HomeKarnataka‘ಚಂದ್ರು ಶಾಶ್ವತ ಮುಖ್ಯಮಂತ್ರಿ, ಅವರು ಮಾಜಿ ಸಿಎಂ ಆಗೋದೇ ಇಲ್ಲ’; ಸಿದ್ದರಾಮಯ್ಯ ಕಾಮಿಡಿ

‘ಚಂದ್ರು ಶಾಶ್ವತ ಮುಖ್ಯಮಂತ್ರಿ, ಅವರು ಮಾಜಿ ಸಿಎಂ ಆಗೋದೇ ಇಲ್ಲ’; ಸಿದ್ದರಾಮಯ್ಯ ಕಾಮಿಡಿ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಟ ಮುಖ್ಯಮಂತ್ರಿ ಚಂದ್ರು ಕುರಿತು ಮಾತನಾಡುವ ವೇಳೆ ಹಾಸ್ಯ ಚಟಾಕಿ ಹಾರಿಸಿದ್ದಾರೆ. “ಚಂದ್ರು ಶಾಶ್ವತ ಮುಖ್ಯಮಂತ್ರಿ, ಅವರು ಮಾಜಿ ಮುಖ್ಯಮಂತ್ರಿ ಆಗೋದೇ ಇಲ್ಲ” ಎಂದು ಸಿದ್ದರಾಮಯ್ಯ ಹೇಳಿದ್ದು, ಕಾರ್ಯಕ್ರಮದಲ್ಲಿ ನಗೆ ಮೂಡಿಸಿತು. ಸಿದ್ದರಾಮಯ್ಯ ಅವರ ಈ ಸ್ವಾರಸ್ಯಕರ ಹೇಳಿಕೆ ಇದೀಗ ಗಮನ ಸೆಳೆದಿದೆ.

ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ‘ಮುಖ್ಯಮಂತ್ರಿ’ ನಾಟಕದ 900ನೇ ಪ್ರದರ್ಶನವನ್ನು ವೀಕ್ಷಿಸಿ ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು.

 ಮುಖ್ಯಮಂತ್ರಿ ಚಂದ್ರು ನನ್ನ ಆತ್ಮೀಯ ಸ್ನೇಹಿತರಾಗಿದ್ದು, ಹಲವು ವರ್ಷಗಳಿಂದ ಅವರೊಂದಿಗೆ ನನ್ನ ಒಡನಾಟವಿದೆ. ಚಂದ್ರು ಅವರ ಈ ವಿಶೇಷ ಸಾಧನೆಯ ಸಂದರ್ಭದಲ್ಲಿ ಅವರ ಧರ್ಮಪತ್ನಿ, ಕುಟುಂಬದ ಸದಸ್ಯರು ಹಾಗೂ ಒಡನಾಡಿಗಳು ಸೇರಿ ಕಾರ್ಯಕ್ರಮ ಆಯೋಜಿಸಿರುವುದು ಸಂತಸ ತಂದಿದೆ.ಕಾಲ ಬಹಳ ವೇಗವಾಗಿ ಉರುಳುತ್ತದೆ. ಮುಖ್ಯಮಂತ್ರಿ ಚಂದ್ರು ಅವರು ಹಲವು ವರ್ಷಗಳಿಂದ ನಿರಂತರವಾಗಿ ಸಮಾಜಕ್ಕೆ ಹಾಗೂ ರಂಗಭೂಮಿಗೆ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಅವರಿಗೆ ಈಗ 73 ವರ್ಷ ತುಂಬಿದ್ದರೂ ಉತ್ಸಾಹ ಮಾತ್ರ ಕಿಂಚಿತ್ತೂ ಕಡಿಮೆಯಾಗಿಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮುಖ್ಯಮಂತ್ರಿ ಚಂದ್ರು ಅವರು 93 ನಾಟಕಗಳಲ್ಲಿ ಅಭಿನಯಿಸಿದ್ದು, ಒಂದೊಂದು ನಾಟಕವನ್ನು ಸಿದ್ಧಪಡಿಸುವುದು, ನಟಿಸುವುದು ಅಷ್ಟು ಸುಲಭದ ವಿಷಯವಲ್ಲ. ನಾಟಕದಲ್ಲಿ 93ನೇ ಪ್ರಯೋಗವನ್ನು ಪೂರೈಸಿರುವುದು ವಿಶೇಷ ಸಾಧನೆ. ಸಿನಿಮಾದಲ್ಲೂ ಅವರು 530ಕ್ಕೂ ಹೆಚ್ಚು ಪಾತ್ರಗಳನ್ನು ನಿರ್ವಹಿಸಿದ್ದಾರೆ.

 ನಾನು ಎಂಟು ವರ್ಷ ಮುಖ್ಯಮಂತ್ರಿ ಆಗಿದ್ದೆ. ಈಗ ಮಾಜಿ ಮುಖ್ಯಮಂತ್ರಿ ಆಗಿದ್ದೇನೆ. ಆದರೆ ಚಂದ್ರು ಅವರು ಮಾತ್ರ ಮಾಜಿ ಮುಖ್ಯಮಂತ್ರಿ ಆಗೋದೇ ಇಲ್ಲ. ಅವರು ಶಾಶ್ವತ ಮುಖ್ಯಮಂತ್ರಿ. ಮುಖ್ಯಮಂತ್ರಿ ಚಂದ್ರು ಅವರ ಅದ್ಭುತ ಅಭಿನಯದಿಂದ ‘ಮುಖ್ಯಮಂತ್ರಿ’ ನಾಟಕವನ್ನು ವೀಕ್ಷಿಸುವ ಪ್ರೇಕ್ಷಕರು ಮಂತ್ರಮುಗ್ಧರಾಗುತ್ತಾರೆ. ಸಮಾಜದಲ್ಲಿ ಕಾಲಕ್ಕೆ ತಕ್ಕಂತೆ ಹಲವು ಬದಲಾವಣೆಗಳು ನಡೆದಿದ್ದರೂ, ತಪ್ಪುಗಳು ಇನ್ನೂ ಮುಂದುವರಿದಿವೆ. ಅಂತಹ ತಪ್ಪುಗಳನ್ನು ಸಮಾಜದ ಮುಂದೆ ಎತ್ತಿ ತೋರಿಸುವ ಕೆಲಸವನ್ನು ರಂಗಭೂಮಿ ನಿರಂತರವಾಗಿ ಮಾಡಿಕೊಂಡು ಬಂದಿದೆ.

 ಸಿನಿಮಾದಲ್ಲಿ ನಿರ್ದೇಶಕರು ಇರುವುದರಿಂದ ತಪ್ಪಾದರೆ ‘ಕಟ್’ ಹೇಳಿ ಮತ್ತೊಂದು ದೃಶ್ಯವನ್ನು ಚಿತ್ರೀಕರಿಸಲು ಅವಕಾಶವಿರುತ್ತದೆ. ಆದರೆ ರಂಗಭೂಮಿಯಲ್ಲಿ ಅಂತಹ ಅವಕಾಶವಿಲ್ಲ. ಪ್ರೇಕ್ಷಕರ ಎದುರು ನೇರವಾಗಿ ಅಭಿನಯಿಸಬೇಕಾಗುತ್ತದೆ. ಇದು ರಂಗಭೂಮಿಯ ಕಲಾವಿದರಿಗೆ ಇರುವ ದೊಡ್ಡ ಸವಾಲು.

“ನಾನು 1983ರಲ್ಲಿ ಶಾಸಕನಾದೆ. ಚಂದ್ರು ಅವರು 1985ರಲ್ಲಿ ಶಾಸಕರಾದರು”. ರಾಮಕೃಷ್ಣ ಹೆಗಡೆಯವರು ಚಂದ್ರು ಅವರನ್ನು ರಾಜಕೀಯಕ್ಕೆ ಕರೆತಂದು ಶಾಸಕರನ್ನಾಗಿ ಮಾಡಿದರು. ಅವರು ಶಾಸಕರಾಗಿ, ಎಂಎಲ್‌ಸಿಯಾಗಿ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಕನ್ನಡ ನಾಡು ನುಡಿಗಾಗಿ ಅಪಾರವಾದ ಸೇವೆ ಸಲ್ಲಿಸಿ, ರಾಜ್ಯದಾದ್ಯಂತ ಸಂಚರಿಸಿ ಕನ್ನಡದ ಕಹಳೆ ಮೊಳಗಿಸಿದ್ದಾರೆ. ಮುಖ್ಯಮಂತ್ರಿ ಚಂದ್ರು ಅವರು ಇನ್ನಷ್ಟು ವರ್ಷಗಳ ಕಾಲ ಆರೋಗ್ಯದಿಂದ ಬದುಕಿ, ಇನ್ನಷ್ಟು ನಾಟಕಗಳಲ್ಲಿ ಅಭಿನಯಿಸಬೇಕು. ಅವರಿಗೆ ಭಗವಂತ ಆಯುಷ್ಯ ಮತ್ತು ಆರೋಗ್ಯ ನೀಡಲಿ ಎಂದು ಶುಭ ಹಾರೈಸುತ್ತೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

 ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ “ಮುಖ್ಯಮಂತ್ರಿ” ನಾಟಕದ 900ನೇ ಪ್ರದರ್ಶನವನ್ನು ಕಣ್ತುಂಬಿಕೊಂಡದ್ದು ಅತ್ಯಂತ ಖುಷಿ ನೀಡಿತು. ನಾಟಕವೊಂದರ 900ನೇ ಪ್ರದರ್ಶನ ಎಂದರೆ ಕೇವಲ ಒಂದು ನಾಟಕದ ಯಶಸ್ಸಿನ ಸಂಭ್ರಮವಲ್ಲ. ಇದು ಕನ್ನಡ ರಂಗಭೂಮಿ, ಇಲ್ಲಿನ ಕಲಾವಿದರ ಪರಿಶ್ರಮದ ಯಶಸ್ಸು, ಪ್ರೇಕ್ಷಕರ ಅಭಿರುಚಿಯ ಯಶಸ್ಸು ಮತ್ತು ಮುಖ್ಯವಾಗಿ ವಿಡಂಬನೆಯ ಮೂಲಕ ಸಮಾಜವನ್ನು ಪ್ರಶ್ನಿಸಬಹುದು, ಆಡಳಿತ ವ್ಯವಸ್ಥೆಯನ್ನು ಪ್ರಶ್ನಿಸಬಹುದು ಎಂಬುದಕ್ಕೆ ಒಂದು ದೊಡ್ಡ ಉದಾಹರಣೆ.

ಈ ನಾಟಕ ಮುಂದೆಯೂ ಜನರನ್ನು ನಗಿಸಲಿ. ನಗಿಸುತ್ತಾ ಯೋಚಿಸುವಂತೆ ಮಾಡಲಿ. ಎಲ್ಲರನ್ನು ಆತ್ಮವಿಮರ್ಷೆಗೆ ಒಡ್ಡಿ, ಉತ್ತಮಗೊಳಿಸುವ ಕೆಲಸ ಮಾಡಲಿ ಎಂದು ಆಶಿಸುತ್ತೇನೆ ಎಂದರು.

 ಈ ಸಮಾರಂಭದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೇಂದ್ರ ಸಚಿವರಾದ ವಿ. ಸೋಮಣ್ಣ, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಎಚ್.ಎಂ. ರೇವಣ್ಣ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular