HomeLatest Newsಏಷ್ಯನ್ ಗೇಮ್ಸ್ ನಲ್ಲಿ ಭಾಗವಹಿಸಿದ ರಾಜ್ಯದ ಕ್ರೀಡಾಪಟುಗಳಿಗೆ ತಲಾ 5 ಲಕ್ಷ, ಪದಕ ವಿಜೇತರಿಗೆ 15...

ಏಷ್ಯನ್ ಗೇಮ್ಸ್ ನಲ್ಲಿ ಭಾಗವಹಿಸಿದ ರಾಜ್ಯದ ಕ್ರೀಡಾಪಟುಗಳಿಗೆ ತಲಾ 5 ಲಕ್ಷ, ಪದಕ ವಿಜೇತರಿಗೆ 15 ಲಕ್ಷ ರೂ.

ಬೆಂಗಳೂರು: ಜಪಾನ್‌ ನ ಐಚಿ–ನಗೋಯಾದಲ್ಲಿ ನಡೆಯುತ್ತಿರುವ 20ನೇ ಏಷ್ಯನ್ ಗೇಮ್ಸ್‌ನಲ್ಲಿ ಪದಕಗಳನ್ನು ಗೆದ್ದು ದೇಶದ ಕೀರ್ತಿಯನ್ನು ಹೆಚ್ಚಿಸುವುದರ ಜೊತೆಗೆ ಕರ್ನಾಟಕಕ್ಕೂ ಹೆಮ್ಮೆ ತಂದಿರುವ ನಮ್ಮ ರಾಜ್ಯದ ಕ್ರೀಡಾಪಟುಗಳಿಗೆ ಹೃತ್ಪೂರ್ವಕ ಅಭಿನಂದನೆಗಳು.

ಒಲಿಂಪಿಕ್ಸ್, ಕಾಮನ್‌ವೆಲ್ತ್ ಗೇಮ್ಸ್, ಏಷ್ಯನ್ ಗೇಮ್ಸ್ ಹಾಗೂ ಏಷ್ಯನ್ ಪ್ಯಾರಾ ಗೇಮ್ಸ್‌ಗಳಲ್ಲಿ ಭಾಗವಹಿಸುವ ಕರ್ನಾಟಕದ ಕ್ರೀಡಾಪಟುಗಳಿಗೆ ತಲಾ ₹5 ಲಕ್ಷ ವಿಶೇಷ ಪ್ರೋತ್ಸಾಹಧನ ನೀಡಲಾಗುತ್ತಿದೆ. ಪದಕ ವಿಜೇತರಿಗೆ ಹೆಚ್ಚುವರಿಯಾಗಿ ₹15 ಲಕ್ಷ ನಗದು ಬಹುಮಾನ ನೀಡುವ ಮೂಲಕ ಅವರ ಸಾಧನೆಯನ್ನು ಗೌರವಿಸಲಾಗುತ್ತಿದೆ ಎಂದು ಡಿಸಿಎಂ ಡಾ.ಜಿ. ಪರಮೇಶ್ವರ್ ತಿಳಿಸಿದ್ದಾರೆ.

ಬ್ಯಾಡ್ಮಿಂಟನ್‌ನಲ್ಲಿ ಕಂಚಿನ ಪದಕ ಗೆದ್ದ ಭಾರತೀಯ ಪುರುಷರ ತಂಡದ ಸದಸ್ಯ, ಕರ್ನಾಟಕದ ಯುವ ಪ್ರತಿಭೆ ಆಯುಷ್ ಶೆಟ್ಟಿ ಅವರ ಸಾಧನೆ ಅತ್ಯಂತ ಸಂತೋಷ ತಂದಿದೆ. ಚಿಕ್ಕ ವಯಸ್ಸಿನಲ್ಲೇ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿರುವ ಆಯುಷ್, ಮುಂದಿನ ದಿನಗಳಲ್ಲಿ ಇನ್ನಷ್ಟು ಉನ್ನತ ಸಾಧನೆಗಳನ್ನು ಮಾಡಿ ದೇಶಕ್ಕೆ ಕೀರ್ತಿ ತರಲಿ ಎಂದು ಹಾರೈಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

4×400 ಮೀಟರ್ ಮಿಶ್ರ ರಿಲೇಯಲ್ಲಿ ಬೆಳ್ಳಿ ಪದಕ ಗೆದ್ದ ಭಾರತೀಯ ತಂಡದ ಭಾಗವಾಗಿರುವ ಕನ್ನಡತಿ ಎಂ.ಆರ್. ಪೂವಮ್ಮ ಅವರ ಸಾಧನೆ ವಿಶೇಷವಾದದ್ದು. ಹಲವು ವರ್ಷಗಳಿಂದ ಭಾರತೀಯ ಅಥ್ಲೆಟಿಕ್ಸ್‌ನಲ್ಲಿ ನಿರಂತರವಾಗಿ ಸಾಧನೆ ಮಾಡುತ್ತಾ ಬಂದಿರುವ ಅವರ ಅನುಭವ, ಶಿಸ್ತು ಮತ್ತು ಕ್ರೀಡೆಯ ಮೇಲಿನ ಬದ್ಧತೆ ಯುವ ಕ್ರೀಡಾಪಟುಗಳಿಗೆ ಪ್ರೇರಣೆಯಾಗಿದೆ ಎಂದು ಹೇಳಿದ್ದಾರೆ.

ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟ ಮಹಿಳಾ ಕ್ರಿಕೆಟ್ ತಂಡದ ಸಾಧನೆ ದೇಶವೇ ಸಂಭ್ರಮಿಸುವಂತಹದ್ದು. ಈ ಯಶಸ್ಸಿನ ಭಾಗವಾಗಿರುವ ಕರ್ನಾಟಕದ ಹೆಮ್ಮೆಯ ಶ್ರೇಯಾಂಕಾ ಪಾಟೀಲ್ ಅವರಿಗೆ ವಿಶೇಷ ಅಭಿನಂದನೆಗಳು. ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಈ ಗೆಲುವು ಮಹಿಳಾ ಕ್ರೀಡಾಪಟುಗಳ ಸಾಮರ್ಥ್ಯ ಮತ್ತು ಆತ್ಮವಿಶ್ವಾಸಕ್ಕೆ ಮತ್ತೊಂದು ಉತ್ತಮ ನಿದರ್ಶನವಾಗಿದೆ ಎಂದು ಅವರು ತಿಳಿಸಿದ್ದಾರೆ.

ವನಿತೆಯರ 50 ಮೀಟರ್ ರೈಫಲ್‌ ಶೂಟಿಂಗ್‌ನಲ್ಲಿ ಬೆಳ್ಳಿ ಪದಕ ಗೆದ್ದ ಭಾರತೀಯ ತಂಡದ ಸದಸ್ಯೆ ತಿಲೋತ್ತಮಾ ಸೇನ್ ಅವರ ಸಾಧನೆಯೂ ಕರ್ನಾಟಕಕ್ಕೆ ಮತ್ತೊಂದು ಹೆಮ್ಮೆಯ ಕ್ಷಣ. ಶೂಟಿಂಗ್‌ನಂತಹ ಏಕಾಗ್ರತೆ ಮತ್ತು ಶ್ರದ್ಧೆ ಅಗತ್ಯವಿರುವ ಕ್ರೀಡೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ಗೆಲ್ಲುವುದು ನಿಜಕ್ಕೂ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಆಯುಷ್ ಶೆಟ್ಟಿ, ಎಂ.ಆರ್. ಪೂವಮ್ಮ, ಶ್ರೇಯಾಂಕಾ ಪಾಟೀಲ್ ಮತ್ತು ತಿಲೋತ್ತಮಾ ಸೇನ್ ಅವರ ಸಾಧನೆ ಕರ್ನಾಟಕದ ಸಾವಿರಾರು ಯುವ ಕ್ರೀಡಾಪಟುಗಳಿಗೆ ಸಾಧನೆಯ ಛಲ ತುಂಬಿದೆ. ನಮ್ಮ ರಾಜ್ಯದ ಮಕ್ಕಳು ಸರಿಯಾದ ಅವಕಾಶ ಮತ್ತು ಪ್ರೋತ್ಸಾಹ ದೊರೆತರೆ ವಿಶ್ವಮಟ್ಟದಲ್ಲಿ ಸಾಧನೆ ಮಾಡಬಲ್ಲರು ಎಂಬುದನ್ನು ಇವರು ಮತ್ತೊಮ್ಮೆ ತೋರಿಸಿಕೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ.

ಕ್ರೀಡಾಪಟುಗಳು ಪದಕ ಪಡೆಯುವ ಹಂತಕ್ಕೆ ತಲುಪುದರ ಹಿಂದೆ ಹಲವು ವರ್ಷಗಳ ಕಠಿಣ ಪರಿಶ್ರಮ, ತ್ಯಾಗ, ಶಿಸ್ತು ಮತ್ತು ನಿರಂತರ ಅಭ್ಯಾಸ ಇರುತ್ತದೆ. ಅವರ ಕುಟುಂಬದ ಬೆಂಬಲ, ತರಬೇತುದಾರರ ಮಾರ್ಗದರ್ಶನ ಮತ್ತು ಹಲವು ಹಂತಗಳಲ್ಲಿ ದೊರೆಯುವ ಪ್ರೋತ್ಸಾಹ ಕೂಡ ಸಾಧನೆಯ ಭಾಗವಾಗಿರುತ್ತದೆ. ಈ ಪರಿಶ್ರಮಕ್ಕೆ ತಕ್ಕ ಗೌರವ ಮತ್ತು ಬೆಂಬಲ ನೀಡುವುದು ಸರ್ಕಾರದ ಕರ್ತವ್ಯ ಮತ್ತು ಜವಾಬ್ದಾರಿಯೂ ಹೌದು ಎಂದು ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕದಲ್ಲಿ ಕ್ರೀಡಾ ಪ್ರತಿಭೆಗೆ ಕೊರತೆಯಿಲ್ಲ. ಸರಿಯಾದ ಅವಕಾಶ, ಉತ್ತಮ ತರಬೇತಿ, ಗುಣಮಟ್ಟದ ಮೂಲಸೌಕರ್ಯ ಮತ್ತು ಅಗತ್ಯ ಆರ್ಥಿಕ ಬೆಂಬಲ ದೊರೆತರೆ ನಮ್ಮ ಮಕ್ಕಳು ಯಾವುದೇ ಅಂತಾರಾಷ್ಟ್ರೀಯ ವೇದಿಕೆಯಲ್ಲೂ ಸಾಧನೆ ಮಾಡಬಲ್ಲರು ಎಂಬುದು ಹಲವು ಬಾರಿ ಸಾಬೀತಾಗಿದೆ.

ಕ್ರೀಡಾಪಟುಗಳು ಪದಕ ಗೆದ್ದ ನಂತರ ಮಾತ್ರ ಅವರನ್ನು ಗುರುತಿಸುವುದಕ್ಕಿಂತ, ಆರಂಭಿಕ ಹಂತದಲ್ಲೇ ಗುರುತಿಸಿ, ಅವರಿಗೆ ಸೂಕ್ತ ತರಬೇತಿ ಮತ್ತು ಅಗತ್ಯ ಪ್ರೋತ್ಸಾಹ ನೀಡಲು ನಮ್ಮ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ. ಉತ್ತಮ ತರಬೇತುದಾರರು, ವೈಜ್ಞಾನಿಕ ತರಬೇತಿ, ಅಗತ್ಯ ಕ್ರೀಡಾ ಸೌಲಭ್ಯಗಳು ಕ್ರೀಡಾಪಟುಗಳಿಗೆ ನಿರಂತರವಾಗಿ ಲಭ್ಯವಾಗಬೇಕು ಎಂಬುದು ನಮ್ಮ ಉದ್ದೇಶ.

ಕ್ರೀಡಾ ಅವಕಾಶಗಳು ನಗರ ಪ್ರದೇಶಗಳಿಗೆ ಮಾತ್ರ ಸೀಮಿತವಾಗಬಾರದು. ಗ್ರಾಮೀಣ ಪ್ರದೇಶ ಹಾಗೂ ಸಾಮಾನ್ಯ ಕುಟುಂಬಗಳಿಂದ ಬರುವ ಪ್ರತಿಭಾವಂತ ಮಕ್ಕಳಿಗೂ ಸಮಾನವಾಗಿ ಅವಕಾಶಗಳು ದೊರೆಯಬೇಕು. ಆ ನಿಟ್ಟಿನಲ್ಲಿ ರಾಜ್ಯದ ಮೂಲೆಮೂಲೆಗಳಲ್ಲಿರುವ ಪ್ರತಿಭೆಗಳನ್ನು ಗುರುತಿಸಿ, ಅವರಿಗೆ ಸೂಕ್ತ ತರಬೇತಿ ಮತ್ತು ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಕ್ರೀಡಾ ಇಲಾಖೆ ಕೆಲಸ ಮಾಡುತ್ತಿದೆ.

ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುವ ಕ್ರೀಡಾಪಟುಗಳಿಗೆ ಪ್ರೋತ್ಸಾಹಧನ, ಆರ್ಥಿಕ ನೆರವು, ತರಬೇತಿ ಮತ್ತು ಉದ್ಯೋಗಾವಕಾಶಗಳ ಮೂಲಕ ಬೆಂಬಲ ನೀಡುವ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಲಾಗುತ್ತಿದೆ. ಕ್ರೀಡೆಯನ್ನು ವೃತ್ತಿಯಾಗಿ ಆಯ್ಕೆ ಮಾಡಿಕೊಳ್ಳುವ ಯುವಕರಿಗೆ ಭರವಸೆ ಮತ್ತು ಆರ್ಥಿಕ ಭದ್ರತೆ ದೊರೆಯಬೇಕು. ಅವರು ತಮ್ಮ ಕ್ರೀಡಾ ಪಯಣವನ್ನು ಯಾವುದೇ ಆತಂಕವಿಲ್ಲದೆ ಮುಂದುವರಿಸುವಂತಹ ವಾತಾವರಣ ನಿರ್ಮಿಸಿಕೊಡುತ್ತಿದ್ದೇವೆ.

ಒಲಿಂಪಿಕ್ಸ್, ಕಾಮನ್‌ವೆಲ್ತ್ ಗೇಮ್ಸ್, ಏಷ್ಯನ್ ಗೇಮ್ಸ್ ಹಾಗೂ ಏಷ್ಯನ್ ಪ್ಯಾರಾ ಗೇಮ್ಸ್‌ಗಳಲ್ಲಿ ಭಾಗವಹಿಸುವ ಕರ್ನಾಟಕದ ಕ್ರೀಡಾಪಟುಗಳಿಗೆ ತಲಾ ₹5 ಲಕ್ಷ ವಿಶೇಷ ಪ್ರೋತ್ಸಾಹಧನ ನೀಡಲಾಗುತ್ತಿದೆ. ಪದಕ ವಿಜೇತರಿಗೆ ಹೆಚ್ಚುವರಿಯಾಗಿ ₹15 ಲಕ್ಷ ನಗದು ಬಹುಮಾನ ನೀಡುವ ಮೂಲಕ ಅವರ ಸಾಧನೆಯನ್ನು ಗೌರವಿಸಲಾಗುತ್ತಿದೆ.

ಕ್ರೀಡೆಯಲ್ಲಿ ಸಾಧನೆ ಮಾಡುವ ಯುವಜನರಿಗೆ ಕ್ರೀಡೆಯನ್ನೇ ವೃತ್ತಿಯಾಗಿ ಆಯ್ಕೆ ಮಾಡಿಕೊಳ್ಳುವ ಧೈರ್ಯ ಮತ್ತು ಭದ್ರತೆ ದೊರೆಯಬೇಕು. ಈಗಾಗಲೇ ಅಂತಾರಾಷ್ಟ್ರೀಯ ಕ್ರೀಡೆಗಳಲ್ಲಿ  ಪದಕ ಗೆದ್ದ 13 ಕ್ರೀಡಾಪಟುಗಳನ್ನು ವಿಶೇಷ ನೇಮಕಾತಿಯ ಮೂಲಕ ‘ಎ’ ಮತ್ತು ‘ಬಿ’ ಗುಂಪಿನ ಸರ್ಕಾರಿ ಹುದ್ದೆಗಳಿಗೆ ನೇಮಕ ಮಾಡಲಾಗಿದೆ. ಜೊತೆಗೆ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕ್ರೀಡಾಪಟುಗಳ ಮೀಸಲಾತಿಯನ್ನು 2%ರಿಂದ 3%ಕ್ಕೆ ಹೆಚ್ಚಿಸಲಾಗಿದೆ.

ಕ್ರೀಡಾ ಆಸಕ್ತಿ ಹೊಂದಿರುವ ಮಕ್ಕಳು ಶಿಕ್ಷಣ ಮತ್ತು ಕ್ರೀಡೆ ನಡುವೆ ಯಾವುದಾದರೊಂದನ್ನು ಆಯ್ಕೆ ಮಾಡಿಕೊಳ್ಳುವ ಪರಿಸ್ಥಿತಿ ಬರಬಾರದು ಎಂಬ ಉದ್ದೇಶದಿಂದ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಶೇ.15ರಷ್ಟು ಮತ್ತು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸುವವರಿಗೆ ಶೇ.25ರಷ್ಟು ಹಾಜರಾತಿ ವಿನಾಯಿತಿ ನೀಡಲಾಗಿದೆ. ಈ ಮೂಲಕ ಕ್ರೀಡಾ ಸಾಧನೆಯ ಜೊತೆಗೆ ಅವರ ಶೈಕ್ಷಣಿಕ ಬದುಕು ಸುಗಮವಾಗಿ ಮುಂದುವರಿಯುವಂತೆ ಅವಕಾಶ ಕಲ್ಪಿಸಲಾಗಿದೆ.

ಕ್ರೀಡಾ ಸಾಧನೆಗೆ ಉತ್ತಮ ಮೂಲಸೌಕರ್ಯವೂ ಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ₹36 ಕೋಟಿ ವೆಚ್ಚದಲ್ಲಿ 32 ಕ್ರೀಡಾಂಗಣಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಕಬಡ್ಡಿ, ಅಥ್ಲೆಟಿಕ್ಸ್ ಹಾಗೂ  ಗ್ರಾಮೀಣ ಕ್ರೀಡೆಗಳನ್ನು ಒಳಗೊಂಡ ದಸರಾ ಕ್ರೀಡಾಕೂಟವನ್ನು ತಾಲ್ಲೂಕು ಮಟ್ಟದಿಂದಲೇ ವ್ಯವಸ್ಥಿತವಾಗಿ ಆಯೋಜಿಸುವ ತೀರ್ಮಾನ ಕೈಗೊಳ್ಳಲಾಗಿದ್ದು, ಆ ಮೂಲಕ ಗ್ರಾಮೀಣ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸಲಾಗುತ್ತಿದೆ.

ಆ ಮೂಲಕ ರಾಜ್ಯದ ಕ್ರೀಡಾ ಮೂಲಸೌಕರ್ಯವನ್ನು ಇನ್ನಷ್ಟು ಬಲಪಡಿಸುವುದು, ಪ್ರತಿಭೆಗಳನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸುವುದು ಮತ್ತು ಯುವ ಕ್ರೀಡಾಪಟುಗಳನ್ನು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸ್ಪರ್ಧೆಗಳಿಗೆ ಸಜ್ಜುಗೊಳಿಸುವುದಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಕರ್ನಾಟಕವನ್ನು ಕ್ರೀಡಾ ಕ್ಷೇತ್ರದಲ್ಲಿಯೂ ದೇಶದ ಮುಂಚೂಣಿ ರಾಜ್ಯವನ್ನಾಗಿ ರೂಪಿಸುವುದು ನಮ್ಮ ಗುರಿ ಎಂದು ಮಾಹಿತಿ ನೀಡಿದ್ದಾರೆ.

ಏಷ್ಯನ್‌ ಗೇಮ್ಸ್‌ – 2026ರಲ್ಲಿ ಪದಕ ವಿಜೇತರಾದ ಆಯುಷ್ ಶೆಟ್ಟಿ, ಎಂ.ಆರ್. ಪೂವಮ್ಮ, ಶ್ರೇಯಾಂಕಾ ಪಾಟೀಲ್ ಮತ್ತು ತಿಲೋತ್ತಮಾ ಸೇನ್ ಅವರಿಗೆ ಮತ್ತೊಮ್ಮೆ ಹೃತ್ಪೂರ್ವಕ ಅಭಿನಂದನೆಗಳು. ನಿಮ್ಮ ಸಾಧನೆ ಕನ್ನಡಿಗರಿಗೆ ಹೆಮ್ಮೆ ತಂದಿದೆ. ನಿಮ್ಮ ಮುಂದಿನ ಕ್ರೀಡಾ ಪಯಣ ಇನ್ನಷ್ಟು ಯಶಸ್ಸಿನಿಂದ ಕೂಡಿರಲಿ. ರಾಜ್ಯ ಸರ್ಕಾರ ಸದಾ ನಿಮ್ಮ ಬೆನ್ನಿಗೆ ನಿಂತು ಅಗತ್ಯ ಸಹಕಾರ ಮತ್ತು ಪ್ರೋತ್ಸಾಹ ನೀಡಲಿದೆ ಎಂದು ತಿಳಿಸಿದ್ದಾರೆ.

ಷ್ಯನ್ ಗೇಮ್ಸ್ ಇನ್ನೂ ಕೆಲವು ದಿನಗಳ ಕಾಲ ನಡೆಯಲಿದ್ದು, ವಿವಿಧ ಕ್ರೀಡೆಗಳಲ್ಲಿ ಭಾಗವಹಿಸುತ್ತಿರುವ ಭಾರತದ ಹಾಗೂ ಕರ್ನಾಟಕದ ಇನ್ನಷ್ಟು ಕ್ರೀಡಾಪಟುಗಳು ಪದಕಗಳನ್ನು ಗೆದ್ದು ದೇಶ ಮತ್ತು ರಾಜ್ಯದ ಕೀರ್ತಿಯನ್ನು ಹೆಚ್ಚಿಸಲಿ ಎಂದು ಹಾರೈಸುತ್ತೇನೆ ಎಂದು ಹೇಳಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular