ಕೈಂಚಿ ಧಾಮ್ ಅಥವಾ ನೈನಿತಾಲ್‌ಗೆ ಪ್ರವಾಸ ಹೋಗಲು ಯೋಜಿಸುತ್ತಿದ್ದೀರಾ? ವಸತಿ ಅಥವಾ ಇತರೆ ಬುಕಿಂಗ್‌ಗಳನ್ನು ಮುಂಚಿತವಾಗಿ ಮಾಡಿಕೊಳ್ಳದೇ ಹೋದರೆ ಇನ್ನು ಮುಂದೆ ಸಮಸ್ಯೆಯಾಗಬಹುದು. ಉತ್ತರಾಖಂಡದಲ್ಲಿ ಪ್ರವಾಸಿಗರು ಮತ್ತು ಭಕ್ತರ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿರುವ ಹಿನ್ನೆಲೆಯಲ್ಲಿ, ಅಧಿಕಾರಿಗಳು ಪ್ರವೇಶ ಮತ್ತು ಜನಸಂದಣಿ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರಲು ಚಿಂತನೆ ನಡೆಸಿದ್ದಾರೆ.
ಹೌದು. ಉತ್ತರಾಖಂಡದ ಪ್ರಸಿದ್ಧ ಕೈಂಚಿ ಧಾಮ್‌ಗೆ ಪ್ರವಾಸಿಗರು ಮತ್ತು ಭಕ್ತರ ದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆಡಳಿತ ಕಟ್ಟುನಿಟ್ಟಿನ ನಿಯಮ ಜಾರಿಗೆ ತರಲು ಮುಂದಾಗಿದೆ. ಒಂದೇ ದಿನದಲ್ಲಿ 50 ಸಾವಿರಕ್ಕೂ ಹೆಚ್ಚು ಮಂದಿ ಆಗಮಿಸಿದ್ದರಿಂದ ಸಂಚಾರ, ಪಾರ್ಕಿಂಗ್ ಹಾಗೂ ಮೂಲಸೌಕರ್ಯಗಳ ಮೇಲೆ ಒತ್ತಡ ಹೆಚ್ಚಾಗಿದ್ದು, ಇನ್ಮುಂದೆ ಕೈಂಚಿ ಧಾಮ್‌ಗೆ ಭೇಟಿ ನೀಡಲು ಮುಂಗಡ ಬುಕಿಂಗ್ ಹಾಗೂ ನೋಂದಣಿ ಕಡ್ಡಾಯಗೊಳಿಸುವ ಸಾಧ್ಯತೆ ಇದೆ. ಅಲ್ಲದೆ, ದಿನಕ್ಕೆ 20ರಿಂದ 25 ಸಾವಿರ ಪ್ರವಾಸಿಗರಿಗೆ ಮಾತ್ರ ಪ್ರವೇಶ ನೀಡುವ ಕುರಿತು ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ.
ಕಳೆದ ವಾರಾಂತ್ಯದಲ್ಲಿ ಕೈಂಚಿ ಧಾಮ್‌ಗೆ ಒಂದೇ ದಿನದಲ್ಲಿ 50,000ಕ್ಕೂ ಹೆಚ್ಚು ಮಂದಿ ಆಗಮಿಸಿದ್ದರಿಂದ ಸ್ಥಳೀಯ ರಸ್ತೆಗಳು, ಪಾರ್ಕಿಂಗ್ ವ್ಯವಸ್ಥೆ ಹಾಗೂ ಇತರ ಮೂಲಸೌಕರ್ಯಗಳ ಮೇಲೆ ತೀವ್ರ ಒತ್ತಡ ಉಂಟಾಗಿತ್ತು.
ಈ ಹಿನ್ನೆಲೆಯಲ್ಲಿ ಕೈನ್ಚಿ ಧಾಮ್‌ಗೆ ಭೇಟಿ ನೀಡುವವರಿಗೆ ಕಡ್ಡಾಯ ನೋಂದಣಿ ಜಾರಿಗೆ ತರುವ ಕುರಿತು ಆಡಳಿತ ಚಿಂತನೆ ನಡೆಸುತ್ತಿದೆ. ಅಲ್ಲದೆ, ಪ್ರತಿದಿನ ಭೇಟಿ ನೀಡುವವರ ಸಂಖ್ಯೆಯನ್ನು ಸುಮಾರು 20,000ರಿಂದ 25,000ಕ್ಕೆ ಸೀಮಿತಗೊಳಿಸುವ ಪ್ರಸ್ತಾವನೆಯೂ ಇದೆ.
ಆದರೆ, ಈ ಯೋಜನೆಗೆ ಇನ್ನೂ ಅಂತಿಮ ಅನುಮೋದನೆ ದೊರೆತಿಲ್ಲ. ಕುಮಾವೂನ್ ವಿಭಾಗದ ಆಯುಕ್ತರು ನೈನಿತಾಲ್ ಜಿಲ್ಲಾಧಿಕಾರಿ ಹಾಗೂ ಹಿರಿಯ ಪೊಲೀಸ್ ಅಧೀಕ್ಷಕರಿಗೆ ಈ ಕುರಿತು ಸಮಗ್ರ ಪ್ರಸ್ತಾವನೆ ಸಿದ್ಧಪಡಿಸಿ ರಾಜ್ಯ ಸರ್ಕಾರಕ್ಕೆ ಸಲ್ಲಿಸುವಂತೆ ಸೂಚಿಸಿದ್ದಾರೆ.
ಬುಕಿಂಗ್ ಇಲ್ಲದಿದ್ದರೆ ಪ್ರವೇಶಕ್ಕೆ ನಿರ್ಬಂಧ?
ಪ್ರಸ್ತಾವಿತ ನಿಯಮಗಳು ಜಾರಿಗೆ ಬಂದರೆ, ಕೊನೆಯ ಕ್ಷಣದಲ್ಲಿ ಪ್ರವಾಸ ಯೋಜಿಸುವವರಿಗೆ ಇದು ದೊಡ್ಡ ಬದಲಾವಣೆಯಾಗಬಹುದು.ಪೀಕ್ ಅವಧಿಯಲ್ಲಿ ನೈನಿತಾಲ್ ಮತ್ತು ಕೈನ್ಚಿ ಧಾಮ್‌ಗೆ ಮುಂಗಡ ಬುಕಿಂಗ್ ಹೊಂದಿರುವ ಪ್ರವಾಸಿಗರಿಗೆ ಮಾತ್ರ ಪ್ರವೇಶ ನೀಡುವ ಕುರಿತು ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ದೃಢೀಕೃತ ವಸತಿ ಅಥವಾ ಅಗತ್ಯ ಬುಕಿಂಗ್ ಇಲ್ಲದೆ ಆಗಮಿಸುವ ಪ್ರವಾಸಿಗರಿಗೆ ನಿರ್ಬಂಧ ವಿಧಿಸುವ ಸಾಧ್ಯತೆಯೂ ಇದೆ.
ವಾರಾಂತ್ಯದಲ್ಲಿ ಸಾಮರ್ಥ್ಯಕ್ಕಿಂತ ಹಲವು ಪಟ್ಟು ಹೆಚ್ಚಿನ ಜನರು ಆಗಮಿಸಿದ ಪರಿಸ್ಥಿತಿ ಮರುಕಳಿಸದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಈ ನಿಯಮಗಳನ್ನು ರೂಪಿಸಲಾಗುತ್ತಿದೆ.
ಕೈನ್ಚಿ ಧಾಮ್‌ನ ಪ್ರಸ್ತುತ ಜನಸಂದಣಿ ನಿರ್ವಹಣಾ ವ್ಯವಸ್ಥೆಯು ಸುಮಾರು 20,000ರಿಂದ 25,000 ಜನರನ್ನು ನಿಭಾಯಿಸುವ ಸಾಮರ್ಥ್ಯ ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಒಂದೇ ದಿನದಲ್ಲಿ 50,000ಕ್ಕೂ ಹೆಚ್ಚು ಮಂದಿ ಆಗಮಿಸಿರುವುದರಿಂದ, ಜನಸಂದಣಿ ಹೆಚ್ಚಾದ ನಂತರ ನಿಯಂತ್ರಿಸುವ ಬದಲು ಮೊದಲೇ ಪ್ರವೇಶ ನಿಯಂತ್ರಿಸುವತ್ತ ಆಡಳಿತ ಗಮನ ಹರಿಸಿದೆ.
ಸಂಚಾರ ವ್ಯವಸ್ಥೆಗೂ ವಿಶೇಷ ಗಮನ
ಕೈನ್ಚಿ ಧಾಮ್ ಕೇವಲ ಧಾರ್ಮಿಕ ಸ್ಥಳವಲ್ಲ. ಇದು ಅಲ್ಮೋರಾ, ಬಾಗೇಶ್ವರ್ ಮತ್ತು ಪಿಥೋರಾಗಢ್ ಕಡೆಗೆ ಸಂಪರ್ಕ ಕಲ್ಪಿಸುವ ಪ್ರಮುಖ ಮಾರ್ಗದಲ್ಲಿದೆ. ಹೀಗಾಗಿ ಪ್ರವಾಸಿಗರ ದಟ್ಟಣೆಯಿಂದ ಹೆದ್ದಾರಿ ಸಂಚಾರ ಸಂಪೂರ್ಣ ಸ್ಥಗಿತಗೊಳ್ಳದಂತೆ ನೋಡಿಕೊಳ್ಳಲು ಅಧಿಕಾರಿಗಳು ಮುಂದಾಗಿದ್ದಾರೆ.
ಕೈನ್ಚಿ ಧಾಮ್ ಸುತ್ತಮುತ್ತ ಪ್ರವಾಸಿಗರ ಸಂಚಾರವನ್ನು ನಿಯಂತ್ರಿಸಲು ಪ್ರತ್ಯೇಕ ಮಾರ್ಗಗಳನ್ನು ರೂಪಿಸಲಾಗುವುದು. ವಾರಾಂತ್ಯದಲ್ಲಿ ಹೆಚ್ಚಿನ ಜನಸಂದಣಿ ನಿರೀಕ್ಷೆಯಿರುವುದರಿಂದ ಶಟಲ್ ಸೇವೆಗಳನ್ನು ಆರಂಭಿಸುವ ಬಗ್ಗೆಯೂ ಯೋಜನೆ ರೂಪಿಸಲಾಗುತ್ತಿದೆ.
ಪ್ರತಿ ವಾರಾಂತ್ಯಕ್ಕೂ ಮುನ್ನ ವೃತ್ತಾಧಿಕಾರಿ (CO) ಮತ್ತು ಉಪವಿಭಾಗಾಧಿಕಾರಿ (SDM) ಸಭೆ ನಡೆಸಿ ನಿರೀಕ್ಷಿತ ಜನಸಂದಣಿ ಹಾಗೂ ಅಗತ್ಯ ವ್ಯವಸ್ಥೆಗಳ ಕುರಿತು ನಿರ್ಧಾರ ಕೈಗೊಳ್ಳಲಿದ್ದಾರೆ. ಅಲ್ಮೋರಾ, ಬಾಗೇಶ್ವರ್ ಮತ್ತು ಪಿಥೋರಾಗಢ್ ಕಡೆಗೆ ಸಾಗುವ ವಾಹನಗಳ ಸಂಚಾರಕ್ಕೆ ಯಾವುದೇ ಅಡ್ಡಿಯಾಗದಂತೆ ನೋಡಿಕೊಳ್ಳಲಾಗುವುದು. ಕೈನ್ಚಿ ಧಾಮ್ ನಂತರದ ಹೆದ್ದಾರಿಯನ್ನು ಮುಕ್ತವಾಗಿಡಲು ಅಧಿಕಾರಿಗಳು ಸೂಚಿಸಿದ್ದಾರೆ.
ಶಿಪ್ರಾ ನದಿಯಲ್ಲಿ ಸ್ನಾನಕ್ಕೆ ನಿಷೇಧ
ಕೈನ್ಚಿ ಧಾಮ್ ಸಮೀಪದ ಶಿಪ್ರಾ ನದಿಯಲ್ಲಿ ಸ್ನಾನ ಮಾಡುವುದನ್ನು ನಿಷೇಧಿಸಲಾಗಿದೆ. ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅರಣ್ಯ ಇಲಾಖೆಗೆ ಸೂಚಿಸಲಾಗಿದೆ. ಪ್ರವಾಸಿಗರು ಮತ್ತು ಭಕ್ತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರದೇಶದ ಮೇಲೆ ಉಂಟಾಗುತ್ತಿರುವ ಒತ್ತಡವನ್ನು ನಿಯಂತ್ರಿಸುವ ವ್ಯಾಪಕ ಕ್ರಮಗಳ ಭಾಗವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಹೋಟೆಲ್, ಅಂಗಡಿಗಳ ಮೇಲೂ ನಿಗಾ
ಪ್ರವಾಸಿಗರಿಂದ ಹೆಚ್ಚುವರಿ ಹಣ ವಸೂಲಿ ಮಾಡುವ ಹೋಟೆಲ್‌ಗಳು ಮತ್ತು ಅಂಗಡಿಗಳ ಮೇಲೂ ಕಟ್ಟುನಿಟ್ಟಿನ ನಿಗಾ ಇರಿಸಲಾಗುವುದು.ನಿಗದಿತ ದರಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡದಂತೆ ಆಡಳಿತ ಎಚ್ಚರಿಕೆ ನೀಡಿದೆ. ಅಧಿಕಾರಿಗಳು ತಪಾಸಣೆ ಹಾಗೂ ದಾಳಿ ನಡೆಸಲಿದ್ದು, ವ್ಯಾಪಾರಸ್ಥರು ತಮ್ಮ ದರಪಟ್ಟಿಯನ್ನು ಸ್ಪಷ್ಟವಾಗಿ ಪ್ರದರ್ಶಿಸುವುದು ಕಡ್ಡಾಯವಾಗಲಿದೆ.
ಗಂಭೀರ ನಿಯಮ ಉಲ್ಲಂಘನೆ ಕಂಡುಬಂದರೆ ಸಂಬಂಧಪಟ್ಟ ಸಂಸ್ಥೆಗಳ ಲೈಸೆನ್ಸ್ ರದ್ದುಗೊಳಿಸುವ ಎಚ್ಚರಿಕೆಯನ್ನೂ ಆಡಳಿತ ನೀಡಿದೆ.ಒಟ್ಟಿನಲ್ಲಿ, ಕೈನ್ಚಿ ಧಾಮ್‌ನಲ್ಲಿ ಹೆಚ್ಚುತ್ತಿರುವ ಪ್ರವಾಸಿಗರು ಮತ್ತು ಭಕ್ತರ ದಟ್ಟಣೆಯನ್ನು ನಿಯಂತ್ರಿಸುವುದು ಈಗ ದೇವಸ್ಥಾನದ ಸುತ್ತ ಜನಸಂದಣಿ ನಿರ್ವಹಣೆಗೆ ಮಾತ್ರ ಸೀಮಿತವಾಗಿಲ್ಲ. ರಸ್ತೆ ಸಂಚಾರ ಸುಗಮಗೊಳಿಸುವುದು, ಪ್ರವಾಸಿಗರಿಂದ ಹೆಚ್ಚುವರಿ ಹಣ ವಸೂಲಿ ತಡೆಯುವುದು ಹಾಗೂ ಪರಿಸರ ಮತ್ತು ಮೂಲಸೌಕರ್ಯಗಳ ಮೇಲಿನ ಒತ್ತಡ ಕಡಿಮೆ ಮಾಡುವುದಕ್ಕೂ ಆಡಳಿತ ಹೆಚ್ಚಿನ ಆದ್ಯತೆ ನೀಡುತ್ತಿದೆ

