ್ಲಿ ಅ.16 ಮತ್ತು 17ರಂದು ಸಲ್ಲಿಸಿದ ನಂತರ ಪ್ರವೇಶ ಆದೇಶವನ್ನು ಡೌನ್‌ಲೋಡ್ ಮಾಡಿಕೊಂಡು ಅ.19ರೊಳಗೆ ಕಾಲೇಜುಗಳಲ್ಲಿ ಪ್ರವೇಶ ಪಡೆಯಬಹುದು.
UGNEET-26:
ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ಸ್ಟ್ರೇ ವೇಕೆನ್ಸಿ ಸುತ್ತಿನ ಸೀಟು ಹಂಚಿಕೆಯ ವೇಳಾಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(KEA) ಪ್ರಕಟಿಸಿದೆ.
UGNEET-26ನಲ್ಲಿ ಅರ್ಹತೆ ಪಡೆದು, ಇದುವರೆಗೂ KEA ನಲ್ಲಿ ನೋಂದಣಿ ಮಾಡದವರು ಅ.13ರಿಂದ 16ರವರೆಗೆ ಹೊಸದಾಗಿ ಅರ್ಜಿ ಸಲ್ಲಿಸಬಹುದು.
ಶುಲ್ಕ ಪಾವತಿ ನಂತರ ವೆರಿಫಿಕೇಷನ್ ಸ್ಲಿಪ್ ಡೌನ್‌ಲೋಡ್ ಮಾಡಿಕೊಂಡು ಬಳಿಕ ಕಾಷನ್ ಡೆಪಾಸಿಟ್ ಕಟ್ಟಿ, ಆಪ್ಷನ್ಸ್ ದಾಖಲಿಸಬೇಕು.
ಅ.16ರಿಂದ 19ರವರೆಗೆ ಹೊಸದಾಗಿ ಆಪ್ಷನ್ಸ್ ದಾಖಲಿಸಲು ಅವಕಾಶ ನೀಡಲಾಗಿದೆ.
Caution Deposit Details:
₹1,00,000 ಕಾಷನ್ ಡೆಪಾಸಿಟ್ ಕಟ್ಟುವ ಅಭ್ಯರ್ಥಿಗಳು ವೈದ್ಯಕೀಯ ಕೋರ್ಸ್ ನ ಸರ್ಕಾರಿ ಸೀಟುಗಳು ಹಾಗೂ ದಂತ ವೈದ್ಯಕೀಯ ಕೋರ್ಸ್ ನ ಎಲ್ಲ ರೀತಿಯ ಸೀಟುಗಳ ಪ್ರವೇಶಕ್ಕೆ ಆಪ್ಷನ್ಸ್ ದಾಖಲಿಸಲು ಅರ್ಹರಾಗುತ್ತಾರೆ.
₹12,00,117 ಕಾಷನ್ ಡೆಪಾಸಿಟ್ ಕಟ್ಟುವ ಅಭ್ಯರ್ಥಿಗಳು G (ಸರ್ಕಾರಿ) ಮತ್ತು P (ಪ್ರೆವೈಟ್) ಸೀಟುಗಳಿಗೆ ಆಪ್ಷನ್ಸ್ ದಾಖಲಿಸಲು ಅರ್ಹರಾಗುತ್ತಾರೆ.
₹25,00,000 ಕಾಷನ್ ಡೆಪಾಸಿಟ್ ಕಟ್ಟುವ ಅಭ್ಯರ್ಥಿಗಳು ಎಲ್ಲ ರೀತಿಯ ಸೀಟುಗಳ ಪ್ರವೇಶಕ್ಕೆ ಆಪ್ಷನ್ಸ್ ದಾಖಲಿಸಬಹುದು.
ಯಾರೆಲ್ಲ ಅರ್ಹರು?
ಇದುವರೆಗೂ ಕೆಇಎ ಮೂಲಕ ಯಾವುದೇ ಸೀಟು ಹಂಚಿಕೆ ಮಾಡಿಕೊಳ್ಳದವರು ಹಾಗೂ ದಂತ ವೈದ್ಯಕೀಯ ಸೀಟು ಸಿಕ್ಕಿ, ವೈದ್ಯಕೀಯ ಸೀಟುಗಳಿಗೆ ಸೇರ ಬಯಸುವವರು ಈ ಸುತ್ತಿನಲ್ಲಿ ಭಾಗವಹಿಸಬಹುದು.
ಯಾರೆಲ್ಲ ಭಾಗವಹಿಸುವಂತಿಲ್ಲ?
ಅಖಿಲ ಭಾರತ, ಡೀಮ್ಡ್ ವಿವಿ ಸೇರಿ ಬೇರೆ ಯಾವುದೇ ರಾಜ್ಯಗಳ ಮೂಲಕ ಮೊದಲ ಮೂರು ಸುತ್ತುಗಳಲ್ಲಿ ಸೀಟು ಹಂಚಿಕೆಯಾದವರು ಈ ಸುತ್ತಿನಲ್ಲಿ ಭಾಗವಹಿಸಲು ಅವಕಾಶ ಇರುವುದಿಲ್ಲ.
ಶುಲ್ಕ ನೋಡಿಯೇ ಆಪ್ಷನ್ಸ್ ದಾಖಲಿಸಿ
ಉಳಿಕೆ ಸೀಟು ಮತ್ತು ಅದರ ಶುಲ್ಕದ ವಿವರಗಳನ್ನು ವೆಬ್ ಸೈಟ್ ನಲ್ಲಿ ಪ್ರಕಟಿಸಿದ್ದು, ಅದನ್ನು ಸರಿಯಾಗಿ ನೋಡಿಯೇ ಆಪ್ಷನ್ಸ್ ದಾಖಲಿಸಲು ಮುಂದಾಗಿ.
ಈಗಾಗಲೇ ಇತರ ಕೋರ್ಸ್ ಗಳಿಗೆ ಪ್ರವೇಶ ಪಡೆದು ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವವರು ಪೋಷಕರ ಜತೆ ಚರ್ಚಿಸಿಯೇ ಆಪ್ಷನ್ಸ್ ದಾಖಲಿಸಬೇಕು.
ವಿವರಗಳಿಗೆ ವೆಬ್ ಸೈಟ್ ನೋಡಿ.

