ಬೆಂಗಳೂರು: ಗಣೇಶ್ ನಚಿಕೇತು ಅವರನ್ನು ರಾಜ್ಯ ಮುಖ್ಯಸ್ಥರು – ಸಾರ್ವಜನಿಕ ಸಂಪರ್ಕ ಮತ್ತು ಸಂವಹನ (State Head – PR & Communication) ಹುದ್ದೆಗೆ ನೇಮಕ ಮಾಡಲಾಗಿದೆ ಎಂದು ಕೆಲವು ಮಾಧ್ಯಮಗಳಲ್ಲಿ ವರದಿಯಾಗಿರುವುದು ಕರ್ನಾಟಕ ಸರ್ಕಾರದ ಗಮನಕ್ಕೆ ಬಂದಿದೆ. ಗಣೇಶ್ ನಚಿಕೇತು ಅವರನ್ನು ಸರ್ಕಾರವು ಅಂತಹ ಯಾವುದೇ ಹುದ್ದೆಗೆ ನೇಮಿಸಿಲ್ಲ ಮತ್ತು ಯಾವುದೇ ವಿಭಾಗದಲ್ಲಿ ಕಾರ್ಯನಿರ್ವಹಿಸುವ ಜವಾಬ್ದಾರಿ ನೀಡಲಾಗಿಲ್ಲ ಎಂದು ಈ ಮೂಲಕ ಸ್ಪಷ್ಟಪಡಿಸಲಾಗಿದೆ.
ಗಣೇಶ್ ನಚಿಕೇತು ನೇಮಕ ಮಾಡಿಲ್ಲ
ಗಣೇಶ್ ನಚಿಕೇತು ಅವರನ್ನು ಕರ್ನಾಟಕ ಸರ್ಕಾರದ ‘ರಾಜ್ಯ ಮುಖ್ಯಸ್ಥರು–ಸಾರ್ವಜನಿಕ ಸಂಪರ್ಕ ಮತ್ತು ಸಂವಹನ’ (State Head – PR & Communication) ಹುದ್ದೆಗೆ ನೇಮಕ ಮಾಡಲಾಗಿದೆ ಎಂಬ ವರದಿಗಳು ಇತ್ತೀಚೆಗೆ ಕೆಲವು ಮಾಧ್ಯಮಗಳಲ್ಲಿ ಹರಿದಾಡಿದ್ದವು. ಇದೀಗ ಈ ನೇಮಕಾತಿ ಕುರಿತು ಕರ್ನಾಟಕ ಸರ್ಕಾರ ಸ್ಪಷ್ಟನೆ ನೀಡಿದ್ದು, ಗಣೇಶ್ ನಚಿಕೇತು ಅವರನ್ನು ಸರ್ಕಾರ ಯಾವುದೇ ಹುದ್ದೆಗೆ ನೇಮಕ ಮಾಡಿಲ್ಲ ಎಂದು ತಿಳಿಸಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಈ ಕುರಿತು ಸ್ಪಷ್ಟೀಕರಣ ನೀಡಿದೆ. ಸರ್ಕಾರದ ವತಿಯಿಂದ ಗಣೇಶ್ ನಚಿಕೇತು ಅವರಿಗೆ ಯಾವುದೇ ಹುದ್ದೆ ನೀಡಲಾಗಿಲ್ಲ ಮತ್ತು ಯಾವುದೇ ಸರ್ಕಾರಿ ವಿಭಾಗದಲ್ಲಿ ಕಾರ್ಯನಿರ್ವಹಿಸುವ ಜವಾಬ್ದಾರಿಯನ್ನೂ ವಹಿಸಿಲ್ಲ ಎಂದು ಇಲಾಖೆ ತಿಳಿಸಿದೆ.
ನೇಮಕಾತಿ ಕುರಿತು ಗೊಂದಲ
ಗಣೇಶ್ ನಚಿಕೇತು ಅವರನ್ನು ರಾಜ್ಯ ಸರ್ಕಾರದ ಪಿಆರ್ ಮತ್ತು ಕಮ್ಯುನಿಕೇಷನ್ ವಿಭಾಗದ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ ಎಂಬ ಮಾಹಿತಿ ಸಾಮಾಜಿಕ ಜಾಲತಾಣಗಳು ಹಾಗೂ ಕೆಲವು ಮಾಧ್ಯಮಗಳಲ್ಲಿ ಹರಿದಾಡಿತ್ತು. ಈ ಹಿನ್ನೆಲೆಯಲ್ಲಿ ನೇಮಕಾತಿ ವಿಚಾರ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿತ್ತು. ಆದರೆ, ಈ ವರದಿಗಳನ್ನು ರಾಜ್ಯ ಸರ್ಕಾರ ತಳ್ಳಿಹಾಕಿದ್ದು, ಅಂತಹ ಯಾವುದೇ ನೇಮಕಾತಿ ನಡೆದಿಲ್ಲ ಎಂದು ಸ್ಪಷ್ಟಪಡಿಸಿದೆ.
ಸಾರ್ವಜನಿಕರು, ಮಾಧ್ಯಮಗಳಿಗೆ ಮನವಿ
ನೇಮಕಾತಿ ಕುರಿತು ಹರಿದಾಡುತ್ತಿರುವ ಮಾಹಿತಿಯಿಂದ ಸಾರ್ವಜನಿಕರು ಹಾಗೂ ಮಾಧ್ಯಮ ಪ್ರತಿನಿಧಿಗಳು ಗೊಂದಲಕ್ಕೊಳಗಾಗಬಾರದು ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ತಿಳಿಸಿದೆ. ಗಣೇಶ್ ನಚಿಕೇತು ಅವರನ್ನು ಕರ್ನಾಟಕ ಸರ್ಕಾರದ ಯಾವುದೇ ಹುದ್ದೆಗೆ ನೇಮಕ ಮಾಡಿರುವುದಿಲ್ಲ. ವಿಶೇಷವಾಗಿ ‘State Head – PR & Communication’ ಹುದ್ದೆಗೆ ನೇಮಕ ಮಾಡಲಾಗಿದೆ ಎಂಬ ವರದಿ ಸತ್ಯವಲ್ಲ ಎಂದು ಸ್ಪಷ್ಟಪಡಿಸಿದೆ.
ಅರ್ಜಿ ಆಹ್ವಾನ
ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯಗಳಲ್ಲಿ 2026-27ನೇ ಸಾಲಿನಲ್ಲಿ ಪೂರ್ಣ ಕಾಲಿಕವಾಗಿ ಪಿಎಚ್ಡಿ ಸಂಶೋಧನೆ ಕೈಗೊಳ್ಳುತ್ತಿರುವ ಅಲ್ಪಸಂಖ್ಯಾತ ಅಭ್ಯರ್ಥಿಗಳಿಗೆ (ಜೆಆರ್ಎಫ್ ಮಾದರಿ) ಫೆಲೋಶಿಪ್ ಪಾವತಿಸುವ ಸಂಬಂಧ ಪಿಹೆಚ್.ಡಿ ಫೆಲೋಶಿಪ್ ಯೋಜನೆಯಡಿ ಸೇವಾ ಸಿಂಧು ಪೋರ್ಟಲ್ನಲ್ಲಿ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಅರ್ಹ ವಿದ್ಯಾರ್ಥಿಗಳು ಕೂಡಲೇ ಇದರ ಸದುಪಯೋಗ ಪಡಿಸಿಕೊಳ್ಳಲು ಕೋರಿದೆ. ಅರ್ಜಿ ಸಲ್ಲಿಸಲು ಅಕ್ಟೋಬರ್, 31 ಕೊನೆಯ ದಿನವಾಗಿದೆ. ಸಂಶೋಧನಾರ್ಥಿಗಳು ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು. ಅಲ್ಪಸಂಖ್ಯಾತರ ಸಮುದಾಯದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ದ, ಸಿಖ್ ಮತ್ತು ಪಾರ್ಸಿ ವರ್ಗಕ್ಕೆ ಸೇರಿದವರಾಗಿರಬೇಕು. ಸರ್ಕಾರಿ/ಖಾಸಗಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಭ್ಯರ್ಥಿಗಳು ಫೆಲೋಶಿಪ್ಗೆ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ. ವಿದ್ಯಾರ್ಥಿಯ/ಪಾಲಕರ/ಪೋಷಕರ ಕುಟುಂಬದ ವಾರ್ಷಿಕ ಆದಾಯವು ಎಲ್ಲಾ ಮೂಲಗಳಲ್ಲಿ ರೂ.8 ಲಕ್ಷಗಳನ್ನು ಮೀರಬಾರದು. ವಿದ್ಯಾರ್ಥಿಯ ಗರಿಷ್ಠ ವಯೋಮಿತಿ 35 ವರ್ಷ ಮೀರಬಾರದು.
ವಿದ್ಯಾರ್ಥಿಯು ಸರ್ಕಾರದಿಂದ ಶಾಸನಬದ್ದ ಮಾನ್ಯತೆ ಪಡೆದ ವಿಶ್ವವಿದ್ಯಾಲಯಗಳಲ್ಲಿ ಪಿಎಚ್.ಡಿ. ಕೋರ್ಸಿಗೆ ಪ್ರವೇಶ ಪಡೆದಿರಬೇಕು. ಕೋರ್ಸ್-ಪೂರ್ಣಕಾಲಿಕ. ಈ ಯೋಜನೆಯ ಪ್ರಯೋಜನ ಪಡೆಯಲು ವಿದ್ಯಾರ್ಥಿಗಳು ತಮ್ಮ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಆಗಿರುವ ಬಗ್ಗೆ ಹಾಗೂ ಎನ್ಪಿಸಿಐ ಮ್ಯಾಪಿಂಗ್ ಆಕ್ಟಿವ್ ಆಗಿರುವ ಬಗ್ಗೆ ಖಚಿತಪಡಿಸಿಕೊಳ್ಳತಕ್ಕದ್ದು. ಈ ಯೋಜನೆಯ ಪ್ರಕ್ರಿಯೆಯು ಸರ್ಕಾರದಿಂದ ಕಾಲಕಾಲಕ್ಕೆ ಹೊರಡಿಸಲಾಗುವ ಸರ್ಕಾರದ ಆದೇಶಗಳು ಹಾಗೂ ಮಾರ್ಗಸೂಚಿಗಳಿಗೆ ಒಳಪಟ್ಟಿರುತ್ತದೆ.
ತಾಲ್ಲೂಕು ಮಾಹಿತಿ ಕೇಂದ್ರ ಸೋಮವಾರಪೇಟೆ ದೂ.ಸಂ.8548068519, ಜಿಲ್ಲಾ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ, ಮೌಲಾನಾ ಆಜಾದ್ ಭವನ, ಎಫ್ಎಂಸಿ ಕಾಲೇಜು ಹತ್ತಿರ, ಮಡಿಕೇರಿ ಕೊಡಗು ಜಿಲ್ಲೆ 9972799091, ತಾಲ್ಲೂಕು ಮಾಹಿತಿ ಕೇಂದ್ರ ವಿರಾಜಪೇಟೆ ದೂ.ಸಂ.9900731037 ನ್ನು ಸಂಪರ್ಕಿಸಬಹುದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಸಚಿನ್ ಸಿ.ಎಸ್. ಅವರು ತಿಳಿಸಿದ್ದಾರೆ.

