ಬೆಳಗಾವಿ: ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕನ್ನಡ ಪರ ನಿರ್ಣಯ ಪಾಸ್ ಮಾಡಲಾಗಿದೆ. ಪಾಲಿಕೆಯ ಸಾಮಾನ್ಯ ಸಭೆಯ ಅಂತ್ಯದಲ್ಲಿ ವಿಷಯ ಪ್ರಸ್ತಾಪಿಸಲಾಗಿದೆ.
ಸರ್ಕಾರದಿಂದ 1988ರ ಸದನದಂತೆ ಮುಂದುವರೆಯಲು ಪತ್ರ ಬಂದಿದ್ದು, ಅದರ ಅನ್ವಯ ಮಹಾಜನ್ ವರದಿ ಅಂತಿಮ ಎಂದು ನಿರ್ಣಯ ಕೈಗೊಳ್ಳಲಾಗಿದೆ. ಸರ್ಕಾರದ ಪತ್ರವನ್ನು ಆಯುಕ್ತ ಎಂ. ಕಾರ್ತಿಕ್ ಓದಿದ್ದಾರೆ.
ಈ ಸಭೆಯಲ್ಲಿ ಬಹುಮತದಿಂದ ಅನುಮೋದನೆ ಎಂದು ಮೇಯರ್ ತಿಳಿಸಿದ್ದಾರೆ. ಮೇಯರ್ ರೂಲಿಂಗ್ ಗೆ ಎಂಇಎಸ್ ಬೆಂಬಲಿತ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದಾರೆ. ಸಭೆಯನ್ನು ಬಹಿಷ್ಕರಿಸಿದ್ದಾರೆ. ಮೇಯರ್ ಆದೇಶಕ್ಕೆ ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರು ಮೇಜು ತಟ್ಟಿ ಬೆಂಬಲ ಸೂಚಿಸಿದ್ದಾರೆ. ಆರು ತಿಂಗಳ ಹೋರಾಟದ ನಂತರ ಪ್ರಕರಣ ಸುಖಾಂತ್ಯ ಕಂಡಿದೆ. ಸರ್ಕಾರದ ಜೊತೆಗೆ ಸಂಘರ್ಷಕ್ಕೆ ಇಳಿಯದ ಬೆಳಗಾವಿ ಪಾಲಿಕೆ ಸರ್ಕಾರದ ಆದೇಶವನ್ನು ಮಹಾನಗರ ಪಾಲಿಕೆ ಯಥಾವತ್ತಾಗಿ ಪಾಲಿಸಿದೆ.
ರಾಜ್ಯ ಸರ್ಕಾರವು ಪಾಲಿಕೆಗೆ ಕರ್ನಾಟಕ ಪರ ನಿರ್ಣಯ ಕೈಗೊಳ್ಳುವಂತೆ ಆಗಸ್ಟ್ 29ರಂದು ನಿರ್ದೇಶನ ನೀಡಿತ್ತು. ಸೆಪ್ಟೆಂಬರ್ 22ರವರೆಗೂ ನಿರ್ಣಯ ಜಾರಿಯ ಕುರಿತು ಪಾಲಿಕೆಯಿಂದ ಕ್ರಮ ವರದಿ ಕೇಳಲಾಗಿತ್ತು.
ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂದು ಘೋಷಿಸುವ ನಿರ್ಣಯಕ್ಕೆ ರಾಜ್ಯ ಸರ್ಕಾರ ಸೂಚನೆ ನೀಡಿತ್ತು. ಮಹಾಜನ್ ಆಯೋಗದ ವರದಿಯೇ ಅಂತಿಮ ಎಂಬ ಕರ್ನಾಟಕ ವಿಧಾನಸಭೆಯ 1988ರ ನಿರ್ಣಯವನ್ನು ಆಧರಿಸಿ ಪಾಲಿಕೆ ನಿರ್ಣಯ ಕೈಗೊಳ್ಳಬೇಕೆಂದು ಸೂಚಿಸಲಾಗಿತ್ತು.
ಕನ್ನಡಪರ ಸಂಘಟನೆಗಳು ಹಲವು ತಿಂಗಳಿನಿಂದ ಈ ನಿರ್ಣಯಕ್ಕಾಗಿ ಒತ್ತಾಯಿಸುತ್ತಿದ್ದವು. ವಿಳಂಬವಾದ ಹಿನ್ನೆಲೆಯಲ್ಲಿ ಪ್ರತಿಭಟನೆಗಳನ್ನೂ ನಡೆಸಿದ್ದವು.
1988ರ ಮಾರ್ಚ್ 23ರಂದು ಕರ್ನಾಟಕ ವಿಧಾನಸಭೆ ಮಹಾಜನ್ ಆಯೋಗದ ವರದಿಯ ಶಿಫಾರಸುಗಳನ್ನು ಜಾರಿಗೊಳಿಸುವಂತೆ ಒತ್ತಾಯಿಸುವ ನಿರ್ಣಯ ಅಂಗೀಕರಿಸಿತ್ತು.
ಸಾಮಾನ್ಯ ಸಭೆಯಲ್ಲಿ ಮಹಿಳಾ ಅಧಿಕಾರಿಗೆ ಅವಮಾನ ಆರೋಪ
ಬೆಳಗಾವಿ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಮಹಿಳಾ ಅಧಿಕಾರಿಗೆ ಅವಮಾನ ಆರೋಪ ಕೇಳಿ ಬಂದಿದೆ. ಪಾಲಿಕೆಯ ಸದಸ್ಯ ಶಾಹಿದ್ ಪಠಾಣ್ ವಿರುದ್ಧ ಪಾಲಿಕೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಧರಣಿ ನಡೆಸಿದ್ದಾರೆ.
ಬೆಳಗಾವಿ ಮಹಾನಗರ ಪಾಲಿಕೆ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಗಿದೆ. ಪಾಲಿಕೆಯ ಅಭಿವೃದ್ಧಿ ಶಾಖೆಯ ಉಪ ಆಯುಕ್ತರಾದ ಲಕ್ಷ್ಮಿಯವರಿಗೆ ಅವಮಾನ ಮಾಡಿದ ಆರೋಪ ಕೇಳಿ ಬಂದಿದೆ. ಪ್ರತಿಭಟನೆಯಲ್ಲಿ ಲಕ್ಷ್ಮಿ ನಿಪ್ಪಾಣಿಕರ್, ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದಾರೆ.
ದಲಿತ ವಿರೋಧಿ ನಗರ ಸೇವಕರು ಎಂದು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಧಿಕಾರಿಗೆ ಅವಮಾನಿಸಿದ ಪಾಲಿಕೆ ಸದಸ್ಯ ಶಾಹಿದ್ ಪಠಾಣ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ. ತಕ್ಷಣ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳುವಂತೆ ಪಟ್ಟು ಹಿಡಿದಿದ್ದಾರೆ. ಸಭೆಯಲ್ಲಿ ಕೆಲಸ ಮಾಡಲು ಲಾಯಕ್ಕಿಲ್ಲ ಎಂದು ಸದಸ್ಯ ಶಾಹಿದ್ ಹೇಳಿದ್ದರು. ಶಾಹಿದ್ ಹೇಳಿಕೆಯ ವಿರುದ್ಧ ಅಧಿಕಾರಿ ಲಕ್ಷ್ಮಿ ಆಕ್ರೋಶ ಹೊರಹಾಕಿದ್ದರು. ಈಗ ಎಲ್ಲಾ ಸಿಬ್ಬಂದಿಗೆ ಅಧಿಕಾರಿ ಧರಣಿ ಸತ್ಯಾಗ್ರಹ ನಡೆಸಿದ್ದಾರೆ.

