ಬೆಂಗಳೂರು: ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ “ಮುಖ್ಯಮಂತ್ರಿ” ನಾಟಕದ 900ನೇ ಪ್ರದರ್ಶನವನ್ನು ಸಿಎಂ ಡಿ.ಕೆ. ಶಿವಕುಮಾರ್, ಮಾಜಿ ಸಿಎಂ ಸಿದ್ಧರಾಮಯ್ಯ ವೀಕ್ಷಿಸಿದ್ದಾರೆ.
ಡಾ. ಮುಖ್ಯಮಂತ್ರಿ ಚಂದ್ರು ಅವರ ‘ಮುಖ್ಯಮಂತ್ರಿ’ ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಸಿಎಂ ಡಿ.ಕೆ. ಶಿವಕುಮಾರ್, ಕನ್ನಡ ರಂಗಭೂಮಿಯ ಶ್ರೇಷ್ಠ ಕೃತಿಗಳಲ್ಲೊಂದಾದ ‘ಮುಖ್ಯಮಂತ್ರಿ’ ನಾಟಕವು ಸಾಮಾಜಿಕ ಮತ್ತು ರಾಜಕೀಯ ಬದುಕಿನ ಹಲವು ಆಯಾಮಗಳನ್ನು ಕಲಾತ್ಮಕವಾಗಿ ತೆರೆದಿಟ್ಟಿದೆ. ರಂಗಭೂಮಿಯ ಈ ಪರಂಪರೆ ಮುಂದಿನ ಪೀಳಿಗೆಗೂ ತಲುಪಲಿ ಎಂದು ಆಶಿಸುತ್ತೇನೆ ಎಂದರು.
ಮಾಜಿ ಸಿಎಂ ಸಿದ್ಧರಾಮಯ್ಯ ಮಾತನಾಡಿ, ಮುಖ್ಯಮಂತ್ರಿ ಚಂದ್ರು ನನ್ನ ಆತ್ಮೀಯ ಸ್ನೇಹಿತರಾಗಿದ್ದು, ಹಲವು ವರ್ಷಗಳಿಂದ ಅವರೊಂದಿಗೆ ನನ್ನ ಒಡನಾಟವಿದೆ. ಚಂದ್ರು ಅವರ ಈ ವಿಶೇಷ ಸಾಧನೆಯ ಸಂದರ್ಭದಲ್ಲಿ ಅವರ ಧರ್ಮಪತ್ನಿ, ಕುಟುಂಬದ ಸದಸ್ಯರು ಹಾಗೂ ಒಡನಾಡಿಗಳು ಸೇರಿ ಕಾರ್ಯಕ್ರಮ ಆಯೋಜಿಸಿರುವುದು ಸಂತಸ ತಂದಿದೆ ಎಂದರು.
ಕಾಲ ಬಹಳ ವೇಗವಾಗಿ ಉರುಳುತ್ತದೆ. ಮುಖ್ಯಮಂತ್ರಿ ಚಂದ್ರು ಅವರು ಹಲವು ವರ್ಷಗಳಿಂದ ನಿರಂತರವಾಗಿ ಸಮಾಜಕ್ಕೆ ಹಾಗೂ ರಂಗಭೂಮಿಗೆ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಅವರಿಗೆ ಈಗ 73 ವರ್ಷ ತುಂಬಿದ್ದರೂ ಉತ್ಸಾಹ ಮಾತ್ರ ಕಿಂಚಿತ್ತೂ ಕಡಿಮೆಯಾಗಿಲ್ಲ ಎಂದರು.
ಮುಖ್ಯಮಂತ್ರಿ ಚಂದ್ರು ಅವರು 93 ನಾಟಕಗಳಲ್ಲಿ ಅಭಿನಯಿಸಿದ್ದು, ಒಂದೊಂದು ನಾಟಕವನ್ನು ಸಿದ್ಧಪಡಿಸುವುದು, ನಟಿಸುವುದು ಅಷ್ಟು ಸುಲಭದ ವಿಷಯವಲ್ಲ. ನಾಟಕದಲ್ಲಿ 93ನೇ ಪ್ರಯೋಗವನ್ನು ಪೂರೈಸಿರುವುದು ವಿಶೇಷ ಸಾಧನೆ. ಸಿನಿಮಾದಲ್ಲೂ ಅವರು 530ಕ್ಕೂ ಹೆಚ್ಚು ಪಾತ್ರಗಳನ್ನು ನಿರ್ವಹಿಸಿದ್ದಾರೆ. ನಾನು ಎಂಟು ವರ್ಷ ಮುಖ್ಯಮಂತ್ರಿ ಆಗಿದ್ದೆ. ಈಗ ಮಾಜಿ ಮುಖ್ಯಮಂತ್ರಿ ಆಗಿದ್ದೇನೆ. ಆದರೆ ಚಂದ್ರು ಅವರು ಮಾತ್ರ ಮಾಜಿ ಮುಖ್ಯಮಂತ್ರಿ ಆಗೋದೇ ಇಲ್ಲ. ಅವರು ಶಾಶ್ವತ ಮುಖ್ಯಮಂತ್ರಿ ಎಂದರು.
ಮುಖ್ಯಮಂತ್ರಿ ಚಂದ್ರು ಅವರ ಅದ್ಭುತ ಅಭಿನಯದಿಂದ ‘ಮುಖ್ಯಮಂತ್ರಿ’ ನಾಟಕವನ್ನು ವೀಕ್ಷಿಸುವ ಪ್ರೇಕ್ಷಕರು ಮಂತ್ರಮುಗ್ಧರಾಗುತ್ತಾರೆ. ಸಮಾಜದಲ್ಲಿ ಕಾಲಕ್ಕೆ ತಕ್ಕಂತೆ ಹಲವು ಬದಲಾವಣೆಗಳು ನಡೆದಿದ್ದರೂ, ತಪ್ಪುಗಳು ಇನ್ನೂ ಮುಂದುವರಿದಿವೆ. ಅಂತಹ ತಪ್ಪುಗಳನ್ನು ಸಮಾಜದ ಮುಂದೆ ಎತ್ತಿ ತೋರಿಸುವ ಕೆಲಸವನ್ನು ರಂಗಭೂಮಿ ನಿರಂತರವಾಗಿ ಮಾಡಿಕೊಂಡು ಬಂದಿದೆ ಎಂದರು.
ಸಿನಿಮಾದಲ್ಲಿ ನಿರ್ದೇಶಕರು ಇರುವುದರಿಂದ ತಪ್ಪಾದರೆ ‘ಕಟ್’ ಹೇಳಿ ಮತ್ತೊಂದು ದೃಶ್ಯವನ್ನು ಚಿತ್ರೀಕರಿಸಲು ಅವಕಾಶವಿರುತ್ತದೆ. ಆದರೆ ರಂಗಭೂಮಿಯಲ್ಲಿ ಅಂತಹ ಅವಕಾಶವಿಲ್ಲ. ಪ್ರೇಕ್ಷಕರ ಎದುರು ನೇರವಾಗಿ ಅಭಿನಯಿಸಬೇಕಾಗುತ್ತದೆ. ಇದು ರಂಗಭೂಮಿಯ ಕಲಾವಿದರಿಗೆ ಇರುವ ದೊಡ್ಡ ಸವಾಲು ಎಂದರು.
ನಾನು 1983ರಲ್ಲಿ ಶಾಸಕನಾದೆ. ಚಂದ್ರು ಅವರು 1985ರಲ್ಲಿ ಶಾಸಕರಾದರು. ರಾಮಕೃಷ್ಣ ಹೆಗಡೆಯವರು ಚಂದ್ರು ಅವರನ್ನು ರಾಜಕೀಯಕ್ಕೆ ಕರೆತಂದು ಶಾಸಕರನ್ನಾಗಿ ಮಾಡಿದರು. ಅವರು ಶಾಸಕರಾಗಿ, ಎಂಎಲ್ಸಿಯಾಗಿ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಕನ್ನಡ ನಾಡು ನುಡಿಗಾಗಿ ಅಪಾರವಾದ ಸೇವೆ ಸಲ್ಲಿಸಿ, ರಾಜ್ಯದಾದ್ಯಂತ ಸಂಚರಿಸಿ ಕನ್ನಡದ ಕಹಳೆ ಮೊಳಗಿಸಿದ್ದಾರೆ. ಮುಖ್ಯಮಂತ್ರಿ ಚಂದ್ರು ಅವರು ಇನ್ನಷ್ಟು ವರ್ಷಗಳ ಕಾಲ ಆರೋಗ್ಯದಿಂದ ಬದುಕಿ, ಇನ್ನಷ್ಟು ನಾಟಕಗಳಲ್ಲಿ ಅಭಿನಯಿಸಬೇಕು. ಅವರಿಗೆ ಭಗವಂತ ಆಯುಷ್ಯ ಮತ್ತು ಆರೋಗ್ಯ ನೀಡಲಿ ಎಂದು ಶುಭ ಹಾರೈಸುತ್ತೇನೆ ಎಂದರು.
ನಾಟಕವೊಂದರ 900ನೇ ಪ್ರದರ್ಶನ ಎಂದರೆ ಕೇವಲ ಒಂದು ನಾಟಕದ ಯಶಸ್ಸಿನ ಸಂಭ್ರಮವಲ್ಲ. ಇದು ಕನ್ನಡ ರಂಗಭೂಮಿ, ಇಲ್ಲಿನ ಕಲಾವಿದರ ಪರಿಶ್ರಮದ ಯಶಸ್ಸು, ಪ್ರೇಕ್ಷಕರ ಅಭಿರುಚಿಯ ಯಶಸ್ಸು ಮತ್ತು ಮುಖ್ಯವಾಗಿ ವಿಡಂಬನೆಯ ಮೂಲಕ ಸಮಾಜವನ್ನು ಪ್ರಶ್ನಿಸಬಹುದು, ಆಡಳಿತ ವ್ಯವಸ್ಥೆಯನ್ನು ಪ್ರಶ್ನಿಸಬಹುದು ಎಂಬುದಕ್ಕೆ ಒಂದು ದೊಡ್ಡ ಉದಾಹರಣೆ. ಈ ನಾಟಕ ಮುಂದೆಯೂ ಜನರನ್ನು ನಗಿಸಲಿ. ನಗಿಸುತ್ತಾ ಯೋಚಿಸುವಂತೆ ಮಾಡಲಿ. ಎಲ್ಲರನ್ನು ಆತ್ಮವಿಮರ್ಷೆಗೆ ಒಡ್ಡಿ, ಉತ್ತಮಗೊಳಿಸುವ ಕೆಲಸ ಮಾಡಲಿ ಎಂದು ಆಶಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಕೇಂದ್ರ ಸಚಿವ ವಿ. ಸೋಮಣ್ಣ, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ. ರೇವಣ್ಣ, ನಟ ರವಿಚಂದ್ರನ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

