ದೇಶದ ರಾಜಧಾನಿ ದೆಹಲಿಯ ಜಂತರ್ ಮಂತರ್ ಬಳಿಯ ಬ್ಯುಸಿ ರಸ್ತೆಯ ಮಧ್ಯೆ ಯುವತಿಯೊಬ್ಬಳು ಮಲಗಿ, ತಮಿಳುನಾಡು ಮುಖ್ಯಮಂತ್ರಿ ಹಾಗೂ ನಟ ವಿಜಯ್ ಅವರನ್ನು ಭೇಟಿಯಾಗಿ ಆಲಂಗಿಸಿಕೊಳ್ಳುವವರೆಗೆ ಜಾಗದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದು ಹೈಡ್ರಾಮಾ ನಡೆಸಿದ ಘಟನೆ ನಡೆದಿದೆ. ಈ ಸಂಪೂರ್ಣ ಕೃತ್ಯದ ವೀಡಿಯೋ ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವೈರಲ್ ಆಗಿದೆ.
ಅಂತರ್ಜಾಲದಲ್ಲಿ ಹರಿದಾಡುತ್ತಿರುವ ವೀಡಿಯೋದಲ್ಲಿ, ಸಂಚಾರ ದೀಪಗಳ ಬಳಿ ಮುಖ್ಯ ರಸ್ತೆಯಲ್ಲೇ ಮಲಗಿರುವ ಯುವತಿಯನ್ನು ಪೊಲೀಸರು ತೆರವುಗೊಳಿಸಲು ಯತ್ನಿಸುತ್ತಿರುವುದು ಕಂಡುಬಂದಿದೆ. ರಸ್ತೆ ಮಧ್ಯೆ ಮಲಗಿರುವ ಕಾರಣ ಕೇಳಿದಾಗ, ತನಗೆ ತಮಿಳುನಾಡು ಸಿಎಂ ವಿಜಯ್ ಅವರನ್ನು ಭೇಟಿಯಾಗಬೇಕು ಮತ್ತು ಅವರನ್ನು ಅಪ್ಪಿಕೊಳ್ಳಬೇಕು ಎಂದು ಆಕೆ ಹೇಳಿದ್ದಾಳೆ. ತನ್ನ ಬೇಡಿಕೆ ಈಡೇರುವವರೆಗೆ ಇಲ್ಲಿಂದ ಕದಲುವುದಿಲ್ಲ ಹಾಗೂ ವಿಜಯ್ ಅವರನ್ನು ಭೇಟಿಯಾಗುವುದೇ ತನ್ನ ಜೀವನದ ಕೊನೆಯ ಆಸೆ ಎಂದು ಆಕೆ ಪ್ರತಿಪಾದಿಸಿದ್ದಾಳೆ.
ರಸ್ತೆಯಲ್ಲಿ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿರುವುದನ್ನು ಕಂಡು ಸ್ಥಳದಲ್ಲಿದ್ದ ಯೂಟ್ಯೂಬರ್ ಒಬ್ಬರು ಆಕೆಗೆ ತಿಳಿಹೇಳಲು ಪ್ರಯತ್ನಿಸಿದ್ದಾರೆ. ರಸ್ತೆಯಲ್ಲಿ ಈ ರೀತಿ ಮಲಗುವುದರಿಂದ ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ತೊಂದರೆಯಾಗುತ್ತದೆ ಎಂದು ಹೇಳಿದರೂ, ಆಕೆ ವಿಜಯ್ ಅವರನ್ನು ಭೇಟಿಯಾಗಲೇಬೇಕು ಎಂಬ ಪಟ್ಟನ್ನು ಮುಂದುವರಿಸಿದ್ದಾಳೆ.
ಸ್ಥಳದಲ್ಲಿದ್ದ ಮಹಿಳಾ ಸಿಬ್ಬಂದಿ ಸೇರಿದಂತೆ ಪೊಲೀಸರು ಆಕೆಯನ್ನು ರಸ್ತೆಯಿಂದ ಬದಿಗೆ ಸರಿಸಲು ಮುಂದಾದಾಗ, ‘ನನ್ನನ್ನು ಯಾರೂ ಮುಟ್ಟಬೇಡಿ, ಇದು ನನ್ನ ಹಕ್ಕು’ ಎಂದು ಗಟ್ಟಿಯಾಗಿ ಕಿರುಚಾಡಿದ್ದಾಳೆ. ಈ ಯುವತಿ ದೆಹಲಿಗೆ ಏಕೆ ಬಂದಿದ್ದಳು ಅಥವಾ ಈ ಹಿಂದೆ ವಿಜಯ್ ಅವರ ಕಚೇರಿಯನ್ನು ಸಂಪರ್ಕಿಸಲು ಪ್ರಯತ್ನಿಸಿದ್ದಳೇ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಅಂತಿಮವಾಗಿ ಪೊಲೀಸರು ಆಕೆಯನ್ನು ಬಲವಂತವಾಗಿ ರಸ್ತೆಯಿಂದ ತೆರವುಗೊಳಿಸಿದ್ದಾರೆ.
ಈ ವಿಚಿತ್ರ ಘಟನೆಯ ವೀಡಿಯೋ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಸಾರ್ವಜನಿಕ ರಸ್ತೆಯಲ್ಲಿ ಮಲಗಿ ಸಂಚಾರಕ್ಕೆ ತೊಂದರೆ ಕೊಟ್ಟ ಯುವತಿಯ ನಡೆಗೆ ಹಲವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಕ್ಕು ಎಂಬ ಪದವನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಕೆಲವರು ಟೀಕಿಸಿದ್ದರೆ, ಇನ್ನು ಕೆಲವರು ನಟ ವಿಜಯ್ ಅವರನ್ನು ಭೇಟಿಯಾಗುವ ಆಸೆಯಿದ್ದರೆ ಚೆನ್ನೈಗೆ ಹೋಗಿ ಪ್ರತಿಭಟಿಸಬೇಕಿತ್ತು, ದೆಹಲಿ ರಸ್ತೆಯಲ್ಲಿ ರಂಪಾಟ ಮಾಡುವುದರಲ್ಲಿ ಅರ್ಥವಿಲ್ಲ ಎಂದು ಕಮೆಂಟ್ ಮಾಡಿದ್ದಾರೆ.

