ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುವಾಹಟಿಯಿಂದ ಬೆಂಗಳೂರಿಗೆ ಬರುತ್ತಿದ್ದ ಇಂಡಿಗೋ ವಿಮಾನವೊಂದು ಲ್ಯಾಂಡಿಂಗ್ ವೇಳೆ ಟೇಲ್ ಸ್ಟ್ರೈಕ್ ಗೆ ಒಳಗಾದ ಘಟನೆ ಭಾನುವಾರ ನಡೆದಿದೆ. ಅದೃಷ್ಟವಶಾತ್ ವಿಮಾನದಲ್ಲಿದ್ದ ಪ್ರಯಾಣಿಕರು ಹಾಗೂ ಸಿಬ್ಬಂದಿ ಸುರಕ್ಷಿತವಾಗಿದ್ದು, ಯಾವುದೇ ಪ್ರಾಣಹಾನಿ ಅಥವಾ ಗಾಯ ಸಂಭವಿಸಿಲ್ಲ.
ಇಂಡಿಗೋ 6E 6542 ವಿಮಾನವು ಗುವಾಹಟಿಯಿಂದ ಬೆಂಗಳೂರಿಗೆ ಆಗಮಿಸುತ್ತಿತ್ತು. ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಇಳಿಯುವ ಸಂದರ್ಭದಲ್ಲಿ ಬಲವಾದ ಗಾಳಿ ಹಾಗೂ ಗಾಳಿಯ ಹೊಡೆತದ ನಡುವೆ ವಿಮಾನವು ಅಸಹಜವಾಗಿ ರನ್ ವೇ ಸಂಪರ್ಕಕ್ಕೆ ಬಂದಿದ್ದು, ವಿಮಾನದ ಹಿಂಭಾಗದ ಭಾಗ ರನ್ ವೇಗೆ ತಾಗಿದೆ ಎನ್ನಲಾಗಿದೆ.
ಮೊದಲ ಲ್ಯಾಂಡಿಂಗ್ ಪ್ರಯತ್ನ ಸ್ಥಗಿತ
ವರದಿಗಳ ಪ್ರಕಾರ, ವಿಮಾನವು ಮೊದಲ ಬಾರಿಗೆ ಲ್ಯಾಂಡಿಂಗ್ ಗೆ ಮುಂದಾದಾಗ ಇಳಿಯುವ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ ಗೋ-ಅರೌಂಡ್ ಮಾಡಿತು. ಈ ವೇಳೆ ವಿಮಾನದ ಹಿಂಭಾಗ ರನ್ ವೇ ಗೆ ತಾಗಿದ್ದು, ಬಳಿಕ ವಿಮಾನ ಎರಡನೇ ಪ್ರಯತ್ನದಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಆಯಿತು.
235 ಪ್ರಯಾಣಿಕರು ಸುರಕ್ಷಿತ
ವಿಮಾನದಲ್ಲಿದ್ದ 235 ಪ್ರಯಾಣಿಕರು ಹಾಗೂ ಸಿಬ್ಬಂದಿ ಸುರಕ್ಷಿತವಾಗಿ ವಿಮಾನದಿಂದ ಕೆಳಗಿಳಿದಿದ್ದಾರೆ. ಘಟನೆ ಬಳಿಕ ವಿಮಾನವನ್ನು ತಾಂತ್ರಿಕ ಪರಿಶೀಲನೆಗಾಗಿ ಒಳಪಡಿಸಲಾಗಿದ್ದು, ಅಗತ್ಯ ಅನುಮತಿ ದೊರೆಯುವವರೆಗೆ ಅದರ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ.
ಡಿಜಿಸಿಎ ತನಿಖೆ
ಘಟನೆ ಕುರಿತು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ(DGCA) ತನಿಖೆ ಆರಂಭಿಸಿದೆ. ಬಲವಾದ ಗಾಳಿ, ಲ್ಯಾಂಡಿಂಗ್ ಪ್ರಕ್ರಿಯೆ ಹಾಗೂ ವಿಮಾನದ ಕಾರ್ಯಾಚರಣೆಗೆ ಸಂಬಂಧಿಸಿದ ಅಂಶಗಳನ್ನು ಪರಿಶೀಲಿಸಲಾಗುತ್ತಿದೆ. ಘಟನೆ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ನಿಯಮಾನುಸಾರ ಮಾಹಿತಿ ನೀಡಲಾಗಿದೆ ಎಂದು ಇಂಡಿಗೋ ತಿಳಿಸಿದೆ.
ದೀಕ್ಷಾಭೂಮಿ ಯಾತ್ರೆಗೆ ಆನ್ಲೈನ್ ಮೂಲಕ ಅರ್ಜಿ ಆಹ್ವಾನ
ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ 2026-27ನೇ ಸಾಲಿನಲ್ಲಿ ಮಹಾರಾಷ್ಟ್ರದ ನಾಗಪುರದ ಡಾ. ಬಿ.ಆರ್. ಅಂಬೇಡ್ಕರ್ ರವರ ದೀಕ್ಷಾಭೂಮಿಯಲ್ಲಿ ನಡೆಯುವ ಪ್ರವರ್ತನಾ ದಿನ (ವಿಜಯದಶಮಿ ದಿನ) ಈ ಕಾರ್ಯಕ್ರಮಕ್ಕೆ ಅವರ ಅನುಯಾಯಿ ಯಾತ್ರಾರ್ಥಿಗಳಿಗೆ ಭೇಟಿ ನೀಡಲು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ಸಮುದಾಯದ ಡಾ. ಬಿ.ಆರ್. ಅಂಬೇಡ್ಕರ್ ಅನುಯಾಯಿಗಳಿಗೆ ಅವಕಾಶವನ್ನು ಕಲ್ಪಿಸಲಾಗಿದೆ
ಆಸಕ್ತಿಯುಳ್ಳ ಅನುಯಾಯಿ ಯಾತ್ರಾರ್ಥಿಗಳಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಲು ಕೆ.ಎಸ್.ಆರ್.ಟಿ.ಸಿ ಮತ್ತು ಇತರೆ ಸಾರಿಗೆ ಬಸ್ಸು ಮತ್ತು ರೈಲಿನ ಮೂಲಕ ಪ್ರಯಾಣಿಸಲು ಆನ್ ಲೈನ್ ಮೂಲಕ ವೆಬ್ ಸೈಟ್: https://swd.karnataka.gov.in/ ರಲ್ಲಿ ಅಕ್ಟೋಬರ್ 09 2026ರ ರವರೆಗೆ ಅರ್ಜಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು (ಗ್ರೇಡ್-1), ಸಮಾಜ ಕಲ್ಯಾಣ ಇಲಾಖೆ , 33ನೇ ಕ್ರಾಸ್ ,ಜಯನಗರ 7 ನೇ ಬ್ಲಾಕ್ ,ಸಿಟಿ ಕಾಲೇಜು ಹತ್ತಿರ ,ಜಯನಗರ, ದೂರವಾಣಿ ಸಂಖ್ಯೆ್ 080-26711096 ಅಥವಾ ಇಮೇಲ್ – tswobloresouth@gmail. com ಅನ್ನು ಸಂಪರ್ಕಿಸಬಹುದು ಎಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರು(ಗ್ರೇಡ್-1) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸರ್ಕಾರೇತರ ವಸತಿಯುತ ನಿಲಯಗಳ, ವಸತಿಯುತ ಶಾಲೆ ಹಾಗೂ ಕಾಲೇಜುಗಳ ನೋಂದಣಿ ಕಡ್ಡಾಯ
ಧಾರವಾಡ: ಜಿಲ್ಲೆಯಲ್ಲಿನ 06 ವರ್ಷದಿಂದ 18 ವರ್ಷದೊಳಗಿನ ಮಕ್ಕಳಿಗಾಗಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರೇತರ ಸಂಸ್ಥೆಗಳು, ನಾಗರೀಕ ಸಮಾಜ ಸಂಸ್ಥೆಗಳು, ಟ್ರಸ್ಟ್, ಧಾರ್ಮಿಕ, ಖಾಸಗಿ ವೈಯಕ್ತಿಕವಾಗಿ ನಡೆಸಲ್ಪಡುವ ಯಾವುದೇ ಔಪಚಾರಿಕ, ಅನೌಪಚಾರಿಕ ಶೈಕ್ಷಣಿಕ ವಸತಿ ನಿಲಯಗಳನ್ನು, ವಸತಿ ಶಾಲೆ, ಕಾಲೇಜುಗಳು ವಸತಿ ನಿಲಯಗಳ ಮಾರ್ಗಸೂಚಿಯನ್ವಯ ನೋಂದಾಯಿಸುವುದು ಕಡ್ಡಾಯವಾಗಿದ್ದು, ಅರ್ಜಿ ನಮೂನೆ 01 ನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರ ಕಚೇರಿಯಲ್ಲಿ ಪಡೆದು, ಭರ್ತಿ ಮಾಡಿದ ಅರ್ಜಿಗಳನ್ನು ಅಕ್ಟೋಬರ್ 9, 2026 ರೊಳಗಾಗಿ ಕಚೇರಿ ಸಮಯದಲ್ಲಿ ಸಲ್ಲಿಸಬೇಕು. ನಂತರ ಬಂದ ಪ್ರಸ್ತಾವನೆಗಳನ್ನು ಪರಿಗಣಿಸಲಾಗುವುದಿಲ್ಲ.ಸದರಿ ಸ್ವೀಕರಿಸಿದ ಅರ್ಜಿಗಳನ್ನು ತನಿಖಾ ಸಮಿತಿಯ ವರದಿ ಆದರಿಸಿ ಜಿಲ್ಲಾಧಿಕಾರಿಗಳಿಗೆ ಶಿಪಾರಸ್ಸು ಸಲ್ಲಿಸಲಾಗುವುದು.

