ಮಂಗಳೂರು: ಪದಗ್ರಹಣ ಸಮಾರಂಭದಲ್ಲಿ ಕನ್ವೆನ್ ಶನ್ ಹಾಲ್ ನ ಬಾಲ್ಕನಿ ಕುಸಿದು ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಓರ್ವ ವಿದ್ಯಾರ್ಥಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರುವ ದಾರುಣ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಮೊಹಮ್ಮದ್ ಶಮಾಜ್ (16) ಮೃತ ವಿದ್ಯಾರ್ಥಿ. ಮಂಗಳೂರಿನ ಅಲೋಶಿಯಸ್ ಕಾಲೇಜು ವಿದ್ಯಾರ್ಥಿ. ನಿನ್ನೆ ರಾಮ ಲಕ್ಷ್ಮಣ ಕನ್ವೆನ್ಶನ್ ಹಾಲ್ ನಲ್ಲಿ ಸರ್ವ ಕಾಲೇಜು ಚುನಾವಣೆ ಹಾಗೂ ಪದಗ್ರಹಣ ಸಮಾರಂಭ ನಡೆದಿತ್ತು. ವಿದ್ಯಾರ್ಥಿಗಳ ಸಂಭ್ರಮಾಚರಣೆ ವೇಳೆ ಏಕಾಏಕಿ ಬಾಲ್ಕನಿ ಕುಸಿದು ಬಿದ್ದ ಪರಿಣಾಮ ವಿದ್ಯಾರ್ಥಿಗಳು ರಸ್ತೆಗೆ ಬಿದ್ದಿದ್ದರು.
ಘಟನೆಯಲ್ಲಿ ಐವರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದರು. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಮೊಹಮ್ಮದ್ ಶಮಾಜ್ ಚಿಕಿತ್ಸೆ ಫಲಿಸದೇ ಇಂದು ಕೊನೆಯುಸಿರೆಳೆದಿದ್ದಾನೆ.
ಉಳಿದ ಗಾಯಾಳು ವಿದ್ಯಾರ್ಥಿಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಪಾಂಡವೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಧಾನಿ ಮೋದಿ, ಅನಂತ್ ಅಂಬಾನಿ, ಸುಧಾ ಮೂರ್ತಿಯ ಡೀಪ್ ಫೇಕ್ ವಿಡಿಯೋ ನಿಜವೆಂದು ನಂಬಿ ಹೂಡಿಕೆ: 7.66 ಲಕ್ಷ ಹಣ ಕಳೆದುಕೊಂಡ ವ್ಯಕ್ತಿ
ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಆನ್ ಲೈನ್ ವಂಚನೆ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅದರಲ್ಲಿಯೂ ಸೈಬರ್ ವಂಚಕರು ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದು, ವಂಚಿಸುವುದರಲ್ಲಿಯೂ ಹೊಸ ಹೊಸ ವಿಧಾನಗಳನ್ನು ಅಳವಡಿಸಿಕೊಂಡು ತಮ್ಮ ಕೈಚಳಕ ತೋರುತ್ತಿದ್ದಾರೆ. ಡೀಪ್ ಫೇಕ್ ಮೂಲಕ ವಂಚಿಸುವ ಸೈಬರ್ ವಂಚಕರ ಜಾಲ ಆಕ್ಟೀವ್ ಆಗಿದೆ.
ಡೀಪ್ಫೇಕ್ ವಿಡಿಯೋಗಳ ಮೂಲಕ ಜನರನ್ನು ನಂಬಿಸಿ ಹಣ ದೋಚುವ ಕೆಲಸಕ್ಕೆ ಕೈ ಹಾಕಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಸುಧಾ ಮೂರ್ತಿ ಹಾಗೂ ಅನಂತ್ ಅಂಬಾನಿ ಅವರ ಡೀಪ್ ಫೇಕ್ ವಿಡಿಯೋಗಳನ್ನು ನಿಜವೆಂದು ನಂಬಿದ ಬೆಂಗಳೂರಿನ ನಿವಾಸಿಯೊಬ್ಬರು ಹೂಡಿಕೆ ವಂಚನೆಗೆ ಬಲಿಯಾಗಿ ಬರೋಬ್ಬರಿ 7.66 ಲಕ್ಷ ರೂಪಾಯಿ ಕಳೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ಮಹಾಲಕ್ಷ್ಮಿ ಲೇಔಟ್ನ 39 ವರ್ಷದ ವ್ಯಕ್ತಿಗೆ ಜುಲೈ 10ರಂದು ಫೇಸ್ಬುಕ್ನಲ್ಲಿ ಇಂತದ್ದೊಂದು ವಿಡಿಯೋಗಳು ಕಾಣಿಸಿಕೊಂಡಿದ್ದವು. ಮೋದಿ ಸೇರಿದಂತೆ ಇತರರು ಆನ್ಲೈನ್ ಹೂಡಿಕೆಯನ್ನು ಪ್ರಚಾರ ಮಾಡುತ್ತಿರುವಂತೆ ವಿಡಿಯೋಗಳಲ್ಲಿ ತೋರಿಸಲಾಗಿತ್ತು. ವಿಡಿಯೋದಲ್ಲಿದ್ದ ಲಿಂಕ್ ಕ್ಲಿಕ್ ಮಾಡಿದ ವ್ಯಕ್ತಿ ಹೂಡಿಕೆ ಆರಂಭಿಸಲು 22,000 ರೂಪಾಯಿ ವರ್ಗಾಯಿಸಿದ್ದರು. ಬಳಿಕ ಯುನೈಟೆಡ್ ಕಿಂಗ್ಡಂನ +44 ಕಂಟ್ರಿ ಕೋಡ್ ಹೊಂದಿದ್ದ ಐದು ಅಪರಿಚಿತ ಮೊಬೈಲ್ ಸಂಖ್ಯೆಗಳ ಮೂಲಕ ಅವರಿಗೆ ಕರೆಗಳು ಬಂದಿದ್ದವು.
ಕರೆ ಮಾಡಿದವರು ತಮ್ಮನ್ನು ‘ಒನ್ ಟು ಮಾರ್ಕೆಟ್ಸ್’ ಕಂಪನಿಯ ಪ್ರತಿನಿಧಿಗಳೆಂದು ಪರಿಚಯಿಸಿಕೊಂಡು, ಫಾರೆಕ್ಸ್ ಟ್ರೇಡಿಂಗ್ನಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಗಳಿಸಬಹುದು ಎಂದು ಹೇಳಿದ್ದರು. ಬಳಿಕ ವಂಚಕರು ವ್ಯಕ್ತಿಯ ಹೆಸರಿನಲ್ಲಿ ನಕಲಿ ಫಾರೆಕ್ಸ್ ಖಾತೆಯೊಂದನ್ನು ತೆರೆದಿದ್ದರು.
ಜುಲೈ 10ರಿಂದ ಜುಲೈ 22ರವರೆಗೆ ವಿವಿಧ ವಹಿವಾಟುಗಳ ಮೂಲಕ ಆರೋಪಿಗಳು ನೀಡಿದ ಬ್ಯಾಂಕ್ ಖಾತೆಗಳಿಗೆ ವ್ಯಕ್ತಿ 7.6 ಲಕ್ಷ ರೂಪಾಯಿ ವರ್ಗಾಯಿಸಿದ್ದರು. ತಮ್ಮ ಹೂಡಿಕೆಯಿಂದ ಲಾಭ ಬರುತ್ತಿದೆ ಎಂಬ ನಂಬಿಕೆಯಲ್ಲಿದ್ದ ವ್ಯಕ್ತಿ, ಹಣವನ್ನು ಹಿಂಪಡೆಯಲು ಮುಂದಾದಾಗ ವಂಚಕರು ಮತ್ತಷ್ಟು ಹಣ ಹೂಡಿಕೆ ಮಾಡುವಂತೆ ಒತ್ತಾಯಿಸಿದ್ದರು. ಕೆಲ ಸಮಯ ಹಣ ವಾಪಸ್ ಹಾಕಬಹುದೆಂದು ಕಾದಿದ್ದ ವ್ಯಕ್ತಿಗೆ ಅನುಮಾನ ವ್ಯಕ್ತವಾಗಿದೆ. ವ್ಯಕ್ತಿ ಪೊಲೀಸರನ್ನು ಸಂಪರ್ಕಿಸಿದ್ದು, ಸೆಪ್ಟೆಂಬರ್ 19ರಂದು ಈ ಸಂಬಂಧ ಎಫ್ಐಆರ್ ದಾಖಲಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

