ಟಿವಿ ಜಗತ್ತಿನ ಖ್ಯಾತ ನಟಿ, ‘ಅನುಪಮಾ’ ಧಾರಾವಾಹಿ ಖ್ಯಾತಿಯ ರೂಪಾಲಿ ಗಂಗೂಲಿ ತಮ್ಮ ದಿವಂಗತ ತಂದೆ ಹಾಗೂ ಚಲನಚಿತ್ರ ನಿರ್ದೇಶಕರಾಗಿದ್ದ ಅನಿಲ್ ಗಂಗೂಲಿ ಅವರ ಮುಂಬೈನಲ್ಲಿ ಸ್ವಂತ ಮನೆ ಹೊಂದುವ ಕನಸನ್ನು ನೆನಪಿಸಿಕೊಂಡು ವೇದಿಕೆಯಲ್ಲೇ ಭಾವುಕರಾಗಿದ್ದಾರೆ. ಮುಂಬೈನಲ್ಲಿ ಬುಧವಾರ (ಸೆಪ್ಟೆಂಬರ್ 30) ನಡೆದ ‘ಫಿಕಿ ಫ್ರೇಮ್ಸ್ 2026’ (FICCI Frames 2026) ಕಾರ್ಯಕ್ರಮದಲ್ಲಿ ಮಾತನಾಡಿದ ನಟಿ, ತಮ್ಮ ಕುಟುಂಬ ಎದುರಿಸಿದ ಕಠಿಣ ಆರ್ಥಿಕ ಹಂತಗಳು ಹಾಗೂ ‘ಅನುಪಮಾ’ ಧಾರಾವಾಹಿಯ ಯಶಸ್ಸು ತಂದೆಯ ಸುದೀರ್ಘ ಕನಸನ್ನು ನನಸು ಮಾಡಲು ಹೇಗೆ ನೆರವಾಯಿತು ಎಂಬುದನ್ನು ಹಂಚಿಕೊಂಡಿದ್ದಾರೆ.
ಸ್ವತಂತ್ರ ಚಲನಚಿತ್ರ ನಿರ್ಮಾಪಕರಾಗಿದ್ದ ತಮ್ಮ ತಂದೆ ಎದುರಿಸಿದ ಕಷ್ಟಗಳನ್ನು ನೆನೆದ ರೂಪಾಲಿ, “ನನ್ನ ತಂದೆ ಒಬ್ಬ ಚಲನಚಿತ್ರ ನಿರ್ಮಾಪಕರಾಗಿದ್ದರು. ಆ ಕಾಲದಲ್ಲಿ ಕಾರ್ಪೊರೇಟ್ ಬೆಂಬಲವಿಲ್ಲದ ನಿರ್ಮಾಪಕರು ಸಿನಿಮಾಗಳನ್ನು ನಿರ್ಮಿಸಲು ತಮ್ಮ ಮನೆಗಳನ್ನೇ ಮಾರಾಟ ಮಾಡುತ್ತಿದ್ದರು. ನಮ್ಮ ಕುಟುಂಬವೂ ಒಂದು ಹಂತದಲ್ಲಿ ಇದ್ದದ್ದನ್ನೆಲ್ಲಾ ಕಳೆದುಕೊಂಡಿತು. ಆದರೆ ಮುಂಬೈನಲ್ಲಿ ಸ್ವಂತ ಮನೆ ಹೊಂದುವುದೊಂದೇ ನನ್ನ ತಂದೆಯ ಏಕೈಕ ಕನಸಾಗಿತ್ತು” ಎಂದು ಭಾವುಕರಾಗಿ ನುಡಿದರು.
ಮುಂದುವರಿದು ಮಾತನಾಡಿದ ಅವರು, “ನಾನು ಒಬ್ಬ ಪ್ರಸಿದ್ಧ ನಿರ್ದೇಶಕನ ಮಗಳಾಗಿ ‘ನೆಪೋ ಕಿಡ್’ ಎನಿಸಿಕೊಂಡಿದ್ದರೂ, ತಂದೆಯ ಕನಸನ್ನು ನನಸು ಮಾಡುವುದು ನನ್ನ ಗುರಿಯಾಗಿತ್ತು. ‘ಅನುಪಮಾ’ ಧಾರಾವಾಹಿ ಬಂದ ನಂತರವೇ ನಾನು ನನ್ನ ಮೊದಲ ಮನೆಯನ್ನು ಖರೀದಿಸಲು ಸಾಧ್ಯವಾಯಿತು” ಎಂದು ಹೇಳಿದರು.
ಕಾರ್ಯಕ್ರಮದಲ್ಲಿದ್ದ ‘ಅನುಪಮಾ’ ಧಾರಾವಾಹಿಯ ನಿರ್ಮಾಪಕ ರಾಜನ್ ಶಾಹಿ ರೂಪಾಲಿ ಅವರ ಆರಂಭಿಕ ದಿನಗಳ ಹೋರಾಟವನ್ನು ನೆನಪಿಸಿಕೊಂಡರು. “ನಮ್ಮ ಮೊದಲ ಪ್ರಾಜೆಕ್ಟ್‌ಗಾಗಿ ರೂಪಾಲಿ ಮೂರು ಬಾರಿ ಆಡಿಷನ್ ನೀಡಿದ್ದರು. ಆರಂಭದಲ್ಲಿ ನಾನು ಅವರನ್ನು ರಿಜೆಕ್ಟ್ ಮಾಡಿದ್ದೆ. ಆದರೆ ಅವರು ಇನ್ನೊಂದು ಅವಕಾಶ ಕೇಳಿದ್ದರು. ಆ ಸಮಯದಲ್ಲಿ ಬಸ್ ಪ್ರಯಾಣಕ್ಕೂ ಹಣವಿಲ್ಲದೆ ಅವರು ವರ್ಲಿಯಿಂದ ಕಾಲ್ನಡಿಗೆಯಲ್ಲೇ ಆಡಿಷನ್‌ಗೆ ಬರುತ್ತಿದ್ದರು. ಅವರ ಈ ಕಠಿಣ ಪರಿಶ್ರಮ ಮತ್ತು ಹೋರಾಟದ ಬಗ್ಗೆ ನನಗೆ ಹೆಮ್ಮೆಯಿದೆ” ಎಂದು ತಿಳಿಸಿದರು. ರಾಜನ್ ಶಾಹಿ ಅವರ ಮಾತುಗಳನ್ನು ಕೇಳಿ ರೂಪಾಲಿ ವೇದಿಕೆಯಲ್ಲೇ ಕಣ್ಣೀರಿಟ್ಟರು.

