HomeKarnatakaಸಾರ್ವಜನಿಕ ಆರೋಗ್ಯ ರಕ್ಷಣೆಗೆ ಮಹತ್ವದ ಕ್ರಮ: ಇನ್ನು ಸ್ಥಳದಲ್ಲೇ ತುರ್ತು ಚಿಕಿತ್ಸೆ: ‘ಬೈಕ್ ಆಂಬ್ಯುಲೆನ್ಸ್’ ಸೇವೆಗೆ...

ಸಾರ್ವಜನಿಕ ಆರೋಗ್ಯ ರಕ್ಷಣೆಗೆ ಮಹತ್ವದ ಕ್ರಮ: ಇನ್ನು ಸ್ಥಳದಲ್ಲೇ ತುರ್ತು ಚಿಕಿತ್ಸೆ: ‘ಬೈಕ್ ಆಂಬ್ಯುಲೆನ್ಸ್’ ಸೇವೆಗೆ ಸಚಿವ ಯು.ಟಿ. ಖಾದರ್ ಚಾಲನೆ

ಬೆಂಗಳೂರು: ಬೆಂಗಳೂರಿನಲ್ಲಿ ಮಣಿಪಾಲ್ ಆಸ್ಪತ್ರೆಗಳು ಆರಂಭಿಸಿರುವ ‘ಫಸ್ಟ್ ರೆಸ್ಪಾಂಡರ್ ಬೈಕ್ ಆಂಬ್ಯುಲೆನ್ಸ್’ ಸೇವೆಗೆ ಆರೋಗ್ಯ ಸಚಿವ ಯು.ಟಿ. ಖಾದರ್ ಚಾಲನೆ ನೀಡಿದ್ದಾರೆ.

ಸಂಚಾರ ದಟ್ಟಣೆ ಹಾಗೂ ಕಿರಿದಾದ ರಸ್ತೆಗಳಲ್ಲಿ ಸಾಮಾನ್ಯ ಆಂಬ್ಯುಲೆನ್ಸ್ ತಲುಪಲು ವಿಳಂಬವಾಗುವ ಪ್ರದೇಶಗಳಿಗೆ ತರಬೇತಿ ಪಡೆದ ಸಿಬ್ಬಂದಿ ಬೈಕ್ ಮೂಲಕ ಸುಮಾರು 10 ನಿಮಿಷಗಳಲ್ಲಿ ತಲುಪಿ, ಆಂಬ್ಯುಲೆನ್ಸ್ ಬರುವವರೆಗೆ ಸ್ಥಳದಲ್ಲೇ ತುರ್ತು ಚಿಕಿತ್ಸೆ ನೀಡಲಿದ್ದಾರೆ. ಪ್ರಥಮ ಚಿಕಿತ್ಸಾ ಕಿಟ್, ಪೋರ್ಟಬಲ್ ಆಮ್ಲಜನಕ ಸಿಲಿಂಡರ್, ಪೋರ್ಟಬಲ್ ಇಸಿಜಿ ಹಾಗೂ AED ಸೇರಿದಂತೆ ಜೀವರಕ್ಷಕ ಉಪಕರಣಗಳನ್ನು ಹೊಂದಿರುವ ಈ ಬೈಕ್‌ಗಳು ವೈಟ್‌ಫೀಲ್ಡ್, ಮಾರತಹಳ್ಳಿ, ಇಂದಿರಾನಗರ, ಹೆಬ್ಬಾಳ, ಯಲಹಂಕ, ಮಲ್ಲೇಶ್ವರಂ ಸೇರಿದಂತೆ ನಗರದ ಪ್ರಮುಖ ದಟ್ಟಣೆ ಪ್ರದೇಶಗಳಲ್ಲಿ ಸೇವೆ ನೀಡಲಿವೆ.

ತುರ್ತು ಸಂದರ್ಭದಲ್ಲಿ ಕೆಲವೇ ನಿಮಿಷಗಳ ವಿಳಂಬವೂ ಜೀವಕ್ಕೆ ಅಪಾಯ ತರಬಹುದು. ನಗರದ ಸಂಚಾರ ದಟ್ಟಣೆಯ ನಡುವೆ ತ್ವರಿತ ವೈದ್ಯಕೀಯ ನೆರವು ತಲುಪಿಸಲು ಇಂತಹ ವ್ಯವಸ್ಥೆಗಳು ಅತ್ಯಗತ್ಯ. ಸರ್ಕಾರವಾಗಲಿ ಅಥವಾ ಖಾಸಗಿ ಸಂಸ್ಥೆಯಾಗಲಿ, ಜನರಿಗೆ ಸೇವೆ ಒದಗಿಸುವುದು ಮುಖ್ಯ. ರೋಗಿಗೆ ವಿಳಂಬವಿಲ್ಲದೆ ಉತ್ತಮ ಚಿಕಿತ್ಸೆ ದೊರೆಯಬೇಕು ಎಂಬುದೇ ನಮ್ಮ ಮೊದಲ ಆದ್ಯತೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಜೀವ ಉಳಿಸುವ ಕಾರ್ಯಕ್ಕೆ ಸಂಚಾರ ದಟ್ಟಣೆ ಅಡ್ಡಿಯಾಗಬಾರದು ಎಂಬ ಉದ್ದೇಶದ ಈ ಉಪಕ್ರಮ ಶ್ಲಾಘನೀಯ. ಇದು ಇತರ ಆಸ್ಪತ್ರೆಗಳಿಗೂ ಮಾದರಿಯಾಗಿ, ನಮ್ಮ ನಗರದ ತುರ್ತು ವೈದ್ಯಕೀಯ ಸೇವೆಯನ್ನು ಮತ್ತಷ್ಟು ಬಲಪಡಿಸಲಿ ಎಂದು ಆಶಿಸುತ್ತೇನೆ ಎಂದು ಯು.ಟಿ. ಖಾದರ್ ತಿಳಿಸಿದ್ದಾರೆ.

ಸಾರ್ವಜನಿಕರ ಆರೋಗ್ಯ ರಕ್ಷಣೆಗೆ ಮಹತ್ವದ ನಿರ್ಧಾರ

ಆರೋಗ್ಯ ಸೌಧದಲ್ಲಿ ಸಚಿವ ಯು.ಟಿ. ಖಾದರ್, ಮೂರು ಪ್ರಮುಖ ಉನ್ನತ ಮಟ್ಟದ ಸಭೆಗಳನ್ನು ನಡೆಸಿ ಸಾರ್ವಜನಿಕ ಆರೋಗ್ಯ ರಕ್ಷಣೆಗೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಯಿತು.

ಮೊದಲನೆಯದಾಗಿ, ಕಾಕ್ಲಿಯರ್ ಇಂಪ್ಲಾಂಟೇಷನ್ ಹಾಗೂ NPPCD ದೃಷ್ಟಿಕೋನ ಸಮಿತಿ ಸಭೆಯಲ್ಲಿ, ಉಚಿತ ಶಸ್ತ್ರಚಿಕಿತ್ಸೆಗಾಗಿ ಕಾಯುತ್ತಿರುವ (Waitlisted) ಎಲ್ಲಾ ಮಕ್ಕಳಿಗೆ ಆದಷ್ಟು ಬೇಗ ಶಸ್ತ್ರಚಿಕಿತ್ಸೆ ಆರಂಭಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಶಸ್ತ್ರಚಿಕಿತ್ಸೆಯ ನಂತರ ಮಕ್ಕಳು ಶೀಘ್ರವಾಗಿ ಮಾತು ಮತ್ತು ಶ್ರವಣ ಸಾಮರ್ಥ್ಯವನ್ನು ಪಡೆಯಲು ನೆರವಾಗುವ ‘ಆಡಿಟರಿ ವರ್ಬಲ್ ಥೆರಪಿ’ (AVT) ಕೇಂದ್ರಗಳನ್ನು ಬಲಪಡಿಸಿ, ಈ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ಕ್ರಮ ವಹಿಸಲಾಗುವುದು.

ಎರಡನೆಯದಾಗಿ, ರಕ್ತದೊತ್ತಡ ಮತ್ತು ಅಸಾಂಕ್ರಾಮಿಕ ರೋಗಗಳನ್ನು (NCDs) ತಡೆಗಟ್ಟಲು ಆಹಾರದಲ್ಲಿ ಉಪ್ಪಿನ ಬಳಕೆಯನ್ನು ಮಿತಿಗೊಳಿಸುವ ಕುರಿತು ಚರ್ಚಿಸಲಾಯಿತು. ಶಾಲಾ ಬಿಸಿಯೂಟ, ಹಾಸ್ಟೆಲ್‌ಗಳು ಸೇರಿದಂತೆ ಸರ್ಕಾರಿ ವ್ಯವಸ್ಥೆಗಳಲ್ಲಿ ಮಿತ ಉಪ್ಪಿನ ಆಹಾರ ಪೂರೈಸಲು ಮಾನದಂಡ ರೂಪಿಸಲಾಗುವುದು. ಈ ಯೋಜನೆಯ ಅನುಷ್ಠಾನಕ್ಕಾಗಿ ವಿಶೇಷ ಟಾಸ್ಕ್ ಫೋರ್ಸ್ (Task Force) ರಚಿಸಲಾಗುತ್ತಿದ್ದು, ಆರೋಗ್ಯ, ಶಿಕ್ಷಣ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳ ಸಮನ್ವಯದೊಂದಿಗೆ ಸಾರ್ವಜನಿಕರಲ್ಲಿ ಆರೋಗ್ಯಕರ ಆಹಾರ ಪದ್ಧತಿಯನ್ನು ಪ್ರೋತ್ಸಾಹಿಸಲಾಗುವುದು. ನಾಡಿನ ಜನರೂ ಈ ಬಗ್ಗೆ ಜಾಗೃತರಾಗಬೇಕಿದ್ದು, ಆರೋಗ್ಯದ ಹಿತದೃಷ್ಟಿಯಿಂದ ನಿತ್ಯ ಆಹಾರದಲ್ಲಿ ಉಪ್ಪಿನ ಬಳಕೆಯ ಕುರಿತು ಎಚ್ಚರಿಕೆ ವಹಿಸಬೇಕಿದೆ.

ಮೂರನೆಯದಾಗಿ, ‘ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಷನ್ ಸೊಸೈಟಿ’ಯ (KSAPS) 11ನೇ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಸೊಸೈಟಿಯ ಪ್ರಗತಿ ಪರಿಶೀಲಿಸಲಾಯಿತು. HIV ಕುರಿತು ಸಮಾಜದಲ್ಲಿ ಜಾಗೃತಿ ಹೆಚ್ಚಿಸುವುದು, ರೋಗ ತಡೆಗಟ್ಟುವಿಕೆಗೆ ವೇಗ ನೀಡುವುದು ಹಾಗೂ ಸೋಂಕಿತರಿಗೆ ಆಸರೆಯಾಗಿ ನಿಂತು ಅವರು ಯಾವುದೇ ಅಂಜಿಕೆಯಿಲ್ಲದೆ ಗೌರವದಿಂದ ಜೀವಿಸುವ ವಾತಾವರಣ ನಿರ್ಮಿಸುವುದು ನಮ್ಮ ಮುಖ್ಯ ಉದ್ದೇಶವಾಗಿದೆ ಎಂದು ಸಚಿವ ಖಾದರ್ ತಿಳಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular