HomeLatest Newsತಂದೂರಿ ಅಡುಗೆಯಲ್ಲಿ ರೆಸ್ಟೋರೆಂಟ್ ಶೈಲಿಯ ಘಮ ಬರುತಿಲ್ಲವೇ? ನೀವು ಮಾಡುತ್ತಿರುವ ಈ 6 ತಪ್ಪುಗಳೇ ಕಾರಣ

ತಂದೂರಿ ಅಡುಗೆಯಲ್ಲಿ ರೆಸ್ಟೋರೆಂಟ್ ಶೈಲಿಯ ಘಮ ಬರುತಿಲ್ಲವೇ? ನೀವು ಮಾಡುತ್ತಿರುವ ಈ 6 ತಪ್ಪುಗಳೇ ಕಾರಣ

ತಂದೂರಿ ತಳಿಗಳೆಂದರೆ ಆಹಾರ ಪ್ರಿಯರ ಬಾಯಲ್ಲಿ ನೀರೂರುವುದು ಸಹಜ. ಹೋಟೆಲ್ ಅಥವಾ ರೆಸ್ಟೋರೆಂಟ್‌ಗಳಲ್ಲಿ ಸಿಗುವ ಆ ವಿಶಿಷ್ಟವಾದ ಹೊಗೆಯ ಘಮ ಹಾಗೂ ಕ್ರಿಸ್ಪಿ ರುಚಿ ಮನೆಯಲ್ಲಿ ಮಾಡುವಾಗ ಸಿಗುವುದಿಲ್ಲ ಎಂಬುದು ಹಲವರ ದೂರು. ತಂದೂರಿ ಖಾದ್ಯಗಳು ಅಪೇಕ್ಷಿತ ರುಚಿ ನೀಡದಿರಲು ನಾವು ಮಾಡುವ ಕೆಲವು ಸಣ್ಣಪುಟ್ಟ ಲೋಪದೋಷಗಳೇ ಮುಖ್ಯ ಕಾರಣ. ಪ್ರಸಿದ್ಧ ತಂದೂರಿ ತಜ್ಞ ಬಾಣಸಿಗ ಜಗದೀಶ್ ಸಿಂಗ್ ಅವರ ಪ್ರಕಾರ, ಮನೆಯಲ್ಲಿ ತಂದೂರಿ ಭಕ್ಷ್ಯಗಳನ್ನು ಸಿದ್ಧಪಡಿಸುವಾಗ ಮಾಡುವ 6 ಪ್ರಮುಖ ತಪ್ಪುಗಳು ಮತ್ತು ಅವುಗಳನ್ನು ಸರಿಪಡಿಸಿಕೊಳ್ಳುವ ವಿಧಾನ ಇಲ್ಲಿದೆ.

1. ತಂದೂರನ್ನು ಸರಿಯಾಗಿ ಕಾಯಿಸದಿರುವುದು: ತಂದೂರಿ ಅಡುಗೆಯ ಮುಖ್ಯ ರಹಸ್ಯವೇ ಅದರ ತಾಪಮಾನ. ಆಹಾರವನ್ನು ಬೇಯಿಸಲು ಇಡುವ ಮೊದಲು ತಂದೂರ್ ಅಥವಾ ಓವನ್ ಅಗತ್ಯ ಪ್ರಮಾಣದಲ್ಲಿ ಬಿಸಿಯಾಗಿರಬೇಕು. ಕಡಿಮೆ ಶಾಖದಲ್ಲಿದ್ದಾಗ ಆಹಾರವನ್ನು ಒಳಗಿಟ್ಟರೆ, ಅದು ಬೇಯಲು ಹೆಚ್ಚಿನ ಸಮಯ ತೆಗೆದುಕೊಂಡು ಒಳಗಿನ ತೇವಾಂಶವೆಲ್ಲಾ ಆವಿಯಾಗಿ ಒಣಗಿದಂತಾಗುತ್ತದೆ. ಸರಿಯಾದ ತಾಪಮಾನವಿದ್ದಾಗ ಮಾತ್ರ ಚಿಕನ್ ಅಥವಾ ಪನ್ನೀರ್ ಹೊರಭಾಗದಲ್ಲಿ ಕಂದು ಬಣ್ಣಕ್ಕೆ ತಿರುಗಿ, ಒಳಗೆ ಮೃದುವಾಗಿ ಉಳಿಯುತ್ತದೆ.

2. ಅತಿಯಾದ ಮಸಾಲೆ ಲೇಪನ: ಹೆಚ್ಚು ಮಸಾಲೆ ಹಚ್ಚಿದರೆ ರುಚಿ ಹೆಚ್ಚುತ್ತದೆ ಎಂಬುದು ತಪ್ಪು ಕಲ್ಪನೆ. ಮಾಂಸ ಅಥವಾ ಪನ್ನೀರ್ ತುಂಡುಗಳಿಗೆ ಅತಿಯಾಗಿ ಮಸಾಲೆ ದಪ್ಪಗೆ ಲೇಪಿಸಿದರೆ, ಅದು ಸುರಿಯಲಾರಂಭಿಸಿ ತಂದೂರ್‌ನಲ್ಲಿ ತೇವಾಂಶವನ್ನು ಹೆಚ್ಚಿಸುತ್ತದೆ. ಇದರಿಂದ ಆಹಾರ ಸರಿಯಾಗಿ ಗ್ರಿಲ್ ಆಗುವುದಿಲ್ಲ. ಕೇವಲ ಅಗತ್ಯವಿದ್ದಷ್ಟು ಮಸಾಲೆಯನ್ನು ತೆಳುವಾಗಿ ಲೇಪಿಸಿದರೆ ಸಾಕು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

3. ಮ್ಯಾರಿನೇಷನ್ ನಂತರ ಸಮಯ ನೀಡದಿರುವುದು: ಮಸಾಲೆ ಹಚ್ಚಿದ ತಕ್ಷಣವೇ ಬೇಯಿಸಲು ಇಟ್ಟರೆ ಮಸಾಲೆಯ ರುಚಿ ಆಹಾರದ ಆಳಕ್ಕೆ ಇಳಿಯುವುದಿಲ್ಲ. ಮೊಸರು, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಗೂ ಸಾಂಬಾರ ದಿನಸಿಗಳನ್ನು ಹಚ್ಚಿದ ನಂತರ ಕನಿಷ್ಠ ಕೆಲವು ಗಂಟೆಗಳ ಕಾಲ ಫ್ರಿಡ್ಜ್‌ನಲ್ಲಿ ಇಡಬೇಕು. ಬೇಯಿಸುವ ಮುನ್ನ ಅದನ್ನು ಹೊರತೆಗೆದು ಕೋಣೆಯ ತಾಪಮಾನಕ್ಕೆ ತಂದು ನಂತರ ತಂದೂರ್‌ನಲ್ಲಿ ಇಟ್ಟರೆ ಸಮಾನವಾಗಿ ಬೇಯುತ್ತದೆ.

4. ತಾಪಮಾನದ ಮೇಲಿನ ನಿಯಂತ್ರಣ ತಪ್ಪುವುದು: ಅತಿಯಾದ ಶಾಖವಿದ್ದರೆ ಆಹಾರದ ಹೊರಭಾಗ ತಕ್ಷಣವೇ ಸೀದು ಹೋಗಿ, ಒಳಭಾಗ ಹಸಿಯಾಗಿಯೇ ಉಳಿಯುತ್ತದೆ. ಅದೇ ರೀತಿ ಶಾಖ ತೀರ ಕಡಿಮೆಯಾದರೆ ಖಾದ್ಯ ತನ್ನ ನೈಜ ಬಣ್ಣ ಹಾಗೂ ರುಚಿಯನ್ನು ಕಳೆದುಕೊಳ್ಳುತ್ತದೆ. ಆದ್ದರಿಂದ ಉರಿಯ ಪ್ರಮಾಣವನ್ನು ಹದವಾಗಿ ಕಾಯ್ದುಕೊಳ್ಳುವುದು ಅತ್ಯಗತ್ಯ.

5. ಕೃತಕವಾಗಿ ಹೊಗೆಯ ಘಮ ನೀಡಲು ಯತ್ನಿಸುವುದು: ಇತ್ತೀಚೆಗೆ ತಂದೂರಿ ರುಚಿ ತರಲು ಕೃತಕ ವಿಧಾನಗಳನ್ನು ಅಥವಾ ರಾಸಾಯನಿಕಗಳನ್ನು ಬಳಸುವುದು ಹೆಚ್ಚಾಗಿದೆ. ಇದರಿಂದ ನೈಜ ಸಾಂಬಾರ ಪದಾರ್ಥಗಳ ಸುವಾಸನೆ ಹಾಳಾಗಿ, ಸುಟ್ಟ ವಾಸನೆ ಬರತೊಡಗುತ್ತದೆ. ನೈಸರ್ಗಿಕವಾಗಿ ತಂದೂರ್‌ನ ಅಧಿಕ ಶಾಖದಲ್ಲಿ ಹದವಾಗಿ ಬೇಯಿಸಿದಾಗ ಮಾತ್ರ ನಿಜವಾದ ತಂದೂರಿ ಸುವಾಸನೆ ದೊರೆಯುತ್ತದೆ.

6. ಕಡ್ಡಿಗಳಿಗೆ ಸೂಕ್ತವಾಗಿ ಪೋಣಿಸದಿರುವುದು: ಕಡ್ಡಿಗಳಿಗೆ ಆಹಾರದ ತುಂಡುಗಳನ್ನು ಪೋಣಿಸುವ ವಿಧಾನವೂ ಪಕ್ವತೆಗೆ ಪ್ರಮುಖವಾಗಿದೆ. ತುಂಡುಗಳನ್ನು ತೀರಾ ಹತ್ತಿರವಾಗಿ ಒತ್ತಿ ಪೋಣಿಸಿದರೆ ಗಾಳಿ ಹಾಗೂ ಶಾಖ ಸರಿಯಾಗಿ ತಾಗದೆ ಸರಿಯಾಗಿ ಬೇಯುವುದಿಲ್ಲ. ತೀರಾ ದೂರವಿದ್ದರೆ ಜಾರಿ ಬೀಳುವ ಸಾಧ್ಯತೆ ಇರುತ್ತದೆ. ಸಮಾನ ಗಾತ್ರದ ತುಂಡುಗಳನ್ನು ಅಲ್ಪ ಅಂತರದಲ್ಲಿ ಪೋಣಿಸಿದರೆ ಶಾಖ ಸರಿಯಾಗಿ ಹರೆದು ಉತ್ತಮವಾಗಿ ಬೇಯುತ್ತದೆ.

ಈ ಸರಳ ತಂತ್ರಗಳನ್ನು ಅನುಸರಿಸುವ ಮೂಲಕ ನೀವು ಸಹ ಮನೆಯಲ್ಲೇ ಅತ್ಯುತ್ತಮ ಹಾಗೂ ರುಚಿಕರವಾದ ತಂದೂರಿ ಖಾದ್ಯಗಳನ್ನು ಸಿದ್ಧಪಡಿಸಬಹುದು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular