HomeKarnatakaಪೊಲೀಸರ ಸಕಾಲಿಕ ಕ್ರಮ: ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿ ರಕ್ಷಣೆ

ಪೊಲೀಸರ ಸಕಾಲಿಕ ಕ್ರಮ: ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿ ರಕ್ಷಣೆ

ಶಿವಮೊಗ್ಗ: ಪೊಲೀಸರ ಸಕಾಲಿಕ ಕ್ರಮದಿಂದ ಶಿವಮೊಗ್ಗದಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಇಂಜಿನಿಯರಿಂಗ್ ವಿದ್ಯಾರ್ಥಿ ರಕ್ಷಣೆ ಮಾಡಲಾಗಿದೆ.

20 ವರ್ಷದ ಕೆಂಚಪ್ಪ ಲೇಔಟ್ ನ ನಿವಾಸಿ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ನಾನು ಆತ್ಮಹತ್ಯೆ ಮಾಡಿಕೊಳ್ಳಲು ಹೋಗುತ್ತೇನೆ ನನ್ನನ್ನು ಕ್ಷಮಿಸಿ ಅಂತ ಎಂದು  ತನ್ನ ಮನೆಯವರಿಗೆ ಫೋನ್ ಮಾಡಿದ್ದಾನೆ.  ತಕ್ಷಣವೇ ಆ ಹುಡುಗನ ಕಡೆಯವರು ವಿನೋಬನಗರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಸಂತೋಷ್ ಅವರಿಗೆ ಫೋನ್ ಮೂಲಕ ವಿಷಯ ತಿಳಿಸಿದ್ದಾರೆ.

ವಿನೋಬನಗರ ಪೊಲೀಸ್ ಠಾಣಾ ಸಿಬ್ಬಂದಿಗಳಾದ ಯೋಗೇಶ್ ಹೆಚ್ಸಿ, ಮತ್ತು ಜಿಲ್ಲಾ ಪೊಲೀಸ್ ಕಛೇರಿಯ ಗುರುರಾಜ್ ಆವರ ಸಹಕಾರದೊಂದಿಗೆ ಸದರಿ ಹುಡುಗನು ಸೋಮಿನಕೊಪ್ಪದ ಕೆರೆ ಹತ್ತಿರ ಇರುವುದು ತಿಳಿದು ಬಂದಿದೆ.  ಸೋಮಿನಕೊಪ್ಪದ ಗ್ರಾಮಸ್ಥರ ಸಹಕಾರದೊಂದಿಗೆ ಪೊಲೀಸ್ ಅಧಿಕಾರಿಗಳು ವಿಧ್ಯಾರ್ಥಿಯನ್ನು ಕಾಪಾಡಿ, ಅವರ  ತಂದೆಯವರ ಜೊತೆಗೆ ಕಳಿಸಿ ಕೊಟ್ಟಿರುತ್ತಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಉತ್ತಮ ಕರ್ತವ್ಯ ನಿರ್ವಹಿಸಿದ ಪೊಲೀಸ್ ಅಧಿಕಾರಿ ಸಿಬ್ಬಂಧಿಗಳಿಗೆ ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಎಸ್ಪಿ ನಿಖಿಲ್ ಬಿ ಅವರು ಪ್ರಶಂಸಿಸಿ ಅಬಿನಂದಿಸಿದ್ದಾರೆ.

ಸಾರ್ವಜನಿಕರ ಮನೆಬಾಗಿಲಿಗೆ ಆಡಳಿತ: ಪ್ರಜಾಸೇವಾ ಆಂದೋಲನದಲ್ಲಿ ಸ್ಥಳದಲ್ಲೇ ಅಹವಾಲು ಸ್ವೀಕಾರ

ಶಿವಮೊಗ್ಗ: ಸಾರ್ವಜನಿಕರಿಗೆ ಸರ್ಕಾರದ ಯೋಜನೆಗಳು ಹಾಗೂ ಸೇವೆಗಳನ್ನು ಕಾಲಮಿತಿಯಲ್ಲಿ ತಲುಪಿಸುವುದು ಆಡಳಿತದ ಪ್ರಾಥಮಿಕ ಕರ್ತವ್ಯ. ಜನಸಾಮಾನ್ಯರು ಸಣ್ಣಪುಟ್ಟ ಕೆಲಸಗಳು ಹಾಗೂ ದಾಖಲೆಗಳಿಗಾಗಿ ಸರ್ಕಾರಿ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಿ, ‘ಆಡಳಿತವೇ ಜನರ ಮನೆ ಬಾಗಿಲಿಗೆ’ ತಲುಪಬೇಕು ಎಂಬ ಉದ್ದೇಶದಿಂದ ಈ “ಪ್ರಜಾಸೇವಾ ಆಂದೋಲನ” ಸಭೆ ಏರ್ಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಶಿವಮೊಗ್ಗ ಮಹಾನಗರಪಾಲಿಕೆಯ ಜಂಟಿ ಸಹಯೋಗದಲ್ಲಿ ಮಹಾನಗರಪಾಲಿಕೆ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಶಿವಮೊಗ್ಗ ತಾಲೂಕಿನ ಕಸಬಾ ಹೋಬಳಿ ಮಟ್ಟದ “ಪ್ರಜಾಸೇವಾ ಆಂದೋಲನ ಸಭೆ”ಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಾರ್ವಜನಿಕರಿಂದ ಸ್ವೀಕರಿಸಲಾಗುವ ಅರ್ಜಿಗಳನ್ನು ನಿರ್ಲಕ್ಷಿಸದೆ, ನಿಯಮಾವಳಿಗಳಂತೆ ಸಾಧ್ಯವಾದಷ್ಟು ಅರ್ಜಿಗಳನ್ನು ಸ್ಥಳದಲ್ಲೇ ಇತ್ಯರ್ಥಪಡಿಸಬೇಕು. ತಕ್ಷಣಕ್ಕೆ ಪರಿಹರಿಸಲಾಗದ ಹಾಗೂ ಹೆಚ್ಚಿನ ಪರಿಶೀಲನೆ ಅಗತ್ಯವಿರುವ ಅರ್ಜಿಗಳಿಗೆ ಕಾಲಮಿತಿ ನಿಗದಿಪಡಿಸಿ, ನಿಗದಿತ ಸಮಯದೊಳಗೆ ಅರ್ಜಿದಾರರಿಗೆ ಸೂಕ್ತ ಉತ್ತರ ಅಥವಾ ಪರಿಹಾರ ಒದಗಿಸಬೇಕು ಎಂದು ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಅಲ್ಲದೆ, ವಿವಿಧ ಇಲಾಖೆಗಳು ಪರಸ್ಪರ ಸಮನ್ವಯತೆ ಸಾಧಿಸಿ ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸಬೇಕೆಂದು ಸೂಚಿಸಿದರು.

ಸಭೆಯಲ್ಲಿ ಮಾತನಾಡಿದ ಪಾಲಿಕೆ ಆಯುಕ್ತ ಮಾಯಣ್ಣಗೌಡ, “ವಿಳಂಬವಾಗದಂತೆ ತ್ವರಿತವಾಗಿ ಹಾಗೂ ಸಕಾಲದಲ್ಲಿ ಸೇವೆ ನೀಡಿ ಜನರ ಜೀವನಮಟ್ಟ ಸುಧಾರಣೆ ಮಾಡುವುದು ಈ ಆಂದೋಲನದ ಮುಖ್ಯ ಉದ್ದೇಶ. ಹೋಬಳಿ, ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಈ ಸಭೆಗಳು ನಡೆಯುತ್ತಿದ್ದು, ಇಂದು ಕಸಬಾ ಹೋಬಳಿ ಮಟ್ಟದ ಸಭೆಯಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಸ್ಥಳದಲ್ಲೇ ಪರಿಹರಿಸಲು ಪ್ರಯತ್ನಿಸಲಾಗುತ್ತಿದೆ” ಎಂದರು.

ಸಾರ್ವಜನಿಕರು ಮಂಡಿಸಿದ ಪ್ರಮುಖ ಸಮಸ್ಯೆಗಳು ಹಾಗೂ ನೀಡಿದ ಸೂಚನೆಗಳು:

ಖಾಲಿ ಜಾಗ, ಪಾರ್ಕ್ ಒತ್ತುವರಿ ಮತ್ತು ಮೂಲಭೂತ ಸೌಕರ್ಯ: ಮಂಜುನಾಥ ಬಡಾವಣೆಯ (ವಾರ್ಡ್ 27) ಸುವರ್ಣಾ ನಾಗರಾಜ್ ಅವರು, ಬಡಾವಣೆಯ ಖಾಲಿ ಸರ್ಕಾರಿ ಜಾಗದಲ್ಲಿ ಮರಳು ಇತ್ಯಾದಿ ವಸ್ತುಗಳನ್ನು ಹಾಕುತ್ತಿರುವುದನ್ನು ತಡೆಯಲು ‘ಸರ್ಕಾರಿ ಜಾಗ’ವೆಂದು ಫಲಕ ಅಳವಡಿಸಲು, ವಾರ್ಡ್ ನ  ಪಾರ್ಕ್ ಒತ್ತುವರಿ ಮಾಡಲಾಗಿದ್ದು ಇದನ್ನು ತೆರವುಗೊಳಿಸಬೇಕು. ಜಲಮಂಡಳಿ ಕೆಲಸಗಳಿಂದ ರಸ್ತೆ ಗುಂಡಿ ಬಿದ್ದಿರುವುದು, ಬೀದಿ ದೀಪ ವ್ಯವಸ್ಥೆ ಇಲ್ಲದಿರುವುದು, ಯುಜಿಡಿ ನೀರು ಚರಂಡಿಗೆ ಹರಿಯುವುದು ಹಾಗೂ ಮೆಸ್ಕಾಂ ಸಂಪರ್ಕದಲ್ಲಿ ಮಧ್ಯವರ್ತಿಗಳ ಹಾವಳಿ ಕುರಿತು ಗಮನಸೆಳೆದರು. ಈ ವೇಳೆ ಜಿಲ್ಲಾಧಿಕಾರಿಗಳು, ಸಾರ್ವಜನಿಕ ಸ್ಪಂದನೆಗೆ ಅಧಿಕಾರಿಗಳು ಉದಾಸೀನ ತೋರಬಾರದೆಂದು ಜಲಮಂಡಳಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು. ಇಂತಹ ವರ್ತನೆ ಪುನರಾವರ್ತನೆಯಾದರೆ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದರು.

ಅಪಾಯಕಾರಿ ಮರಗಳ ಟ್ರಿಮ್ಮಿಂಗ್: ಗಾಡಿಕೊಪ್ಪದ ಮಧುಸೂದನ್ ಹಾಗೂ ಸಾರ್ವಜನಿಕರು ಶಾಲೆಗಳ ಬಳಿ ಮತ್ತು ನಗರ ಮಧ್ಯಭಾಗದಲ್ಲಿ ಅಪಾಯಕಾರಿ ಮರಗಳ ರೆಂಬೆಗಳನ್ನು ಕತ್ತರಿಸುವಂತೆ(ಟ್ರಿಮ್) ಹಲವು ಬಾರಿ ಮನವಿ ಮಾಡಿದರೂ ಶಂಕರ ಅರಣ್ಯ ವಲಯ ಅಧಿಕಾರಿಗಳು ಸ್ಪಂದಿಸಿಲ್ಲ ಎಂದು ದೂರಿದರು. ಇದಕ್ಕೆ ಡಿಸಿಯವರು, ಕೂಡಲೇ ಮರದ ಕೊಂಬೆಗಳನ್ನು ಟ್ರಿಮ್ ಮಾಡಲು ಸೂಚಿಸಿ, ಭವಿಷ್ಯದಲ್ಲಿ ಇದರಿಂದ ಏನಾದರೂ ಅಪಾಯ ಸಂಭವಿಸಿದರೆ ಸಂಬಂಧಪಟ್ಟವರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸುವುದಾಗಿ ಎಚ್ಚರಿಸಿದರು.

ಇಲಾಖೆಗಳ ನಡುವಿನ ಸಮನ್ವಯತೆ ಮತ್ತು ಇ-ಕೆವೈಸಿ ಸಮಸ್ಯೆ: ಬಸವನಗುಡಿಯ ರವಿಪ್ರಸಾದ್ ಮಾತನಾಡಿ, ಕೆಇಬಿ ಕಂಬ ತೆರವು, ಬೀದಿ ದೀಪಗಳ ಅಭಾವ, ಜಯನಗರ-ಬಸವನಗುಡಿ ಭಾಗದಲ್ಲಿ ಕೇಬಲ್ ಡ್ಯಾಮೇಜ್/ಬ್ಲಾಸ್ಟ್ ಸಮಸ್ಯೆ ಹಾಗೂ ವಿವಿಧ ಇಲಾಖೆಗಳ ನಡುವೆ ಸಮನ್ವಯತೆಯ ಕೊರತೆಯನ್ನು ಪ್ರಸ್ತಾಪಿಸಿದರು. ಜೊತೆಗೆ, ಹಿರಿಯ ನಾಗರಿಕರಿಗೆ ಪಡಿತರ ಚೀಟಿ ಇ-ಕೆವೈಸಿ ಮಾಡಿಸಲು ಆಗುತ್ತಿರುವ ತೊಂದರೆಗಳನ್ನು ವಿವರಿಸಿದರು. ಜಿಲ್ಲಾಧಿಕಾರಿಗಳು ಈ ಬಗ್ಗೆ ಇಲಾಖೆಗಳ ಸಮನ್ವಯತೆ ಹಾಗೂ ಇ-ಕೆವೈಸಿ ಸರಳೀಕರಣಕ್ಕೆ ಕ್ರಮ ವಹಿಸುವುದಾಗಿ ತಿಳಿಸಿದರು.

ಆರೋಗ್ಯ, ಶೌಚಾಲಯ ಮತ್ತು ಮೂಲಸೌಕರ್ಯದ ಕೊರತೆ: ಬಾಪೂಜಿನಗರ: ನೂರುಲ್ಲಾ ಅವರು ಚರಂಡಿ/ಮೋರಿ ಮೇಲೆ ಶೌಚಾಲಯ ನಿರ್ಮಿಸಲಾಗಿದೆ ಹಾಗೂ ತರಕಾರಿ ಮಾರಾಟ ಮಾಡುತ್ತಿರುವ ಬಗ್ಗೆ ದೂರಿದರು.

ಜೆಪಿಎನ್ ನಗರ ಹಾಗೂ ಟಿಪ್ಪು ನಗರ: ನಯಾಜ್ ಅವರು ಯುಜಿಡಿ ಸಮಸ್ಯೆ ಹಾಗೂ ಪದ್ಮಾ ಟಾಕೀಸ್ ರಸ್ತೆಯ ದುರಸ್ತಿ ಬಗ್ಗೆ , ಶಾಲಾ ಕೊಠಡಿ ನಿರ್ಮಾಣದ ಬಗ್ಗೆ ಅರ್ಜಿ ಸಲ್ಲಿಸಿದರು.

ಕಲ್ಲಹಳ್ಳಿ (ವಿನೋಬನಗರ 2ನೇ ಹಂತ): ನಾಗರಾಜ್ ಅವರು ತಮ್ಮ ನಿವೇಶನದ ಖಾತೆ ಹಾಗೂ ಇ-ಖಾತಾ ಆಗದಿರುವ ಬಗ್ಗೆ ಮನವಿ ಸಲ್ಲಿಸಿದರು.

ತ್ಯಾಜ್ಯ ಮತ್ತು ವೆಟರ್ನರಿ ಆಸ್ಪತ್ರೆ: ಗಾಡಿಕೊಪ್ಪ ವೃತ್ತದ ಬಳಿಯ ಖಾಲಿ ನಿವೇಶನದಲ್ಲಿ ತ್ಯಾಜ್ಯ ಎಸೆಯುತ್ತಿದ್ದು, ಇದರಿಂದ ತಮ್ಮ‌ ಮನೆಗೆ ತೊಂದರೆಯಾಗುತ್ತಿದೆ. ತ್ಯಾಜ್ಯ ತೆರವುಗೊಳಿಸುವಂತೆ ಸಾರ್ವಜನಿಕರೋರ್ವರು ಮನವಿ ಮಾಡಿದರು.

ಗೋವಿಂದ ರಾಜ್ ಎಂಬುವರು ಗಾಡಿಕೊಪ್ಪದಲ್ಲಿ ಪಶು ಆಸ್ಪತ್ರೆ ಆರಂಭಿಸಲು ಕೋರಿದರು. ಮೆಗ್ಗಾನ್ ಆಸ್ಪತ್ರೆಗೆ ಹೋಮಿಯೋಪತಿ ವೈದ್ಯರನ್ನು ನೇಮಿಸುವಂತೆ ಸಾರ್ವಜನಿಕರು ವಿನಂತಿಸಿದರು.

ನಗರದ ಪಶ್ಚಿಮ ಭಾಗದ 10-12 ಮೊಹಲ್ಲಾಗಳಲ್ಲಿರುವ ಸುಮಾರು 65 ಸಾವಿರ ಮುಸ್ಲಿಂ ಸಮುದಾಯದ ಜನರಿಗೆ ಶವಸಂಸ್ಕಾರ ಮಾಡಲು ಸ್ಮಶಾನ ಜಾಗದ ಅಭಾವವಿರುವ ಬಗ್ಗೆ ಮನವಿ ಸಲ್ಲಿಸಲಾಯಿತು.

ನಾಯಿಗಳ ಹಾವಳಿ: ಶಿವಮೊಗ್ಗ ನಗರದ 35 ವಾರ್ಡ್‌ಗಳಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಆಕ್ರಮಣಕಾರಿ ನಾಯಿಗಳನ್ನು ಡಾಗ್ ಕೇರ್ ಸೆಂಟರ್‌ಗೆ ವರ್ಗಾಯಿಸುವಂತೆ ಮಧು ಸೇರಿದಂತೆ ಹಲವು ಸಾರ್ವಜನಿಕರು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಪಾಲಿಕೆ ಆಯುಕ್ತರು, ಸುಪ್ರೀಂ ಕೋರ್ಟ್ ಆದೇಶ ಹಾಗೂ ಎಬಿಸಿ ನಿಯಮಾವಳಿಗಳಂತೆ ಸೂಕ್ತ ಕ್ರಮ ವಹಿಸಲಾಗುವುದು ಎಂದರು.

ವಿದ್ಯುತ್ ಸಂಪರ್ಕ: ತಿಲಕ್ ನಗರ 2ನೇ ತಿರುವಿನಲ್ಲಿ ಯುಜಿ ಸಂಪರ್ಕವಾಗಿ 5 ವರ್ಷಗಳಾಗಿದ್ದರೂ ಇಂದಿಗೂ ಲೈಟ್ ಕಂಬದಿಂದಲೇ ವಿದ್ಯುತ್ ಸಂಪರ್ಕ ನೀಡಲಾಗುತ್ತಿದೆ ಎಂದು ಸ್ಥಳೀಯರು ದೂರಿದರು.

ಕೌಟುಂಬಿಕ ಆಸ್ತಿ ದೌರ್ಜನ್ಯ ದೂರು: ಶಿಕಾರಿಪುರದ ಉಷಾರಾಣಿ ಎಂಬುವರು ಕೌಟುಂಬಿಕ ಆಸ್ತಿ ವಿಚಾರದಲ್ಲಿ ತಾಯಿ-ಮಗಳಿಗೆ ದೌರ್ಜನ್ಯವಾಗುತ್ತಿದೆ ಎಂದು ಸಲ್ಲಿಸಿದ ಅರ್ಜಿಯನ್ನು ಆಲಿಸಿದ ಜಿಲ್ಲಾಧಿಕಾರಿಗಳು, ಎಸಿ ಬಳಿ ಪ್ರಕರಣ ದಾಖಲಿಸುವಂತೆ ಸೂಚಿಸಿದರಲ್ಲದೆ, ಶಿಕಾರಿಪುರ ತಹಶೀಲ್ದಾರ್ ಜೊತೆ ದೂರವಾಣಿಯಲ್ಲಿ ಮಾತನಾಡಿ ತಕ್ಷಣ ಸ್ಪಂದಿಸುವಂತೆ ನಿರ್ದೇಶನ ನೀಡಿದರು.

ಈ ‘ಪ್ರಜಾಸೇವಾ ಆಂದೋಲನ’ ಸಭೆಯಲ್ಲಿ ಲೇಔಟ್‌ಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ, ರಸ್ತೆ, ಚರಂಡಿ, ಇ-ಸ್ವತ್ತು, ಕೆರೆ ಒತ್ತುವರಿ ತೆರವು ಹಾಗೂ ವಿಧವಾ ವೇತನ ಸೇರಿದಂತೆ ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ಒಟ್ಟು 53 ಅಹವಾಲು ಅರ್ಜಿಗಳನ್ನು ಸಾರ್ವಜನಿಕರು ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಶಿವಮೊಗ್ಗ ತಹಸೀಲ್ದಾರ್ ರಾಜೀವ್ ಸೇರಿದಂತೆ ವಿವಿಧ ಜಿಲ್ಲಾ ಮತ್ತು ತಾಲೂಕು ಮಟ್ಟದ ಇಲಾಖಾ ಅಧಿಕಾರಿಗಳು ಹಾಗೂ ಸಿಬ್ಬಂದಿಯವರು ಉಪಸ್ಥಿತರಿದ್ದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular