ಮೈಸೂರು: ಒಂದೂವರೆ ವರ್ಷದ ಮಗುವಿನ ಮೇಲೆ ಶಾಲಾ ವಾಹನ ಹರಿದು ಹೋಗಿದ್ದು, ಮಗು ಸ್ಥಳದಲ್ಲೇ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಉದ್ಯೂರು ಗ್ರಾಮದಲ್ಲಿ ಈ ದುರಂತ ನಡೆದಿದೆ. ಲತಿಕ್ಷಾ ಅಪಘಾತದಲ್ಲಿ ಬಲಿಯಾದ ಕಂದಮ್ಮ. ಶಾಸ್ತ್ರಿ ಪಬ್ಲಿಕ್ ಸ್ಕೂಲ್ ವಾಹನ ಹರಿದು ಮೃತಪಟ್ಟಿದ್ದಾಳೆ.
ಶಾಲೆಯಿಂದ ಮನೆಗೆ ಬಂದಿದ್ದ 4 ವರ್ಷದ ಬಾಲಕನನ್ನು ತಾಯಿ ವಾಹನದಿಂದ ಇಳಿಸಿಕೊಂಡಿದ್ದರು. ಇದೇ ವೇಳೆ ಪಕ್ಕದಲ್ಲಿದ್ದ ಮಗು ಲತಿಕ್ಷಾಗೆ ಶಾಲಾ ವಾಹನ ಡಿಕ್ಕಿ ಹೊಡೆದಿದೆ. ಮಗು ಕೆಳಗೆ ಬೀಳುತ್ತಿದ್ದಂತೆಯೇ ವಾಹನದ ಚಕ್ರ ಮಗುವಿನ ಮೇಲೆ ಹರಿದು ಹೋಗಿದೆ. ಮಗು ಸ್ಥಳದಲ್ಲೇ ಸಾವನ್ನಪ್ಪಿದ್ದಳೆ.
ವಾಹನ ಚಾಲಕ ಸಿದ್ದರಾಜು (42) ವಿರುದ್ಧ ದೂರು ದಾಖಲಾಗಿದೆ. ವೇಗ ಹಾಗೂ ಅಜಾಗರೂಕ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಆರೋಪಿಸಲಾಗಿದೆ. ವಾಹನ ಚಾಲಕನ್ನು ಬಂಧಿಸಿ ಕ್ರಮ ಕೈಗೊಳ್ಳುವಂತೆ ಮಗುವಿನ ಕುಟುಂಬದವರು ಆಗ್ರಹಿಸಿದ್ದಾರೆ. ಹುಣಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

