ಮೈಸೂರು: ನಂಜನಗೂಡಿನಲ್ಲಿ ಸೋಲಾರ್ ಪಂಪ್ ಸೆಟ್ ಅಳವಡಿಕೆ ಕಾಮಗಾರಿಗೆ ಸಂಬಂಧಿಸಿದಂತೆ ಲಂಚ ಸ್ವೀಕರಿಸುತ್ತಿದ್ದ ಆರೋಪದ ಮೇಲೆ ಸೆಸ್ಕ್ ನ ಇಬ್ಬರು ಸಹಾಯಕ ಎಂಜಿನಿಯರ್ ಗಳು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.
ನಂಜನಗೂಡು ನಗರ ವಿಭಾಗದ ಎಇಇ ದೇವರಾಜಯ್ಯ ಮತ್ತು ಗ್ರಾಮಾಂತರ ವಿಭಾಗದ ಎಇಇ ಕಿರಣ್ ಕುಮಾರ್ ಅವರು ತಮ್ಮ ಕಚೇರಿಯಲ್ಲೇ ಲಂಚದ ಹಣ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಇಬ್ಬರನ್ನೂ ವಶಕ್ಕೆ ಪಡೆದಿದ್ದಾರೆ.
ಕುಸುಮ್ ಸೌರ ವಿದ್ಯುತ್ ಯೋಜನೆಯಡಿ ರೈತರ ಜಮೀನಿಗೆ ಸೋಲಾರ್ ಪಂಪ್ ಸೆಟ್ ಅಳವಡಿಕೆ ಕಾಮಗಾರಿಗೆ ಸಂಬಂಧಿಸಿದ ಕೆಲಸ ಮಾಡಿಕೊಡಲು ಗುತ್ತಿಗೆದಾರ ನಟರಾಜು ಅವರಿಗೆ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಅವರ ಎಂಬ ದೂರಿನ ಹಿನ್ನೆಲೆಯಲ್ಲಿ ಲೋಕಾಯುಕ್ತ ಎಸ್ಪಿ ಉದೇಶ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.
ದೂರುದಾರರಿಂದ ಹಣ ಸ್ವೀಕರಿಸುವ ಸಂದರ್ಭದಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಲೋಕಾಯುಕ್ತ ಅಧಿಕಾರಿಗಳು ಇಬ್ಬರು ಎಂಜಿನಿಯರ್ ಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಗುತ್ತಿಗೆದಾರನಿಂದ ದೇವರಾಜಯ್ಯ 15 ಸಾವಿರ ರೂ., ಕಿರಣ್ ಕುಮಾರ್ 5 ಸಾವಿರ ರೂ ಹಣ ಪಡೆದುಕೊಂಡಿದ್ದು, ಈ ವೇಳೆ ದಾಳಿ ನಡೆಸಲಾಗಿದೆ. ಕಚೇರಿಯಲ್ಲಿ ದಾಖಲೆಗಳ ಪರಿಶೀಲನೆಯನ್ನೂ ನಡೆಸಲಾಗಿದ್ದು, ಲಂಚದ ವ್ಯವಹಾರಕ್ಕೆ ಸಂಬಂಧಿಸಿದ ದಾಖಲೆಗಳು ಹಾಗೂ ಇತರ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ.
4 ಬ್ಯಾಟರಿ, ತಂತಿ ಕಳವು: ಆರೋಪಿಗೆ 25 ಸಾವಿರ ರೂ. ದಂಡ
ಭದ್ರಾವತಿ: ಆಟೋ ರಿಕ್ಲೋಸರ್ ಕಂಟ್ರೋಲ್ ಬಾಕ್ಸ್‌ನೊಳಗೆ ಅಳವಡಿಸಿದ್ದ ಬ್ಯಾಟರಿ ಹಾಗೂ ಕಾಪರ್ ವೈರ್‌ಗಳನ್ನು ಕಳವು ಮಾಡಿದ ಪ್ರಕರಣದಲ್ಲಿ ಆರೋಪಿಗೆ ಭದ್ರಾವತಿಯ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ₹25 ಸಾವಿರ ದಂಡ ವಿಧಿಸಿದೆ.
ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ದೊಣಬಘಟ್ಟ ಮುಖ್ಯ ರಸ್ತೆಯಲ್ಲಿರುವ ಹೊಳೆನೇರಳಕೆರೆ ಗ್ರಾಮದಲ್ಲಿ 2019ರ ಜೂನ್ 24ರಂದು ರಾತ್ರಿ ಈ ಕಳವು ಘಟನೆ ನಡೆದಿತ್ತು. ಗ್ರಾಮದ ಆಟೋ ರಿಕ್ಲೋಸರ್ ಕಂಟ್ರೋಲ್ ಬಾಕ್ಸ್‌ನೊಳಗೆ ಅಳವಡಿಸಿದ್ದ 4 ಬ್ಯಾಟರಿ ಹಾಗೂ ಕಾಪರ್ ವೈರ್‌ಗಳನ್ನು ಆರೋಪಿ ಮಂಜುನಾಥ್ (40) ಕಳವು ಮಾಡಿಕೊಂಡು ಹೋಗಿದ್ದನು.
ಈ ಸಂಬಂಧ ಭದ್ರಾವತಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಗುನ್ನೆ ಸಂಖ್ಯೆ 153/2019, ಭಾರತೀಯ ದಂಡ ಸಂಹಿತೆ (ಐಪಿಸಿ) ಕಲಂ 379 ಹಾಗೂ ವಿದ್ಯುತ್ ಕಾಯ್ದೆಯ ಕಲಂ 136ರ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣದ ಅಂದಿನ ತನಿಖಾಧಿಕಾರಿ ಯೋಗೇಶ್ ಕೆ.ಎಂ., ಪೊಲೀಸ್ ಇನ್‌ಸ್ಪೆಕ್ಟರ್ ಅವರು ತನಿಖೆ ಪೂರ್ಣಗೊಳಿಸಿ, ಆರೋಪಿಯ ವಿರುದ್ಧ ದೋಷಾರೋಪಣ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ಭದ್ರಾವತಿಯ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ನಡೆದಿದ್ದು, ಸರ್ಕಾರಿ ಅಭಿಯೋಜಕಿ ರತ್ನಮ್ಮ ಪಿ. ಅವರು ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.
ವಿಚಾರಣೆ ಪೂರ್ಣಗೊಳಿಸಿದ ನ್ಯಾಯಾಧೀಶರಾದ ಎನ್. ಮುನಿರಾಜ್ ಅವರು ಆರೋಪಿಗೆ ₹25 ಸಾವಿರ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ದಂಡದ ಮೊತ್ತವನ್ನು ಪಾವತಿಸಲು ವಿಫಲವಾದಲ್ಲಿ 3 ತಿಂಗಳ ಸಾದಾ ಕಾರಾಗೃಹವಾಸ ಅನುಭವಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ.

