ಆಂಧ್ರಪ್ರದೇಶದಲ್ಲಿ ಪಾಕಿಸ್ತಾನದ ಗೂಢಚರ ಜಾಲ ಪತ್ತೆಯಾಗಿರುವುದು ಭಾರಿ ಸಂಚಲನ ಮೂಡಿಸಿದೆ. ಪಾಕಿಸ್ತಾನದ ಗುಪ್ತಚರ ಸಂಸ್ಥೆಯ ಆಪರೇಟಿವ್‌ಗಳೊಂದಿಗೆ ಸಂಪರ್ಕ ಹೊಂದಿರುವ ಶಂಕೆಯ ಹಿನ್ನೆಲೆಯಲ್ಲಿ 18 ಮಂದಿಯ ಮೇಲೆ ಆಂಧ್ರಪ್ರದೇಶ ಕೌಂಟರ್ ಇಂಟೆಲಿಜೆನ್ಸ್ ಅಧಿಕಾರಿಗಳು ನಿಗಾ ಇರಿಸಿದ್ದಾರೆ.
‘ಆಪರೇಷನ್ ಫೈರ್‌ವಾಲ್-2026’ ಭಾಗವಾಗಿ ಏಕಕಾಲದಲ್ಲಿ 10 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಭಾರಿ ಪ್ರಮಾಣದ ಶೋಧ ಕಾರ್ಯಾಚರಣೆ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಒಟ್ಟು 12 ಕೌಂಟರ್ ಇಂಟೆಲಿಜೆನ್ಸ್ ತಂಡಗಳು ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದವು.
ಆಂಧ್ರಪ್ರದೇಶದ ಜೊತೆಗೆ ಕೇರಳ, ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ ಹಲವು ಪ್ರದೇಶಗಳಲ್ಲಿ ಶಂಕಿತರ ಮನೆಗಳು ಹಾಗೂ ಇತರ ಸ್ಥಳಗಳಲ್ಲಿ ತಪಾಸಣೆ ನಡೆಸಲಾಗಿದೆ. ಪ್ರಕರಣದಲ್ಲಿ ಗುರುತಿಸಲಾದ 18 ಶಂಕಿತರ ಪೈಕಿ 13 ಮಂದಿ ನೌಕಾಪಡೆ ಸಿಬ್ಬಂದಿ ಎಂದು ತಿಳಿದುಬಂದಿದೆ. ಇವರು ಪಾಕ್ ಗುಪ್ತಚರ ಆಪರೇಟಿವ್‌ಗಳೊಂದಿಗೆ ನೇರ ಸಂಪರ್ಕದಲ್ಲಿದ್ದರೇ ಎಂಬ ನಿಟ್ಟಿನಲ್ಲಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಎನ್‌ಕ್ರಿಪ್ಟೆಡ್ ಸಂವಹನ ಚಾನೆಲ್‌ಗಳ ಮೂಲಕ ಪ್ರಮುಖ ಮಾಹಿತಿಯನ್ನು ರವಾನಿಸಿರುವ ಶಂಕೆಯ ಬಗ್ಗೆಯೂ ತನಿಖೆ ಮುಂದುವರಿದಿದೆ.
ವಿಶಾಖಪಟ್ಟಣದಲ್ಲಿರುವ ನೌಕಾಪಡೆ ಮತ್ತು ರಕ್ಷಣಾ ಸಂಸ್ಥೆಗಳಿಗೆ ಸಂಬಂಧಿಸಿದ ಸೂಕ್ಷ್ಮ ಹಾಗೂ ರಹಸ್ಯ ಮಾಹಿತಿಯೇ ಈ ಗೂಢಚರ ಜಾಲದ ಪ್ರಮುಖ ಗುರಿಯಾಗಿತ್ತು ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಶಂಕಿತರ ಬಳಿಯಿಂದ ಹಲವು ಎಲೆಕ್ಟ್ರಾನಿಕ್ ಸಾಧನಗಳನ್ನು ವಶಪಡಿಸಿಕೊಂಡು ಪರಿಶೀಲಿಸಲಾಗುತ್ತಿದೆ. 18 ಮಂದಿಯಲ್ಲಿ ಇಬ್ಬರ ಪಾತ್ರಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಸಾಕ್ಷ್ಯಗಳು ಲಭ್ಯವಾಗಿವೆ ಎನ್ನಲಾಗಿದೆ.
ಈ ಪ್ರಕರಣದಲ್ಲಿ ವಿಶಾಖಪಟ್ಟಣದ ಸಿವಿಲಿಯನ್ ಗುತ್ತಿಗೆ ಚಾಲಕ ಅನ್ನಂ ಸಾಯಿ ವರಪ್ರಸಾದ್ ಅವರನ್ನು ಆಂಧ್ರಪ್ರದೇಶ ಕೌಂಟರ್ ಇಂಟೆಲಿಜೆನ್ಸ್ ಬಂಧಿಸಿದೆ. ನೌಕಾಪಡೆ ಮತ್ತು ರಕ್ಷಣಾ ಸಂಸ್ಥೆಗಳಿಗೆ ಸಂಬಂಧಿಸಿದ ರಹಸ್ಯ ಮಾಹಿತಿಯನ್ನು ಪಾಕ್ ಆಪರೇಟಿವ್‌ಗೆ ರವಾನಿಸಿರುವ ಆರೋಪ ಅವರ ಮೇಲಿದೆ. ಇದಕ್ಕಾಗಿ ಹಣ ಪಡೆದಿದ್ದಾರೆಯೇ ಎಂಬ ಕೋನದಲ್ಲೂ ತನಿಖೆ ನಡೆಯುತ್ತಿದೆ. ನ್ಯಾಯಾಲಯವು ಅಕ್ಟೋಬರ್ 14ರವರೆಗೆ ನ್ಯಾಯಾಂಗ ಬಂಧನ ವಿಧಿಸಿದ್ದು, ಅವರನ್ನು ವಿಶಾಖ ಜಿಲ್ಲಾ ಜೈಲಿಗೆ ಕಳುಹಿಸಲಾಗಿದೆ.
ಇನ್ನೊಂದೆಡೆ, ಕೊಯಮತ್ತೂರಿನಲ್ಲಿ ನೌಕಾಪಡೆ ಉದ್ಯೋಗಿ ಪ್ರದೀಪ್ ಮುಖರ್ಜಿ ಅವರನ್ನು ಕೂಡ ಕೌಂಟರ್ ಇಂಟೆಲಿಜೆನ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಪಾಕ್ ಆಪರೇಟಿವ್‌ನ ವಾಟ್ಸಾಪ್ ಸಕ್ರಿಯಗೊಳಿಸಲು OTP ಹಂಚಿಕೊಂಡಿದ್ದಾರೆ ಎಂಬ ಆರೋಪ ಅವರ ಮೇಲಿದೆ. ಪಾಕ್ ಗುಪ್ತಚರ ಆಪರೇಟಿವ್‌ಗಳೊಂದಿಗೆ ಸಂವಹನ ಹಾಗೂ ಪ್ರಮುಖ ಮಾಹಿತಿಯನ್ನು ರವಾನಿಸಿರುವ ಕುರಿತು ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
ಟ್ರಾನ್ಸಿಟ್ ವಾರಂಟ್ ಮೂಲಕ ಕೊಯಮತ್ತೂರಿನಿಂದ ವಿಜಯವಾಡಕ್ಕೆ ಕರೆತರಲಾದ ಪ್ರದೀಪ್ ಮುಖರ್ಜಿ ಅವರನ್ನು ನ್ಯಾಯಾಲಯವು ಅಕ್ಟೋಬರ್ 14ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಸದ್ಯ ಅವರು ವಿಜಯವಾಡ ಜಿಲ್ಲಾ ಜೈಲಿನಲ್ಲಿದ್ದಾರೆ.
ಉಳಿದ 16 ಮಂದಿ ಶಂಕಿತರ ವಿರುದ್ಧ ತನಿಖೆ ಮುಂದುವರಿದಿದೆ. ಪ್ರಕರಣವು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿರುವುದರಿಂದ ‘ಆಪರೇಷನ್ ಫೈರ್‌ವಾಲ್’ಗೆ ಸಂಬಂಧಿಸಿದ ಪ್ರಮುಖ ವಿವರಗಳನ್ನು ಅಧಿಕಾರಿಗಳು ಬಹಿರಂಗಪಡಿಸಿಲ್ಲ.

