HomeIndiaಗುಟ್ಕಾ ಇಟ್ಟುಕೊಂಡಿದ್ದ ಪ್ರಯಾಣಿಕನಿಂದ 6 ಸಾವಿರ ರೂ. ವಸೂಲಿ ; ಪೇದೆ ವಿಡಿಯೋ ವೈರಲ್‌ |...

ಗುಟ್ಕಾ ಇಟ್ಟುಕೊಂಡಿದ್ದ ಪ್ರಯಾಣಿಕನಿಂದ 6 ಸಾವಿರ ರೂ. ವಸೂಲಿ ; ಪೇದೆ ವಿಡಿಯೋ ವೈರಲ್‌ | Watch

ಅಮೃತಸರದಿಂದ ಹೌರಾಗೆ ಚಲಿಸುವ ರೈಲು ಸಂಖ್ಯೆ 13006 ರ ಪ್ರಯಾಣಿಕರೊಬ್ಬರ ಬಳಿ ಗುಟ್ಕಾ ಇದ್ದಿದ್ದಕ್ಕೆ 10,000 ರೂಪಾಯಿ ದಂಡ ವಿಧಿಸುವುದಾಗಿ ಬೆದರಿಸಿ, ಆತನ ಪರ್ಸ್‌ನಿಂದ 6,000 ರೂಪಾಯಿ ದೋಚಿದ್ದಾರೆ ಎಂದು ಇಬ್ಬರು ಜಿಆರ್‌ಪಿ (ಸರ್ಕಾರಿ ರೈಲ್ವೇ ಪೊಲೀಸ್) ಸಿಬ್ಬಂದಿ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಕಾರ್ಟಾರ್‌ಪುರ ರೈಲು ನಿಲ್ದಾಣದಲ್ಲಿ ನಡೆದಿದೆ ಎನ್ನಲಾದ ಈ ಘಟನೆಯ ವೀಡಿಯೋ ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವೈರಲ್ ಆಗಿದೆ.

ವೀಡಿಯೋ ಚಿತ್ರೀಕರಿಸುತ್ತಿದ್ದಂತೆ ಮೊಬೈಲ್ ಕಸಿದುಕೊಳ್ಳಲು ಯತ್ನ

ವೈರಲ್ ವೀಡಿಯೋದಲ್ಲಿ ಸಿಬ್ಬಂದಿಯೊಬ್ಬರು ಪ್ರಯಾಣಿಕನ ಜೇಬಿನಿಂದ ಎರಡು ಪ್ಯಾಕೇಜ್ ಗುಟ್ಕಾ ತೆಗೆದು ಡೈರಿಯ ಮೇಲಿಡುತ್ತಿರುವುದು ಕಾಣಿಸುತ್ತದೆ. ಪ್ರಯಾಣಿಕನು ಆ ಪ್ಯಾಕೇಟ್‌ಗಳು ತನಗೇ ಸೇರಿದ್ದು ಎಂದು ಒಪ್ಪಿಕೊಂಡು ಹಿಂಪಡೆಯುತ್ತಾನೆ. ಈ ವೇಳೆ ಜಿಆರ್‌ಪಿ ಸಿಬ್ಬಂದಿ “ನೀನು ಫೋಟೋ ತೆಗೆಯುತ್ತಿದ್ದೀಯಾ, ಇದನ್ನೂ ತಗೋ” ಎನ್ನುತ್ತಾರೆ. ಪ್ರಯಾಣಿಕನು ತನ್ನ ಮುಖ ತೋರಿಸುವಂತೆ ಕೇಳಿದಾಗ, ಪೊಲೀಸ್ ಸಿಬ್ಬಂದಿ “ಕ್ಯಾಮೆರಾ ಆಫ್ ಮಾಡು” ಎಂದು ಹೇಳಿ ಆತನ ಮೊಬೈಲ್ ಕಸಿದುಕೊಳ್ಳಲು ಯತ್ನಿಸಿರುವುದು ವೀಡಿಯೋದಲ್ಲಿ ದಾಖಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪರ್ಸ್‌ನಿಂದ 6,000 ರೂ. ಎಗರಿಸಿದ ಆರೋಪ

ಬಾಧಿತ ಪ್ರಯಾಣಿಕ ಸರಫರಾಜ್ ಜೈನ್ ಎಂಬುವವರು ಈ ವೀಡಿಯೋವನ್ನು ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಅಮೃತಸರದಿಂದ ಬರೇಲಿಗೆ ಪ್ರಯಾಣಿಸುತ್ತಿದ್ದ ವೇಳೆ ಕಾರ್ಟಾರ್‌ಪುರ ನಿಲ್ದಾಣದಲ್ಲಿ ಇಬ್ಬರು ಜಿಆರ್‌ಪಿ ಸಿಬ್ಬಂದಿ ತಡೆದು, ಗುಟ್ಕಾ ಇಟ್ಟುಕೊಂಡಿದ್ದಕ್ಕಾಗಿ 10,000 ರೂ. ದಂಡ ವಿಧಿಸುವುದಾಗಿ ಬೆದರಿಸಿದರು. ಅಷ್ಟೇ ಅಲ್ಲದೆ, ಒಬ್ಬ ಸಿಬ್ಬಂದಿ ತನ್ನ ಪರ್ಸ್ ತಪಾಸಣೆ ನಡೆಸಿ ಅದರಲ್ಲಿದ್ದ 6,000 ರೂಪಾಯಿಗಳನ್ನು ಕದ್ದು ಪರಾರಿಯಾಗಿದ್ದಾನೆ. ತಾನು ವೀಡಿಯೋ ರೆಕಾರ್ಡ್ ಮಾಡುತ್ತಿದ್ದಂತೆ ಮತ್ತೊಬ್ಬ ಸಿಬ್ಬಂದಿಯೂ ಸ್ಥಳದಿಂದ ಕಾಲ್ಕಿತ್ತಿದ್ದಾನೆ ಎಂದು ಆರೋಪಿಸಿ, ತಪ್ಪಿತಸ್ಥರ ವಿರುದ್ಧ ತಕ್ಷಣದ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ತನಿಖೆಗೆ ಇಳಿದ ರೈಲ್ವೇ ಇಲಾಖೆ

ಸಾಮಾಜಿಕ ಜಾಲತಾಣದಲ್ಲಿ ದೂರು ಮತ್ತು ಪಿಎನ್‌ಆರ್ ವಿವರಗಳು ಹಂಚಿಕೆಯಾಗುತ್ತಿದ್ದಂತೆ ಜಾಗೃತರಾದ ರೈಲ್ವೇ ಅಧಿಕಾರಿಗಳು ತಕ್ಷಣವೇ ಆರ್‌ಪಿಎಫ್‌ಗೆ (ರೈಲ್ವೇ ರಕ್ಷಣಾ ಪಡೆ) ವಿಷಯವನ್ನು ರವಾನಿಸಿದ್ದಾರೆ. ಉತ್ತರ ರೈಲ್ವೆಯ ಆರ್‌ಪಿಎಫ್ ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಫಿರೋಜಾಬಾದ್ ವಿಭಾಗಕ್ಕೆ ನಿರ್ದೇಶನ ನೀಡಿದೆ.

ರೈಲ್ವೇ ನಿಯಮಗಳೇನು ?

ರೈಲ್ವೇ ನಿಯಮಗಳ ಪ್ರಕಾರ ರೈಲು ಅಥವಾ ನಿಲ್ದಾಣಗಳಲ್ಲಿ ಗುಟ್ಕಾ ತಿನ್ನುವುದು ಅಥವಾ ಉಗುಳುವುದಕ್ಕೆ 500 ರೂ. ನಿಂದ 2,000 ರೂ. ವರೆಗೆ ದಂಡ ವಿಧಿಸಲು ಅವಕಾಶವಿದೆ. ಅಲ್ಲದೆ, ರೈಲುಗಳಲ್ಲಿ ಗುಟ್ಕಾ ಮತ್ತು ತಂಬಾಕು ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಆದರೆ, ಜಿಆರ್‌ಪಿ ಸಿಬ್ಬಂದಿ 10,000 ರೂ. ದಂಡದ ಬೆದರಿಕೆ ಹಾಕಿ, ಪ್ರಯಾಣಿಕನಿಂದ ಹಣ ದೋಚಿದ್ದಾರೆ ಎನ್ನಲಾದ ಆರೋಪವು ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular