ಶಿವಮೊಗ್ಗ: ಶರಾವತಿ ಮುಳುಗಡೆ ಸಂತ್ರಸ್ತರ ಅರಣ್ಯ ಭೂಮಿಯನ್ನು ಡಿ-ನೋಟಿಫೈ ಮಾಡಲು ಕೇಂದ್ರ ಸರ್ಕಾರದ ಅನುಮತಿ ಪಡೆಯುವ ನಿಟ್ಟಿನಲ್ಲಿ ಅಗತ್ಯ ಪ್ರಸ್ತಾವನೆಯನ್ನು ಶೀಘ್ರ ಸಲ್ಲಿಸುವಂತೆ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಸೊರಬದ ಪ್ರವಾಸಿ ಮಂದಿರದಲ್ಲಿ ಇಂದು ಶರಾವತಿ ಮುಳುಗಡೆ ಸಂತ್ರಸ್ತರ ಅರಣ್ಯ ಭೂಮಿ ಡಿ-ನೋಟಿಫಿಕೇಶನ್‌ಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕಾದ ಪ್ರಸ್ತಾವನೆ ಕುರಿತು ಅಧಿಕಾರಿಗಳೊಂದಿಗೆ ಅಂತಿಮ ಹಂತದ ಸಭೆ ನಡೆಸಿ ಸಚಿವರು ಮಾತನಾಡಿದರು.
ಕೇಂದ್ರ ಸರ್ಕಾರದ ಅನುಮತಿ ಪಡೆಯುವ ಪ್ರಕ್ರಿಯೆಯಲ್ಲಿ ಯಾವುದೇ ವಿಳಂಬವಾಗದಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಪ್ರಸ್ತಾವನೆಗೆ ಅಗತ್ಯವಿರುವ ಎಲ್ಲ ದಾಖಲೆಗಳು ಹಾಗೂ ಮಾಹಿತಿಯನ್ನು ಸಮಗ್ರವಾಗಿ ಸಿದ್ಧಪಡಿಸಿ, ನಿಯಮಾನುಸಾರ ಶೀಘ್ರವೇ ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಸಚಿವರು ನಿರ್ದೇಶನ ನೀಡಿದರು.
ಶರಾವತಿ ಮುಳುಗಡೆ ಸಂತ್ರಸ್ತರ ಅರಣ್ಯ ಭೂಮಿಯನ್ನು ಡಿ-ನೋಟಿಫೈ ಮಾಡುವ ಪ್ರಕ್ರಿಯೆ, ಈ ಸಂಬಂಧ ಸುಪ್ರೀಂ ಕೋರ್ಟ್‌ಗೆ ಮನವರಿಕೆ ಮಾಡಬೇಕಾದ ಅಂಶಗಳು, ಕೇಂದ್ರ ಸರ್ಕಾರಕ್ಕೆ ಸಲ್ಲಿಸಬೇಕಾದ ಪ್ರಸ್ತಾವನೆಯಲ್ಲಿ ಒಳಗೊಂಡಿರಬೇಕಾದ ಅಗತ್ಯ ದಾಖಲೆಗಳು ಹಾಗೂ ಮುಂದಿನ ಹಂತದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಭೆಯಲ್ಲಿ ಸಮಗ್ರ ಚರ್ಚೆ ನಡೆಯಿತು.
ಸಂತ್ರಸ್ತರ ಬಹುದಿನಗಳ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಸ್ತಾವನೆ ಸಿದ್ಧಪಡಿಸುವಾಗ ಯಾವುದೇ ಪ್ರಮುಖ ಅಂಶಗಳು ಅಥವಾ ದಾಖಲೆಗಳು ಬಾಕಿ ಉಳಿಯದಂತೆ ಎಚ್ಚರಿಕೆ ವಹಿಸುವಂತೆ ಸಚಿವರು ಜಿಲ್ಲಾ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಸಿಸಿಎಫ್ ಹನುಮಂತಪ್ಪ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ, ಡಿಎಫ್‌ಒ ಅಜ್ಜಯ್ಯ, ಎಡಿಸಿ ಅಭಿಷೇಕ್, ವಕೀಲ ರಮೇಶ್ ಹೆಗ್ಡೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಸಾರ್ವಜನಿಕ ಸಮಸ್ಯೆಗಳ ತ್ವರಿತ ಪರಿಹಾರಕ್ಕೆ ಪ್ರಜಾಸೇವಾ ಆಂದೋಲನ ಸಭೆ ಸಹಕಾರಿ
ಸೊರಬ: ಸಾರ್ವಜನಿಕರ ಕುಂದು-ಕೊರತೆಗಳು ಮತ್ತು ಅವರ ದುಃಖ ದುಮ್ಮಾನಗಳನ್ನು ಆಲಿಸಿ, ಅವುಗಳಿಗೆ ಉಪಸ್ಥಿತ ಇಲಾಖಾ ಅಧಿಕಾರಿಗಳ ಸಮ್ಮುಖದಲ್ಲಿ ಸ್ಥಳದಲ್ಲಿಯೇ ಸೂಕ್ತ ಹಾಗೂ ಸಮಾಧಾನದ ಪರಿಹಾರ ನೀಡುವ ಸಲುವಾಗಿ ಪ್ರಜಾಸೇವಾ ಆಂದೋಲನ ಸಭೆಗಳನ್ನು ಆಯೋಜಿಸಲಾಗುತ್ತಿದೆ ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಮಧು ಬಂಗಾರಪ್ಪ ಅವರು ಹೇಳಿದರು.
ಅವರು ಇಂದು ಸೊರಬದ ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ತಾಲೂಕು ಮಟ್ಟದ ಪ್ರಜಾಸೇವಾ ಆಂದೋಲನ ಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಜನರಿರುವಲ್ಲಿಗೆ ಆಡಳಿತ ವಿಭಾಗದ ಹಿರಿಯ ಅಧಿಕಾರಿಗಳು ಹಾಗೂ ಶಾಸಕರು ಮತ್ತು ಸಚಿವರು ತೆರಳಿ ಜನರ ಸಮಸ್ಯೆಗೆ ಸ್ಪಂದಿಸುವ ಮಾನ್ಯ ಮುಖ್ಯ ಮಂತ್ರಿಗಳ ಆಶಯದ ಮಹತ್ವದ ಕಾರ್ಯಕ್ರಮ ಇದಾಗಿದೆ ಎಂದ ಅವರು, ಸಾರ್ವಜನಿಕರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ತಾಲೂಕು, ಜಿಲ್ಲಾ ಕೇಂದ್ರಗಳಿಗೆ ಅನಗತ್ಯವಾಗಿ ಅಲೆಯುವುದು ತಪ್ಪಲಿದೆ ಮಾತ್ರವಲ್ಲ ಅವರ ಶ್ರಮದ ಹಣ ಮತ್ತು ಸಮಯ ಉಳಿತಾಯವಾಗುವುದರ ಜೊತೆಗೆ ಸಮಸ್ಯೆಗೆ ಸಕಾಲಿಕ ಪರಿಹಾರ ದೊರೆತು ನೆಮ್ಮದಿಯ ಬದುಕು ಸೃಷ್ಟಿಯಾಗಲಿದೆ. ಇದು ಸರ್ಕಾರದ ಉದ್ದೇಶವೂ ಆಗಿದೆ ಎಂದರು.
ಬಹು ಮುಖ್ಯವಾಗಿ ಪ್ರಜಾಸೇವಾ ಆಂದೋಲನವು ಜನರ ಹಕ್ಕುಗಳು, ಅಗತ್ಯಗಳು ಮತ್ತು ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಉತ್ತಮ ಆಡಳಿತವನ್ನು ರೂಪಿಸುವ ಮಹತ್ವದ ಸಾಮಾಜಿಕ ಕಾರ್ಯಕ್ರಮವಾಗಿದೆ. ಪ್ರಜಾಪ್ರಭುತ್ವದಲ್ಲಿ ಸರ್ಕಾರ ಮತ್ತು ಜನರ ನಡುವೆ ಪರಿಣಾಮಕಾರಿ ಸಂಪರ್ಕ ಹಾಗೂ ಸಹಭಾಗಿತ್ವವನ್ನು ಬೆಳೆಸುವುದು ಇದರ ಪ್ರಮುಖ ಉದ್ದೇಶವಾಗಿದೆ.
ಪ್ರಜಾಸೇವಾ ಆಂದೋಲನದ ಮೂಲಕ ಸಾರ್ವಜನಿಕ ಸೇವೆಗಳ ಗುಣಮಟ್ಟ ಸುಧಾರಣೆ, ಪಾರದರ್ಶಕತೆ, ಹೊಣೆಗಾರಿಕೆ ಮತ್ತು ಜನಸಹಭಾಗಿತ್ವಕ್ಕೆ ಉತ್ತೇಜನ ದೊರೆಯುತ್ತದೆ ಎಂದರು.
ಸರ್ಕಾರದ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಮಾಡುವಲ್ಲಿ ಹಾಗೂ ನಾಗರಿಕರಲ್ಲಿ ಜಾಗೃತಿ ಮೂಡಿಸುವಲ್ಲಿ ಈ ಆಂದೋಲನ ಸಭೆ ಪ್ರಮುಖ ಪಾತ್ರ ವಹಿಸಲಿದೆ. ಇಂತಹ ಕಾರ್ಯಕ್ರಮಗಳು ಭ್ರಷ್ಟಾಚಾರ, ಅನ್ಯಾಯ, ಅಸಮಾನತೆ ಮತ್ತು ಆಡಳಿತಾತ್ಮಕ ವಿಳಂಬಗಳ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸುತ್ತವೆ. ಜೊತೆಗೆ ತಮ್ಮ ಹಕ್ಕುಗಳ ಮತ್ತು ಕರ್ತವ್ಯಗಳ ಬಗ್ಗೆಯೂ ಸಾರ್ವಜನಿಕರಲ್ಲಿ ಅರಿವು ಮೂಡಿಸುತ್ತವೆ ಎಂದ ಅವರು “ಜನರಿಗಾಗಿ ಆಡಳಿತ, ಜನರೊಂದಿಗೆ ಆಡಳಿತ’ ಎಂಬ ಪ್ರಜಾಪ್ರಭುತ್ವದ ಆಶಯವನ್ನು ಬಲಪಡಿಸುವಲ್ಲಿ ಪ್ರಜಾಸೇವಾ ಆಂದೋಲನ ಮಹತ್ವದ ಪಾತ್ರ ವಹಿಸುತ್ತದೆ. ಇದು ಸಕ್ರಿಯ ನಾಗರಿಕ ಸಮಾಜವನ್ನು ನಿರ್ಮಿಸಿ, ಉತ್ತಮ ಆಡಳಿತ ಮತ್ತು ಸಮಗ್ರ ಸಾಮಾಜಿಕ ಅಭಿವೃದ್ಧಿಗೆ ದಾರಿ ಮಾಡಿಕೊಡುತ್ತದೆ ಎಂದರು.
ಪ್ರಜಾಸೇವಾ ಆಂದೋಲನ ಸಭೆಯಲ್ಲಿ ಪ್ರಮುಖವಾಗಿ ರಸ್ತೆ ಅಭಿವೃದ್ಧಿ, ಸ್ಕಾಲರ್ ಶಿಪ್, ಕಂದಾಯ ಇಲಾಖೆಯ, ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸೇರಿದಂತೆ ನೂರಾರು ಅರ್ಜಿಗಳು ಸಲ್ಲಿಕೆಯಾದವು.
ಸಭೆಯಲ್ಲಿ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ್, ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ., ಉಪವಿಭಾಗಾಧಿಕಾರಿ ಡಾ. ಮೈತ್ರಿ, ಭೂ ದಾಖಲೆಗಳ ಇಲಾಖೆಯ ಉಪನಿರ್ದೇಶಕಿ ಆಶಾಕುಮಾರಿ, ತಹಶೀಲ್ದಾರ್ ಪುರಂದರ, ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ ಕೆ. ಜಿ. ಶಶಿಧರ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುರೇಶ್ ಕುಳ್ಳೊಳ್ಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

