ಬೆಂಗಳೂರು: ಬಿಗ್‌ಬಾಸ್ ಮನೆಯಲ್ಲಿನ ಸ್ಪರ್ಧಿಗಳ ನಡುವಿನ ಜಗಳ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಸೀಸನ್‌ನಲ್ಲಿ ಕಿಚ್ಚನ ಚಪ್ಪಾಳೆ ಪಡೆದುಕೊಂಡ ಮೊದಲ ಸ್ಪರ್ಧಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಆಸಿಯಾ ಫಿರ್ದೋಸ್, ಇದೀಗ ಲಿಖಿತ್ ಮತ್ತು ಮಾಡರ್ನ್ ಮಹಾಕವಿ ಮಂಜ ವಿರುದ್ಧ ಸಿಟ್ಟಾಗಿದ್ದಾರೆ.
ಬಿಗ್‌ಬಾಸ್ ಬಿಡುಗಡೆ ಮಾಡಿರುವ ಹೊಸ ಪ್ರೋಮೋದಲ್ಲಿ ಆಸಿಯಾ ಇಬ್ಬರ ವಿರುದ್ಧವೂ ಗರಂ ಆಗಿರುವ ದೃಶ್ಯಗಳು ಕಂಡುಬಂದಿವೆ. ಮಾತಿನ ಚಕಮಕಿಯ ವೇಳೆ, “ನಾನು ಮನೆಯಿಂದ ಹೋದ್ರೂ ಪರವಾಗಿಲ್ಲ, ಇಬ್ರು ಹುಡುಗ್ರನ್ನ ಹೊಡೆದು ಹೋಗ್ತೀನಿ” ಎಂದು ಆಸಿಯಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆಸಿಯಾ ಕೋಪಕ್ಕೆ ಕಾರಣವೇನು?
ಈ ಜಗಳಕ್ಕೆ ಲಿಖಿತ್ ಕಾರಣ ಎನ್ನಲಾಗಿದೆ. ಮನೆಯ ಪ್ರಧಾನ ಬಾಗಿಲ ಬಳಿ ನಿಂತಿದ್ದ ಲಿಖಿತ್, ಡೈನಿಂಗ್ ಹಾಲ್‌ನಲ್ಲಿ ಕುಳಿತಿದ್ದ ಆಸಿಯಾರನ್ನು ಅಣುಕಿಸಿ ವ್ಯಂಗ್ಯ ಮಾಡುತ್ತಿದ್ದರು.
ಲಿಖಿತ್ ಹೀಗೆ ಪದೇಪದೇ ಅಣುಕಿಸುತ್ತಿದ್ದನ್ನು ಗಮನಿಸಿದ ಆಸಿಯಾ, ಅಲ್ಲಿಂದಲೇ “ಮಂಗನ ಥರ ಕಾಣ್ತೀಯ” ಎಂದು ತಿರುಗೇಟು ನೀಡಿದ್ದಾರೆ.
ಆದರೂ ಲಿಖಿತ್ ಸುಮ್ಮನಾಗದೆ ಅದೇ ರೀತಿ ವರ್ತನೆ ಮುಂದುವರಿಸಿದಾಗ ಆಸಿಯಾ ಕುಳಿತಿದ್ದ ಜಾಗದಿಂದ ಎದ್ದು ಅವರ ಬಳಿ ಹೋಗಿದ್ದಾರೆ. ಈ ವೇಳೆ “ಮುಚ್ಕೊಂಡ್ ಇದ್ರೆ ಸರಿ ಇವಾಗ” ಎಂದು ಲಿಖಿತ್‌ಗೆ ಎಚ್ಚರಿಕೆ ನೀಡಿದ್ದಾರೆ.
ಮಂಜನ ಮೇಲೂ ಆಸಿಯಾ ಗರಂ
ಈ ಘಟನೆ ನಡೆಯುತ್ತಿದ್ದ ಸಂದರ್ಭದಲ್ಲಿ ಮಾಡರ್ನ್ ಮಹಾಕವಿ ಮಂಜ ಜೈಲಿನಲ್ಲಿದ್ದರು. ಅಲ್ಲಿಂದಲೇ ಮಂಜ ಸೀಟಿ ಹೊಡೆದು ಲಿಖಿತ್‌ಗೆ ಬೆಂಬಲ ಸೂಚಿಸುವ ರೀತಿಯಲ್ಲಿ ವರ್ತಿಸಿದ್ದಾರೆ.
ಇದರಿಂದ ಮತ್ತಷ್ಟು ಕೋಪಗೊಂಡ ಆಸಿಯಾ, ಮಂಜನಿಗೂ “ಮುಚ್ಕೊಂಡ್ ಕೂತ್ಕೊಳ್ಳೊಲೋ” ಎಂದು ಗದರಿಸಿದ್ದಾರೆ. ಬಳಿಕ ಮಂಜನನ್ನು ಅಳುಮುಂಜಿ ಎಂದು ರೇಗಿಸುತ್ತಾ ತಮ್ಮ ಆಕ್ರೋಶ ಮುಂದುವರಿಸಿದ್ದಾರೆ.
‘ಇಬ್ರು ಹುಡುಗ್ರನ್ನ ಹೊಡೆದು ಹೋಗ್ತೀನಿ’
ಲಿಖಿತ್ ಮತ್ತು ಮಂಜ ಇಬ್ಬರ ವರ್ತನೆಯಿಂದ ಕೋಪಗೊಂಡ ಆಸಿಯಾ, ಇಬ್ಬರನ್ನೂ ತರಾಟೆಗೆ ತೆಗೆದುಕೊಂಡಿದ್ದಾರೆ. ಇದೇ ವೇಳೆ “ನಾನು ಮನೆಯಿಂದ ಹೋದ್ರೂ ಪರವಾಗಿಲ್ಲ, ಇಬ್ರು ಹುಡುಗ್ರನ್ನ ಹೊಡೆದು ಹೋಗ್ತೀನಿ” ಎಂದು ಹೇಳಿದ್ದಾರೆ.
ಈ ಮಾತಿನೊಂದಿಗೆ ಆಸಿಯಾ ಇಬ್ಬರ ವಿರುದ್ಧವೂ ತಮ್ಮ ಆಕ್ರೋಶವನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿದ್ದಾರೆ. ಸದ್ಯ ಈ ಜಗಳದ ಪ್ರೋಮೋ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆಯುತ್ತಿದೆ. ಮುಂದಿನ ಸಂಚಿಕೆಯಲ್ಲಿ ಈ ವಿಚಾರ ಯಾವ ಹಂತಕ್ಕೆ ಹೋಗಲಿದೆ ಎಂಬ ಕುತೂಹಲ ಮೂಡಿದೆ.

