ಮಂಗಳೂರು: ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಮರು ತನಿಖೆಗೆ ಆದೇಶಿಸಿದ್ದು, ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ಕೂಡ ಸಹ ಎಸ್ಐಟಿ ರಚಿಸಿದೆ. ಈ ವಿಚಾರವಾಗಿ ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಪ್ರತಿಕ್ರಿಯೆ ನೀಡಿದ್ದಾರೆ.
ಮಂಗಳೂರಿನಲ್ಲು ಮಾಅತನಾಡಿದ ಕಲ್ಲಡ್ಕ ಪ್ರಭಾಕರ್ ಭಟ್, ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ತಂಡ ರಚಿಸಿದ್ದು, ಒಳ್ಳೆಯ ವಿಚಾರ. ಕಳೆದ 14 ವರ್ಷಗಳಿಂದ ಸೌಜನ್ಯ ಆತ್ಮ ತಿರುಗುತ್ತಲೇ ಇದೆ. ಈಗಲಾದರೂ ಸೌಜನ್ಯ ಆತ್ಮಕ್ಕೆ ಶಾಂತಿ ಸಿಗಲಿ ಎಂದರು.
ಸರ್ಕಾರ ರಚಿಸಿರುವ ಎಸ್ಐಟಿ ಬಗ್ಗೆ ಸ್ವಲ್ಪ ಅಸಮಾಧಾನವಿದೆ. ಸುಧೀರ್ ಕುಮಾರ್ ರೆಡ್ಡಿಯಂತವರೇ ಎಸ್ಐಟಿಯಲ್ಲಿದ್ರೆ ಒಳ್ಳೆಯದು ಎಂದರು.
ಎಸ್ಐಟಿ ರಚನೆಯಾಗಿರುವುದು ಒಳ್ಳೆಯದೇ, ಆದರೆ ಅದರಲ್ಲಿರುವ ಎಲ್ಲ ಅಧಿಕಾರಿಗಳು ಪರಿಪೂರ್ಣರಾಗಿಲ್ಲ ಎಂಬ ಸಂಶಯವಿದೆ. ಮಂಗಳೂರು ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಒಳ್ಳೆ ಕಮಿಷನರ್, ಅವರು ಆ ಕಡೆ ಈ ಕಡೆ ಹೋಗ್ಲಿಕ್ಕಿಲ್ಲ. ಆದರೆ ಉಳಿದವರ ಬಗ್ಗೆ ನಮಗೆ ಸಂಶಯ ಇದೆ ಎಂದರು.
ಪ್ರಕರಣದಲ್ಲಿ ಅಧಿಕಾರಿಗಳು ಪ್ರಾಮಾಣಿಕವಾಗಿ ತನಿಖೆ ಮಾಡಲಿ. ಬೇರೆ ಯಾವುದೇ ಪ್ರಕರಣದಲ್ಲಿ ಈ ರೀತಿಯಾಗಿಲ್ಲ. ಎಸ್ಐಟಿ ತಂಡ ನ್ಯಾಯ ಕೊಡುವ ಕೆಲಸ ಮಾಡಲಿ. ಅಧಿಕಾರಿಗಳು ಆ ಕಡೆ, ಈ ಕಡೆ ನೋಡದೆ, ಸತ್ಯ ಏನೆಂದು ಹುಡುಕಲಿ. ನೂರಕ್ಕೆ ನೂರು ಸತ್ಯ ಸಿಗುತ್ತದೆ ಎಂದು ಹೇಳಿದ್ದಾರೆ.
ಸಂತೋಷ್ ರಾವ್ನನ್ನು ಸೇರಿಸದಂತೆ ಮತ್ತು ಈ ಹಿಂದಿನ ಅಧಿಕಾರಿಗಳನ್ನು ಸೇರಿಸದಂತೆ ಕೋರ್ಟ್ ಈ ಬಾರಿ ಸ್ಪಷ್ಟವಾಗಿ ಹೇಳಿದೆ. ಅಪರಾಧಿಗಳನ್ನು ಹುಡುಕುವ ತಾಕತ್ತು ಪೊಲೀಸರಿಗೆ ಇದೆ, ಮಂಗಳೂರು ಕಮಿಷನರ್ ರೀತಿಯ ಬಲವಾದ ಇನ್ನೊಂದಷ್ಟು ಅಧಿಕಾರಿಗಳನ್ನು ತಂಡದಲ್ಲಿ ಇಟ್ಟುಕೊಳ್ಳಬೇಕಿತ್ತು ಎಂದು ಹೇಳಿದರು.
ಇದೇ ವೇಳೆ ಅಬ್ದುಲ್ ರೆಹಮಾನ್ ಹತ್ಯೆ ಪ್ರಕರಣ ಸಂಬಂಧ ವಿಚಾರಣೆಗೆ ತಮಗೆ ನೋಟಿಸ್ ನೀಡಿದ ಕುರಿತು ಪ್ರತಿಕ್ರಿಯೆ ನೀಡಿದ ಕಲ್ಲಡ್ಕ ಪ್ರಭಾಕರ ಭಟ್, ಕೇವಲ ಫೋನ್ ಮಾಡಿದ್ದಕ್ಕೆ ನನ್ನನ್ನು ವಿಚಾರಣೆಗೆ ಕರೆಯುವುದೇ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಭರತ್ ಕುಮ್ದೇಲ್ಗೆ ಮಂಪರು ಪರೀಕ್ಷೆ ಯಾಕೆ ಬೇಕು? ಏನು ಆಧಾರ ಇದೆ ಮಂಪರು ಪರೀಕ್ಷೆ ಮಾಡಲು?, ಮೊದಲು ಎಸ್ಪಿ ಅರುಣ್ ಕುಮಾರ್ ಮಂಪರು ಪರೀಕ್ಷೆ ಮಾಡಿಕೊಳ್ಳಲಿ ಎಂದಿದ್ದಾರೆ.
ಫೋನ್ ಮಾಡಿದ್ದಕ್ಕೆ ನನ್ನನ್ನ ವಿಚಾರಣೆಗೆ ಕರೆಯೋದಾ? ನಾನು ಜೈಲಿಗೆ ಹೋಗಿಯಾಗಿದೆ, ನನ್ನದು ಸಾಲದು ಎಂದು ನನ್ನ ಹೆಂಡತಿಯನ್ನು ಜೈಲಿಗೆ ಹಾಕಿದ್ದಾರೆ. ಇನ್ನು ಏನಿದ್ರೂ ಗಲ್ಲಿಗೆ ಹಾಕಬೇಕು. ಅಷ್ಟು ಮಾತ್ರ ಬಾಕಿ ಇರೋದು ತಾಕತ್ ಇದ್ರೆ ನನ್ನನ್ನ ಗಲ್ಲಿಗೆ ಹಾಕಲಿ ಎಂದು ಆಕ್ರೋಶ ಹೊರಹಾಕಿದ್ದಾರೆ.
ನನ್ನ ಮೇಲೂ ಗೂಂಡಾ ಕಾಯ್ದೆ ಹಾಕುವ ಯೋಚನೆಯೂ ಇರಬಹುದು. ಹಾಗಾಗಿ ವಿಚಾರಣೆ ಎಂದು ನೋಟಿಸ್ ಕೊಟ್ಟಿರಬಹುದು ಎಂದು ಕಿಡಿಕಾರಿದರು.

