ನಿಮ್ಮ ಬಳಿ 1 ಕೋಟಿ ರೂಪಾಯಿಗಳ ನಿವೃತ್ತಿ ನಿಧಿ (Retirement Corpus) ಇದ್ದರೆ, ಆ ಹಣ ಮುಗಿದುಹೋಗದಂತೆ ಪ್ರತಿ ತಿಂಗಳು ಎಷ್ಟು ಹಣವನ್ನು ಹಿಂಪಡೆಯಬಹುದು ಎಂಬ ಪ್ರಶ್ನೆ ಪ್ರತಿಯೊಬ್ಬ ನಿವೃತ್ತರಲ್ಲೂ ಮೂಡುವುದು ಸಹಜ. ಆದರೆ ಇದಕ್ಕೆ ಯಾವುದೇ ಒಂದೇ ರೀತಿಯ ಸ್ಥಿರ ಉತ್ತರವಿಲ್ಲ. ನಿಮ್ಮ ನಿವೃತ್ತಿಯ ವಯಸ್ಸು, ಮಾಸಿಕ ವೆಚ್ಚ, ಹಣದುಬ್ಬರ, ಲಭ್ಯವಿರುವ ಹೂಡಿಕೆಯ ಮೇಲಿನ ಆದಾಯ ಹಾಗೂ ನಿಧಿಯು ಎಷ್ಟು ವರ್ಷಗಳ ಕಾಲ ನಿಮಗೆ ಸಾಲಬೇಕು ಎಂಬುದರ ಮೇಲೆ ಈ ಲೆಕ್ಕಾಚಾರ ಆಧಾರಿತವಾಗಿರುತ್ತದೆ.
ಕಡಿಮೆ ಹಿಂಪಡೆಯುವಿಕೆ ದರದಿಂದ (Withdrawal Rate) ಪ್ರಾರಂಭಿಸಿ
ಉದಾಹರಣೆಗೆ, 1 ಕೋಟಿ ರೂಪಾಯಿ ನಿಧಿಯಿಂದ ಪ್ರತಿ ತಿಂಗಳು 50,000 ರೂಪಾಯಿ ಹಿಂಪಡೆದರೆ, ಮೊದಲ ವರ್ಷದಲ್ಲೇ 6 ಲಕ್ಷ ರೂಪಾಯಿ ಅಂದರೆ ಒಟ್ಟು ನಿಧಿಯ ಶೇಕಡಾ 6 ರಷ್ಟು ಹಣ ಖಾಲಿಯಾಗುತ್ತದೆ. ಇದು ಆರಂಭದಲ್ಲಿ ಸರಿಯಾಗಿ ಕಾಣಿಸಿದರೂ, 25 ರಿಂದ 30 ವರ್ಷಗಳ ದೀರ್ಘ ನಿವೃತ್ತಿ ಜೀವನಕ್ಕೆ ಅಪಾಯಕಾರಿ.
-
ಶೇಕಡಾ 3 ರ ನಿಯಮ: ವರ್ಷಕ್ಕೆ 3 ಲಕ್ಷ ರೂಪಾಯಿ (ಪ್ರತಿ ತಿಂಗಳಿಗೆ 25,000 ರೂಪಾಯಿ).
-
ಶೇಕಡಾ 4 ರ ನಿಯಮ: ವರ್ಷಕ್ಕೆ 4 ಲಕ್ಷ ರೂಪಾಯಿ (ಪ್ರತಿ ತಿಂಗಳಿಗೆ ಸುಮಾರು 33,333 ರೂಪಾಯಿ).
-
ಶೇಕಡಾ 5 ರ ನಿಯಮ: ಪ್ರತಿ ತಿಂಗಳಿಗೆ ಸುಮಾರು 41,667 ರೂಪಾಯಿ.
ಪಿಎಫ್ಆರ್ಡಿಎ (PFRDA) ಅಧ್ಯಯನದ ಪ್ರಕಾರ, 30 ವರ್ಷಗಳ ದೀರ್ಘಾವಧಿಯ ಲೆಕ್ಕಾಚಾರದಲ್ಲಿ ಶೇಕಡಾ 4 ರಷ್ಟು ಹಿಂಪಡೆಯುವಿಕೆ ದರವೂ ಸಹ ಕೆಲವು ಪರಿಸ್ಥಿತಿಗಳಲ್ಲಿ ನಿಧಿಯನ್ನು ಬೇಗನೆ ಖಾಲಿ ಮಾಡಬಹುದು ಎಂದು ತಿಳಿಸಲಾಗಿದೆ.
ಹಣದುಬ್ಬರ ಮತ್ತು ವೈದ್ಯಕೀಯ ವೆಚ್ಚಗಳ ಸವಾಲು
ಇಂದು ನೀವು ಮಾಸಿಕ 40,000 ರೂಪಾಯಿ ವೆಚ್ಚ ಮಾಡುತ್ತಿದ್ದರೆ, ಹಣದುಬ್ಬರವು ಸರಾಸರಿ ಶೇಕಡಾ 6 ರಷ್ಟಿದ್ದರೆ, ಇಂದಿನ 40,000 ರೂಪಾಯಿ ಮಾಸಿಕ ವೆಚ್ಚವು 10 ವರ್ಷಗಳ ನಂತರ 71,600 ರೂಪಾಯಿ ಹಾಗೂ 20 ವರ್ಷಗಳ ನಂತರ ಬರೋಬ್ಬರಿ 1.28 ಲಕ್ಷ ರೂಪಾಯಿಗೆ ತಲುಪುತ್ತದೆ. ಆದ್ದರಿಂದ ಪ್ರತಿ ತಿಂಗಳು ನಿಗದಿತ ಮೊತ್ತವನ್ನು ಮಾತ್ರ ಹಿಂಪಡೆಯುವುದು ದೀರ್ಘಾವಧಿಗೆ ಸೂಕ್ತವಲ್ಲ. ಇದರೊಂದಿಗೆ ವಯಸ್ಸಾದಂತೆ ಹೆಚ್ಚಾಗುವ ವೈದ್ಯಕೀಯ ವೆಚ್ಚಗಳು ಹಾಗೂ ಹೆಲ್ತ್ ಇನ್ಶೂರೆನ್ಸ್ ಪ್ರೀಮಿಯಂಗಳು ನಿವೃತ್ತಿ ನಿಧಿಯ ಮೇಲೆ ಹೆಚ್ಚಿನ ಭಾರವನ್ನು ಹಾಕುತ್ತವೆ.
ಹೂಡಿಕೆ ಮತ್ತು ಪರ್ಯಾಯ ಆದಾಯದ ಪ್ರಾಮುಖ್ಯತೆ
ನಿವೃತ್ತಿಯ 1 ಕೋಟಿ ರೂಪಾಯಿಗಳನ್ನು ಕೇವಲ ಉಳಿತಾಯ ಖಾತೆಯಲ್ಲಿ ಇಡದೆ, ಸುರಕ್ಷಿತ ಹಾಗೂ ಸೂಕ್ತ ಹೂಡಿಕೆ ಯೋಜನೆಗಳಲ್ಲಿ ತೊಡಗಿಸುವುದು ಅಗತ್ಯ. ಆದರೆ ಮಾರುಕಟ್ಟೆಯ ಏರಿಳಿತಗಳಿಂದ ಅಪಾಯವಾಗದಂತೆ ತಡೆಯಲು, ತಕ್ಷಣದ ವೆಚ್ಚಗಳಿಗೆ ಬೇಕಾಗುವ ಹಣವನ್ನು ಸುರಕ್ಷಿತ ಜಾಗದಲ್ಲಿಟ್ಟು, ಉಳಿದ ಹಣವನ್ನು ದೀರ್ಘಾವಧಿ ಹೂಡಿಕೆಗೆ ಬಳಸುವುದು ಉತ್ತಮ.
ನಿಮ್ಮ ಮಾಸಿಕ ವೆಚ್ಚ 50,000 ರೂಪಾಯಿ ಇದ್ದು, ಪಿಂಚಣಿ ಅಥವಾ ಬಾಡಿಗೆಯಿಂದ ತಿಂಗಳಿಗೆ 25,000 ರೂಪಾಯಿ ಪರ್ಯಾಯ ಆದಾಯ ಬರುತ್ತಿದ್ದರೆ, ನಿವೃತ್ತಿ ನಿಧಿಯಿಂದ ಕೇವಲ 25,000 ರೂಪಾಯಿ ಹಿಂಪಡೆದರೆ ಸಾಕಾಗುತ್ತದೆ. ಇದು ನಿಮ್ಮ 1 ಕೋಟಿ ನಿಧಿಯು ಸುದೀರ್ಘ ಕಾಲದವರೆಗೆ ಖಾಲಿಯಾಗದಂತೆ ಕಾಪಾಡುತ್ತದೆ. ಆದ್ದರಿಂದ ನಿಮ್ಮ ವಾರ್ಷಿಕ ವೆಚ್ಚಗಳನ್ನು ಸರಿಯಾಗಿ ಅಂದಾಜಿಸಿ, ಪರ್ಯಾಯ ಆದಾಯವನ್ನು ಕಳೆದು, ನಂತರ ನಿಧಿಯಿಂದ ಹಿಂಪಡೆಯುವ ಮೊತ್ತವನ್ನು ನಿರ್ಧರಿಸುವುದು ಜಾಣತನ.

