ಚೆನ್ನೈ: ಪ್ರೀತಿಯನ್ನು ನಂಬಿದಳು.. ಮದುವೆಯ ಕನಸು ಕಂಡಳು.. ಆದರೆ ಕೊನೆಗೆ ಉಳಿದಿದ್ದು ಕಣ್ಣೀರು ಮಾತ್ರವೇ? ಜೀವನಪೂರ್ತಿ ಜೊತೆಯಾಗಿರುತ್ತೇನೆ ಎಂಬ ಮಾತುಗಳನ್ನು ನಂಬಿದ್ದ ಯುವತಿಯೊಬ್ಬಳು, ತಮಗೆ ವಂಚನೆಯಾಗಿದೆ ಎಂದು ಆರೋಪಿಸಿ ತೀವ್ರ ಮಾನಸಿಕ ನೋವಿನಿಂದ ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎನ್ನಲಾದ ಸುದ್ದಿ ಇದೀಗ ಸಂಚಲನ ಮೂಡಿಸಿದೆ.
ಇನ್ಸ್ಟಾಗ್ರಾಮ್ ರೀಲ್ಸ್ಗಳ ಮೂಲಕ ಗುರುತಿಸಿಕೊಂಡಿದ್ದ ವಹೀದಾ ಅಖ್ತರ್ ಅವರಿಗೆ ಬಿಗ್ಬಾಸ್ ಸೀಸನ್ 8ರ ವಿಜೇತ ಮುತ್ತುಕುಮರನ್ ಪ್ರೀತಿಯ ಹೆಸರಿನಲ್ಲಿ ವಂಚಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ವಹೀದಾ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ವರದಿಯಾಗಿದೆ.
ವಹೀದಾ ಅಖ್ತರ್ ಇನ್ಸ್ಟಾಗ್ರಾಮ್ ರೀಲ್ಸ್ಗಳ ಮೂಲಕ ಸಾಕಷ್ಟು ಜನಪ್ರಿಯತೆ ಗಳಿಸಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದ ಅವರು, ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದರು. ಈ ನಡುವೆ ಮುತ್ತುಕುಮರನ್ ಅವರೊಂದಿಗೆ ಪ್ರೇಮ ಸಂಬಂಧ ಬೆಳೆಸಿಕೊಂಡಿದ್ದರು ಎನ್ನಲಾಗಿದೆ.
ಮದುವೆಯಾಗುವುದಾಗಿ ನಂಬಿಸಿ ವಂಚಿಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ವಹೀದಾ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಆದರೆ, ಈ ಘಟನೆಗೆ ಸಂಬಂಧಿಸಿದ ಸಂಪೂರ್ಣ ವಿವರಗಳು ಇನ್ನಷ್ಟೇ ಬಹಿರಂಗವಾಗಬೇಕಿದ್ದು, ಆರೋಪಗಳ ಕುರಿತು ಮುತ್ತುಕುಮರನ್ ಅವರ ಪ್ರತಿಕ್ರಿಯೆ ಕೂಡ ಇನ್ನೂ ಲಭ್ಯವಾಗಬೇಕಿದೆ.
ವಿವಾದದ ಬಗ್ಗೆ ಗೀತರಚಯಿತ್ರಿ ತಾಮರೈ ಪ್ರತಿಕ್ರಿಯೆ
ಈ ವಿವಾದದ ಕುರಿತು ಖ್ಯಾತ ಚಿತ್ರಗೀತರಚಯಿತ್ರಿ ತಾಮರೈ ಕೂಡ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದಾರೆ. ಮುತ್ತುಕುಮರನ್ ಅವರನ್ನು ಉದ್ದೇಶಿಸಿ ವ್ಯಂಗ್ಯವಾಗಿ ಮಾತನಾಡಿರುವ ಅವರು, ಯುವತಿಯೊಬ್ಬರು ಅವರ ವಿಚಾರವನ್ನು ಬಹಿರಂಗಪಡಿಸುತ್ತಾರೆ ಎಂದು ಅವರು ಊಹಿಸಿರಲಿಕ್ಕಿಲ್ಲ ಎಂಬರ್ಥದಲ್ಲಿ ಟೀಕೆ ಮಾಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಅಲ್ಲದೆ, ಈ ವಿಚಾರದ ಕುರಿತು ಮುತ್ತುಕುಮರನ್ ಸ್ಪಷ್ಟನೆ ನೀಡಬೇಕು ಎಂದೂ ಒತ್ತಾಯಿಸಿರುವುದಾಗಿ ಮಾಹಿತಿ ಲಭ್ಯವಾಗಿದೆ.
ಈ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಕೆಲವರು ವಹೀದಾ ಅವರಿಗೆ ಬೆಂಬಲ ವ್ಯಕ್ತಪಡಿಸುತ್ತಿದ್ದರೆ, ಇನ್ನು ಕೆಲವರು ಜನಪ್ರಿಯತೆ ಅಥವಾ ಹಣದ ಉದ್ದೇಶದಿಂದ ಹೀಗೆ ಮಾಡಿರಬಹುದೇ ಎಂಬ ಅನುಮಾನಗಳನ್ನು ವ್ಯಕ್ತಪಡಿಸುತ್ತಿದ್ದಾರೆ.
ಆದರೆ, ಈ ಘಟನೆಗೆ ಸಂಬಂಧಿಸಿದಂತೆ ಇದುವರೆಗೆ ಪೊಲೀಸರಿಗೆ ಯಾವುದೇ ಅಧಿಕೃತ ದೂರು ಸಲ್ಲಿಕೆಯಾಗಿಲ್ಲ ಎಂದು ವರದಿ ತಿಳಿಸಿದೆ. ವಹೀದಾ ಪ್ರಸ್ತುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.
ಆರೋಪಗಳಿಗೆ ಮುತ್ತುಕುಮರನ್ ಹೇಳಿದ್ದೇನು?
ತಮ್ಮ ವಿರುದ್ಧ ಕೇಳಿಬಂದಿರುವ ಆರೋಪಗಳಿಗೆ ಮುತ್ತುಕುಮರನ್ ಪ್ರತಿಕ್ರಿಯಿಸಿದ್ದಾರೆ. ತಾವು ಮತ್ತು ವಹೀದಾ ಕೇವಲ ಉತ್ತಮ ಸ್ನೇಹಿತರು ಮಾತ್ರ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ವಹೀದಾ ಈ ರೀತಿ ಏಕೆ ವರ್ತಿಸುತ್ತಿದ್ದಾರೆ ಎಂಬುದು ತಮಗೆ ಅರ್ಥವಾಗುತ್ತಿಲ್ಲ ಎಂದೂ ಹೇಳಿದ್ದಾರೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ; ಖಾಸಗಿ ವಿಡಿಯೊ ಹಂಚಿಕೊಂಡ ಯುವತಿ
ವಹೀದಾ ವಿಡಿಯೊ ಬಿಡುಗಡೆ ಮಾಡಿದ ತಕ್ಷಣ ಅವರ ಸ್ನೇಹಿತರು ಎಚ್ಚೆತ್ತುಕೊಂಡು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ವರದಿಯಾಗಿದೆ. ಬಳಿಕ ಅವರು ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ, “ದುರದೃಷ್ಟವಶಾತ್, ಆಸ್ಪತ್ರೆಯಲ್ಲಿ ಇನ್ನೂ ಬದುಕಿದ್ದೇನೆ” ಎಂಬರ್ಥದ ಸಂದೇಶವನ್ನು ಹಂಚಿಕೊಂಡಿದ್ದಾರೆ ಎನ್ನಲಾಗಿದೆ.
ಇದಾದ ಬಳಿಕ ಮುತ್ತುಕುಮರನ್ ಅವರೊಂದಿಗೆ ಆತ್ಮೀಯವಾಗಿರುವ ಖಾಸಗಿ ವಿಡಿಯೊವೊಂದನ್ನೂ ವಹೀದಾ ಹಂಚಿಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.

