ಗದಗ: ಸರ್ಕಾರದಿಂದ ಅನುದಾನ ಬಾರದ ಹಿನ್ನೆಲೆಯಲ್ಲಿ ಮನನೊಂದ ಕೆಆರ್‌ಐಡಿಎಲ್ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರೊಬ್ಬರು ಆತ್ಮಹತ್ಯೆ ಪತ್ರ ಬರೆದಿಟ್ಟು ನಾಪತ್ತೆಯಾಗಿರುವ ಘಟನೆ ಗದಗದಲ್ಲಿ ನಡೆದಿದೆ.
ಫರ್ವೀಜ್ ಧಾರವಾಡ ನಾಪತ್ತೆಯಾಗಿರುವ ಎಇಇ. ಸೆಪ್ಟೆಂಬರ್ 12ರಂದು ಬೆಂಗಳೂರಿಗೆ ಹೋಗುತ್ತೇನೆ ಎಂದು ಹೇಳಿ ಹೋದವರು ಈವರೆಗೂ ಮನೆಗೆ ವಾಪಸ್ ಆಗಿಲ್ಲ. ಮೊಬೈಲ್ ಕೂಡ ಸ್ವಿಚ್ ಆಫ್ ಆಗಿದೆ. ಕಂಗಾಲದ ಕುಟುಂಬದವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಫರ್ವೀಜ್ ನನ್ನು ಹುಡುಕಿ ಕೊಡುವಂತೆ ಮನವಿ ಮಾಡಿದ್ದಾರೆ.
ಸೆಪ್ಟೆಂಬರ್ 12ರಂದು ಬೆಂಗಳೂರಿನ ಕೆಆರ್‌ಐಡಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ಪತ್ರ ಬರೆದಿರುವ ಫರ್ವೀಜ್, ಕೋಟಿಗಟ್ಟಲೆ ಅನುದಾನ ಬಾರದ ಕಾರಣ ನಿತ್ಯ ಸಬ್ ಗುತ್ತಿಗೆದಾರರು ಮನೆ ಮುಂದೆ ಬಂದು ಕೂಗಾಟ ನಡೆಸುತ್ತಿದ್ದಾರೆ. ಫೋನ್ ಮಾಡಿ ಕಿರುಕುಳ ನೀಡುತ್ತಿದ್ದಾರೆ. ಇದರಿಂದ ನನ್ನ ಮಾನಸಿಕ ಆರೋಗ್ಯ ಸಂಪೂರ್ಣ ಹದಗೆಟ್ಟಿದೆ. ಪರಿಸ್ಥಿತಿ ನಿಭಾಯಿಸಲು ಸಾಧ್ಯವಾಗದೆ ಜೀವನ ಕೊನೆಗಾಣಿಸುತ್ತಿದ್ದೇನೆ. ನನ್ನ ಸಾವಿಗೆ ನಾನೇ ಕಾರಣ. ಉಪವಿಭಾಗಕ್ಕೆ ಅನುದಾನ ನೀಡಿ ಸಮಸ್ಯೆ ಬಗೆಹರಿಸಿ, ದಯವಿಟ್ಟು ನನ್ನ ಕುಟುಂಬಕ್ಕೆ ಕಿರುಕುಳ ನೀಡಬೇಡಿ ಎಂದು ಉಲ್ಲೇಖಿಸಿದ್ದಾರೆ.
ಸೆಪ್ಟೆಂಬರ್ 13ರಂದು ಬೆಂಗಳೂರಿನಲ್ಲಿ ಸಭೆ ಇದೆ ಎಂದು ಹೊರಟಿದ್ದ ಫರ್ವೀಜ್, ಪತ್ನಿ ಸೆಗುಪ್ತಾರಿಗೆ ಕರೆ ಮಾಡಿ ಬೆಂಗಳೂರು ತಲುಪಿರುವುದಾಗಿ ಹೇಳಿದ್ದರು. ನಂತರ ಗಂಡನ ಫೋನ್ ಸ್ವಿಚ್ ಆಫ್ ಆಗಿದ್ದರಿಂದ ಗಾಬರಿಗೊಳಗಾದ ಪತ್ನಿ, ಅತ್ತೆ ಮಾವನಿಗೆ ವಿಷಯ ತಿಳಿಸಿದ್ದರು. ಮಗನ ಕುರಿತು ವಿಚಾರಿಸಲು ಇಲಾಖೆಯ ಎಕ್ಸಿಕ್ಯೂಟಿವ್ ಇಂಜಿನಿಯರ್ಗೆ ಕರೆ ಮಾಡಿದಾಗ, ಫರ್ವೀಜ್ ಆಫೀಸಿಗೆ ಬಂದಿಲ್ಲವೆಂಬುದು ತಿಳಿದುಬಂದಿದೆ.
ಆತಂಕಕ್ಕೊಳಗಾದ ಕುಟುಂಬಸ್ಥರು, ಗದಗ ಬೆಟಗೇರಿ ಬಡಾವಣೆ ಪೊಲೀಸ್ ಠಾಣೆಯಲ್ಲಿ ಸೆಪ್ಟೆಂಬರ್ 16ರಂದು ಪ್ರಕರಣ ದಾಖಲಿಸಿದ್ದಾರೆ. ವಿಶೇಷ ಪಡೆ ರಚಿಸಿ ಅಧಿಕಾರಿಯನ್ನು ಶೀಘ್ರವೇ ಪತ್ತೆ ಹಚ್ಚಬೇಕು ಮತ್ತು ಅವರಿಗೆ ಎದುರಾಗಿರುವ ಸಮಸ್ಯೆಯನ್ನು ಸರ್ಕಾರ ತಕ್ಷಣವೇ ಬಗೆಹರಿಸಬೇಕೆಂದು ಕುಟುಂಬಸ್ಥರು ಮನವಿ ಮಾಡಿದ್ದಾರೆ. ಬೆಟಗೇರಿ ಬಡಾವಣೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮಾಹಿತಿ ಪ್ರಕಾರ ಫರ್ವೀಜ್ ಅವರ ಫೋನ್ ಲೊಕೇಶನ್ ಆಂಧ್ರಪ್ರದೇಶದ ವಿಜಯವಾಡದಲ್ಲಿ ಕೊನೆ ಬಾರಿಗೆ ಪತ್ತೆಯಾಗಿದೆ. ಆದರೆ ಆ ಬಳಿಕ ಅವರ ಫೋನ್ ಸ್ವಿಚ್ ಆಫ್ ಆಗಿದೆ ಎಂದು ತಿಳಿದುಬಂದಿದೆ.

