ವಿಜಯಪುರ: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ-ಎಸ್ಐಆರ್ ವಿಚಾರವಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸೇರಿದಂತೆ ಮೂವರ ವಿರುದ್ಧ ವಿಜಯಪುರದಲ್ಲಿ ಎಫ್ಐಆರ್ ದಾಖಲಾಗಿದೆ. ಬದುಕಿರುವವರ ಹೆಸರನ್ನು ಮೃತಪಟ್ಟಿದ್ದಾರೆ ಎಂದು ಸರ್ಟಿಫಿಕೇಟ್ ಪ್ರದರ್ಶಿಸಿದ ಪ್ರಕರಣ ಸಂಬಂಧ ಎಫ್ ಐ ಆರ್ ದಾಖಲಾಗಿದೆ.
ಅಬ್ದುಲ್ ರಜಾಕ್ ಬಾಗವಾನ್ ಎಂಬಾತ ನೀಡಿದ ದೂರುನ ಹಿನ್ನೆಲೆಯಲ್ಲಿ ಯತ್ನಾಳ್ ಹಾಗೂ ಇತರರ ವಿರುದ್ಧ ವಿಜಯಪುರ ಠಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾನು ಜೀವಂತವಾಗಿದ್ದರೂ ಶಾಸಕ ಯತ್ನಾಳ್ ಮೃತಪಟ್ಟಿರುವುದಾಗಿ ಹೇಳಿ ಕಾಗಪತ್ರ ಪ್ರದರ್ಶಿಸಿದ್ದಾರೆ. ಈ ನಿಟ್ಟಿನಲ್ಲಿ ಶಾಸಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಅಬ್ದುಲ್ ರಜಾಕ್ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಎಫ್ಐಆರ್ ದಾಖಲಾಗಿದೆ.
ವಿಜಯಪುರ ಕ್ಷೇತ್ರದ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಡಲು ಶಾಸಕ ಯತ್ನಾಳ್ ಅವರು ಒಟ್ಟು 1,054 ಜನರ ಪಟ್ಟಿಯನ್ನು ನೀಡಿದ್ದರು. ಅದರಲ್ಲಿ 8 ಮುಸ್ಲಿಂ ಮತದಾರರು ಮೃತಪಟ್ಟಿದ್ದಾರೆ ಎಂದು ಸುಳ್ಳು ಮರಣ ಪ್ರಮಾಣಪತ್ರಗಳನ್ನು ಲಗತ್ತಿಸಿ, ತಮ್ಮ ಅಧಿಕೃತ ಶಾಸಕರ ಲೆಟರ್‌ಹೆಡ್‌ನಲ್ಲಿ ವಿಜಯಪುರ ಮಹಾನಗರ ಪಾಲಿಕೆ ಆಯುಕ್ತರಿಗೆ ಅರ್ಜಿ ಸಲ್ಲಿಸಿದ್ದರು ಎಂಬ ಆರೋಪ ಕೇಳಿಬಂದಿದೆ.
ಪಟ್ಟಿಯಲ್ಲಿದ್ದ ಮತದಾರರನ್ನು ಬೂತ್ ಮಟ್ಟದ ಅಧಿಕಾರಿಗಳು ಮತ್ತು ಸಂಘಟನೆಗಳು ಮನೆ ಮನೆಗೆ ಹೋಗಿ ಪರಿಶೀಲಿಸಿದಾಗ, ಮೃತಪಟ್ಟಿದ್ದಾರೆ ಎನ್ನಲಾದ ಮತದಾರರು ಜೀವಂತವಾಗಿರುವುದು ಬೆಳಕಿಗೆ ಬಂದಿದೆ. ಸಂತ್ರಸ್ತ ಮಹಿಳೆಯರು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು.
ನಗರದ ಬಾಗವಾನ್ ಕಾಲೋನಿಯ ನಿವಾಸಿ ಅಬ್ದುಲ್ ರಝಾಕ್ ಮೌಲಾಸಾಬ್ ಅವರು ನೀಡಿದ ದೂರಿನ ಮೇರೆಗೆ ಪೊಲೀಸರು ಈ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
ಈ ಆರೋಪಗಳನ್ನು ನಿರಾಕರಿಸಿರುವ ಶಾಸಕ ಯತ್ನಾಳ್, ಜನರು ಜೀವಂತವಾಗಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಸಾಬೀತುಪಡಿಸುವುದು ನನ್ನ ಜವಾಬ್ದಾರಿಯಲ್ಲ, ಅದು ಚುನಾವಣಾ ಆಯೋಗದ ಕೆಲಸ ಎಂದಿದ್ದಾರೆ. ಒಂದೇ ಹೆಸರಿನ ಮತದಾರರು ಬೇರೆ ಬೇರೆ ಕಡೆ ನೋಂದಣಿಯಾಗಿರುವ ಅಕ್ರಮಗಳನ್ನು ಪತ್ತೆಹಚ್ಚಲೆಂದೇ ಎಸ್ಐಆರ್ ಪ್ರಕ್ರಿಯೆ ನಡೆಯುತ್ತಿದ್ದು, ಯಾವುದೇ ತನಿಖೆಗೂ ಸಿದ್ಧ ಎಂದು ಹೇಳಿದ್ದಾರೆ.
ಸಿಇಸಿ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹ: ಕಾಕ್ರೋಚ್ ಜನತಾ ಪಾರ್ಟಿಯಿಂದ ಬೆಂಗಳೂರಿನಲ್ಲಿ ಪ್ರತಿಭಟನೆ
ಎಸ್ಐಆರ್ ಪ್ರಕ್ರಿಯೆಯಲ್ಲಿ ಅಕ್ರಮ ಖಂಡಿಸಿ ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಇಂದು ಬೆಂಗಳುರಿನಲ್ಲಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಪ್ರತಿಭಟನೆ ಹಮ್ಮಿಕೊಂಡಿದೆ.
ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ನಡೆಯಲಿರುವ ಬೃಹತ್ ‘ಜನತಾ ನ್ಯಾಯಾಲಯ’ ಪ್ರತಿಭಟನೆಯಲ್ಲಿ ಖ್ಯಾತ ಯೂಟ್ಯೂಬರ್ ಧ್ರುವ್ ರಾಠಿ ಭಾಗವಹಿಸಲಿದ್ದಾರೆ. ಸಾಹಿತಿ ದೇವನೂರ ಮಹಾದೇವ, ಸಿಜೆಪಿಯ ಅಭಿಜಿತ್ ದೀಪ್ಕೆ, ಸೌರವ್ ದಾಸ್, ಅಶುತೋಷ್ ರಾಂಕಾ ಸೇರಿದಂತೆ ಕಲಾವಿದರು, ಚಿಂತಕರು ಸಹ ಪಾಲ್ಗೊಳ್ಳಲಿದ್ದಾರೆ.
ಪ್ರತಿಭಟನೆಯಲ್ಲಿ ಸುಪ್ರೀಂ ಕೋರ್ಟ್‌ನ ಮೂವರು ನಿವೃತ್ತ ನ್ಯಾಯಮೂರ್ತಿಗಳು, ಆರ್ಥಿಕ ತಜ್ಞ ಪರಕಾಲ ಪ್ರಭಾಕರ್ ಸೇರಿ ಹಲವು ಚಿಂತಕರು, ಕಲಾವಿದರು, ಸಾಹಿತಿಗಳು ಭಾಗವಹಿಸಲಿದ್ದಾರೆ.

