ಬೆಂಗಳೂರು- ಕಳೆದ 2008 ರಿಂದಲೂ ನೈಸ್ ರಸ್ತೆಯ ಟೋಲ್ ಸಂಗ್ರಹ ಕಾನೂನುಬಾಹಿರವಾಗಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.
ಜೆಪಿ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಎಂಐಸಿಪಿ ಯೋಜನೆ ರಾಜ್ಯ ಸರ್ಕಾರ ಹಾಗೂ ನೈಸ್ ಸಂಸ್ಥೆ ನಡುವೆ ಆಗಿರುವ ಒಪ್ಪಂದಗಳ ದಾಖಲೆಗಳನ್ನು ಪ್ರದರ್ಶಿಸಿ ಅವರು ಈ ಆರೋಪ ಮಾಡಿದರು.
ಟೋಲ್ ಸಂಗ್ರಹದ ವಿವರಗಳು
2008-09ರಲ್ಲಿ 5 ಕೋಟಿ ರೂ. ಇದ್ದ ನೈಸ್ ರಸ್ತೆ ಟೋಲ್ ಸಂಗ್ರಹವು 2024-025ರ ವೇಳೆಗೆ 734 ಕೋಟಿ ರೂ.ಗೆ ಏರಿಕೆಯಾಗಿದೆ. ಇದುವರೆಗೆ ಒಟ್ಟಾರೆ 4758 ಕೋಟಿ ರೂ. ಟೋಲ್ ಸಂಗ್ರಹಿಸಲಾಗಿದೆ ಎಂದು ಅವರು ದೂರಿದರು.
ಬಿಎಂಐಸಿಪಿ ಮೂಲ ಒಪ್ಪಂದದಂತೆ ಯೋಜನೆಯನ್ನು ಪೂರ್ಣಗೊಳಿಸದೇ ಹಣ ಗಳಿಸುವ ದಂಧೆಯನ್ನಾಗಿ ಮಾಡಿಕೊಳ್ಳಲಾಗಿದೆ. ಮೂಲ ಒಪ್ಪಂದವನ್ನು ಉಲ್ಲಂಘಿಸಲಾಗಿದೆ. ಕಳೆದ 20 ವರ್ಷಗಳಿಂದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂ ಜೆಡಿಎಸ್ ನಡೆಸುತ್ತಿರುವ ಈ ವಿಚಾರದ ಹೋರಾಟ ತಾರ್ಕಿಕ ಹಂತಕ್ಕೆ ಬರುವ ಲಕ್ಷಣಗಳಿವೆ ಎಂದು ಹೇಳಿದರು.
ಮೂಲ ಒಪ್ಪಂದದ ಉಲ್ಲಂಘನೆ
2000ನೇ ಫೆಬ್ರವರಿಯಲ್ಲಿ ಟೋಲ್ ಸಂಗ್ರಹಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ಲೋಕೋಪಯೋಗಿ ಇಲಾಖೆ ಹಾಗೂ ನೈಸ್ ಸಂಸ್ಥೆ ನಡುವೆ ಅಗ್ರಿಮೆಂಟ್ ಮಾಡಿಕೊಳ್ಳಲಾಗಿದೆ. ಅಗ್ರಿಮೆಂಟ್ನಲ್ಲಿ ಬಿಎಂಐಸಿಪಿಯ ಮೂಲ ಒಪ್ಪಂದದ ಪ್ರಕಾರ ರಸ್ತೆ ನಿರ್ಮಿಸಬೇಕು. ನಿಯಮಗಳನ್ನು ಮೀರುವಂತಿಲ್ಲ ಎಂಬ ಪ್ರಸ್ತಾಪವಿದೆ. ಪೆರಿಫೆರಲ್ ವರ್ತುಲ ರಸ್ತೆ ಹಾಗೂ ಅದಕ್ಕೆ ಸಂಬಂಧಿಸಿದ ಪೂರಕ ರಸ್ತೆಗಳಿಗೆ 2193 ಎಕರೆ ಜಮೀನಿನ ಅಗತ್ಯವನ್ನು ಪ್ರಸ್ತಾಪಿಸಲಾಗಿದೆ. ಈ ವಿಚಾರವನ್ನು ನೈಸ್ ಸಂಸ್ಥೆಯೇ ನ್ಯಾಯಾಲಯಕ್ಕೆ ನೀಡಿರುವ ಮಾಹಿತಿಯಲ್ಲಿ ಉಲ್ಲೇಖವಾಗಿದೆ. 2004 ರ ಫೆಬ್ರವರಿ 12 ರಂದು ಬಿಎಂಐಸಿಪಿ ಅಧ್ಯಕ್ಷರಾಗಿದ್ದ ಈಗಿನ ಮುಖ್ಯಮಂತ್ರಿ ಒಡಿಪಿ ಯೋಜನೆಯಲ್ಲಿ ಮಾರ್ಪಾಡು ಮಾಡಲು ಅವಕಾಶ ಮಾಡಿಕೊಟ್ಟಿದ್ದಾರೆ. ಈ ವಿಚಾರ ಸಂಪುಟ ಸಭೆಯಲ್ಲಿ ಚರ್ಚೆಯಾಗಿಲ್ಲ. ಕಂಪನಿಗೆ ಬೇಕಾದ ರೀತಿಯಲ್ಲಿ ಒಡಿಪಿ ಯೋಜನೆಯನ್ನು ತಿರುಚಲಾಗಿದೆ ಎಂದು ಹೈಕೋರ್ಟ್ ತೀರ್ಪಿನಲ್ಲಿ ಉಲ್ಲೇಖವಾಗಿದೆ. ಇದರ ಬಗ್ಗೆ ಮುಖ್ಯಮಂತ್ರಿಗಳು ಉತ್ತರಿಸಬೇಕು ಎಂದು ಆಗ್ರಹಿಸಿದರು.
ಈಗಾಗಲೇ ತಾವು ಮಾಡಿರುವ ಆರೋಪಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಉತ್ತರ ಕೊಟ್ಟಿಲ್ಲ ಹಾಗೂ ಅವರ ಸಂಪುಟದ ಸಚಿವರೂ ಉತ್ತರ ಕೊಟ್ಟಿಲ್ಲ ಎಂದರು.
2015 ರ ಸೆ.30 ರಂದು ನೈಸ್ ಕಂಪನಿ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯಲ್ಲಿ ಬಿಎಂಐಸಿಪಿ ಯೋಜನೆಯಲ್ಲಿ ಮಾರ್ಪಾಟು ಮಾಡಿರುವುದನ್ನು ಪ್ರಸ್ತಾಪಿಸಿದೆ. ಮೂಲ ಒಪ್ಪಂದದಲ್ಲಿ ಬದಲಾವಣೆ ಮಾಡಿರುವುದನ್ನು ಹೇಳಿದೆ. 2193 ಎಕರೆಯಿಂದ 2747 ಎಕರೆಗೆ ಹೆಚ್ಚಿಸಿಕೊಳ್ಳಲಾಗಿದೆ. ಯಾವ ಕಾರಣಕ್ಕಾಗಿ ಹೆಚ್ಚಳ ಮಾಡಲಾಯಿತು? ಎಂದು ಅವರು ಪ್ರಶ್ನಿಸಿದರು.
ಯೋಜನೆ ಹೆಸರಿನಲ್ಲಿ ಜನರಿಗೆ ಚಿತ್ರಹಿಂಸೆ ನೀಡಿರುವ ದಾಖಲೆಗಳು ಇವೆ. ಹೈಕೋರ್ಟ್ ಜುಲೈನಲ್ಲಿ ನೀಡಿದ ತೀರ್ಪು ರೈತರನ್ನು ಉಳಿಸಲು ಅವಕಾಶ ಮಾಡಿಕೊಟ್ಟಿದೆ. ಬಿಎಂಐಸಿಪಿ ಯೋಜನೆಯನ್ನು ನಿಲ್ಲಿಸಿ ಎಂದು ನಾವು ಹೇಳಿಲ್ಲ. ಆದರೆ ರಾಜ್ಯ ಸರ್ಕಾರದ ದೆಹಲಿಯ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಅವರು ಹಿಂದಿನ ಸರ್ಕಾರದಲ್ಲಿ ಸದನ ಸಮಿತಿಯ ಅಧ್ಯಕ್ಷರಾಗಿದ್ದ ಸಂದರ್ಭದಲ್ಲೇ ಹೇಳಿದ್ದಾರೆ. ನೈಸ್ ರಸ್ತೆಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಉಲ್ಲೇಖಿಸಿದ್ದಾರೆ. ಆದರೂ ಈತನಕ ರಾಜ್ಯ ಸರ್ಕಾರ ಆ ರೀತಿ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಎಚ್.ಡಿ.ಕುಮಾರಸ್ವಾಮಿಯವರು ಆರೋಪಿಸಿದರು.
ಗೋಷ್ಠಿಯಲ್ಲಿ ಮಾಜಿ ಶಾಸಕರಾದ ಸುರೇಶ್ಗೌಡ, ರಮೇಶ್ಗೌಡ, ಚೌಡರೆಡ್ಡಿ ತೂಪಲ್ಲಿ, ಜೆಡಿಎಸ್ ವಕ್ತಾರ ದೇವರಾಜ್ ಮತ್ತಿತರರು ಉಪಸ್ಥಿತರಿದ್ದ

