ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದಲ್ಲಿ ಡಿಜಿಟಲ್ ಮೌಲ್ಯಮಾಪನದಲ್ಲಿ ನಡೆಯುತ್ತಿರುವ ಹಣಕಾಸಿನ ಅವ್ಯವಹಾರವು ಕೆ.ಪಿ.ಎಸ್.ಸಿ.ಹಗರಣಕ್ಕಿಂತ ದೊಡ್ಡ ಮಟ್ಟದ್ದಾಗಿದ್ದು, ಇದರ ವಿರುದ್ಧ ಸಿಐಡಿ ತನಿಖೆ ಆದೇಶಿಸಬೇಕು. ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಡಿಜಿಟಲ್ ಮೌಲ್ಯಮಾಪನದ ಹೆಸರಲ್ಲಿ ದೊಡ್ಡ ಷಡ್ಯಂತ್ರ ನಡೆದಿದೆ. ಇದೇ ಸೆಮಿಸ್ಟರ್ ನಿಂದಲೇ ಡಿಜಿಟಲ್ ಮೌಲ್ಯಮಾಪನ ನಿಲ್ಲಿಸಬೇಕು. ರಾಜ್ಯದ ಬೇರಾವುದೇ ವಿವಿಗಳಲ್ಲಿ ಇಲ್ಲದ ಡಿಜಿಟಲ್ ಮೌಲ್ಯಮಾಪನ ಪದ್ಧತಿಯನ್ನು ಇಲ್ಲೇಕೆ ಅಳವಡಿಸಿಕೊಂಡಿದ್ದೀರಿ? ಇದರಲ್ಲಿ ಅನೇಕ ನ್ಯೂನ್ಯತೆ, ಗೊಂದಲಗಳಿವೆ. ಇದರಿಂದ ವಿದ್ಯಾರ್ಥಿಗಳಿಗೆ ಆಗುವ ಲಾಭ ಏನು? ಅನಾನುಕೂಲತೆಗಳೇನು ಎಂಬ ಬಗ್ಗೆ ವಿವಿಗೆ ಮಾಹಿತಿ ಕೇಳಿದ್ದೆ. ಮೂರುವರೆ ತಿಂಗಳಾದರೂ ವಿವಿಯಿಂದ ಉತ್ತರ ಬರಲಿಲ್ಲ ಎಂದರು.
ಸೆ.30ಕ್ಕೆ ನಿಗದಿಯಾಗಿದ್ದ ಸಿಂಡಿಕೇಟ್ ಸಭೆಯನ್ನು ಸಭೆಯ ಮುಂಚಿನ ದಿನ ಸಂಜೆ ಏಕಾಏಕಿ ಮುಂದೆ ಹಾಕಿದ್ದರ ಕಾರಣವೇನು ಎಂದು ಖಾರವಾಗಿ ಪ್ರಶ್ನಿಸಿದರು.
ಈ ಹಗರಣದ ಕುರಿತು ಅನೇಕರಿಂದ ರಾಜ್ಯಪಾಲರಿಗೂ ದೂರು ಸಲ್ಲಿಕೆಯಾಗಿದೆ. ಅವರು ಕುಲಪತಿಗಳಿಗೆ ಶೋಕಾಸ್ ನೋಟಿಸನ್ನೂ ಜಾರಿಗೊಳಿಸಿದ್ದಾರೆ. ವಿಷಯ ಮಾತನಾಡಿದ್ದಕ್ಕೆ ಕುಲಪತಿಗಳು ನನ್ನ ಮೇಲೆಯೇ ಮಾನಹಾನಿ ಮೊಕದ್ದಮೆ ಹೂಡುವುದಾಗಿ ಹೇಳುತ್ತಾರೆ. ತಮ್ಮ ಒತ್ತಾಯದಿಂದಾಗಿ ಅಂದಿನ ಪ್ರಭಾರ ಕುಲಸಚಿವ ಹೇಮಂತ್ ಎನ್. ಅವರು ಈ ಕುರಿತು ಸಮಗ್ರ ವರದಿ ನೀಡಲು ಮೂರು ಜನರ ಸಮಿತಿ ರಚಿಸಿದ್ದರು. ಸಮಿತಿ ವರದಿ ಸಿದ್ಧಪಡಿಸಿದೆ. ನಿಯಮಾನುಸಾರ ಎರಡು ವರ್ಷಗಳ ಅವಧಿಗೆ ಕೊಡಬೇಕಾದ ಟೆಂಡರ್ ಅನ್ನು ಖಾಸಗಿ ಕಂಪನಿಯೊಂದಕ್ಕೆ ಆರು ವರ್ಷಗಳಿಗೆ ಕೊಟ್ಟಿದ್ದರ ಹಿಂದಿನ ಮರ್ಮವೇನು ಎಂದು ಪ್ರಶ್ನಿಸಿದರು.
ಟೆಂಡರ್ ದಾರರೊಂದಿಗೆ ಮಾಡಿಕೊಂಡ ಒಡಂಬಡಿಕೆಯ ಅನ್ವಯ ಡಿಜಿಟಲ್ ಮೌಲ್ಯಮಾಪಕರಿಗೆ ಕಂಪ್ಯೂಟರ್, ಸಿಸಿಟಿವಿ ಕ್ಯಾಮರಾ ಕೊಡಬೇಕಿತ್ತು. ಅದ್ಯಾವುದನ್ನೂ ಮಾಡಲಿಲ್ಲ. ಮೌಲ್ಯಮಾಪಕರು ಎಲ್ಲೆಂದರಲ್ಲಿ ಮೌಲ್ಯಮಾಪನ ಮಾಡುತ್ತಿರುವುದರಿಂದ ಮೌಲ್ಯಮಾಪನದ ಪಾವಿತ್ರ್ಯತೆಯೂ ಹಾಳಾಗಿದೆ ಎಂದು ದೂರಿದರು.
ಪರೀಕ್ಷಾ ಫಾರಂನ್ನು ತುಂಬುವುದರಿಂದ ಹಿಡಿದು ಉಪನ್ಯಾಸಕರು ಮೌಲ್ಯಮಾಪನ ಮಾಡಿ ಅಂಕಪಟ್ಟಿ ಸಿದ್ಧಪಡಿಸುವವರೆಗೂ ಡಿಜಿಟಲ್ ವ್ಯವಸ್ಥೆ ಇದ್ದರೂ ಆ ಅಂಕಗಳನ್ನು ಯುಯುಸಿಎಂಎಸ್ ತಂತ್ರಾಂಶಕ್ಕೆ ಸೇರಿಸುವಾಗ ಮಾತ್ರ ಮ್ಯಾನ್ಯುಯಲ್ ವ್ಯವಸ್ಥೆ ಅಳವಡಿಸಿಕೊಳ್ಳಲಾಗಿದೆ. ಮೌಲ್ಯಮಾಪನ ಮಾಡುವ ಉತ್ತರ ಪತ್ರಿಕೆಗಳ ಸ್ಕ್ಯಾನಿಂಗ್ ಗುಣಮಟ್ಟವಂತೂ ಹೇಳತೀರದು. ಓದಲಿಕ್ಕೇ ಸಾಧ್ಯವಿರುವುದಿಲ್ಲ. ಈಗಾಗಲೇ ಕಡಿಮೆ ಅಂಕ ಪಡೆದವರಿಗೆ ಮೌಲ್ಯಮಾಪನ ವಿಭಾಗದಲ್ಲಿರುವ ಔಟ್ ಸೋರ್ಸ್ ಸಿಬ್ಬಂದಿಯೊಬ್ಬರು ನಿಯಮ ಬಾಹಿರವಾಗಿ ಹೆಚ್ಚಿನ ಅಂಕ ನೀಡಿದ್ದು ಅದರ ವಿರುದ್ಧ ಭದ್ರಾವತಿ ಪೋಲಿಸ್ ಠಾಣೆಯಲ್ಲಿ ಎಫ್.ಐ.ಆರ್.ದಾಖಲಾಗಿದೆ. ಒಂದು ವಿಷಯಕ್ಕೆ 10 ಸಾವಿರ ರೂ. ಲಂಚ ನಿಗದಿಯಾಗಿದ್ದು 5 ವಿಷಯಕ್ಕೆ 50 ಸಾವಿರ ರೂ. ಪೀಕಲಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಪ್ರಕರಣ ಈಗ ಶಿವಮೊಗ್ಗದ ಜಯನಗರ ಠಾಣೆಗೆ ವರ್ಗಾವಣೆಯಾಗಿ ತನಿಖೆ ಮುಂದುವರಿದಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್, ಪ್ರಮುಖರಾದ ಎಸ್.ದತ್ತಾತ್ರಿ, ಸಿ.ಹೆಚ್.ಮಾಲತೇಶ್, ಮಂಜುನಾಥ್ ಎನ್., ಚಂದ್ರಶೇಖರ್, ಈಶ್ವರಪ್ಪ ಇದ್ದರು.
ಕುವೆಂಪು ವಿಶ್ವವಿದ್ಯಾಲಯ ಪರಿಕ್ಷಾ ಶುಲ್ಕವಾಗಿ 7.6 ಕೋಟಿ ರೂ. ಸಂಗ್ರಹಿಸಿದೆ. ಒಂದು ವರ್ಷಕ್ಕೆ ಮ್ಯಾನ್ಯೂಯಲ್ ಮೌಲ್ಯಮಾಪನಕ್ಕಿಂತ ಡಿಜಿಟಲ್ ಮೌಲ್ಯಮಾಪನಕ್ಕೆ ಹೆಚ್ಚುವರಿ 2.94ಕೋಟಿ ರೂ. ವೆಚ್ಚ ಮಾಡುತ್ತಿದೆ. 2025ಕ್ಕೆ ಕುವೆಂಪು ವಿಶ್ವವಿದ್ಯಾಲಯ ವಿವಿಧ ಬಾಬತ್ತುಗಳಿಂದ 20.15 ಕೋಟಿ ರೂ.ಸಂಗ್ರಹಿಸಿದೆ. 2024-25ಕ್ಕೆ 13.12 ಕೋಟಿ ರೂ.ವ್ಯಯಿಸಿದೆ. ಅತಿಥಿ ಉಪನ್ಯಾಸಕರಿಗೆ ಕಳೆದ 4 ತಿಂಗಳಿಂದ ವೇತನ ನೀಡಲೂ ದುಡ್ಡಿಲ್ಲ.
-ಡಿ.ಎಸ್.ಅರುಣ್

