ಭಾರತ ಸರ್ಕಾರದ ಸಿಬ್ಬಂದಿ ನೇಮಕಾತಿ ಆಯೋಗವು ಗ್ರೂಪ್ ‘ಸಿ’ ( Lower Divisional clerk/ junior secretary Assistant and Data entry Operators) ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದೆ.
ಪಿಯುಸಿ (10+2) ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರವವರು ಹಾಗೂ 18 ರಿಂದ 27 ವಯಸ್ಸಿನ ವಯೋಮಿತಿಯನ್ನು ಹೊಂದಿರಬೇಕು .
ಸದರಿ ಹುದ್ದೆಗಳಿಗೆ ಆಸಕ್ತ ಅಭ್ಯರ್ಥಿಗಳು ವೆಬೆಸೈಟ್ https://ssc.gov.in or www.ssckkr.kar.nic.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ಅಕ್ಟೋಬರ್ 7. ಹೆಚ್ಚಿನ ಮಾಹಿತಿಗಾಗಿ ಸಹಾಯವಾಣಿ – 080-25502520 ಅಥವಾ ದಾವಣಗೆರೆಯ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿ ರವೀಂದ್ರ ಅವರು ತಿಳಿಸಿದ್ದಾರೆ.
ಗಾಂಧಿ ಜಯಂತಿ ಪ್ರಯುಕ್ತ ಅಕ್ಟೋಬರ್ 2ರಂದು ಮಾಂಸ ಮಾರಾಟ ನಿಷೇಧ
ದಾವಣಗೆರೆ ಮಹಾತ್ಮ ಗಾಂಧಿ ಜಯಂತಿಯ ಪ್ರಯುಕ್ತ ಅಕ್ಟೋಬರ್ 02ರಂದು ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ರಾಣಿ ವಧೆ, ಪ್ರಾಣಿ ಮಾಂಸಹಾಗೂ ಮೀನಿನ ಮಾಂಸ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು. ನಿಯಮ ಮೀರಿ ಮಾಂಸ ಮಾರಾಟ ಮಾಡುವುದು ಕಂಡುಬಂದಲ್ಲಿ, ಅಂತಹವರ ವಿರುದ್ಧ ಮಹಾನಗರ ಪಾಲಿಕೆಯ ಕಾಯ್ದೆಯನ್ವಯ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ದಾವಣಗೆರೆ ಮಹಾನಗರ ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.
ಅಕ್ಟೋಬರ್ 2 : ಮಹಾತ್ಮ ಗಾಂಧಿ ಹಾಗೂ ಲಾಲ್ ಬಹುದ್ದೂರ್ ಶಾಸ್ತ್ರಿ ಜಯಂತಿ
ದಾವಣಗೆರೆ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಅಕ್ಟೋಬರ್ 02 ರಂದು ಮಹಾತ್ಮ ಗಾಂಧಿ ಹಾಗೂ ಲಾಲ್ ಬಹುದ್ದೂರ್ ಶಾಸ್ತ್ರಿ ಜಯಂತಿಯನ್ನು ರಾಮನಗರದಲ್ಲಿರುವ ಗಾಂಧಿ ಭವನದಲ್ಲಿ ಏರ್ಪಡಿಸಲಾಗಿದೆ.
ಅಂದು ಮಹಾತ್ಮ ಗಾಂಧೀಜಿ ಪ್ರಿಯವಾದ ಗೀತೆಗಳನ್ನು ಪ್ರಸ್ತುತಪಡಿಸಲಾಗುವುದು, ಚುನಾವಣಾ ನೀತಿ ಸಂಹಿತೆ ಜಾರಿ ಇರುವ ಹಿನ್ನೆಲೆಯಲ್ಲಿ ಸದರಿ ಜಯಂತಿಯನ್ನು ಸರಳವಾಗಿ ಆಚರಿಸಲಾಗುವುದು. ಕಾರ್ಯಕ್ರಮದಲ್ಲಿ ಸಾರ್ವಜನಿಕರು ಭಾಗವಹಿಸುವಂತೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಧನಂಜಯ ತಿಳಿಸಿದ್ದಾರೆ.
ತಂಬಾಕು ಮುಕ್ತ ಜಿಲ್ಲೆಯನ್ನಾಗಿಸಲು ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ವಹಿಸಿ
ದಾವಣಗೆರೆ: ಜಿಲ್ಲೆಯಲ್ಲಿ ತಂಬಾಕು ನಿಯಂತ್ರಣ ಕಾಯ್ದೆಯನ್ನು(ಕೋಟ್ಪಾ) ಅತ್ಯಂತ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಹಾಗೂ ಶೈಕ್ಷಣಿಕ ಸಂಸ್ಥೆಗಳ ಸುತ್ತಮುತ್ತ ತಂಬಾಕು ಮಾರಾಟ ತಡೆಯಲು ಪೊಲೀಸ್, ಸ್ಥಳೀಯ ಸಂಸ್ಥೆಗಳು, ಶಿಕ್ಷಣ ಮತ್ತು ಆರೋಗ್ಯ ಇಲಾಖೆಗಳು ಜಂಟಿಯಾಗಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್ ಅವರು ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಜರುಗಿದ ‘ಜಿಲ್ಲಾ ತಂಬಾಕು ನಿಯಂತ್ರಣ ಕೋಶ’ದ ದ್ವಿತೀಯ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
21 ವರ್ಷಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಗಳಿಗೆ ತಂಬಾಕು ಉತ್ಪನ್ನಗಳ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಯಾವುದೇ ಶೈಕ್ಷಣಿಕ ಸಂಸ್ಥೆಯ 100 ಮೀಟರ್ ಸುತ್ತಳತೆಯ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟವನ್ನು ನಿಷೇಧಿಸಲಾಗಿದೆ. ಬಿಡಿ-ಬಿಡಿಯಾಗಿ (Single Cigarette/Beedi) ಸಿಗರೇಟ್ ಅಥವಾ ಬೀಡಿ ಮಾರಾಟ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ತಿಳಿಸಿದರು.
ದಾವಣಗೆರೆಯ ಪ್ರಮುಖ ಶೈಕ್ಷಣಿಕ ಸಂಸ್ಥೆಗಳಾದ ಜಿ.ಎಂ. ವಿಶ್ವವಿದ್ಯಾಲಯ, ಕಾಲೇಜ್ ಆಫ್ ಡೆಂಟಲ್ ಸೈನ್ಸ್ (ಬಾಪೂಜಿ ಆಸ್ಪತ್ರೆ), ಬಿ.ಐ.ಇ.ಟಿ, ಮೋತಿ ವೀರಪ್ಪ ಕಾಲೇಜು ಹಾಗೂ ಎಕ್ಸ್ ಮುನ್ಸಿಪಲ್ ಕಾಲೇಜು ಸುತ್ತಮುತ್ತ ತಂಬಾಕು ನಿಯಂತ್ರಣಕ್ಕೆ ವಿಶೇಷ ಕಾರ್ಯಾಚರಣೆ ನಡೆಸಲು ಸೂಚಿಸಿದರು.
ಜಿಲ್ಲೆಯಲ್ಲಿ ಒಟ್ಟು 1,961 ಶೈಕ್ಷಣಿಕ ಸಂಸ್ಥೆಗಳಿದ್ದು, ಪ್ರಸ್ತುತ 1,001 (ಶೇ. 51) ಸಂಸ್ಥೆಗಳು ಮಾತ್ರ ‘ಟೋಫಿ’ (ToFEI) ತಂತ್ರಾಂಶದಲ್ಲಿ ನೋಂದಾಯಿಸಿಕೊಂಡಿವೆ. ಶಾಲಾ ಶಿಕ್ಷಣ ಇಲಾಖೆಯು ಜಿಲ್ಲಾದ್ಯಂತ ಎಲ್ಲಾ ಶೈಕ್ಷಣಿಕ ಸಂಸ್ಥೆಗಳನ್ನು ‘ತಂಬಾಕು ಮುಕ್ತ ಶೈಕ್ಷಣಿಕ ಸಂಸ್ಥೆ’ ಎಂದು ದೃಢೀಕರಿಸಿ, ಆ್ಯಪ್‌ನಲ್ಲಿ ಶೇ.100 ರಷ್ಟು ನೋಂದಣಿ ಪೂರ್ಣಗೊಳಿಸಲು ನಿರ್ದೇಶನ ನೀಡಿದರು.
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಇದುವರೆಗೆ 12 ಹಾಗೂ ನಗರ ಸ್ಥಳೀಯ ಸಂಸ್ಥೆಗಳ (ಹರಿಹರ, ಮಲೇಬೆನ್ನೂರು, ಹೊನ್ನಾಳಿ, ಚನ್ನಗಿರಿ, ನ್ಯಾಮತಿ, ಜಗಳೂರು) ವ್ಯಾಪ್ತಿಯಲ್ಲಿ ಒಟ್ಟು 88 ತಂಬಾಕು ಮಾರಾಟ ಪರವಾನಗಿಗಳನ್ನು ನೀಡಲಾಗಿದೆ. ಅಕ್ಟೋಬರ್ 15 ರ ನಂತರ ರಾಜ್ಯಮಟ್ಟದಿಂದ ಆಯ್ಕೆಯಾದ ಸಂಸ್ಥೆಯು ಪರವಾನಗಿ ಅನುಷ್ಠಾನದ ಕುರಿತು ಸಮೀಕ್ಷೆ ನಡೆಸಲಿದ್ದು, ಅದಕ್ಕೂ ಮುನ್ನ ವಾರ್ಡ್‌ವಾರ ತಂಬಾಕು ಅಂಗಡಿಗಳ ಪಟ್ಟಿ ತಯಾರಿಸಿ ಪರವಾನಗಿ ನೀಡುವುದನ್ನು ಕಡ್ಡಾಯಗೊಳಿಸಲು ನಗರ ಸಭೆ/ಪಾಲಿಕೆಗಳಿಗೆ ಸೂಚಿಸಿದರು.
2026-27 ನೇ ಸಾಲಿನ ಏಪ್ರಿಲ್‌ನಿಂದ ಆಗಸ್ಟ್ ಮಾಸದವರೆಗೆ ಜಿಲ್ಲೆಯಲ್ಲಿ ಒಟ್ಟು 60 ಜಂಟಿ ದಾಳಿಗಳನ್ನು (Enforcement Drives) ನಡೆಸಲಾಗಿದೆ. ವಿವಿಧ ಸೆಕ್ಷನ್‌ಗಳಡಿ ಒಟ್ಟು 190 ಪ್ರಕರಣಗಳನ್ನು ದಾಖಲಿಸಿ, ₹37,950 ದಂಡ ವಸೂಲಿ ಮಾಡಲಾಗಿದೆ ಎಂದರು.
ತಂಬಾಕು ಮುಕ್ತ ಗ್ರಾಮ ಪಂಚಾಯಿತಿಗಳ ಅಭಿಯಾನ:
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಹಯೋಗದಲ್ಲಿ ಜಿಲ್ಲೆಯ ಓಬಣ್ಣನಹಳ್ಳಿ, ಒಂಟಿಹಾಳ್, ಹರಿಹರದ ತಿಮ್ಮಲಾಪುರ ಗ್ರಾಮಗಳನ್ನು ತಂಬಾಕು ಮುಕ್ತ ಗ್ರಾಮಗಳನ್ನಾಗಿ ಘೋಷಿಸಲಾಗಿದ್ದು ಉಳುಪಿನಕಟ್ಟೆ ಗ್ರಾಮವನ್ನು ಅಕ್ಟೋಬರ್ 01 ರಂದು ತಂಬಾಕು ಮುಕ್ತ ಗ್ರಾಮಗಳನ್ನಾಗಿ ಘೋಷಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರು ಆದ ನ್ಯಾ. ಸಿ.ರಂಗೇಗೌಡ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಪರಮೇಶ್ವರ ಹೆಗಡೆ ದಾವಣಗೆರೆ ವಿಶ್ವವಿದ್ಯಾನಿಲಯದ ಕುಲಸಚಿವರ ಡಾ.ಎಸ್.ಬಿ.ಘಂಟಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವೈದ್ಯಾಧಿಕಾರಿಗಳಾದ ಡಾ.ಶಶಿಧರ್, ಡಾ.ದೇವರಾಜ್, ಡಾ.ನವೀನ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

