ಬೆಂಗಳೂರು: ಬೆಂಗಳೂರು ಮಹಾನಗರ ಪ್ರದೇಶ (BMRDA) ವ್ಯಾಪ್ತಿಯ ಅಭಿವೃದ್ಧಿಗೆ ಮುಂದಿನ 15 ವರ್ಷಗಳ ಸಮಗ್ರ ಯೋಜನೆ ರೂಪಿಸುವ ನಿಟ್ಟಿನಲ್ಲಿ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಬೆಂಗಳೂರು ಮಹಾನಗರ ಪ್ರದೇಶದ ಆರ್ಥಿಕ ಅಭಿವೃದ್ಧಿ ಕುರಿತಾದ ಸಲಹಾ ಸಮಿತಿ ಸಭೆಯಲ್ಲಿ ಚರ್ಚಿಸಲಾದ ಪ್ರಮುಖ ಅಂಶಗಳು ಹೀಗಿವೆ.
ರಾಜ್ಯದ ಆರ್ಥಿಕತೆ 1 ಟ್ರಿಲಿಯನ್ ಡಾಲರ್ ತಲುಪುವ ಗುರಿ:
2047ರ ವೇಳೆಗೆ ರಾಜ್ಯದ ಆರ್ಥಿಕತೆ 1 ಟ್ರಿಲಿಯನ್ ಡಾಲರ್ ತಲುಪುವ ಗುರಿಯನ್ನು ಹೊಂದಲಾಗಿದೆ. 2037ರ ವೇಳೆಗೆ ಆರ್ಥಿಕತೆಯನ್ನು 400-420 ಬಿಲಿಯನ್ ಡಾಲರ್‌ಗೆ ಕೊಂಡೊಯ್ಯುವ ಯೋಜನೆ ರೂಪಿಸಲಾಗಿದೆ. ಇದಕ್ಕೆ ಪೂರಕವಾಗಿ ಬೆಂಗಳೂರು ಮಹಾನಗರ ಪ್ರದೇಶ (ಬಿಎಂಆರ್) ವ್ಯಾಪ್ತಿಯಲ್ಲಿ ಸುಗಮ ಸಂಚಾರ ವ್ಯವಸ್ಥೆ, ವಸತಿ ಹಾಗೂ ಕೈಗಾರಿಕಾ ಅಭಿವೃದ್ಧಿಗೆ ರೂಪುರೇಷೆಗಳನ್ನು ಸಿದ್ಧಪಡಿಸಲಾಗುತ್ತಿದೆ.
ಎಐ ವಿಶ್ವವಿದ್ಯಾಲಯ ಸ್ಥಾಪಿಸಲು ಲಭ್ಯ ಸ್ಥಳಗಳ ಗುರುತಿಸುವಿಕೆ:
ಬಿಎಂಆರ್ ವ್ಯಾಪ್ತಿಯಲ್ಲಿ 9 ಹೊಸ ಇಂಟಿಗ್ರೇಟೆಡ್ ಕೈಗಾರಿಕಾ ಟೌನ್‌ಶಿಪ್‌ಗಳನ್ನು ರೂಪಿಸಬೇಕಾಗಿದೆ. ಇದಕ್ಕಾಗಿ 7,900 ಎಕರೆ ಜಾಗವನ್ನು ಈಗಾಗಲೇ ಸ್ವಾಧೀನಪಡಿಸಿಕೊಳ್ಳಲಾಗಿದ್ದು, ಉಳಿದ 5,600 ಎಕರೆ ಜಾಗದ ಸ್ವಾಧೀನ ಪ್ರಕ್ರಿಯೆ ಚಾಲನೆಯಲ್ಲಿದೆ. ನಮ್ಮ ಸರ್ಕಾರವು ಈಗಾಗಲೇ ‘ಎಐ ಸಿಟಿ’ ನಿರ್ಮಿಸುವ ಘೋಷಣೆ ಮಾಡಿದ್ದು, ಸಿಂಗಾಪುರದ ‘ಪುಂಗೋಲ್’ ಮಾದರಿಯಲ್ಲಿ ಇದನ್ನು ನಿರ್ಮಿಸಬೇಕಾಗಿದೆ. ಎಐ ವಿಶ್ವವಿದ್ಯಾಲಯ ಸ್ಥಾಪಿಸಲು ವಿಶಾಲ ಜಾಗದ ಅಗತ್ಯವಿದ್ದು, ಲಭ್ಯ ಸ್ಥಳಗಳನ್ನು ಗುರುತಿಸುವ ಕಾರ್ಯ ನಡೆಯಬೇಕಿದೆ.
ಸಂಪೂರ್ಣ ಬೆಂಗಳೂರು ನಗರ ಜಿಲ್ಲೆಯ ಅಭಿವೃದ್ಧಿಗೆ ಮಾಸ್ಟರ್ ಪ್ಲ್ಯಾನ್:
ಹಿಂದಿನ ಸಭೆಯಲ್ಲಿ ತೀರ್ಮಾನಿಸಿದಂತೆ, ಭವಿಷ್ಯದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಸಂಪೂರ್ಣ ಬೆಂಗಳೂರು ನಗರ ಜಿಲ್ಲೆಯನ್ನು BWSSB (ಬೆಂಗಳೂರು ಜಲಮಂಡಳಿ) ವ್ಯಾಪ್ತಿಯಡಿ ಸೇರ್ಪಡೆಗೊಳಿಸಿ, ಕುಡಿಯುವ ನೀರು ಮತ್ತು ಒಳಚರಂಡಿ ವ್ಯವಸ್ಥೆಯನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಆ ಮೂಲಕ ಜಿಲ್ಲೆಯಾದ್ಯಂತ ನೀರು ವಿತರಣಾ ಸಾಮರ್ಥ್ಯ ಹಾಗೂ ಒಳಚರಂಡಿ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸಲು ಸಾಧ್ಯವಾಗುವುದು. ಇದರೊಂದಿಗೆ ಜಿಲ್ಲೆಯ ಸಂಪೂರ್ಣ ರಸ್ತೆ ಜಾಲವನ್ನು ಗುರುತಿಸಿ, ಅಭಿವೃದ್ಧಿಗೆ ಯೋಜನೆ ರೂಪಿಸಲು ಕ್ರಮ ಕೈಗೊಳ್ಳಲಾಗುವುದು. ಇದಕ್ಕೆ ಪೂರಕವಾಗಿ ಬೆಂಗಳೂರು ನಗರ ಜಿಲ್ಲೆಯ ಎಲ್ಲ ಪ್ರದೇಶಗಳನ್ನು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಗೆ ತರಲಾಗುವುದು.
ಸುಗಮ ಸಂಚಾರ ವ್ಯವಸ್ಥೆ:
ಬೆಂಗಳೂರು ನಗರ ಹಾಗೂ ಹೊರವಲಯದಲ್ಲಿ ಸುಗಮ ಸಂಚಾರವನ್ನು ಖಾತ್ರಿಪಡಿಸಲು ಸಂಚಾರ ವ್ಯವಸ್ಥೆಯ ವಿಸ್ತೃತ ಯೋಜನೆ ಸಿದ್ಧಪಡಿಸಲಾಗಿದೆ. 2037ರ ವೇಳೆಗೆ ಹೆಚ್ಚುವರಿಯಾಗಿ 312 ಕಿ.ಮೀ. ಮೆಟ್ರೋ ಮಾರ್ಗ ವಿಸ್ತರಿಸಲು ಉದ್ದೇಶಿಸಲಾಗಿದೆ. 72 ಕಿ.ಮೀ. ಹೆಚ್ಚುವರಿ ಸಬ್ ಅರ್ಬನ್ ರೈಲು ಸಂಪರ್ಕ ಯೋಜನೆ, 10 ಹಬ್‌ಗಳನ್ನು ಸಂಪರ್ಕಿಸುವ 210 ಕಿ.ಮೀ. ವರ್ತುಲ ರಸ್ತೆ ನಿರ್ಮಾಣ ಹಾಗೂ ಪಿ.ಆರ್.ಆರ್ ಹಂತ-2 ನ್ನು ನೈಸ್ ರಸ್ತೆಯೊಂದಿಗೆ ಜೋಡಿಸುವ ಪ್ರಸ್ತಾವನೆ ಕುರಿತು ಚರ್ಚಿಸಲಾಯಿತು.
ಬೆಂಗಳೂರು-ತುಮಕೂರು, ಬೆಂಗಳೂರು-ಮೈಸೂರು ಮತ್ತು ಬೆಂಗಳೂರು-ಕೆ.ಜಿ.ಎಫ್ – ಈ ಮೂರು ಕಾರಿಡಾರ್‌ಗಳನ್ನು ಸಂಪರ್ಕಿಸುವ 270 ಕಿ.ಮೀ. ವ್ಯಾಪ್ತಿಯ ಆರ್.ಆರ್.ಟಿ.ಎಸ್ (RRTS) ಮಾರ್ಗ ನಿರ್ಮಾಣ ಹಾಗೂ ಪ್ರಸ್ತಾವಿತ ಮುಂಬೈ-ಬೆಂಗಳೂರು ಹೈಸ್ಪೀಡ್ ರೈಲನ್ನು ಮೈಸೂರುವರೆಗೆ ವಿಸ್ತರಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಸಲಾಯಿತು.
ನೀರಿನ ಸೌಲಭ್ಯ:
ಬಿಎಂಆರ್ ವ್ಯಾಪ್ತಿಯಲ್ಲಿ 2037ರ ವೇಳೆಗೆ 3,600 ಎಂ.ಎಲ್.ಡಿ ನೀರಿನ ಅಗತ್ಯವಿದೆ. ಕುಡಿಯಲು ಹಾಗೂ ಕೈಗಾರಿಕೆಗಳಿಗೆ ಅಗತ್ಯವಾದ ನೀರನ್ನು ಒದಗಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸುವ ಕುರಿತು ಚರ್ಚಿಸಲಾಯಿತು. ಮುಂದಿನ 10 ವರ್ಷಗಳಲ್ಲಿ ನಗರದ ಕುಡಿಯುವ ಹಾಗೂ ಕೈಗಾರಿಕಾ ಅಗತ್ಯತೆಗಳನ್ನು ಗಮನಿಸಿ, ಸಂಸ್ಕರಿಸಿದ ನೀರಿನ ಮರುಬಳಕೆ, ಕೆರೆಗಳನ್ನು ತುಂಬಿಸುವುದು ಸೇರಿದಂತೆ ಹಲವು ಯೋಜನೆಗಳಿಗೆ ಆದ್ಯತೆ ನೀಡುವಂತೆ ಸೂಚನೆ ನೀಡಲಾಗಿದೆ.
ವಸತಿ ಸೌಲಭ್ಯ:
ಪ್ರತಿಯೊಬ್ಬರಿಗೂ ಕೈಗೆಟಕುವ ದರದಲ್ಲಿ ವಸತಿ ಸೌಲಭ್ಯವನ್ನು ಕಲ್ಪಿಸುವುದು ನಮ್ಮ ಸರ್ಕಾರದ ಬದ್ಧತೆಯಾಗಿದೆ. ಈ ನಿಟ್ಟಿನಲ್ಲಿ 6 ರಿಂದ 6.5 ಲಕ್ಷ ಮನೆಗಳ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಇದರಲ್ಲಿ ಕೈಗಾರಿಕೆಗಳಲ್ಲಿ ಕೆಲಸ ಮಾಡುವ 40-50 ಸಾವಿರ ಕಾರ್ಮಿಕರಿಗೆ ವಿಶೇಷವಾಗಿ ವಸತಿ ಸೌಲಭ್ಯ ಕಲ್ಪಿಸಲಾಗುವುದು.
ಸಭೆಯಲ್ಲಿ ಸಚಿವರಾದ ಎಂ.ಬಿ. ಪಾಟೀಲ್, ಪ್ರಿಯಾಂಕ್ ಖರ್ಗೆ, ಕೃಷ್ಣ ಬೈರೇಗೌಡ, ಬೈರತಿ ಸುರೇಶ್ ಹಾಗೂ ಹಿರಿಯ ಅಧಿಕಾರಿಗಳು ಇದ್ದರು.

