ಮೈಸೂರು: ಪ್ರತಿ ತಿಂಗಳು ಮೊದಲ ಮತ್ತು ಮೂರನೇ ಶನಿವಾರ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಪ್ರಜಾಸೇವೆ ಕಾರ್ಯಕ್ರಮ ನಡೆಸುವಂತೆ ಸೂಚಿಸಲಾಗಿದ್ದು, ನಂತರ ಪಂಚಾಯಿತಿ ಮಟ್ಟಕ್ಕೂ ಈ ಕಾರ್ಯಕ್ರಮ ವಿಸ್ತರಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಅವರು ಮೈಸೂರಿನ ಪಿರಿಯಾಪಟ್ಟಣದಲ್ಲಿ ಇಂದು ಪ್ರಜಾಸೇವಾ ಇಲಾಖೆ ಹಮ್ಮಿಕೊಂಡಿದ್ದ ‘ಬಾಗಿಲಿಗೆ ಬಂತು ಸರ್ಕಾರ ಸೇವೆಗೆ ಇರಲಿ ಸಹಕಾರ’ ಕಾರ್ಯಕ್ರಮವನ್ನು ಉದ್ಘಾಟಿಸಿ, ಜನರ ಅಹವಾಲುಗಳನ್ನು ಸ್ವೀಕರಿಸಿ, ಅಗತ್ಯ ಕ್ರಮ ವಹಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜನಸೇವೆಯೇ ಪ್ರಜಾಪ್ರಭುತ್ವದ ನಿಜವಾದ ಶಕ್ತಿ
ಪ್ರಜಾಸೇವೆ ಇಲಾಖೆಯ ಮೂಲಕ ಜನರ ಸಮಸ್ಯೆ ಆಲಿಸಿ ಪರಿಹಾರ ಒದಗಿಸಲು ಇಡೀ ಸರ್ಕಾರ ನಿಮ್ಮ ಮುಂದಿದೆ. ನ್ಯಾಯಾಲಯಗಳಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಉಚಿತ ಸೇವೆ ಒದಗಿಸಲು ಪ್ರಜಾಸೇವೆ ಅಭಿಯಾನದಲ್ಲಿ ಪ್ರತ್ಯೇಕ ಕಾನೂನು ಕೇಂದ್ರ ಆರಂಭಿಸಲಾಗಿದೆ ಎಂದರು.
ಜನರ ಸೇವೆಗಾಗಿ, ಜನರ ಸಮಸ್ಯೆಗೆ ಸ್ಪಂದಿಸಲು ನನ್ನ 40 ವರ್ಷಗಳ ರಾಜಕೀಯ ಅನುಭವದಲ್ಲಿ ಈ ಹೊಸ ಇಲಾಖೆ ಆರಂಭಿಸಿದ್ದೇನೆ. ನಾನು ಶಾಸಕನಾದ ಬಳಿಕ ಪ್ರತಿ ವರ್ಷ ಪ್ರತಿ ಹಳ್ಳಿಗೆ ತೆರಳಿ ಅನುಭವ ಪಡೆದಿದ್ದೇನೆ. ಜನರ ಸಮಸ್ಯೆಗಳಿಗೆ ಮುಕ್ತಿ ನೀಡಿ, ಅವರ ಆಶಯಗಳಿಗೆ ಧ್ವನಿಯಾಗಿ, ನ್ಯಾಯ ಒದಗಿಸಲು, ಮಂತ್ರಿಗಳು ಹಾಗೂ ಸ್ಥಳೀಯ ಶಾಸಕರು ಸೇರಿದಂತೆ ಸರ್ಕಾರವು ಅಧಿಕಾರಿಗಳ ಸಮೇತ ಜನರ ಮನೆ ಬಾಗಿಲಿಗೆ ಹೋಗಲು ಈ ಇಲಾಖೆ ಆರಂಭಿಸಲಾಗಿದೆ ಎಂದರು.
620 ಕಡೆ ಪ್ರಜಾಸೇವೆ ಅಭಿಯಾನ
ಸೆ.05ರಂದು ಈ ಇಲಾಖೆ ಆರಂಭಿಸಲಾಗಿದೆ. ಈಗಾಗಲೇ 620 ಕಡೆ ಪ್ರಜಾಸೇವೆ ಅಭಿಯಾನ ಆಯೋಜಿಸಲಾಗಿದೆ. 1 ಲಕ್ಷಕ್ಕೂ ಹೆಚ್ಚು ಜನ ಅರ್ಜಿ ಸಲ್ಲಿಸಿದ್ದು, ಕಂದಾಯ, ಗ್ರಾಮೀಣಾಭಿವೃದ್ಧಿ, ನಗರಾಭಿವೃದ್ಧಿ ಇಲಾಖೆಗೆ ಸಂಬಂಧಿಸಿದಂತೆ ಹೆಚ್ಚು ಅರ್ಜಿಗಳು ಬರುತ್ತಿವೆ. ಪ್ರತಿ ತಾಲ್ಲೂಕಿನಲ್ಲಿ ನ್ಯಾಯಾಲಯದಲ್ಲಿ ಕಾನೂನು ನೆರವು ನೀಡುವ ವಿಭಾಗವಿದ್ದು, ಅವರನ್ನು ಕರೆಸಿ ಈ ಕಾರ್ಯಕ್ರಮದಲ್ಲಿ ಒಂದು ಕೇಂದ್ರ ಆರಂಭಿಸಲಾಗಿದೆ. ಜನರಿಗೆ ಕಾನೂನಿನಲ್ಲಿ ತೊಡಕು ಇದ್ದರೆ ಉಚಿತವಾಗಿ ಸಹಾಯ ಮಾಡಲಾಗುವುದು. ಇಡೀ ದೇಶದಲ್ಲೇ ಬೇರೆ ಯಾವುದೇ ರಾಜ್ಯಗಳು ಮಾಡದ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತಿದೆ ಎಂದರು.
ಜನರ ನೋವು ಬಗೆಹರಿದರೆ ನಮಗೆ ಆತ್ಮತೃಪ್ತಿ
ರಸ್ತೆ, ಪೋಡಿ, ಪಿಂಚಣಿ, ಕುಡಿಯುವ ನೀರು, ವಿದ್ಯುತ್ ಸಮಸ್ಯೆ, ಅರಣ್ಯ, ಆರೋಗ್ಯ, ಪೊಲೀಸ್, ಕಾರ್ಮಿಕ, ಕೃಷಿ, ತೋಟಗಾರಿಕೆ ಸೇರಿದಂತೆ ಇಲಾಖೆವಾರು ಅಹವಾಲುಗಳನ್ನು ಅಧಿಕಾರಿಗಳ ಸಮ್ಮುಖದಲ್ಲಿ ಆಲಿಸಿ ಪರಿಹಾರ ಒದಗಿಸಲು ಇಡೀ ಸರ್ಕಾರ ನಿಮ್ಮ ಮುಂದೆ ಇದೆ. ನೀವು ಚೆನ್ನಾಗಿದ್ದರೆ, ನಾವು ಚೆನ್ನಾಗಿದ್ದಂತೆ. ನಿಮ್ಮ ನೋವುಗಳನ್ನು ಬಗೆಹರಿಸಿದರೆ, ನಮಗೆ ಆತ್ಮತೃಪ್ತಿ ಸಿಗುತ್ತದೆ ಎಂದರು.
12 ಲಕ್ಷ ಪಿಂಚಣಿದಾರರಿಗೆ ಪ್ರಯೋಜನ
ಯಾರು ಯಾವ ಅರ್ಜಿ ಕೊಟ್ಟಿದ್ದಾರೆಯೋ, ಅವರಿಗೆ ನನ್ನ ಪರವಾಗಿ ಉತ್ತರ ಬರುತ್ತದೆ. ಪ್ರತಿ ಇಲಾಖೆ ಅರ್ಜಿಗಳನ್ನು ಅಧಿಕಾರಿಗಳು ಪರಿಶೀಲನೆ ಮಾಡುತ್ತಾರೆ. ಪ್ರತಿ ಇಲಾಖೆಯಲ್ಲಿ ಎಷ್ಟು ಅರ್ಜಿ ವಿಲೇವಾರಿ ಆಗಿದೆ ಎಂದು ನಾನು ಪರಿಶೀಲನೆ ಮಾಡುತ್ತೇನೆ. ಒಂದು ವೇಳೆ ಅರ್ಜಿ ವಿಲೇವಾರಿ ಆಗದೇ ಇದ್ದರೆ, ಯಾಕೆ ಆಗಲಿಲ್ಲ ಎಂದು ವಿವರಣೆ ನೀಡಿ, ಅದಕ್ಕೆ ಪರಿಹಾರ ತಿಳಿಸಲಾಗುವುದು. ನನಗೆ ಆರಂಭದಲ್ಲಿ ಪಿಂಚಣಿ ವಿಚಾರವಾಗಿ ಹೆಚ್ಚಿನ ಅರ್ಜಿಗಳು ಬರುತ್ತಿದ್ದವು. 32,000 ಆದಾಯ ಮಿತಿಯನ್ನು ನಿಗದಿ ಮಾಡಿದ್ದರಿಂದ ಪಿಂಚಣಿ ನಿಂತಿದೆ ಎಂದಾಗ, ಅದಕ್ಕೆ 1.20 ಲಕ್ಷದವರೆಗೆ ಆದಾಯ ಮಿತಿಯನ್ನು ನಿಗದಿ ಮಾಡಿ ಸಮಸ್ಯೆಯನ್ನು ಬಗೆಹರಿಸಲಾಗಿದೆ. ಸರ್ಕಾರದ ಒಂದು ತೀರ್ಮಾನದಿಂದ 12 ಲಕ್ಷ ಜನರಿಗೆ ಪ್ರಯೋಜನವಾಗಿದೆ ಎಂದರು.
ಕಾನೂನುಬದ್ಧ ಅರ್ಜಿಗಳ ವಿಲೇವಾರಿಗೆ ಮಾರ್ಗದರ್ಶನ
ಅರಣ್ಯ ಇಲಾಖೆಯ ಸಮಸ್ಯೆಗಳು ಹೆಚ್ಚಿವೆ ಎಂದು ತಿಳಿಸಿದ್ದು, ಜನರು ಒತ್ತುವರಿ ಮಾಡಬಾರದು. ಪರವಾನಗಿ ಇಲ್ಲದ ಬಂದೂಕುಗಳನ್ನು ನವೆಂಬರ್ ಒಂದರೊಳಗೆ ಸರ್ಕಾರದ ವಶಕ್ಕೆ ನೀಡಬೇಕು. ಕಾನೂನಿನ ಪ್ರಕಾರ ಅರ್ಜಿ ಸಲ್ಲಿಸಿ ಅದನ್ನು ಪಡೆಯಬೇಕು. ಬಗರ್ ಹುಕುಂ ಮುಂತಾದ ಕಾನೂನುಬದ್ಧ ಅರ್ಜಿಗಳ ವಿಲೇವಾರಿಗೆ ಮಾರ್ಗದರ್ಶನ ಮಾಡಲಾಗುವುದು. ಯಾರನ್ನೂ ಒಕ್ಕಲೆಬ್ಬಿಸದಂತೆ ಸೂಚನೆ ನೀಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಸಚಿವರಾದ ಈಶ್ವರ್ ಖಂಡ್ರೆ, ಡಾ. ಯತೀಂದ್ರ ಸಿದ್ದರಾಮಯ್ಯ, ಸಂಸದ ಜಿ. ಸಿ. ಚಂದ್ರಶೇಖರ್, ಶಾಸಕರಾದ ಕೆ. ವೆಂಕಟೇಶ್, ಅನಿಲ್ ಚಿಕ್ಕಮಾದು, ಡಿ. ರವಿಶಂಕರ್, ವಿಧಾನ ಪರಿಷತ್ ಸದಸ್ಯರಾದ ಡಾ. ಡಿ. ತಿಮ್ಮಯ್ಯ, ಡಾ. ಕೆ. ಶಿವಕುಮಾರ್, ಮೈಲಾಕ್ ಅಧ್ಯಕ್ಷ ಎಚ್. ಡಿ. ಗಣೇಶ್, ಅಂಬೇಡ್ಕರ್ ನಿಗಮದ ಅಧ್ಯಕ್ಷ ಸಿ. ನರೇಂದ್ರ, ಭೋವಿ ನಿಗಮದ ಅಧ್ಯಕ್ಷ ರಾಮಪ್ಪ, ತಾಲ್ಲೂಕು ಆಶ್ರಯ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್, ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ, ಪ್ರಜಾಸೇವಾ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತ ಮತ್ತಿತರರು ಉಪಸ್ಥಿತರಿದ್ದರು.

