ಬೆಂಗಳೂರು: ಸರ್ಕಾರಿ ನೌಕರರ ಹಾಜರಾತಿಗಾಗಿ ಜಾರಿಗೊಳಿಸಿರುವ ‘ಕರ್ತವ್ಯ’ ಆ್ಯಪ್ ಇದೀಗ ಪೊಲೀಸ್ ಸಿಬ್ಬಂದಿಗೆ ಸಂಕಷ್ಟ ತಂದೊಡ್ಡಿದೆ. ಬೆಳಗ್ಗೆ 10 ಗಂಟೆಯೊಳಗೆ ಕಡ್ಡಾಯವಾಗಿ ಆ್ಯಪ್ನಲ್ಲಿ ಹಾಜರಾತಿ ದಾಖಲಿಸಬೇಕೆಂಬ ನಿಯಮವು ಗಸ್ತು, ಬಂದೋಬಸ್ತ್, ತನಿಖೆ ಹಾಗೂ ತುರ್ತು ಕರ್ತವ್ಯದಲ್ಲಿರುವ ಪೊಲೀಸರಿಗೆ ಸಮಸ್ಯೆಯಾಗುತ್ತಿದೆ ಎಂಬ ಅಸಮಾಧಾನ ವ್ಯಕ್ತವಾಗಿದೆ. ಪೊಲೀಸ್ ಇಲಾಖೆಯ ಕಾರ್ಯವೈಖರಿಗೆ ಅನುಗುಣವಾಗಿ ಹಾಜರಾತಿ ನಿಯಮದಲ್ಲಿ ವಿನಾಯಿತಿ ಅಥವಾ ಬದಲಾವಣೆ ಮಾಡುವಂತೆ ಸಿಬ್ಬಂದಿಯಿಂದ ಒತ್ತಾಯ ಕೇಳಿಬಂದಿದೆ.
ಹೌದು. ಸರ್ಕಾರಿ ನೌಕರರ ಹಾಜರಾತಿಯನ್ನು ಡಿಜಿಟಲೀಕರಣಗೊಳಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಜಾರಿಗೆ ತಂದಿರುವ ‘ಕರ್ತವ್ಯ ಆ್ಯಪ್’ ಇದೀಗ ಪೊಲೀಸ್ ಸಿಬ್ಬಂದಿಗೆ ತಲೆನೋವಾಗಿ ಪರಿಣಮಿಸಿದೆ. ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೂ ಆ್ಯಪ್ನಲ್ಲಿ ಲಾಗಿನ್ ಮತ್ತು ಲಾಗ್ಔಟ್ ಕಡ್ಡಾಯಗೊಳಿಸಿರುವುದರಿಂದ ದೈನಂದಿನ ಕರ್ತವ್ಯ ನಿರ್ವಹಣೆಗೆ ತೊಂದರೆಯಾಗುತ್ತಿದೆ ಎಂಬ ಅಸಮಾಧಾನ ವ್ಯಕ್ತವಾಗಿದೆ.
ಪೊಲೀಸರ ಕರ್ತವ್ಯವು ಇತರ ಸರ್ಕಾರಿ ಇಲಾಖೆಗಳ ಸಿಬ್ಬಂದಿಯಂತೆ ನಿಗದಿತ ಸಮಯಕ್ಕೆ ಸೀಮಿತವಾಗಿರುವುದಿಲ್ಲ. ಭದ್ರತಾ ಕಾರ್ಯ, ಬಂದೋಬಸ್ತ್, ತನಿಖೆ, ತುರ್ತು ಕರ್ತವ್ಯ ಸೇರಿದಂತೆ ವಿವಿಧ ಕಾರಣಗಳಿಂದ ಪೊಲೀಸರು ತಮ್ಮ ಠಾಣೆ ಅಥವಾ ಜಿಲ್ಲೆಯಿಂದ ಹೊರಗಡೆ ತೆರಳಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ನಿಗದಿತ ಸಮಯಕ್ಕೆ ಆ್ಯಪ್ನಲ್ಲಿ ಲಾಗಿನ್-ಲಾಗ್ಔಟ್ ಮಾಡುವುದು ಪ್ರಾಯೋಗಿಕವಾಗಿ ಕಷ್ಟ ಎನ್ನಲಾಗುತ್ತಿದೆ.
ವಿಶೇಷವಾಗಿ ಬೆಳಗಿನ ರೋಲ್ ಕಾಲ್, ಬಂದೋಬಸ್ತ್ ಹಾಗೂ ಇತರ ತುರ್ತು ಕರ್ತವ್ಯಗಳ ನಡುವೆ ಆ್ಯಪ್ನಲ್ಲಿ ಹಾಜರಾತಿ ದಾಖಲಿಸುವುದು ಸಮಸ್ಯೆಯಾಗುತ್ತಿದೆ. ಕೆಲವೊಮ್ಮೆ ಶಿಫ್ಟ್ ಮುಗಿದ ಬಳಿಕವೂ ಪೊಲೀಸ್ ಸಿಬ್ಬಂದಿ ಕರ್ತವ್ಯದಲ್ಲೇ ಮುಂದುವರಿಯಬೇಕಾಗುತ್ತದೆ. ಆದರೆ ಆ್ಯಪ್ನಲ್ಲಿ ಲಾಗ್ಔಟ್ ಮಾಡಿದ ನಂತರವೂ ಕೆಲಸ ಮುಂದುವರಿಸುವ ಪರಿಸ್ಥಿತಿ ಎದುರಾಗುತ್ತಿದೆ.
ಪೊಲೀಸ್ ಇಲಾಖೆಯ ಕಾರ್ಯವೈಖರಿಯನ್ನು ಸಂಪೂರ್ಣವಾಗಿ ಪರಿಗಣಿಸದೆ ಸಾಮಾನ್ಯ ಸರ್ಕಾರಿ ನೌಕರರ ಹಾಜರಾತಿ ನಿಯಮವನ್ನು ಪೊಲೀಸರಿಗೂ ಅನ್ವಯಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ‘ಕರ್ತವ್ಯ ಆ್ಯಪ್’ ನಿಯಮವನ್ನು ಪೊಲೀಸ್ ಇಲಾಖೆಯ ವಿಶೇಷ ಕರ್ತವ್ಯಗಳಿಗೆ ಅನುಗುಣವಾಗಿ ಪರಿಷ್ಕರಿಸಬೇಕು ಎಂದು ಸಿಬ್ಬಂದಿ ಒತ್ತಾಯಿಸುತ್ತಿದ್ದಾರೆ. ಈ ಬಗ್ಗೆ ಹಿರಿಯ ಅಧಿಕಾರಿಗಳು ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂಬ ಆಗ್ರಹವೂ ಕೇಳಿಬಂದಿದೆ.
ಸರ್ಕಾರಿ ನೌಕರರು ಕಚೇರಿಗೆ ಸಮಯಕ್ಕೆ ಹಾಜರಾಗುವುದನ್ನು ಖಚಿತಪಡಿಸಿಕೊಳ್ಳಲು ‘ಕರ್ತವ್ಯ’ ಆ್ಯಪ್ನಲ್ಲಿ ಹಾಜರಾತಿ ದಾಖಲಿಸುವ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಜಿಯೋ-ಲೊಕೇಶನ್ ಆಧಾರಿತ ಹಾಜರಾತಿ ಮೂಲಕ ಸಿಬ್ಬಂದಿ ನಿಗದಿತ ಸ್ಥಳದಲ್ಲೇ ಹಾಜರಾತಿ ದಾಖಲಿಸುವ ವ್ಯವಸ್ಥೆಯೂ ಇದರಲ್ಲಿ ಇದೆ.
*ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್: ಅರ್ಜಿ ಆಹ್ವಾನ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಾಧ್ಯಮ ಪಟ್ಟಿಯಲ್ಲಿರುವ ದಿನಪತ್ರಿಕೆಗಳು/ ಮಾಧ್ಯಮ ಸಂಸ್ಥೆಗಳಲ್ಲಿ ತಾಲ್ಲೂಕು ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತರಿಗೆ ತಿದ್ದುಪಡಿ ಮಾಡಲಾದ ಹೊಸ ಮಾರ್ಗಸೂಚಿಯನ್ವಯ ಉಚಿತ ಬಸ್ ಪಾಸ್ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಪತ್ರಕರ್ತರು ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗಳಲ್ಲಿ “ಪೂರ್ಣಾವಧಿ/ಅರೆಕಾಲಿಕ ವರದಿಗಾರರಾಗಿ ನೇಮಕವಾಗಿದ್ದಲ್ಲಿ ಆಯಾ ಮಾಧ್ಯಮ ಸಂಸ್ಥೆಯ ಸಂಪಾದಕರ / ಸ್ಥಾನಿಕ ಸಂಪಾದಕರ / ಮುಖ್ಯಸ್ಥರ ಶಿಫಾರಸ್ಸು ಪತ್ರ ಮತ್ತು ಸೇವಾ ಪ್ರಮಾಣ ಪತ್ರವನ್ನು ಲಗತ್ತಿಸಿ “ಸೇವಾ ಸಿಂಧು” ಫೋರ್ಟಲ್ https://sevasindhu.karnataka.gov.in ಮೂಲಕ ಸಮೀಪದ ಗ್ರಾಮ-1 ಕೇಂದ್ರದಲ್ಲಿ ಆನ್ಲೈನ್ನಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು.
ಈ ಹಿಂದೆ ಇದ್ದ ಮಾರ್ಗಸೂಚಿಯಲ್ಲಿ 11 ತಿಂಗಳ ವೇತನ ಪತ್ರ ಸಲ್ಲಿಸಬೇಕು ಎಂಬ ಷರತ್ತನ್ನು ಸಡಿಲಿಸಿ. ಆಯಾ ಮಾಧ್ಯಮ ಸಂಸ್ಥೆಯ ಸಂಪಾದಕರ, ಸ್ಥಾನಿಕ ಸಂಪಾದಕರ/ಮುಖ್ಯಸ್ಥರ ಶಿಫಾರಸ್ಸು ಪತ್ರವನ್ನು ಪರಿಗಣಿಸಲು ಅವಕಾಶ ಕಲ್ಪಿಸಲಾಗಿದೆ.
ಆನ್ಲೈನ್ನಲ್ಲಿ ಸಲ್ಲಿಸಲಾದ ಅರ್ಜಿ ಮತ್ತು ಲಗತ್ತಿಸಲಾಗಿರುವ ದಾಖಲೆಗಳ ಒಂದು ಪ್ರತಿಯನ್ನು ಆಯಾ ಜಿಲ್ಲೆಯ ವಾರ್ತಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು. ಸ್ವೀಕೃತ ಅರ್ಜಿಗಳನ್ನು ಆಯ್ಕೆ ಸಮಿತಿಯ ಸಭೆಯಲ್ಲಿ ಪರಿಶೀಲಿಸಿ ಬಸ್ ಪಾಸ್ ಮಂಜೂರು ಮಾಡಲಾಗುತ್ತದೆ. ತಾಲ್ಲೂಕು ಮಟ್ಟದ ಪತ್ರಕರ್ತರಿಗೆ ಸುದ್ದಿ ಸಂಗ್ರಹಿಸಲು ಅನುಕೂಲ ಕಲ್ಪಿಸಲು ಸರ್ಕಾರವು ವಾರ್ತಾ ಇಲಾಖೆಯ ಮೂಲಕ ಉಚಿತ ಬಸ್ ಪಾಸ್ಗಳನ್ನು ನೀಡುತ್ತಿದೆ.
ರಾಜ್ಯದ ಎಲ್ಲಾ ತಾಲ್ಲೂಕುಗಳ ಅರ್ಹ ಪತ್ರಕರ್ತರು ಕೂಡಲೇ “ಸೇವಾಸಿಂಧು” ಫೋರ್ಟಲ್ ಮೂಲಕ ಗ್ರಾಮ-1 ಕೇಂದ್ರದ ಮೂಲಕ 2026 ರ ಅಕ್ಟೋಬರ್ 31 ರೊಳಗೆ ಅರ್ಜಿಗಳನ್ನು ಸಲ್ಲಿಸಬೇಕು ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದ ಎಂ.ಎನ್.ಅನುಚೇತ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

