ಶಿವಮೊಗ್ಗ: ಆನ್‌ಲೈನ್ ಗ್ರಾಹಕ ಸೇವಾ ಲೋಪಕ್ಕೆ ಸಂಬಂಧಿಸಿದಂತೆ ಮಹತ್ವದ ತೀರ್ಪು ನೀಡಿರುವ ಶಿವಮೊಗ್ಗದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು, ಗ್ರಾಹಕರು ಬುಕ್ ಮಾಡಿದ ಟೈರ್ ಬದಲಾಗಿ ಬೇರೆ ಮಾದರಿಯ ಟೈರ್ ಕಳುಹಿಸಿಕೊಟ್ಟು ಸೇವಾ ನ್ಯೂನ್ಯತೆ ಎಸಗಿದ ಫ್ಲಿಪ್‌ಕಾರ್ಟ್ ಹಾಗೂ ಸಂಬಂಧಿತ ಸಂಸ್ಥೆಗಳಿಗೆ ಪರಿಹಾರ ನೀಡುವಂತೆ ಆದೇಶಿಸಿದೆ.
ಶಿವಮೊಗ್ಗದ ಸಭಾ ಭವನ ರಸ್ತೆಯ ನೌಷಾದ್ ಮಂಜಿಲ್ ನಿವಾಸಿ ಮಹಬೂಬ್ ಮುದಾಸಿರ್ ಸಿ.ಎ. ಅವರು 2025ರ ಸೆಪ್ಟೆಂಬರ್ 12 ರಂದು ಫ್ಲಿಪ್‌ಕಾರ್ಟ್ ಮೂಲಕ ರೂ. 2,211/- ನೀಡಿ ‘GOOD YEAR KELLY 74T VFM2, 145/80/R12’ ಟೈರ್ ಅನ್ನು ಕ್ಯಾಶ್ ಆನ್ ಡೆಲಿವರಿ ಮೂಲಕ ಬುಕ್ ಮಾಡಿದ್ದರು. ಆದರೆ, ಸೆಪ್ಟೆಂಬರ್ 19ರಂದು ಸಂಸ್ಥೆಯು ಬುಕ್ ಮಾಡಿದ ಟೈರ್ ಬದಲಿಗೆ ಕಡಿಮೆ ಬೆಲೆಯ ‘GOOD YEAR KELLY 74S VFM2, 145/80/R12’ ಟೈರ್ ಅನ್ನು ತಲುಪಿಸಿತ್ತು.
ಇದನ್ನು ಗಮನಿಸಿದ ಗ್ರಾಹಕರು ತಪ್ಪಾಗಿ ಬಂದ ಟೈರ್ ವಾಪಸ್ ಕಳುಹಿಸಿ, ಬುಕ್ ಮಾಡಿದ ಸರಿಯಾದ ಟೈರ್ ನೀಡುವಂತೆ ಕೋರಿದ್ದರು. ಆದರೆ, ಎದುರುದಾರರು ಮತ್ತೆ ಅದೇ ತಪ್ಪಾದ 74S ಟೈರ್ ಅನ್ನೇ ಕಳುಹಿಸಿಕೊಟ್ಟಿದ್ದರು. ಈ ಬಗ್ಗೆ ಇ-ಮೇಲ್ ಹಾಗೂ ಲೀಗಲ್ ನೋಟೀಸ್ ನೀಡಿದರೂ ಸೂಕ್ತ ಸ್ಪಂದನೆ ಸಿಗದಿದ್ದಾಗ, ಗ್ರಾಹಕರು ನ್ಯಾಯಕ್ಕಾಗಿ ಶಿವಮೊಗ್ಗ ಗ್ರಾಹಕ ಆಯೋಗದ ಮೆಟ್ಟಿಲೇರಿದ್ದರು.
ಆಯೋಗದ ತೀರ್ಪು:
ದೂರುದಾರರು ಸಲ್ಲಿಸಿದ ದಾಖಲೆಗಳು ಹಾಗೂ ವಾದ-ವಿವಾದಗಳನ್ನು ಆಲಿಸಿದ ಆಯೋಗವು, ಆನ್‌ಲೈನ್ ಕಂಪನಿಯು ಬೇರೆ ಟೈರ್ ಕಳುಹಿಸಿ ಸೇವಾ ನ್ಯೂನ್ಯತೆ ಎಸಗಿರುವುದು ಸಾಬೀತಾಗಿದೆ ಎಂದು ತೀರ್ಮಾನಿಸಿದೆ.
ಆಯೋಗದ ಅಧ್ಯಕ್ಷ ಟಿ.ಶಿವಣ್ಣ ಹಾಗೂ ಸದಸ್ಯ ಬಿ.ಡಿ.ಯೋಗಾನಂದ ಅವರನ್ನೊಳಗೊಂಡ ಪೀಠವು ಈ ಕೆಳಗಿನಂತೆ ಆದೇಶಿಸಿದೆ:
ಟೈರ್ ಬೆಲೆ ಮರುಪಾವತಿ:
ಟೈರ್ ಬೆಲೆ ರೂ. 2,211 ಅನ್ನು ದಿನಾಂಕ: 04/10/2025 ರಿಂದ ಶೇ. 9ರ ವಾರ್ಷಿಕ ಬಡ್ಡಿಯೊಂದಿಗೆ ಗ್ರಾಹಕರಿಗೆ ಪಾವತಿಸಬೇಕು.
ಪರಿಹಾರ: ಸೇವಾ ನ್ಯೂನ್ಯತೆ ಮತ್ತು ಮಾನಸಿಕ ಕಿರುಕುಳಕ್ಕಾಗಿ ರೂ. 25,000/- ಪರಿಹಾರ ನೀಡಬೇಕು.
ಖರ್ಚು ವೆಚ್ಚ: ದೂರಿನ ಖರ್ಚು ವೆಚ್ಚವಾಗಿ ರೂ. 10,000 ಪಾವತಿಸಬೇಕು.
ಈ ಆದೇಶವಾದ 45 ದಿನಗಳ ಒಳಗೆ ಮೊತ್ತವನ್ನು ಪಾವತಿಸತಕ್ಕದ್ದು. ತಪ್ಪಿದ್ದಲ್ಲಿ ಒಟ್ಟು ಮೊತ್ತಕ್ಕೆ ಶೇ. 12ರಷ್ಟು ವಾರ್ಷಿಕ ಬಡ್ಡಿಯನ್ನು ಸೇರಿಸಿ ಪೂರ್ಣ ಹಣ ಪಾವತಿಸುವವರೆಗೆ ನೀಡಬೇಕಾಗುತ್ತದೆ ಎಂದು ಆಯೋಗವು ಎಚ್ಚರಿಸಿದೆ.
ಎಂ.ಆರ್.ಎಸ್. ವ್ಯಾಪ್ತಿಯ ಮೆಸ್ಕಾಂ ತ್ರೈಮಾಸಿಕ ಕಾಮಗಾರಿ ಅ.3 ರಂದು ವಿದ್ಯುತ್ ವ್ಯತ್ಯಯ
ಶಿವಮೊಗ್ಗ: ಎಂ ಆರ್.ಎಸ್.220/11 ಕೆವಿ ವಿದ್ಯುತ್ ಸ್ವೀಕರಣಾ ಕೇಂದ್ರದಲ್ಲಿರುವ 66 ಕೆವಿ ಡಿವಿಜಿ-1 ಬೇ ಯಲ್ಲಿ ಅ. 03 ರಂದು ಬೆಳಗ್ಗೆ 9 ರಿಂದ ಮಧ್ಯಾಹ್ನ 3 ರವರೆಗೆ 2ನೇ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಹೊಳೆಹೊನ್ನೂರು ವಿ ವಿ ಕೇಂದ್ರ, ಹೊಳಲೂರು ವಿ ವಿ ಕೇಂದ್ರ ಮತ್ತು ತಾವರೆಚಟ್ನಹಳ್ಳಿ ವಿ ವಿ ಕೇಂದ್ರದಿಂದ ವಿದ್ಯುತ್ ಸರಬರಾಜು ಪಡೆಯುವ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಕೂಡ್ಲಿ, ಚಿಕ್ಕೂಡ್ಲಿ, ಭದ್ರಾಪುರ, ಕಾಟಿಕೆರೆ, ವೆಂಕಟಾಪುರ, ಬುಕ್ಲಾಪುರ, ಹೊಳೆಬೆಳಗಲು, ಸಕ್ರೇಬೈಲು, ಹೊಳಲೂರು, ಮಡಿಕೆ ಚೀಲೂರು, ಹಾಡೋನಹಳ್ಳಿ, ಹೊಳೆಹಟ್ಟಿ, ಸೂಗೂರು, ಕ್ಯಾತಿನಕೊಪ್ಪ, ಬುಳ್ಳಾಪುರ, ಬೇಡರಹೊಸಳ್ಳಿ, ಹರಮಘಟ್ಟ, ಸೋಮಿನಕೊಪ್ಪ, ಆಲದಹಳ್ಳಿ, ಸುತ್ತುಕೋಟೆ, ಕೊಮ್ಮನಾಳ್, ಬಿಕ್ಕೋನಹಳ್ಳಿ, ಬೂದಿಗೆರೆ, ಬೀರನಕೆರೆ, ಬನ್ನಿಕೆರೆ, ಅಬ್ಬಲಗೆರೆ, ಹುಣಸೋಡು, ಕಲ್ಲಗಂಗೂರು, ಚನ್ನಮುಂಬಾಪುರ, ಮತ್ತೋಡು, ರತ್ನಗಿರಿ ನಗರ, ರತ್ನಾಕರ ಲೇಔಟ್, ಇಂಜಿನಿಯರಿಂಗ್ ಕಾಲೇಜು, ಕೃಷಿ ಕಾಲೇಜು, ಗೋಂಧಿಚಟ್ನಹಳ್ಳಿ, ಹೊಳೆಹನಸವಾಡಿ, ಕುಂಚೇನಹಳ್ಳಿ, ಬೀರನಕೆರೆ, ಬಿಕೋನಹಳ್ಳಿ, ಕಲ್ಲಾಪುರ, ಬಸವನಗಂಗೂರು, ಮೇಲಿನ ಹನಸವಾಡಿ, ಬೆಳಲಕಟ್ಟೆ, ಮೋಜಪ್ಪ ಹೊಸೂರು, ಸುತ್ತಮುತ್ತಲಿನ ಜಲ್ಲಿ ಕ್ರಷರ್‌ಗಳು ಹಾಗೂ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಕೋರಿದೆ.

