ರಾಯಗಢ: ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ದಿವೇಆಗರ್ ಬೀಚ್ನಲ್ಲಿ ಪುಣೆಯ ಖಾಸಗಿ ಕೋಚಿಂಗ್ ಅಕಾಡೆಮಿಯ ಪ್ರವಾಸ ದುರಂತದಲ್ಲಿ ಅಂತ್ಯಗೊಂಡಿದೆ. ಸಮುದ್ರದಲ್ಲಿ ಈಜಲು ತೆರಳಿದ್ದ 8 ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮೃತರ ಎಲ್ಲಾ 8 ಶವಗಳನ್ನು ಹೊರತೆಗೆಯಲಾಗಿದ್ದು, ಅವರು ಮೃತಪಟ್ಟಿರುವುದಾಗಿ ಘೋಷಿಸಲಾಗಿದೆ.
ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ದಿವೇಆಗರ್ ಬೀಚ್ನಲ್ಲಿ ಭೀಕರ ದುರಂತ ಸಂಭವಿಸಿದ್ದು, ಪುಣೆಯ ಆಳಂದಿಯ ಖಾಸಗಿ ಕೋಚಿಂಗ್ ಸಂಸ್ಥೆಯ ಪ್ರವಾಸಕ್ಕೆ ತೆರಳಿದ್ದ 16 ವರ್ಷದ 8 ವಿದ್ಯಾರ್ಥಿಗಳು ಸಮುದ್ರದಲ್ಲಿ ಮುಳುಗಿ ಮೃತಪಟ್ಟಿದ್ದಾರೆ. 48 ಮಂದಿಯ ತಂಡದಲ್ಲಿದ್ದ ವಿದ್ಯಾರ್ಥಿಗಳು ಈಜಲು ಸಮುದ್ರಕ್ಕೆ ಇಳಿದ ವೇಳೆ ನೀರಿನ ಸೆಳೆತಕ್ಕೆ ಸಿಲುಕಿದ್ದು, ರಕ್ಷಣಾ ಕಾರ್ಯಾಚರಣೆ ಬಳಿಕ ಎಲ್ಲಾ 8 ಮಂದಿಯ ಮೃತದೇಹಗಳನ್ನು ಹೊರತೆಗೆಯಲಾಗಿದೆ.
ಪುಣೆಯ ಆಳಂದಿಯ Winners Academy for 11th & 12th ಕೋಚಿಂಗ್ ಸಂಸ್ಥೆಯಿಂದ 48 ಮಂದಿಯ ತಂಡ ದಿವೇಆಗರ್ನ ದಿಘಿ ಸಾಗರಿ ಪ್ರದೇಶಕ್ಕೆ ಪ್ರವಾಸ ತೆರಳಿತ್ತು. ತಂಡದಲ್ಲಿ 25 ಬಾಲಕರು, 17 ಬಾಲಕಿಯರು ಹಾಗೂ 6 ಶಿಕ್ಷಕರು ಇದ್ದರು.
ಪ್ರವಾಸದ ವೇಳೆ ವಿದ್ಯಾರ್ಥಿಗಳು ಸಮುದ್ರಕ್ಕೆ ಇಳಿದು ಈಜಲು ಮುಂದಾಗಿದ್ದಾರೆ. ಈ ವೇಳೆ ಸಮುದ್ರದ ನೀರಿನ ಆಳ ಹಾಗೂ ಅಲೆಗಳ ರಭಸವನ್ನು ಸರಿಯಾಗಿ ಅಂದಾಜಿಸಲು ಸಾಧ್ಯವಾಗದೆ 8 ವಿದ್ಯಾರ್ಥಿಗಳು ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿಹೋಗಿದ್ದಾರೆ ಎಂದು ಪ್ರಾಥಮಿಕ ಮಾಹಿತಿ ತಿಳಿಸಿದೆ.
ಘಟನೆ ತಿಳಿಯುತ್ತಿದ್ದಂತೆ ಸ್ಥಳೀಯರು, ಪೊಲೀಸರು ಹಾಗೂ ಆಡಳಿತ ಸಿಬ್ಬಂದಿ ತಕ್ಷಣವೇ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಬಳಿಕ ಎಲ್ಲಾ 8 ವಿದ್ಯಾರ್ಥಿಗಳ ಮೃತದೇಹಗಳನ್ನು ಪತ್ತೆಹಚ್ಚಿ ಹೊರತೆಗೆಯಲಾಯಿತು.
ಮೃತಪಟ್ಟ ವಿದ್ಯಾರ್ಥಿಗಳ ಗುರುತು
ಮೃತರನ್ನು ತನ್ಮಯ್ ದತ್ತಾತ್ರೇಯ ವಾಹಿಲೆ, ಸುಮಿತ್ ಭಾರತ್ ಅಹಿರೆ, ಪ್ರಣವ್ ರಾಮದಾಸ್ ಬನ್ಸೋಡೆ, ಕೈವಲ್ಯ ಸತೀಶ್ ವಾಸಂಕರ್, ರಾಜವೀರ್ ಯುವರಾಜ್ ವಾಹಿಲೆ, ಯಶ್ ಕಿರಣ್ ವಾಂಖೆಡೆ, ಸೋಹಂ ತುಕಾರಾಮ್ ಭಂಡವಲ್ಕರ್ ಹಾಗೂ ಕೌಸ್ತುಭ್ ಸಂದೀಪ್ ದೌಂಡ್ ಎಂದು ಗುರುತಿಸಲಾಗಿದೆ. ಮೃತರಾದ ಎಲ್ಲಾ 8 ವಿದ್ಯಾರ್ಥಿಗಳಿಗೂ 16 ವರ್ಷ ವಯಸ್ಸಾಗಿದ್ದು, ಪುಣೆಯ ಆಳಂದಿ ನಿವಾಸಿಗಳಾಗಿದ್ದರು.
ಸ್ಥಳೀಯ ವಾಟರ್ ಸ್ಪೋರ್ಟ್ಸ್ ತಂಡದಿಂದ ತಕ್ಷಣ ಕಾರ್ಯಾಚರಣೆ
ಘಟನೆಯ ಸುದ್ದಿ ಹರಡುತ್ತಿದ್ದಂತೆ ಸ್ಥಳೀಯರು ಹಾಗೂ ಪ್ರವಾಸಿಗರಲ್ಲಿ ಆತಂಕ ಉಂಟಾಯಿತು. ದಿವೇಆಗರ್ನ ಭಾವು ಮಾರುತಿ ಸಾಲುಂಖೆ ಮಹಾಕಾಳಿ ವಾಟರ್ ಸ್ಪೋರ್ಟ್ಸ್ ಮಾಲೀಕ ಭಾವು ಮಾರುತಿ ಸಾಲುಂಖೆ ಹಾಗೂ ಅವರ ತಂಡ ತಕ್ಷಣವೇ ಶೋಧ ಕಾರ್ಯಾಚರಣೆಗೆ ಧುಮುಕಿತು.
ತಮ್ಮ ಜೀವವನ್ನೇ ಪಣಕ್ಕಿಟ್ಟು ಭಾವು ಸಾಲುಂಖೆ ಹಾಗೂ ಅವರ ತಂಡ ನೀರಿನಲ್ಲಿ ನಿರಂತರವಾಗಿ ಶೋಧ ನಡೆಸಿ ವಿದ್ಯಾರ್ಥಿಗಳ ಮೃತದೇಹಗಳನ್ನು ಹೊರತೆಗೆಯಲು ನೆರವಾಯಿತು.ಘಟನೆ ಕುರಿತು ಮಾಹಿತಿ ದೊರೆಯುತ್ತಿದ್ದಂತೆ ದಿಘಿ ಸಾಗರಿ ಬೊರ್ಲಿ ಪಂಚತನ್ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ನಿರೀಕ್ಷಕ ಸಂತೋಷ್ ಅವಟಿ ತಮ್ಮ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ಧಾವಿಸಿದರು. ಸ್ಥಳೀಯ ಗ್ರಾಮಸ್ಥರ ಸಹಾಯದಿಂದ ಪೊಲೀಸರು ಮೃತದೇಹಗಳನ್ನು ಹೊರತೆಗೆದು ಬೊರ್ಲಿ ಪಂಚತನ್ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸ್ಥಳಾಂತರಿಸಿದರು. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ

